Traffic Jam: ಲಾಂಗ್ ವೀಕೆಂಡ್ ಮುಗಿಸಿ ಬೆಂಗಳೂರಿಗೆ ಮರಳಿದ ಜನ, ನೆಲಮಂಗಲ ಬಳಿ ಭಾರೀ ಟ್ರಾಫಿಕ್ ಜಾಮ್
ಬೆಂಗಳೂರು: ಸುದೀರ್ಘ ರಜೆ ಸಿಕ್ಕ ಕಾರಣಕ್ಕೆ ತಮ್ಮ ಊರುಗಳು ಹಾಗೂ ಪ್ರವಾಸಿ ತಾಣಗಳಿಗೆ ತೆರಳಿದ್ದ ಜನರು ಬೆಂಗಳೂರಿನತ್ತ ಸೋಮವಾರ ಆಗಮಿಸಿದರು. ಹಾಸನ, ದಾವಣಗೆರೆ, ಚಿತ್ರದುರ್ಗ ಕಡೆಯಿಂದ ಜನರು ರಾಜಧಾನಿಗೆ ಮರಳುತ್ತಿದ್ದು, ನೆಲಮಂಗಲ ಕುಣಿಗಲ್ ರಸ್ತೆಯಲ್ಲಿ ಭಾರಿ ವಾಹನಗಳ ದಟ್ಟಣೆ ಕಂಡು ಬಂದಿದೆ. ಸುಮಾರು ನಾಲ್ಕು ಕಿಲೋ ಮೀಟರ್ ಉದ್ದದವರೆಗೂ ವಾಹನಗಳು ಸರತಿ ಸಾಲಿನಲ್ಲಿ ನಿಂತುಕೊಂಡಿದ್ದವು. ಸಂಚಾರ ಅಸ್ತವ್ಯವಸ್ತವಾಯಿತು.
ವಾರಾಂತ್ಯದ ಮೂರು ದಿನ ರಜೆ ಮುಗಿಸಿ ಸೋಮವಾರ (ಜನವರಿ 26) ಸಂಜೆಗೆ ರಾಜಧಾನಿಯತ್ತ ಬರುವವರ ಸಂಖ್ಯೆ ಹೆಚ್ಚಿತ್ತು. ಸಂಜೆ 6 ಗಂಟೆ ನಂತರ ಏಕಾಎಕಿ ವಾಹನಗಳು ಕುಣಿಗಲ್, ನೆಲಮಂಗಲ ಬಳಿ ಜಮಾಯಿಸಿದವು. ಅವುಗಳಿಗೆ ಸುಗಮ ಸಂಚಾರಕ್ಕೆ ದಾರಿ ಮಾಡಿಕೊಟ್ಟು, ದಟ್ಟಣೆ ನಿವಾರಿಸುವಲ್ಲಿ ನೆಲಮಂಗಲ ಟ್ರಾಫಿಕ್ ಪೊಲೀಸರು ಹರಸಾಹಸಪಟ್ಟರು. ಇನ್ನೂ ನಿಗದಿತ ಸಮಯಕ್ಕೆ ಮನೆ ತಲುಪಲಿಲ್ಲ ಎಂದು ಕೊಣಗುತ್ತಿದ್ದ ಪ್ರಯಾಣಿಕರು, ವಾಹನ ಸವಾರರು ಒಳಗೇ ಕೂತು ಪರದಾಡಿದರು. ಒಂದು ಕೀಲೋ ಮೀಟರ್ ದೂರ ಸಾಗಲು ಗಂಟೆಗಳ ಸಮಯ ಬೇಕಾಯಿತು.

ಮಂಗಳವಾರ ಬೆಳಗಿನ ಜಾವದವರೆಗೂ ಟ್ರಾಫಿಕ್!
