ಸ್ವಾಧೀನವಾಗದ ಭೂಮಿಯಲ್ಲಿ BDA ನಿವೇಶನ ಮಂಜೂರು: ಭೂ ಮಾಲೀಕರು ತಬ್ಬಿಬ್ಬು
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು (BDA) ನಗರದ ಅರ್ಕಾವತಿ ಬಡಾವಣೆಯಲ್ಲಿ ನಿವೇಶನ ಮಂಜೂರು ಮಾಡುವ ಮೂಲಕ ತಪ್ಪೊಂದನ್ನು ಮಾಡಿದೆ. ಅದನ್ನು ಸ್ವತಃ ಅಧಿಕಾರಿಗಳೇ ಒಪ್ಪಿಕೊಂಡ ಘಟನೆ ನಡೆದಿದೆ. ಪ್ರಕರಣವೇನು, ಭೂ ಮಾಲೀಕರ ಅಳಲೇನು?
ಬೆಂಗಳೂರು, ಫೆಬ್ರವರಿ 19: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು (BDA) ನಗರದ ಅರ್ಕಾವತಿ ಬಡಾವಣೆಯಲ್ಲಿ ನಿವೇಶನ ಮಂಜೂರು ಮಾಡುವ ಮೂಲಕ ತಪ್ಪೊಂದನ್ನು ಮಾಡಿದೆ. ಅದನ್ನು ಸ್ವತಃ ಅಧಿಕಾರಿಗಳೇ ಒಪ್ಪಿಕೊಂಡ ಘಟನೆ ನಡೆದಿದೆ.
ಆರ್ಕಾವತಿ ಬಡಾವಣೆಯಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಸ್ವಾಧೀನಪಡಿಸಿಕೊಳ್ಳದ ಭೂಮಿಯಲ್ಲಿ ಆರ್ಥಿಕ ದುರ್ಬಲ ವರ್ಗದವರಿಗೆ ನಿವೇಶನ ಮಂಜೂರು ಮಾಡಿದೆ. ಈ ವಿಚಾರ ಗೊತ್ತಾಗುತ್ತಿದ್ದಂತೆ ಆ ಭೂಮಿ ಮಾಲೀಕರು ತಬ್ಬಿಬ್ಬಾಗಿದ್ದಾರೆ. ತಮ್ಮ ಒಡೆತನದ ಆಸ್ತಿ ಯಾರ ಪಾಲಾಯಿತೋ ಎಂದು ಗೊಂದಲ್ಲಕೀಡಾಗಿದ್ದಾರೆ.
ಆರ್ಕಾವತಿ ಬಡಾವಣೆಯಲ್ಲಿರುವ ಮೋಹನ್ ರೆಡ್ಡಿ ಎಂಬುವವರ ಕುಟುಂಬಕ್ಕೆ ಸೇರಿದ್ದ 20 ಗುಂಟೆ ಭೂಮಿಯಲ್ಲಿ ಆರ್ಥಿಕವಾಗಿ ಹಿಂದಿರುವ ದುರ್ಬಲ ವರ್ಗದವರಿಗೆ 26 ನಿವೇಶನವನ್ನು ಬಿಡಿಎ ಮಂಜೂರು ಮಾಡಿದೆ. ಈ ಮಂಜೂರು ನಿವೇಶನ ಪಡೆಯಲು ಬಂದಾಗ ನನಗೆ ವಿಷಯ ತಿಳಿಯಿತು ಎಂದ ಮೋಹನ್ ರೆಡ್ಡಿಯವರು, ಜಮೀನು ವಾಪಾಸ್ ನೀಡುವಂತೆ ಮನವಿ ಮಾಡಿದ್ದಾರೆ.

