Traffic violation: ಮೂರನೇ ದಿನಕ್ಕೆ ಸಿಲಿಕಾನ್ ಸಿಟಿಯಲ್ಲಿ ದಾಖಲೆ ಮಟ್ಟದಲ್ಲಿ ದಂಡ ಸಂಗ್ರಹ
ಕರ್ನಾಟಕ ರಾಜ್ಯ ಸಾರಿಗೆ ಇಲಾಖೆ ಸಂಚಾರ ನಿಯಮ ಉಲ್ಲಂಘನೆಯ ದಂಡ ಪಾವತಿಗೆ ಶೇ. 50ರಷ್ಟು ರಿಯಾಯಿತಿ ನೀಡಿದ ಬಳಿಕ ಬೆಂಗಳೂರಲ್ಲಿ ಮೂರು ದಿನದಲ್ಲಿ ಭರ್ಜರಿ ಹಣ ಸಂಗ್ರವಾಗಿದೆ. ಅದರ ವಿವರ ಇಲ್ಲಿದೆ.
ಬೆಂಗಳೂರು, ಫೆಬ್ರುವರಿ 06: ಕರ್ನಾಟಕ ರಾಜ್ಯ ಸಾರಿಗೆ ಇಲಾಖೆ ಸಂಚಾರ ನಿಯಮ ಉಲ್ಲಂಘನೆಯ ದಂಡ ಪಾವತಿಗೆ ಶೇ. 50ರಷ್ಟು ರಿಯಾಯಿತಿ ನೀಡಿದ ಬಳಿಕ ಜನರು ಹಣ ಕಟ್ಟಲು ಮುಗಿಬಿದ್ದಿದ್ದಾರೆ. ಬೆಂಗಳೂರು ನಗರದ ಒಂದರಲ್ಲೇ ಕೋಟಿಗಟ್ಟಲೇ ಹಣ ಸಂಗ್ರಹವಾಗಿದೆ.
ಅರ್ಧದಷ್ಟು ರಿಯಾಯಿತಿ ಘೋಷಿಸಿದ ನಂತರ ಮೂರೇ ದಿನದಲ್ಲಿ ಹೆಚ್ಚು ವಾಹನಗಳಿಂದ ಕೂಡಿರುವ ಸಿಲಿಕಾನ್ ಸಿಟಿ ಬೆಂಗಳೂರು ಒಂದರಲ್ಲಿ ಭಾನುವಾರ (ರಾತ್ರಿ 8.30ರ ತನಕ) ಭರ್ಜರಿ ದಂಡ ಪಾವತಿಯಾಗಿದೆ. ಬೆಂಗಳೂರು ನಗರ ಪೊಲೀಸರು (BTP) ನಿಯಮ ಉಲ್ಲಂಘಿಸಿದವರಿಂದ 6.31 ಕೋಟಿ ರೂಪಾಯಿ, ಒಟ್ಟು 22,32,47,491 ರೂಪಾಯಿ ಸಂಗ್ರಹಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಭಾನುವಾರವು ಸಂಚಾರ ನಿರ್ವಹಣಾ ಕೇಂದ್ರ (TMC) ಹಾಗೂ ಹತ್ತಿರ ಸಂಚಾರಿ ಪೊಲೀಸ್ ಠಾಣೆಗಳ ಮುಂದೆ ನಿಯಮ ಉಲ್ಲಂಘಿಸಿದವರು ಸರತಿ ಸಾಲಿನಿಲ್ಲಿ ನಿಂತಿದ್ದು ಕಂಡು ಬಂತು. ವಿವಿಧ ಪಾವತಿ ವಿಧಾನಗಳ ಮೂಲಕ ಒಟ್ಟು ಸುಮಾರು 6,31,77,750 ರೂಪಾಯಿ ಪಾವತಿಯಾಗಿದೆ. ಇದರಿಂದಾಗಿ ಇದುವರೆಗೆ ಬಾಕಿ ಉಳಿದಿದ್ದ ಸಂಚಾರ ನಿಯಮ ಉಲ್ಲಂಘಿಸಿದ್ದ 2,06,326 ಪ್ರಕರಣಗಳು ವಿಲೇವಾರಿಯಾದವು.

