ಬೆಂಗಳೂರಿನಲ್ಲಿ ಬದುಕಲು ತಿಂಗಳಿಗೆ ₹63,000 ಬೇಕಾ? 26 ವರ್ಷದ ಟೆಕ್ಕಿ ಬಿಚ್ಚಿಟ್ಟ ಲೆಕ್ಕಾಚಾರ ನೋಡಿ ನೆಟ್ಟಿಗರು ದಂಗು!

ಬೆಂಗಳೂರು ಭಾರತದ ಸಿಲಿಕಾನ್ ವ್ಯಾಲಿ. ಇಲ್ಲಿ ಜೀವನ ನಡೆಸುವುದು ದುಬಾರಿ ಎಂಬುದು ಬಹುತೇಕರಿಗೆ ತಿಳಿದಿರುವ ವಿಚಾರ. ಆದರೆ, ಇತ್ತೀಚೆಗೆ 26 ವರ್ಷದ ಕಾರ್ಪೊರೇಟ್ ಉದ್ಯೋಗಿಯೊಬ್ಬರು ಹಂಚಿಕೊಂಡಿರುವ ತಮ್ಮ ಒಂದು ತಿಂಗಳ ಖರ್ಚಿನ ಲೆಕ್ಕಾಚಾರ ಸೋಶಿಯಲ್‌ ಮಿಡಿಯಾದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ಇನ್‌ಸ್ಟಾಗ್ರಾಮ್ ಬಳಕೆದಾರರಾದ ಶಿವಾಂಜಲಿ ಎಂಬುವವರು ಸೆಪ್ಟೆಂಬರ್ ತಿಂಗಳಲ್ಲಿ ತಾವು ಮಾಡಿದ ಖರ್ಚಿನ ಸಂಪೂರ್ಣ ವಿವರಣೆಯನ್ನು ವಿಡಿಯೋ ಮೂಲಕ ನೀಡಿದ್ದಾರೆ.

ಇದು ಹಲವರಿಗೆ ಆಶ್ಚರ್ಯ ತರಿಸಿದರೆ, ಇನ್ನು ಕೆಲವರು ತಮ್ಮ ಬಜೆಟ್‌ಗೆ ಇದನ್ನು ಹೋಲಿಕೆ ಮಾಡಿಕೊಳ್ಳುತ್ತಿದ್ದಾರೆ.

Bengaluru Techie Spends 63 000 in a Month A Detailed Breakdown of Living Costs in the IT City

ಬೆಂಗಳೂರಿನಲ್ಲಿ ಜೀವನ ವೆಚ್ಚ: ಮನೆ ಬಾಡಿಗೆ ಮತ್ತು ಆಹಾರದ ಲೆಕ್ಕಾಚಾರ

ಶಿವಾಂಜಲಿ ತಮ್ಮ ಕಾಲೇಜು ಸ್ನೇಹಿತರೊಂದಿಗೆ 3-ಬಿಎಚ್‌ಕೆ (3 BHK) ಅಪಾರ್ಟ್‌ಮೆಂಟ್‌ನಲ್ಲಿ ವಾಸವಿದ್ದಾರೆ. ಇವರ ಪಾಲಿನ ಮನೆ ಬಾಡಿಗೆ ಹಾಗೂ ಮೈಂಟೆನೆನ್ಸ್ ತಿಂಗಳಿಗೆ 25,000 ರೂಪಾಯಿ ಆಗುತ್ತದೆ. ಇನ್ನು ಆಹಾರದ ವಿಷಯಕ್ಕೆ ಬಂದರೆ, ಅವರು ಸಾಮಾನ್ಯವಾಗಿ ಕಚೇರಿಯಲ್ಲೇ ಬೆಳಗಿನ ಉಪಾಹಾರ ಮತ್ತು ಮಧ್ಯಾಹ್ನದ ಊಟ ಮುಗಿಸುತ್ತಾರೆ. ಇದರಿಂದ ಹಗಲಿನಲ್ಲಿ ಊಟದ ಖರ್ಚು ಉಳಿಯುತ್ತದೆ.