ಕೆ.ಆರ್ ಪುರಂ ಹೋಬಳಿಯ ಸೈಟ್ ನಂಬರ್ 128/1 ನನ್ನದು 30 ಗುಂಟೆ ಭೂಮಿ ಇದೆ. ಅದರಲ್ಲಿ ಸರ್ಕಾರಕ್ಕೆ ರಸ್ತೆ ಮತ್ತು ಚರಂಡಿ ಅಗಲೀಕರಣಕ್ಕೆಂದು 10 ಗುಂಟೆ ಜಾಗ ಬಿಟ್ಟುಕೊಟ್ಟಿದ್ದೇನೆ. ಕೇವಲ 10 ಗುಂಟೆಯನ್ನು ಮಾತ್ರ ಅಭಿವೃದ್ಧಿಗೆ ಬಳಸಿಕೊಂಡ ಸರ್ಕಾರ ಪರಿಹಾರ ಘೋಷಿಸಿತ್ತು. ಪ್ರಾಥಮಿಕ ಅಥವಾ ಅಂತಿಮ ಅಧಿಸೂಚನೆಯಲ್ಲಿ ಉಳಿದ 20 ಗುಂಟೆಗಳ ಬಗ್ಗೆ ಯಾವುದೇ ಉಲ್ಲೇಖ ಮಾಡಿಲ್ಲ. ಇದೀಗ ಸ್ವಾಧೀನ ಪಡಿಸಿಕೊಳ್ಳದ 20 ಗುಂಟೆಗೆ ಜಾಗದಲ್ಲಿ 20x30 ಚದರ ಅಡಿ ಆಯಾಮದಲ್ಲಿ ನಿವೇಶನ ಹಂಚಿಕೆ ಮಾಡಲಾಗಿದೆ ಎಂದು ರೆಡ್ಡಿಯವರು ಆಕ್ರೋಶ ಹೊರಹಾಕಿದರು.
ಈ ಸಂಬಂದ ಬಿಡಿಎ ಆಯುಕ್ತರಿಗೆ 2021ರ ಡಿಸೆಂಬರ್ 22 ಮತ್ತು 2022ರ ಡಿಸೆಂಬರ್ 23 ರಂದು ಪತ್ರಗಳನ್ನು ಬರೆದಿದ್ದು, ಯಾವುದೇ ಪ್ರಯೋಜನವಾಗಿಲ್ಲ. ಕಳೆದ ಜನವರಿಯಲ್ಲಿ, ಮಂಜೂರಾತಿ ನೀಡಿದ್ದ ನಿವೇಶದನದಲ್ಲಿ ಒಬ್ಬರು ಮನೆ ಕಟ್ಟಲು ಮುಂದಾದರು. ಆಗ ತಡೆಯುವಂತೆ ನಾನು ಹೆಣ್ಣೂರು ಪೊಲೀಸ್ ಠಾಣೆಯಲ್ಲಿ ದೂರು ಕೊಟ್ಟಿದ್ದೇನೆ ಎಂದು ರೆಡ್ಡಿಯವರು ತಿಳಿಸಿದರು.
ತಪ್ಪು ಒಪ್ಪಿಕೊಂಡ ಬಿಡಿಎ ಅಧಿಕಾರಿ
ಹೌದು ಇಲ್ಲಿ ತಪ್ಪಾಗಿದೆ. ಈ ಹಂಚಿಕೆಯು 2014 ಮತ್ತು 2018 ರ ನಡುವೆ ನಡೆದಿದೆ. ಇದು ಭೂಸ್ವಾಧೀನ ಮತ್ತು ಇಂಜಿನಿಯರಿಂಗ್ ವಿಭಾಗದ ಅಧಿಕಾರಿಗಳಿಂದ ತಪ್ಪಾಗಿದೆ. ತನಿಖೆಯಿಂದ ಯಾರು ತಪ್ಪಿತಸ್ಥರು ಎಂಬುದು ಬೆಳಕಿಗೆ ಬರಲಿದೆ ಎಂದು ಬಿಡಿಎ ಅಧಿಕಾರಿಯೊಬ್ಬರು ಆಗಿರುವ ತಪ್ಪನ್ನು ಒಪ್ಪಿಕೊಂಡಿದ್ದಾರೆ.