ಪೇಟಿಎಂನಿಂದ 1.14ಲಕ್ಷ ಪ್ರಕರಣ ತೆರವು
ದಂಡ ಪಾವತಿ ವೇಳೆ ಹಣಕಾಸು ಡಿಜಿಟಲ್ ವ್ಯವಸ್ಥೆಯಾದ ಪೇಟಿಎಂ ಸಂಚಾರ ಉಲ್ಲಂಘಿಸುವವರಿಗೆ ಆದ್ಯತೆಯ ವಿಧಾನವಾಗಿ ಹೊರಹೊಮ್ಮಿದೆ. ಕಾರಣ ಇದೊಂದು ಮೊಬೈಲ್ ಆಪ್‌ನಿಂದಲೇ ಒಟ್ಟು ಸುಮಾರು 1,14,617 ಪ್ರಕರಣಗಳು ತೆರವು ಮಾಡಲಾಗಿದ್ದು, ಇದರಲ್ಲಿ ಒಟ್ಟು 3,79,95,900 ರೂಪಾಯಿ ದಂಡ ಸಂದಾಯವಾಗಿದೆ.
ಇನ್ನೂ ನಗರದಲ್ಲಿರುವ ವಿವಿಧ ಸಂಚಾರ ಪೊಲೀಸ್ ಠಾಣೆಗಳಲ್ಲಿ ವೈಯಕ್ತಿಕ ಡಿಜಿಟಲ್ ಸಹಾಯಕ (PDA) ಸಿಬ್ಬಂದಿ ಬಳಿ ವಾಹನ ಸವಾರರು 1,97,56,950 ರೂಪಾಯಿ ದಂಡದ ಹಣವನ್ನು ಕಟ್ಟಿದ್ದಾರೆ. ಈ ಪಿಡಿಎ ಬಳಿಯೇ 70,000ಕ್ಕೂ ಅಧಿಕ ಸಂಚಾರ ನಿಯಮ ಉಲ್ಲಂಘನೆಯ ಪ್ರಕರಣಗಳು ವಿಲೇವಾರಿಯಾಗಿವೆ ಎಂದು ಸಂಚಾರ ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಈ ಸಂಬಂಧ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ವಿಶೇಷ ಆಯುಕ್ತ (ಸಂಚಾರ) ಡಾ.ಎಂ.ಎ.ಸಲೀಂ ಅವರು, ಶುಕ್ರವಾರ ಫೆಬ್ರುವರಿ 03ರಿಂದ ಫೆಬ್ರವರಿ 5ರ ರಾತ್ರಿ 8.30ರ ವೇಳೆಗೆ ರಾಜ್ಯದಲ್ಲಿ ಒಟ್ಟು 22,32,47,491 ರೂಪಾಯಿ ಸಂಗ್ರಹವಾಗಿದೆ. ಇದೇ ವಾರದಲ್ಲಿ ಹಲವು ಪ್ರಕರಣಗಳು ತೆರವುಗೊಳ್ಳುವ ಭರವಸೆ ಇದೆ. ಹೀಗಿದ್ದರೂ ಸಹ ಒಟ್ಟು ಸುಮಾರು 2 ಕೋಟಿ ಪ್ರಕರಣಗಳು ಬಾಕಿ ಉಳಿದಿವೆ ಎಂದು ಅವರು ತಿಳಿಸಿದರು.

ನಿಯಮ ಉಲ್ಲಂಘಿಸಿದವರು ಭಾನುವಾರ ಮುಗಿಬಿದ್ದು ದಂಡ ಪಾವತಿಸಿದ್ದು, ಇದು ಸೋಮವಾರವು ಮುಂದುವರಿಯಲಿದೆ. ಇದೇ ರೀತಿ ಬಾಕಿ ಉಳಿದ ಪ್ರಕರಣಗಳು ಬೇಗ ಇತ್ಯಾರ್ಥವಾಗುವ ಸಾಧ್ಯತೆ ಇದೆ ಎಂದು ತಿಳಿಸಿದರು.












Click it and Unblock the Notifications