Bengaluru Weather: ಬೆಂಗಳೂರು ತಾಪಮಾನ 10 ಡಿಗ್ರಿ ಸೆಲ್ಸಿಯಸ್‌ಗಿಂತ ಕಡಿಮೆಯಾಗಲು ಇಲ್ಲಿದೆ ಕಾರಣ
ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಹೊಸ ವರ್ಷ ಹಾಗೂ ಕ್ರಿಸ್‌ಮಸ್ ಸಂಭ್ರಮ ವಾರವಿಡೀ ಮನೆ ಮಾಡಿರುತ್ತದೆ. ಆದರೆ ಈ ಸಂಭ್ರಮಕ್ಕೆ ಈ ಬಾರಿ ಚಳಿ ಅಡ್ಡಿಯಾಗುತ್ತಿದೆ. ಕಳೆದ ಬಾರಿಗಿಂತ ಈ ವರ್ಷ ಚಳಿ ಹೆಚ್ಚಾಗಿದ್ದು, ನಗರದಾದ್ಯಂತ ತಣ್ಣನೆಯ ವಾತಾವರಣ ಇದೆ. ಕೆಎಸ್‌ಎನ್‌ಡಿಎಂಸಿ ಮತ್ತು ಹವಾಮಾನ ಇಲಾಖೆ ವರದಿಗಳ ಪ್ರಕಾರ ಬೆಂಗಳೂರಿನಲ್ಲಿ ಕನಿಷ್ಠ ತಾಪಮಾನ ಕಂಡುಬಂದಿದೆ. ಮುಂಜಾನೆ ದಟ್ಟ ಮಂಜಿನಿಂದಾಗಿ ರಸ್ತೆಗಳಲ್ಲಿ ವಾಹನ ಸಂಚಾರಕ್ಕೂ ತೊಡಕಾಗುತ್ತಿದೆ. ಇದರಿಂದ ಪ್ರಯಾಣಕ್ಕೂ ಅಡ್ಡಿಯಾಗಿದೆ.
ಬೆಂಗಳೂರಿನಲ್ಲಿ ಸ್ಪಷ್ಟ ಆಕಾಶ ಮಧ್ಯಾಹ್ನದ ವೇಳೆಗೆ ಕಂಡುಬರುತ್ತಿದೆ. ಬೆಳ್ಳಂಬೆಳಿಗ್ಗೆ ದಟ್ಟ ಮಂಜು ಮತ್ತು ಕಾರ್ಮೋಡಗಳಿಂದ ಆವರಿಸಲ್ಪಡುತ್ತದೆ. ನಗರದ ಪ್ರಮುಖ ರಸ್ತೆಗಳಲ್ಲಿ ಮಂಜಿನಿಂದ ರಸ್ತೆಯೇ ಕಾಣದಂತಾಗಿದೆ. ದಟ್ಟ ಹಸಿರು ಭೂಪ್ರದೇಶಗಳಲ್ಲಿ ಕನಿಷ್ಠ ತಾಪಮಾನವು 10 ಡಿಗ್ರಿ ಸೆಲ್ಸಿಯಸ್‌ಗಿಂತ ಕಡಿಮೆ ಇದೆ. ನಗರದ ಬಹುತೇಕ ಪ್ರದೇಶಗಳಲ್ಲಿಯೂ ಕನಿಷ್ಠ ತಾಪಮಾನದಲ್ಲಿ ಭಾರೀ ಕುಸಿತ ವರದಿಯಾಗಿದೆ.

ಈ ವಾರ ಚಳಿ ಮತ್ತಷ್ಟು ಹೆಚ್ಚಳ
ಕೆಎಸ್‌ಎನ್‌ಡಿಎಂಸಿ ದತ್ತಾಂಶಗಳ ಪ್ರಕಾರ, ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳಲ್ಲಿ ಕ್ರಮೇಣ 8 ಡಿಗ್ರಿ ಸೆಲ್ಸಿಯಸ್‌ವರೆಗೆ ಕನಿಷ್ಠ ತಾಪಮಾನ ದಾಖಲಾಗಿದೆ. ಎರಡು ಇಲಾಖೆಗಳ ತಜ್ಞರ ಪ್ರಕಾರ ಕನಿಷ್ಠ ತಾಪಮಾನವು ಸಾಮಾನ್ಯಕ್ಕಿಂತ 2-3 ಡಿಗ್ರಿ ಸೆಲ್ಸಿಯಸ್ ಕಡಿಮೆಯಾಗಿದ್ದು, ವಾರಾಂತ್ಯದಲ್ಲಿ ಮತ್ತಷ್ಟು ಕುಸಿಯಬಹುದು. ಈ ತಿಂಗಳು ಮುಗಿಯುವವರೆಗೆ ಇದೇ ವಾತಾವರಣ ಮುಂದುವರಿಯಲಿದೆ.