ಬೆಂಗಳೂರು ನೆಲಮಂಗಲ ರಾಷ್ಟ್ರೀಯ ಹೆದ್ದಾರಿಯಲ್ಲಿ ಟ್ರಾಫಿಕ್ ಹೆಚ್ಚಾಗಿದ್ದ ಕಾರಣ ಸೋಮವಾರ ಸಂಜೆ ನಂತರ ವಾಹನಗಳ ಸಂಚಾರ ನಿಧಾನ ಗತಿಯಲ್ಲಿತ್ತು. ಇದೇ ಸ್ಥಿತಿ ನಾಳೆ ಮಂಗಳವಾರ (ಜನವರಿ 27) ಬೆಳಗಿನ ಜಾವದವರೆಗೂ ಕಂಡು ಬರುವ ನಿರೀಕ್ಷೆ ಇದೆ. ಏಕೆಂದರೆ ಸೋಮವಾರ ರಾತ್ರಿ ಮಂಗಳೂರು, ಹಾಸನ, ಬೆಳಗಾವಿ, ಹುಬ್ಬಳ್ಳಿ, ದಾವಣಗೆರೆಯಿಂದ ಬೆಂಗಳೂರಿನತ್ತ ಹೊರಡುವವರ ಸಂಖ್ಯೆ ಸಾಮಾನ್ಯವಾಗಿ ಹೆಚ್ಚಿರುತ್ತದೆ. ಅದೆಲ್ಲ ವಾಹನಗಳು ಬೆಳಗಿನ ಜಾವ ಸುಮಾರು 4, 5 ಇಲ್ಲವೇ 6 ಗಂಟೆ ಹೊತ್ತಿಗೆ ಬೆಂಗಳೂರಿಗೆ ಬಂದು ಸೇರುತ್ತವೆ. ಈ ಸಂದರ್ಭದಲ್ಲಿ ಇದೇ ನೆಲಮಂಗಲ, ಕುಣಿಗಲ್ ಕ್ರಾಸ್ ಬಳಿಕ ಹೆಚ್ಚಿನ ದಟ್ಟಣೆ ಕಂಡು ಬರುವ ನಿರೀಕ್ಷೆ ಇದೆ.
ಇನ್ನೂ ಬೆಂಗಳೂರು-ಮೈಸೂರು ರಸ್ತೆ, ಕನಕಪುರ ರಸ್ತೆ, ಬಳ್ಳಾರಿ ರಸ್ತೆ ಸೇರಿದಂತೆ ಬೆಂಗಳೂರು ಪ್ರವೇಶಿಸುವ ನಗರದ ಹೊರ ವಲಯದ ರಸ್ತೆಗಳಲ್ಲಿಯೂ ಇಂದು ಸಂಜೆ ವಾಹನಗಳ ದಟ್ಟಣೆ ಕಂಡು ಬಂತು. ವಾರಾಂತ್ಯ, ಹಬ್ಬಗಳ ವೇಳೆ ಊರಿಗೆ ತೆರಳಿದವರು ಮರಳಿ ಬೆಂಗಳೂರಿಗೆ ಬರುವಾಗ ಇಂತಹ ಸಮಸ್ಯೆ, ಟ್ರಾಫಿಕ್ ಜಾಮ್ ಸಾಮಾನ್ಯ ಎಂಬಂತಾಗಿದೆ. ಪ್ರತಿ ಬಾರಿ ಹಬ್ಬಗಳಿಗೆ ರಾಜಧಾನಿಯಿಂದ ತೆರಳುವಾಗ ಹಾಗೂ ರಜೆ ಮುಗಿಸಿ ಬೆಂಗಳೂರಿಗೆ ಬರುವಾಗ ಇದೇ ರೀತಿ ದಟ್ಟಣೆ ಉಂಟಾಗುತ್ತದೆ. ಈ ಟ್ರಾಫಿಕ್ ನಿರ್ವಹಿಸುವುದೇ ಸಂಚಾರಿ ಪೊಲೀಸರಿಗೆ ದೊಡ್ಡ ಸವಾಲಾಗಿದೆ.












Click it and Unblock the Notifications