ಬೆಂಗಳೂರು ವಿವಿ ವಿದ್ಯಾರ್ಥಿನಿಗೆ ಅಪಘಾತ: ಪರ್ಯಾಯ ರಸ್ತೆ ನಿರ್ಮಾಣಕ್ಕೆ ಆಗ್ರಹಿಸಿ ಇಂದು ಸಭೆ
ಬೆಂಗಳೂರು, ಅಕ್ಟೋಬರ್ 12: ಬೆಂಗಳೂರು ವಿಶ್ವವಿದ್ಯಾಲಯ ವಿದ್ಯಾರ್ಥಿನಿ ಶಿಲ್ಪಶ್ರೀ ಬಸ್ ಅಪಘಾತ ಪ್ರಕರಣ ವಿದ್ಯಾರ್ಥಿ ಮುಖಂಡರಿಂದ ಮೂರನೇ ದಿನವು ಪ್ರತಿಭಟನೆ ಮುಂದುವರಿದಿದೆ. ಪ್ರತ್ಯೇಕ ರಸ್ತೆ ನಿರ್ಮಾಣ ಬೇಡಿಕೆ ಈಡೇರಿಕೆ ಕುರಿತು ಬುಧವಾರ ಸಂಜೆ ಸಭೆ ನಡೆಯಲಿದೆ.
ಪ್ರತಿಭಟನಾ ಸ್ಥಳವಾದ ಜ್ಞಾನಭಾರತಿ ಕ್ಯಾಂಪಸ್ ಆವರಣದಲ್ಲಿ ಪ್ರತಿಭಟನೆ ಮುಂದುವರಿದಿದೆ. ಕ್ಯಾಂಪಸ್‌ನಲ್ಲಿ ರಸ್ತೆ ಹಾದು ಹೋಗಿರುವುದು ಅವಘಡಗಳಿಗೆ ಕಾರಣವಾಗಿದೆ. ಹೀಗಾಗಿ ವಿಶ್ವವಿದ್ಯಾಲಯ ಆವರಣ ವ್ಯಾಪ್ತಿಯ ಒಳಗಡೆ ಬಿಟ್ಟು ಪ್ರತ್ಯೇಕವಾಗಿ ರಸ್ತೆ ನಿರ್ಮಿಸುವಂತೆ ಕಳೆದ 12 ವರ್ಷದಿಂದ ಆಗ್ರಹಿಸಲಾಗುತ್ತಿದೆ.
ಇದೀಗ ವಿದ್ಯಾರ್ಥಿನಿ ಶಿಲ್ಪಶ್ರೀ ಅಪಘಾತದ ಬೆನ್ನಲ್ಲೇ ವಿಶ್ವವಿದ್ಯಾಲಯ ಉಪಕುಲಪತಿ ಎಸ್.ಎನ್. ಜಯಕರ್ ಅವರ ನೇತೃತ್ವದಲ್ಲಿ ಸಭೆ ಹಮ್ಮಿಕೊಳ್ಳಲಾಗಿದೆ. ಇದರಲ್ಲಿ ಮಾಜಿ ಶಿಕ್ಷಣ ಸಚಿವ ಸುರೇಶ್ ಕುಮಾರ್, ವಿಶ್ವವಿದ್ಯಾಲಯ ಆಡಳಿತ ಮಂಡಳಿ, ಶಿಕ್ಷಕರ ಪರಿಷತ್ತಿನ ಪದಾಧಿಕಾರಿಗಳು, ವಿದ್ಯಾರ್ಥಿ ಸಮೂಹದ ಮುಖಂಡರು, ಬೆಂಗಳೂರು ಪಶ್ಚಿಮ ವಿಭಾಗದ ಕಾನೂನು ಸುವ್ಯವಸ್ಥೆಯ ಉಪ ಆಯುಕ್ತರು, ಪೊಲೀಸ್ ಸಂಚಾರಿ ವಿಭಾಗದ ಉಪ ಆಯುಕ್ತರು, ಬಿಬಿಎಂಪಿಯ ಜಂಟಿ ಆಯುಕ್ತರು. ಬಿಎಂಟಿಸಿ ಬೆಂಗಳೂರು ನಗರ ಜಿಲ್ಲಾ ನಿಯಂತ್ರಕರು ಸೇರಿದಂತೆ ವಿವಿಧ ಅಧಿಕಾರಿಗಳ ಉಪಸ್ಥಿತಿಯಲ್ಲಿ ಸಭೆ ಇನ್ನೇನು ಶುರುವಾಗಲಿದೆ.