ಈ ಚಳಿ ತಿಂಗಳ ಅಂತ್ಯದವರೆಗೆ ಮುಂದುವರಿಯುವ ನಿರೀಕ್ಷೆಯಿದೆ. ದಕ್ಷಿಣದ ಒಳನಾಡಿನ ಜಿಲ್ಲೆಗಳಲ್ಲಿಯೂ ಮಂಜು ಕವಿದ ವಾತಾವರಣವು ದಿನನಿತ್ಯದ ಜೀವನ ಮತ್ತು ರಜೆಯ ಪ್ರಯಾಣದ ಮೇಲೆ ಪರಿಣಾಮ ಬೀರುತ್ತಿದೆ. ಉತ್ತರ ಒಳನಾಡಿನಲ್ಲಿಯೂ ಅತ್ಯಂತ ಕಡಿಮೆ ತಾಪಮಾನ ದಾಖಲಾಗಿದೆ. ಬೆಳಗಿನ ಜಾವ ಕೊರೆಯುವಷ್ಟು ಚಳಿಗೆ ಜನ ನಡುಗುವಂತಾಗಿದೆ. ಬೀದರ್‌ನಲ್ಲಿ ಶುಕ್ರವಾರ ರಾತ್ರಿ ಕನಿಷ್ಠ ತಾಪಮಾನ 5.3 ಡಿಗ್ರಿ ಸೆಲ್ಸಿಯಸ್, ಬೆಳಗಾವಿಯಲ್ಲಿ 5.9 ಡಿಗ್ರಿ ಸೆಲ್ಸಿಯಸ್ ಮತ್ತು ಧಾರವಾಡದಲ್ಲಿ 6.4 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಪ್ರದೇಶಗಳಲ್ಲಿ ಬೆಳಿಗ್ಗೆ 4ರಿಂದ 9.30ರವರೆಗೆ ದಟ್ಟವಾದ ಮಂಜು ಆವರಿಸುತ್ತಿದೆ. ಯಲಹಂಕ-ಗೌರಿಬಿದನೂರು ರಾಜ್ಯ ಹೆದ್ದಾರಿ ಸೇರಿದಂತೆ ಇಲ್ಲಿನ ರಾಷ್ಟ್ರೀಯ ಹೆದ್ದಾರಿಗಳಲ್ಲಿ ವಾಹನ ಸಂಚಾರ ಕಷ್ಟಕರವಾಗಿದೆ. ಒಟ್ಟಾರೆ ರಾಜ್ಯದಾದ್ಯಂತ ಚಳಿ ತೀವ್ರಗೊಂಡಿದ್ದು, ಹಲವಾರು ಜಿಲ್ಲೆಗಳಲ್ಲಿ ಕನಿಷ್ಠ ತಾಪಮಾನ ಕುಸಿಯುತ್ತಿದೆ. ಇದು ಈ ಋತುವಿನ ಅತ್ಯಂತ ಶೀತದ ಸಮಯ ಎಂದು ಹೇಳಲಾಗಿದೆ.
