ಬೆಂಗಳೂರು ನೀರಿನ ಸಮಸ್ಯೆಯ 58 ಪಾಯಿಂಟ್ ಗುರುತಿಸಿದ ಜಲಮಂಡಳಿ
ಬೆಂಗಳೂರು, ಫೆಬ್ರವರಿ 26: ಒಂದೆಡೆ ವಿಪರೀತ ಬಿಸಿಲಿನ ವಾತಾವರಣ. ಮತ್ತೊಂದೆಡೆ ಕುಡಿಯುವ ನೀರಿಗೆ ಹಾಹಾಕಾರ ಶುರುವಾಗಿದೆ. ಬೆಂಗಳೂರು ಜಲಮಂಡಳಿ (BWSSB) ಮತ್ತು ಬಿಬಿಎಂಪಿ ನೀರು ಪೂರೈಕೆ ಸವಾಲು ಎದುರಿಸುತ್ತಿದೆ. ಈ ಮಧ್ಯೆ ನೀರಿನ ಅಭಾವ ಇರುವ 58 ಸ್ಥಳಗಳಲ್ಲಿ ಎಚ್ಚರಿಕೆಯ ಗಂಟೆ ಮೊಳಗಿದೆ.
ಬೆಂಗಳೂರಿನಲ್ಲಿ ಎಲ್ಲೆಲ್ಲೆ ಕುಡಿಯುವ ನೀರಿನ ಕೊರತೆ ಉಂಟಾಗಿದೆ ಎಂದು ವರದಿ ಮಾಡಲು ಬಿಬಿಎಂಪಿ ಪ್ರಾರಂಭಿಸಿದೆ. ಈ ಸ್ಥಳಗಳು ಆರ್‌ಆರ್ ನಗರ, ಯಲಹಂಕ ಮತ್ತು ದಾಸರಹಳ್ಳಿ ವಲಯಗಳ ಜೊತೆಗೆ ಮಹದೇವಪುರ ಮತ್ತು ಬೊಮ್ಮನಹಳ್ಳಿಯ ಟೆಕ್ ಕಾರಿಡಾರ್‌ಗಳಲ್ಲಿ ಹೆಚ್ಚಾಗಿದೆ ಎಂದು ಪಾಲಿಕೆ ಪ್ರಾಥಮಿಕ ವರದಿ ತಿಳಿಸಿದೆ.

ಇತ್ತೀಚೆಗೆ ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ BWSSB ಅಧಿಕಾರಿಗಳೊಂದಿಗೆ ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್ ಅವರು ಮಹತ್ವದ ಸಮನ್ವಯ ಸಮಿತಿ ಸಭೆ ನಡೆಸಿದರು. ನಗರದಲ್ಲಿನ ಪ್ರಸಕ್ತ ನೀರಿನ ಸಮಸ್ಯೆ ಕುರಿತು ಮಾಹಿತಿ ಪಡೆದರು.
ನಗರದ 58 ಸ್ಥಳಗಳಲ್ಲಿ ನೀರಿನ ವಿಪರೀತ ಅಭಾವ
ಮೇಲ್ದರ್ಜೆಯ ಅಪಾರ್ಟ್‌ಮೆಂಟ್ ಸಂಕೀರ್ಣಗಳು ಸೇರಿದಂತೆ ಈ 58 ಸ್ಥಳಗಳಲ್ಲಿ ಪರಿಸ್ಥಿತಿ ತುಂಬ ಬಿಗುಡಾಯಿಸಿದ್ದು, ಅವುಗಳನ್ನು ಪತ್ತೆ ಮಾಡಲಾಗಿದೆ. ಬೆಂಗಳೂರಿನಾದ್ಯಂತ ನೀರಿನ ಅಭಾವವಿರುವ ಅಂದಾಜು 257 ಪಾಯಿಂಟ್‌ಗಳನ್ನು BWSSB ಗುರುತಿಸಿದೆ. ಈಗಿರುವ 68 ಟ್ಯಾಂಕರ್‌ಗಳ ಮೂಲಕ ಕುಡಿಯುವ ನೀರು ಪೂರೈಸಲು ಮಂಡಳಿ ಕ್ರಮ ಕೈಗೊಂಡಿದೆ ಎಂದು ಜಲಮಂಡಳಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

