ಹಿಂದಿನ ದಾಖಲೆ ಮುರಿಯುತ್ತಾ ಬೆಂಗಳೂರು ಚಳಿ?
ಬೆಂಗಳೂರು, ಡಿ. 2: ಎಂದಿನಂತೆ ಭಾನುವಾರ ಸಂಜೆ ಹೊರಗೆ ಬಿದ್ದರೆ ಜನಗಳ ಓಡಾಟವೇ ಇಲ್ಲ! ಅಯ್ಯೋ, ಸದಾ ವೀಕೆಂಡ್ ಗುಂಗಲ್ಲಿ ಅಡ್ಡಾಡುತ್ತಿದ್ದ ಬೆಂಗಳೂರಿಗೆ ಏನಾಯಿತು? ಎಂದು ಯೋಚಿಸಿದಾಗ ಸಿಕ್ಕ ಉತ್ತರ ಚಳಿ ಚಳಿ.
ಸಾಯಂಕಾಲ ಮನೆಗೆ ಮರಳುವಾಗ ಬೈಕ್ ನಲ್ಲಿ ಬರುತ್ತಿರುವ ಜೋಡಿಯೊಂದನ್ನು ಗಮನಿಸಿ. ಬೈಕ್ ಓಡಿಸುತ್ತಿರುವ ಇನಿಯನನ್ನು (ಅಥವಾ ಗಂಡ ಅಂತಿಟ್ಟುಕೊಳ್ಳಿ) ಹಿಂದೆ ಕುಳಿತಿರುವ ಯುವತಿ (ಹೆಂಡತಿ ಅಂತಿಟ್ಟುಕೊಳ್ಳಿ) ತಬ್ಬಿಕೊಂಡು ಕುಳಿತಿರುವುದನ್ನು ನೋಡಿದರೆ ಚಳಿಗಾಲ ಒಂದು ಅಂದಾಜು ನಿಮಗೆ ಸಿಗಬಹುದು![ಬೆಂಗಳೂರು: ವೈಟ್ ಫೀಲ್ಡ್ ನಲ್ಲಿ ಸಿಗ್ನಲ್ ಫ್ರೀ ಪ್ರಯಾಣ]

ಹೌದು.. ಕಳೆದ ಒಂದು ವಾರದಿಂದ ಚಳಿ ಆರ್ಭಟ ಜೋರಾಗಿಯೇ ಇದೆ. ಸಂಜೆಯಾದರೆ ಜನ ಮನೆ ಸೇರಿಕೊಂಡುಬಿಡ್ತಾರೆ. ಇದೊಂಥರಾ ಒಳ್ಳೇದೇ ಆಯ್ತು ಬಿಡಿ ಅನ್ನೋರು ಇದ್ದಾರೆ. ಆದರೆ ಇನ್ನು ಮುಂದಿನ ಕತೆ ನೀವು ಓದಲೇಬೇಕು!
ಈಗಲೇ ಮಾರ್ಕೆಟ್ ಗೆ ಹೋಗಿ ಕಂಬಳಿ, ಸ್ವೇಟರ್ ತಂದಿಟ್ಟುಕೊಳ್ಳುವುದು ಒಳ್ಳೆಯದು. ಯಾಕೆಂದರೆ ಮುಂದಿನ ವಾರ ಬೆಂಗಳೂರಿನ ಉಷ್ಣಾಂಶ 15 ಡಿಗ್ರಿಗೆ ತಲುಪುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಸದ್ಯ ಬೆಂಗಳೂರಿನ ಉಷ್ಣಾಂಶ 17 ರಿಂದ 26 ಡಿಗ್ರಿ ಮಧ್ಯೆ ಓಡಾಡುತ್ತಿದೆ.
ಈಗ 20 ಡಿಗ್ರಿ ಇದ್ದಾಗಲೇ ಚಳಿ ತಡೆದುಕೊಳ್ಳಲಾಗುತ್ತಿಲ್ಲ, ಇನ್ನು ಉಷ್ಣಾಂಶ ಕೆಳಗಿಳಿದರೆ ಏನು ಕತೆ? ಎಂಬ ಗೊಣಗಾಟ ನಾಗರಿಕರಲ್ಲಿ ಶುರುವಾಗಿದೆ. ಬೆಳಗ್ಗಿನ ವಾಕಿಂಗ್, ನೈಟ್ ರೌಂಡ್ಸ್ ಎಲ್ಲದಕ್ಕೂ ಬ್ರೇಕ್ ಬೀಳುವುದು ಖಚಿತ. ದಿನದ ಬಹುಪಾಲು ಕಾಲ ಸೂರ್ಯ ಮೋಡದ ಮರೆಯಲ್ಲೇ ಇರುವುದು ಮತ್ತೊಂದು ಸಮಸ್ಯೆಯಾಗಿ ಪರಿಣಮಿಸಿದೆ.[ನೃತ್ಯಾಸಕ್ತರಿಗೆ ಆನ್ ಲೈನ್ ಮೂಲಕ ಕ್ಲಾಸ್ !]