ಪರಿಹಾರದ ಬಗ್ಗೆ ಕೇಳಿದರೆ, ಮಂಜೂರಾದ ಭೂಮಿಯನ್ನು ಹಿಂಪಡೆಯಲು ಸಾಧ್ಯವಿಲ್ಲ. ಈ ಜಮೀನಿನ ಮೌಲ್ಯ ಸುಮಾರು 15 ಕೋಟಿ ರೂ.ನಷ್ಟಿದೆ. ಆಯುಕ್ತರಿಗೆ ಮನವಿ ಮಾಡಿದರೆ ಮತ್ತು ಆಡಳಿತ ಮಂಡಳಿ ಒಪ್ಪಿಗೆ ನೀಡಿದರೆ ಅದೇ ಬಡಾವಣೆಯಲ್ಲಿ ಅಭಿವೃದ್ಧಿ ಪಡಿಸಿದ ಶೇ.50ರಷ್ಟು ಭೂಮಿಯನ್ನು ಪಡೆಯುವುದೇ ಅವರಿಗಿರುವ ಪರಿಹಾರವಾಗಿದೆ ಎಂದು ಹೇಳಿದರು.
ರೈತರು ಭಿಕ್ಷುಕರಲ್ಲ: ಭೂ ಮಾಲೀಕ
ಬಿಡಿಎ ನೀಡುವ ಶೇಕಡಾ 50ರಷ್ಟು ಭೂಮಿ ಸ್ವೀಕರಿಸಲು ರೈತರು ಭಿಕ್ಷುಕರಲ್ಲ. ಅಭಿವೃದ್ಧಿ ಹೊಂದಿದ ಭೂಮಿ ಬೇಡ. ಪೂರ್ವಜರ ಆಸ್ತಿ ಬೇಕು ಎಂದು ರೆಡ್ಡಿಯವರು ಕಣ್ಣೀರಿಟ್ಟಿದ್ದಾರೆ. ಇತ್ತ ಭೂಸ್ವಾಧೀನ ಇಲಾಖೆಯ ಉನ್ನತಾಧಿಕಾರಿಗಳು ಸಮಗ್ರ ಮಾಹಿತಿ ಪಡೆದು ಮಾತನಾಡುತ್ತೇವೆ ಎಂದಿದ್ದಾರೆ.
'ಸ್ವಾಧೀನಪಡಿಸಿಕೊಳ್ಳುವ ನೆಪದಲ್ಲಿ ರೈತರಿಂದ ಕಬಳಿಸಿದ ಜಮೀನಿನ ಫಲಾನುಭವಿಗಳ ವಿವರ, ಸ್ವಾಧೀನಕ್ಕಾಗಿ ಸೂಚಿಸಿರುವ 3,339 ಎಕರೆಗಳ ಪೈಕಿ ಅಂತಿಮ ಅಧಿಸೂಚನೆಯ ಮೂಲಕ 1,766 ಎಕರೆ ಮಾತ್ರ ಸ್ವಾಧೀನಪಡಿಸಿಕೊಳ್ಳಲಾಗಿದೆ. ಇಲ್ಲಿ 600 ಎಕರೆಯನ್ನು ಮಾತ್ರ ಬಡಾವಣೆಗೆ ಬಳಸಿಕೊಳ್ಳಲಾಗಿದೆ. ಬಾಕಿ ಜಮೀನು ಏನಾಯಿತು?, ಎಂಬ ವಿವರಕ್ಕಾಗಿ ನಾನು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸುತ್ತೇನೆ ಎಂದು ರೆಡ್ಡಿಯವರು ತಿಳಿಸಿದ್ದಾರೆ.












Click it and Unblock the Notifications