ರಾತ್ರಿಯ ಊಟಕ್ಕಾಗಿ ಸ್ನೇಹಿತರೆಲ್ಲ ಸೇರಿ ಅಡುಗೆಯವರನ್ನ ನೇಮಿಸಿಕೊಂಡಿದ್ದು, ಅದಕ್ಕೆ ಇವರ ಪಾಲು 2,000 ರೂಪಾಯಿ ಆಗುತ್ತದೆ. ದಿನಸಿ ಸಾಮಗ್ರಿಗಳಿಗಾಗಿ 3,000 ರೂಪಾಯಿ ಖರ್ಚು ಮಾಡುತ್ತಾರೆ.

ಮನೆ ಸ್ವಚ್ಛಗೊಳಿಸುವ ಕೆಲಸದವರಿಗೆ ಇವರ ಕಡೆಯಿಂದ 1,000 ರೂಪಾಯಿ ನೀಡುತ್ತಾರೆ. ಇದೆಲ್ಲದರ ಜೊತೆಗೆ, ವೀಕೆಂಡ್‌ನಲ್ಲಿ ಹೊರಗಡೆ ಊಟ ಮಾಡುವುದು, ಸ್ವಿಗ್ಗಿ ಮತ್ತು ಝೊಮ್ಯಾಟೊ ಮೂಲಕ ಆಹಾರ ತರಿಸಿಕೊಳ್ಳುವುದು ಸೇರಿ ಒಟ್ಟು 12,000 ರೂಪಾಯಿಯನ್ನ ಕೇವಲ ಹೊರಗಿನ ಊಟಕ್ಕಾಗಿಯೇ ಖರ್ಜು ಮಾಡಿದ್ದಾರೆ. ಇದು ಬೆಂಗಳೂರಿನಲ್ಲಿ ಜೀವನ ವೆಚ್ಚ ಎಷ್ಟರ ಮಟ್ಟಿಗೆ ಏರಿಕೆಯಾಗಬಹುದು ಎಂಬುದನ್ನು ತೋರಿಸುತ್ತದೆ.

ಐಟಿ ಉದ್ಯೋಗಿ ಜೀವನಶೈಲಿ: ಪ್ರಯಾಣ, ಜಿಮ್ ಮತ್ತು ಇತರ ವೆಚ್ಚಗಳು

ಬೆಂಗಳೂರಿನ ಟ್ರಾಫಿಕ್‌ನಲ್ಲಿ ದೈನಂದಿನ ಪ್ರಯಾಣವೂ ದುಬಾರಿಯೇ. ಶಿವಾಂಜಲಿ ಹೆಚ್ಚಾಗಿ ಕಚೇರಿಗೆ ತೆರಳಲು ತಮ್ಮ ದ್ವಿಚಕ್ರ ವಾಹನವನ್ನು ಬಳಸಲಿದ್ದು, ಪೆಟ್ರೋಲ್‌ಗೆ ₹3,000 ಖರ್ಚಾಗಿದೆ. ಇದರ ಹೊರತಾಗಿ ಆಟೋ ಮತ್ತು ಕ್ಯಾಬ್‌ಗಳಿಗಾಗಿ ₹4,000 ವೆಚ್ಚ ಮಾಡಿದ್ದಾರೆ. ಆಧುನಿಕ ಐಟಿ ಉದ್ಯೋಗಿ ಜೀವನಶೈಲಿಗೆ ತಕ್ಕಂತೆ ಜಿಮ್ ಸದಸ್ಯತ್ವ, ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI) ಸಬ್‌ಸ್ಕ್ರಿಪ್ಷನ್‌ಗಳು, ಐಕ್ಲೌಡ್ (iCloud) ಮತ್ತು ಓಟಿಟಿ (OTT) ಪ್ಲಾಟ್‌ಫಾರ್ಮ್‌ಗಳಿಗಾಗಿ ತಿಂಗಳಿಗೆ ₹6,000 ವ್ಯಯಿಸಿದ್ದಾರೆ.