ಬೇರೆಡೆ ರಸ್ತೆ ನಿರ್ಮಾಣಕ್ಕೆ ವಿದ್ಯಾರ್ಥಿಗಳ ಆಗ್ರಹ
ಬೆಂಗಳೂರು ವಿಶ್ವವಿದ್ಯಾಲಯ (ಜ್ಞಾನಭಾರತಿ) ಆವರಣದಲ್ಲಿ ರಸ್ತೆ ಹಾದು ಹೋಗುತ್ತದೆ. ಈ ರಸ್ತೆ ಮೈಸೂರು ರಸ್ತೆಯಿಂದ ಮಲ್ಲತ್ತಹಳ್ಳಿಯ ಮುಖ್ಯ ರಸ್ತೆಗೆ ಸಂಪರ್ಕ ಕಲ್ಪಿಸುತ್ತದೆ. ನಿತ್ಯ ಈ ರಸ್ತೆಯಲ್ಲಿ ಬಿಎಂಟಿಸಿ ಬಸ್, ಖಾಸಗಿ, ಸರ್ಕಾರಿ ಸೇರದಂತೆ ಸಾವಿರಾರು ವಾಹನಗಳು ಸಂಚರಿಸುತ್ತವೆ. ಈ ರಸ್ತೆಯನ್ನು ಆವರಣದಿಂದ ಬೇರೆಡೆ ಪ್ರತ್ಯೇಕವಾಗಿ ನಿರ್ಮಿಸುವಂತೆ ವಿದ್ಯಾರ್ಥಿಗಳು ಮನವಿ ಮಾಡುತ್ತಲೇ ಬಂದಿದ್ದಾರೆ. ಆದರೆ ಪ್ರಯೋಜನವಾಗಿಲ್ಲ. ಇದೀಗ ಬಿಎಂಟಿಸಿ ಬಸ್ ಅಪಘಾತದಿಂದ ಗಂಭೀರ ಸ್ಥಿತಿಯಲ್ಲಿರುವ ಶಿಲ್ಪಶ್ರೀ ಪ್ರಕರಣದಿಂದ ಈ ಬೇಡಿಕೆ ಈಡೇರಿಕೆಯ ಆಗ್ರಹ ಮತ್ತೆ ಮುನ್ನೆಲೆಗೆ ಬಂದಿದೆ.
ಪ್ರತ್ಯೇಕ ರಸ್ತೆ ನಿರ್ಮಾಣದ ಜತೆಗೆ ಸಂತ್ರಸ್ತೆ ಶಿಲ್ಪಶ್ರೀ ಅವರ ಕುಟುಂಬದವರಿಗೆ ಒಬ್ಬರಿಗೆ ಸರ್ಕಾರಿ ಉದ್ಯೋಗ ನೀಡಬೆಕು. ಸಮಾಜ ಕಲ್ಯಾಣ ಇಲಾಖೆ, ಬಿಎಂಟಿಸಿ ಹಾಗೂ ವಿಶ್ವವಿದ್ಯಾಲಯ ಸೇರಿ ತಲಾ 50 ಲಕ್ಷ ದಂತೆ ಒಟ್ಟು 1.5ಕೋಟಿ ರೂ. ಪರಿಹಾ ನೀಡಬೇಕು. ಈ ಬಗ್ಗೆಯೂ ಸಭೆಯಲ್ಲಿ ಚರ್ಚಿಸಲಾಗುವುದು ಎಂದು ಬೆಂಗಳೂರು ವಿಶ್ವವಿದ್ಯಾಲಯ ಸ್ನಾತಕೋತ್ತರ ಸಂಶೋಧನಾ ವಿದ್ಯಾರ್ಥಿಗಳ ಒಕ್ಕೂಟದ ಮುಖಂಡ ಲೋಕೇಶ್ ತಿಳಿಸಿದ್ದಾರೆ.

ಸದ್ಯ ಗಾಯಾಳು ವಿದ್ಯಾರ್ಥಿನಿ ಶಿಲ್ಪಿಶ್ರೀ ಸ್ಥಿತಿ ಗಂಭೀರವಾಗಿ ಅಗತ್ಯ ಚಿಕಿತ್ಸೆ ಮಾಡಲಾಗಿದ್ದು, ಸ್ವಲ್ಪಮಟ್ಟಿಗೆ ಸ್ಪಂದಿಸುತ್ತಿದ್ದಾರೆ. ಆದರೆ ಈಗಲೇ ಏನನ್ನು ಹೇಳಲು ಆಗದು ಎಂದು ವೈದ್ಯರು ತಿಳಿಸಿದ್ದಾರೆ ಎಂದು ಅವರು ಮಾಹಿತಿ ನೀಡಿದರು.












Click it and Unblock the Notifications