Bengaluru-Tumkur Metro: ತುಮಕೂರಿಗೆ ನಮ್ಮ ಮೆಟ್ರೋ ವಿಸ್ತರಣೆ: ಮಹತ್ವದ ಅಪ್‌ಡೇಟ್
ಬಹು ನಿರೀಕ್ಷಿತ ಬೆಂಗಳೂರು-ತುಮಕೂರು ಮೆಟ್ರೋ ಯೋಜನೆ ಬಗ್ಗೆ ಹೊಸ ಅಪ್‌ಡೇಟ್ ಸಿಕ್ಕಿದೆ. ಮಾದಾವರದಿಂದ ತುಮಕೂರಿನವರೆಗೆ 52 ಕಿಮೀ ಉದ್ದದ ಮೆಟ್ರೊ ರೈಲು ಕಾರಿಡಾರ್ ವಿಸ್ತರಣೆಗೆ ಕಾರ್ಯಸಾಧ್ಯತಾ ಅಧ್ಯಯನ ವರದಿ ಸಿದ್ಧಪಡಿಸಲು ಎಂಟು ಸಲಹಾ ಸಂಸ್ಥೆಗಳು ಆಸಕ್ತಿ ತೋರಿವೆ ಎಂದು ವರದಿಯಾಗಿದೆ.
ಕಾರ್ಯಸಾಧ್ಯತಾ ಅಧ್ಯಯನ ವರದಿಯಲ್ಲಿ ಯೋಜನೆಯ ಸಾಧ್ಯತೆ, ಸವಾಲುಗಳ ಬಗ್ಗೆ ಪರಿಶೀಲನೆ ಮಾಡಲಾಗುತ್ತದೆ. ಒಂದು ವೇಳೆ ಯೋಜನೆ ಕಾರ್ಯಸಾಧ್ಯವಾದರೆ ಸಾರ್ವಜನಿಕ-ಖಾಸಗಿ ಸಹಭಾಗಿತ್ವದ (ಪಿಪಿಪಿ) ಮಾದರಿಯಲ್ಲಿ ಕಾರ್ಯಗತಗೊಳಿಸಲಾಗುತ್ತದೆ.

ಡಿಎಚ್ ವರದಿ ಮಾಡಿರುವ ಪ್ರಕಾರ, ಸಿಸ್ತ್ರ ಎಂವಿಎ ಕನ್ಸಲ್ಟಿಂಗ್, ರಾಜ್ಯ ಬೆಂಬಲಿತ RITES ಲಿಮಿಟೆಡ್, ಆರ್ವಿ ಅಸೋಸಿಯೇಟ್ಸ್ ಸಂಸ್ಥೆಗಳು ಕಾರ್ಯ ಸಾಧ್ಯತಾ ಅಧ್ಯಯನಕ್ಕೆ ಆಸಕ್ತಿ ತೋರಿಸಿವೆ.
ಬಿಎಂಆರ್ ಸಿಎಲ್ ಅಧಿಕಾರಿಗಳು ಕೂಡ ಎಂಟು ಬಿಡ್‌ದಾರರು ಡಿಪಿಆರ್ ಸಲ್ಲಿಕೆಗೆ ಭಾಗವಹಿಸಲಿದ್ದಾರೆ ಎಂದು ದೃಢಪಡಿಸಿದ್ದಾರೆ. ತಾಂತ್ರಿಕ ಮತ್ತು ಆರ್ಥಿಕ ಮೌಲ್ಯಮಾಪನಗಳ ನಂತರ ಯಶಸ್ವಿ ಸಲಹೆಗಾರರನ್ನು ಆಯ್ಕೆ ಮಾಡಲಾಗುವುದು ಎಂದು ಹೇಳಿದರು.
ಬಜೆಟ್‌ನಲ್ಲಿ ಘೋಷಣೆ
ಬೆಂಗಳೂರು ಮೆಟ್ರೋ ಜಾಲವನ್ನು ತುಮಕೂರಿಗೆ ವಿಸ್ತರಣೆ ಮಾಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಣೆ ಮಾಡಿದ್ದರು. ಬಜೆಟ್‌ನಲ್ಲಿ ಘೋಷಣೆ ಬಳಿಕ ಯೋಜನೆಯ ಕಾರ್ಯಸಾಧ್ಯತೆ ಅಧ್ಯಯನಕ್ಕೆ ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ (BMRCL) ಟೆಂಡರ್ ಕರೆದಿದೆ.