ಬಟ್ಟೆ ಖರೀದಿ, ವೈಯಕ್ತಿಕ ಆರೈಕೆ (Personal care) ಮತ್ತು ಇತರೆ ಸಣ್ಣಪುಟ್ಟ ಖರ್ಚುಗಳಿಗೆ ₹7,000 ಮೀಸಲಿಟ್ಟಿದ್ದಾರೆ. ಇದೆಲ್ಲವನ್ನೂ ಸೇರಿಸಿದರೆ ಸೆಪ್ಟೆಂಬರ್ ತಿಂಗಳ ಒಟ್ಟು ವೆಚ್ಚ ₹63,000 ಆಗಿದೆ. "ಅಂತಿಮ ಮೊತ್ತವನ್ನು ನೋಡಿದಾಗ ನನಗೇ ಸ್ವಲ್ಪ ಭಯವಾಯಿತು. ಆದರೆ ಈಗಲಾದರೂ ನನ್ನ ಹಣ ಎಲ್ಲಿಗೆ ಹೋಗುತ್ತಿದೆ ಎಂಬುದು ಸ್ಪಷ್ಟವಾಗಿ ತಿಳಿದಿದೆ" ಎಂದು ಅವರು ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ.

ನೆಟ್ಟಿಗರ ಪ್ರತಿಕ್ರಿಯೆ: ಮಾಸಿಕ ಬಜೆಟ್ ಬಗ್ಗೆ ಪರ-ವಿರೋಧ ಚರ್ಚೆ

ಈ ವಿಡಿಯೋ ವೈರಲ್ ಆಗುತ್ತಿದ್ದಂತೆ, ನೆಟ್ಟಿಗರು ತಮ್ಮದೇ ಆದ ಅಭಿಪ್ರಾಯಗಳನ್ನ ಹಂಚಿಕೊಳ್ಳುತ್ತಿದ್ದಾರೆ. ಹಲವರು ಇವರ ಮಾಸಿಕ ಬಜೆಟ್ ನೋಡಿ ದಂಗಾಗಿದ್ದಾರೆ. "ನಿಮ್ಮ ಖರ್ಚು ಇಷ್ಟೊಂದು ಇದ್ದರೆ, ನಿಮ್ಮ ತಿಂಗಳ ಆದಾಯ ಎಷ್ಟು? ಭವಿಷ್ಯಕ್ಕಾಗಿ ಹಣ ಉಳಿತಾಯ ಮಾಡುತ್ತಿದ್ದೀರಾ?" ಎಂದು ಹಲವರು ಪ್ರಶ್ನಿಸಿದ್ದಾರೆ.

"ಇಷ್ಟು ಖರ್ಚು ಮಾಡುವುದಕ್ಕಿಂತ, ಊರಿನಲ್ಲಿ ಕೃಷಿ ಮಾಡಿಕೊಂಡು ನೆಮ್ಮದಿಯಾಗಿ ಬದುಕುವುದು ಮೇಲು. ನನಗಂತೂ ಇಂತಹ ಇಲಿ ಓಟದ (rat race) ಜೀವನ ಇಷ್ಟವಿಲ್ಲ" ಎಂದು ಮತ್ತೊಬ್ಬರು ಕಮೆಂಟ್ ಮಾಡಿದ್ದಾರೆ.

ಇನ್ನೊಬ್ಬ ಬಳಕೆದಾರರು ತಮ್ಮ ಖರ್ಚನ್ನ ಹೋಲಿಕೆ ಮಾಡಿ, "ನಾನು ಕೂಡ ಬೆಂಗಳೂರಿನಲ್ಲೇ ವಾಸವಿದ್ದೇನೆ. ಆದರೆ ನನ್ನ ಮನೆ ಬಾಡಿಗೆ, ಊಟ ಸೇರಿ ಇಡೀ ತಿಂಗಳಿಗೆ ಕೇವಲ ₹5,000 ಮಾತ್ರ ಖರ್ಚಾಗುತ್ತದೆ" ಎಂದು ಅಚ್ಚರಿ ವ್ಯಕ್ತಪಡಿಸಿದ್ದಾರೆ.

ಒಟ್ಟಿನಲ್ಲಿ, ಬೆಂಗಳೂರಿನಲ್ಲಿ ವಾಸಿಸುವ ಪ್ರತಿಯೊಬ್ಬರ ಖರ್ಚು ಅವರವರ ವೈಯಕ್ತಿಕ ಆಯ್ಕೆಗಳು ಮತ್ತು ಜೀವನಶೈಲಿಯನ್ನು ಅವಲಂಬಿಸಿರುತ್ತದೆ ಎಂಬುದಕ್ಕೆ ಈ ಘಟನೆಯೇ ಒಂದೊಳ್ಳೆ ಉದಾಹರಣೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+