ಭರ್ಜರಿ ವ್ಯಾಪಾರ
ರಸ್ತೆ ಬದಿಯಲ್ಲಿ ಸ್ವೆಟರು, ಜರ್ಕಿನ್, ಮಫ್ಲರ್ ಗುಡ್ಡೆ ಹಾಕಿಕೊಂಡು ಕುಳಿತವರಿಗೆ ಇದು ಆದಾಯದ ಕಾಲ. ಬೀದಿಯ ಒಂದು ಮೂಲೆಯಲ್ಲಿ ಧಗಧಗಿಸುವ ಬೆಂಕಿಯ ಮೇಲೆ ಬೋಗುಣಿ ಇಟ್ಟುಕೊಂಡು, ಬಿಸಿಬಿಸಿ ಬೋಂಡಾ, ಮಿರ್ಚಿ ಮಾರುವವರ ವ್ಯಾಪಾರಕ್ಕೂ ತೊಡಕಿಲ್ಲ.
ಕೆಮ್ಮು , ಶೀತಕ್ಕೆ ಎಲ್ಲಿ ಕೊನೆ?
ನೆಗಡಿ, ಕೆಮ್ಮು, ಶೀತ ಎಂಬ ಶಬ್ದಗಳು ಎಲ್ಲರಿಗೂ ಚಿರಪರಿಚಿತವಾಗಿಹೋಗಿದೆ. ಬೆಂಗಳೂರ ಧೂಳಿನೊಂದಿಗೆ ಬೆರೆತಿದ್ದ ನಮ್ಮ ಶ್ವಾಸಕೋಶಕ್ಕೆ ಚಳಿಯ ಹೊಡೆತ ಬೇರೆ. ಚಳಿಗಾಲವೆಂದರೆ ಸುಮ್ಮನೆ ಅಲ್ಲ ವೈದ್ಯರಿಗೆ, ಬಟ್ಟೆ ವ್ಯಾಪಾರಿಗಳಿಗೆ ಆದಾಯದ ಕಾಲವಾಗಿದ್ದರೆ, ಜನರಿಗೆ ಮಾತ್ರ 'ಅಯ್ಯೋ ಇನ್ನೆಷ್ಟು ದಿನ ಕಳಿಬೇಕಪ್ಪಾ' ಎಂಬ ಆತಂಕಕಾಲ.
ಹಿಂದಿನ ದಾಖಲೆ ಏನು?
2006ರಲ್ಲಿ 7.8 ಡಿಗ್ರಿ, 1992 ರಲ್ಲಿ 5 ಡಿಗ್ರಿ ದಾಖಲಾಗಿದ್ದು ಹಿಂದಿನ ದಾಖಲೆ. ಕಳೆದ ತಿಂಗಳುಗಳಲ್ಲಿ ಸುರಿದ ಭಾರೀ ಮಳೆಯಿಂದ ಭೂಗರ್ಭದಲ್ಲಿ ತೇವಾಂಶ ಹೆಚ್ಚಿನ ಪ್ರಮಾಣದಲ್ಲಿದೆ. ಹೀಗಾಗಿ ಚಳಿ ಪರ್ವ ಮುಂದುವರಿಯಲಿದೆ ಎಂಬುದು ಹವಾಮಾನ ಇಲಾಖೆಯ ಸ್ಪಷ್ಟ ವರದಿ.
ಮಂಗಳವಾರ ಬಿಜಾಪುರದಲ್ಲಿ ಅತಿ ಕಡಿಮೆ ಅಂದರೆ 12 ಡಿಗ್ರಿ ಉಷ್ಣಾಂಶ ದಾಖಲಾಗಿತ್ತು. ಉಳಿದಂತೆ ರಾಜ್ಯದ ಎಲ್ಲ ಕಡೆ ಚಳಿಯ ಹೊಡೆತ ಮುಂದುವರಿದಿದ್ದು ಮಲೆನಾಡು ಮತ್ತು ಕರಾವಳಿ ಪ್ರದೇಶಗಳಲ್ಲೂ ಒಣ ಹವೆಯಿಂದ ಕೂಡಿದ ವಾತಾವರಣವಿತ್ತು.
Conditions for Bangalore, IN at 6:00 pm IST: Current Conditions:Partly Cloudy, 27 CForecast:Tue - Mostly Clear. High: 29 Low: 14We...
— Bangalore weather (@BloreFeelsLike) December 2, 2014 











Click it and Unblock the Notifications