200 ಖಾಸಗಿ ಟ್ಯಾಂಕರ್ ಬಾಡಿಗೆ
BWSSB ಅಧ್ಯಕ್ಷ ರಾಮ್ ಪ್ರಸಾತ್ ಮನೋಹರ್ ಅವರು, ಈ ಬೇಸಿಗೆಯಲ್ಲಿ ಬೇಡಿಕೆಯನ್ನು ಪೂರೈಸಲು 18 ಹೊಸ ಟ್ಯಾಂಕರ್‌ಗಳನ್ನು ಖರೀದಿಸಲು ಮತ್ತು ಹೆಚ್ಚುವರಿ 200 ಖಾಸಗಿ ಟ್ಯಾಂಕರ್‌ಗಳನ್ನು ಬಾಡಿಗೆಗೆ ಪಡೆಯಲಿದ್ದೇವೆ. ಕಾವೇರಿ ಐದನೇ ಹಂತದ ಕಾಮಗಾರಿಗಳನ್ನು ಪೂರ್ಣಗೊಳಿಸುವುದರಿಂದ ಏಪ್ರಿಲ್ ಅಂತ್ಯದ ವೇಳೆಗೆ ನಗರದಾದ್ಯಂತ ಪರಿಸ್ಥಿತಿ ಸುಧಾರಿಸುವ ಸಾಧ್ಯತೆ ಇದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಕೇವಲ ಜಲಮಂಡಳಿ ಮಾತ್ರವಲ್ಲದೇ ಬಿಬಿಎಂಪಿ ಕೂಡ ಬೇಸಿಗೆ ಸವಾಲುಗಳನ್ನು ಎದುರಿಸಲು ಸಜ್ಜಾಗಿದೆ. ತೀವ್ರ ಕೊರತೆ ಇರುವಲ್ಲಿ, ಹೆಚ್ಚುವರಿ ಬೋರ್‌ವೆಲ್‌ಗಳನ್ನು ಶೀಘ್ರವಾಗಿ ತೋಡಬೇಕು. ಆರ್‌ಒ ವಾಟರ್ ಪ್ಲಾಂಟ್‌ಗಳು ನಿಷ್ಪ್ರಯೋಜಕ ಅಥವಾ ಒಣಗಿದ್ದರೆ, ಅವುಗಳನ್ನು ದುರಸ್ತಿ ಮಾಡಿ ಹತ್ತಿರದ ಬೋರ್‌ವೆಲ್‌ಗಳಿಗೆ ಜೋಡಿಸಿ ಮತ್ತೆ ಕಾರ್ಯಾರಂಭ ಮಾಡಬೇಕು ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಹಾಗೂ ಪಾಲಿಕೆ ಆಡಳಿತಾಧಿಕಾರ ರಾಕೇಶ್ ಸಿಂಗ್ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ತಾಕೀತು ಮಾಡಿದ್ದಾರೆ.
ಬೇಸಿಗೆಯಲ್ಲೂ ನಿತ್ಯ 1,450 MLD ನೀರು ಪೂರೈಕೆ
ಕಾವೇರಿ ತೀರದ ಜಿಲ್ಲೆಯಾಗಿರುವ ಮಂಡ್ಯದ ಟಿಕೆ ಹಳ್ಳಿ ಪಂಪಿಂಗ್ ಸ್ಟೇಷನ್‌ನಿಂದ ಬೆಂಗಳೂರಿನ ಪ್ರತಿದಿನಕ್ಕೆ 1,450 MLD (ದಿನಕ್ಕೆ ಮಿಲಿಯನ್ ಲೀಟರ್) ನೀರು ಸರಬರಾಜು ಮಾಡಲಾಗಿದೆ. ಆದರೆ ಇದು ಸಾಮಾನ್ಯ ದಿನಗಳಲ್ಲಿ ಪೂರೈಕೆಯಷ್ಟೇ ಆಗಿದೆ. ಬೇಸಿಗೆ ವೇಳೆ ನೀರಿಗೆ ಹೆಚ್ಚು ಬೇಡಿಕೆ ಇದ್ದು, ಅಗತ್ಯಷ್ಟು ನೀರು ಪೂರೈಕೆ ಅಸಾಧ್ಯವಾಗಿದೆ ಎಂಬ ಮಾತುಗಳು ಕೇಳಿ ಬಂದಿವೆ. ನೀರಿನ ಸಂಗ್ರಹ ಕಾವೇರಿ ಕೊಳದಲ್ಲಿ ಅಷ್ಟಾಗಿ ಇಲ್ಲ.
ಸದ್ಯಕ್ಕೆ ಕಾವೇರಿಯ ನದಿಯಲ್ಲಿ 16 ಟಿಎಂಸಿ ಅಡಿ ನೀರು ಇದ್ದು, ಇದಿರಂದ ನೀರು ಪೂರೈಕೆ ಆಗುವುದಿಲ್ಲ ಎಂದು BWSSB ಮಾಹಿತಿ ನೀಡಿದೆ. ನಗರದ ಹೊರವಲಯದ 110 ಗ್ರಾಮಗಳ ಬಡಾವಣೆಗಳು ಮತ್ತು ಅಪಾರ್ಟ್‌ಮೆಂಟ್‌ಗಳು ಬೋರ್‌ವೆಲ್‌ಗಳ ಮೇಲೆ ಅವಲಂಬಿತವಾಗಿದೆ. ನೀರು ಖಾಲಿಯಾಗುತ್ತಿದ್ದಂತೆ ಅಭಾವ ತಾಂಡವವಾಡುತ್ತಿದೆ ಎಂದು ಸ್ಥಳೀಯರು ದೂರಿದ್ದಾರೆ.












Click it and Unblock the Notifications