ತುಮಕೂರಿನವೇ ಆದ ಗೃಹಸಚಿವ ಜಿ. ಪರಮೇಶ್ವರ ಅವರು ನಮ್ಮ ಮೆಟ್ರೋ ತುಮಕೂರಿಗೆ ವಿಸ್ತರಿಸಲು ಆಸಕ್ತಿ ತೋರಿಸಿದ್ದಾರೆ. ಆದರೆ ಚಿಕ್ಕಬಾಣಾವರದಿಂದ ಉಪನಗರ ರೈಲು ಜಾಲವನ್ನು ತುಮಕೂರಿಗೆ ವಿಸ್ತರಿಸುವ ಬದಲು ಮೆಟ್ರೋ ಬಗ್ಗೆ ಆಸಕ್ತಿ ತೋರಿಸಿರುವುದು ಟೀಕೆಗೆ ಗುರಿಯಾಗಿದೆ.
ಯೋಜನೆ ಬಗ್ಗೆ ಈಗಲೇ ಖಾತರಿ ಇಲ್ಲ
ಕಾರ್ಯಸಾಧ್ಯತೆ ಅಧ್ಯಯನ ಮುಗಿದ ಬಳಿಕ ಈ ಯೋಜನೆಯನ್ನು ಮುಂದುವರೆಸಬೇಕೆ ಅಥವಾ ಬೇಡವೆ ಎನ್ನುವುದರ ಕುರಿತು ಸ್ಪಷ್ಟನೆ ಸಿಗಲಿದೆ ಎಂದು ಬಿಎಂಆರ್ ಸಿಎಲ್ ಅಧಿಕಾರಿಯೊಬ್ಬರು ಹೇಳಿರುವುದಾಗಿ ಡಿಎಚ್ ವರದಿಯಲ್ಲಿ ತಿಳಿಸಿದೆ. ಅದುವರೆಗೂ ಇದು ಘೋಷಣೆಯಷ್ಟೆ ಆಗಿರುತ್ತದೆ ಎಂದು ಹೇಳಿದೆ.
ಬಿಎಂಆರ್ ಸಿಎಲ್ ಇದೇ ವರ್ಷದ ಫೆಬ್ರವರಿಯಲ್ಲಿ 118 ಕಿಲೋಮೀಟರ್ ಉದ್ದದ ಮೆಟ್ರೋ ಯೋಜನೆಯ ಕಾರ್ಯಸಾಧ್ಯತೆಯನ್ನು ಅಧ್ಯಯನ ಮಾಡಲು ಟೆಂಡರ್‌ಗಳನ್ನು ಆಹ್ವಾನಿಸಿತ್ತು. ಚಲ್ಲಘಟ್ಟ ಮತ್ತು ಬಿಡದಿ, ರೇಷ್ಮೆ ಸಂಸ್ಥೆ ಮತ್ತು ಹಾರೋಹಳ್ಳಿ, ಬೊಮ್ಮಸಂದ್ರ ಮತ್ತು ಅತ್ತಿಬೆಲೆ, ಕಾಳೇನ ಅಗ್ರಹಾರ (ಗೊಟ್ಟಿಗೆರೆ) ಜಿಗಣಿ, ಆನೇಕಲ್, ಸರ್ಜಾಪುರ, ವರ್ತೂರು ಮೂಲಕ ಕಾಡುಗೋಡಿವರೆಗಿನ ಮಾರ್ಗಗಳು ಸೇರಿವೆ.
ತುಮಕೂರಿಗೆ ಮೆಟ್ರೋ ಯಾಕೆ ಬೇಕು?
ತುಮಕೂರಿಗೆ ಮೆಟ್ರೋ ಮಾರ್ಗ ಸ್ಥಾಪನೆಯಿಂದ ಬೆಂಗಳೂರಿಗೆ ಪರ್ಯಾಯವಾಗಿ ಉಪನಗರವಾಗಿ ಅಭಿವೃದ್ಧಿಪಡಿಸಬಹುದು. ಡಾಬಸ್‌ಪೇಟೆ ಕೈಗಾರಿಕಾ ಪ್ರದೇಶದ ಮೂಲಕ ಹಾದು ಹೋಗುವ ಕಾರಣ ಕಾರ್ಮಿಕರಿಗೆ, ನೌಕರರಿಗೆ ಹೆಚ್ಚಿನ ಅನುಕೂಲವಾಗಲಿದೆ. ಭವಿಷ್ಯದ ದೃಷ್ಟಿಯಿಂದ ಆದರೂ ತುಮಕೂರು-ಬೆಂಗಳೂರು ಮೆಟ್ರೋ ಯೋಜನೆಯಿಂದ ಅನುಕೂಲವಿದೆ.












Click it and Unblock the Notifications