ಫಾಗ್ ಲೈಟ್ ಬಳಸಿ
ಈಗಿನ ಹವಾಮಾನ ಸ್ಥಿತಿಯಿಂದಾಗಿ ಶೀತ ಅಲೆಗಳನ್ನು ಎದುರಿಸುತ್ತಿರುವ ಪ್ರದೇಶಗಳಲ್ಲಿ, ವಿಮಾನ ನಿಲ್ದಾಣಗಳು, ಹೆದ್ದಾರಿಗಳು ಮತ್ತು ರೈಲ್ವೆ ಮಾರ್ಗಗಳಲ್ಲಿ ಪರಿಣಾಮ ಬೀರಬಹುದು. ಈ ಮಾರ್ಗಗಳಲ್ಲಿ ಸಂಚಾರವು ಕಡಿಮೆ ಗೋಚರತೆಯಿಂದಾಗಿ ಅಡ್ಡಿಪಡಿಸಬಹುದು. ರಸ್ತೆ ಪ್ರಯಾಣಗಳು ಕಷ್ಟಕರವಾಗಬಹುದು. ಪ್ರಯಾಣದ ಸಮಯಗಳು ನಿಧಾನವಾಗಬಹುದು, ಕೆಲವೊಮ್ಮೆ ಸಂಚಾರದ ವೇಳೆ ಅವಘಡಗಳಿಗೂ ಕಾರಣವಾಗಬಹುದು. ಶೀತ ಅಲೆಗಳ ಪರಿಣಾಮವನ್ನು ನಿಭಾಯಿಸಲು ವಾಹನ ಚಲಾಯಿಸುವಾಗ ಅಥವಾ ಯಾವುದೇ ಸಾರಿಗೆಯ ಮೂಲಕ ಹೊರಗೆ ಹೋಗುವಾಗ ಜಾಗರೂಕರಾಗಿರಿ. ಚಾಲನೆ ಮಾಡುವಾಗ ಫಾಗ್ ಲೈಟ್‌ಗಳನ್ನು ಬಳಸಿ ಎಂದು ಹವಾಮಾನ ಇಲಾಖೆ ಸಲಹೆಗಳನ್ನು ನೀಡಿದೆ.
ಪ್ರಯಾಣಿಕರು ತಮ್ಮ ಪ್ರಯಾಣದ ವೇಳಾಪಟ್ಟಿಯ ಕುರಿತು ಮಾಹಿತಿ ಪಡೆಯಲು ವಿಮಾನಯಾನ ಸಂಸ್ಥೆಗಳು, ರೈಲ್ವೆಗಳು ಮತ್ತು ರಾಜ್ಯ ಸಾರಿಗೆಯೊಂದಿಗೆ ಸಂಪರ್ಕದಲ್ಲಿರಿ. ದೇಹದ ಉಷ್ಣತೆ ಕಾಪಾಡಿಕೊಳ್ಳಲು ನಿಮ್ಮ ತಲೆ, ಕುತ್ತಿಗೆ, ಬೆರಳುಗಳು ಮತ್ತು ಕಾಲ್ಬೆರಳುಗಳನ್ನು ಸರಿಯಾಗಿ ಮುಚ್ಚಿಕೊಳ್ಳಿ. ಕೈಗವಸುಗಳು, ಕ್ಯಾಪ್, ಮಫ್ಲರ್ ಮತ್ತು ನೀರು ನಿರೋಧಕ ಬೂಟುಗಳು ಮುಂತಾದ ಸಾಕಷ್ಟು ಬೆಚ್ಚಗಿನ ಬಟ್ಟೆಗಳನ್ನು ಧರಿಸಿ. ಶೀತ ಅಲೆಯ ಸಮಯದಲ್ಲಿ ಸಾಧ್ಯವಾದಷ್ಟು ಮನೆಯೊಳಗೆ ಇರಿ, ತೀರಾ ಅಗತ್ಯವಿದ್ದರೆ ಮಾತ್ರ ಹೊರಗೆ ಪ್ರಯಾಣಿಸಿ. ಈ ಸಮಯದಲ್ಲಿ, ಜ್ವರ, ಶೀತ, ಕೆಮ್ಮು ಮತ್ತು ಶೀತ ಮುಂತಾದ ಆರೋಗ್ಯ ಸಮಸ್ಯೆಗಳು ಹೆಚ್ಚಾಗುವ ಸಾಧ್ಯತೆ ಇದೆ. ನೀವು ಈ ಲಕ್ಷಣಗಳನ್ನು ಹೊಂದಿದ್ದರೆ ಕೂಡಲೇ ವೈದ್ಯರನ್ನು ಸಂಪರ್ಕಿಸಿ ಎಂದು ಹೇಳಿದೆ.












Click it and Unblock the Notifications