Bengaluru: ಮೊಮೊ ಸ್ಟಾಲ್ ಮುಂದೆಯೂ ಆಫೀಸ್ ಕೆಲಸ ಮಾಡುತ್ತಿರುವ ಟೆಕ್ಕಿ; ಫೊಟೊ ವೈರಲ್
ಸಿಲಿಕಾನ್ ಸಿಟಿ, ಭಾರತದ ಟೆಕ್ ರಾಜಧಾನಿ ಎನ್ನುವ ಹಲವು ಹೆಸರು ಪಡೆದಿರುವ ಬೆಂಗಳೂರು ಶರವೇಗದಲ್ಲಿ ಅಭಿವೃದ್ಧಿ ಹೊಂದುತ್ತಿದೆ. ಐಟಿ, ಬಿಟಿಯಲ್ಲಿ ಕೆಲಸ ಮಾಡುವವರಿಗೆ ಉತ್ತಮ ಸಂಬಳ ಸಿಗುತ್ತದೆ ಎನ್ನುವುದು ಸಾಮಾನ್ಯ ಜನರ ನಂಬಿಕೆ, ಒಂದು ಮಟ್ಟಿಗೆ ಅದು ನಿಜ ಕೂಡ. ಆದರೆ ಈ ಕೆಲಸದಲ್ಲಿ ಅದೆಷ್ಟು ಒತ್ತಡ ಇರುತ್ತದೆ ಎನ್ನುವುದು ಅಲ್ಲಿನ ಕೆಲಸಗಾರರಿಗೆ ಮಾತ್ರ ಗೊತ್ತಿರುತ್ತದೆ. ಅದಕ್ಕೆ ನಿದರ್ಶನ ಈಗ ವೈರಲ್ ಆಗುತ್ತಿರುವ ಒಂದೊ ಫೋಟೊ.
ಬೆಂಗಳೂರಿನ ಬೀದಿ ಬದಿಯ ಮೊಮೊ ಸ್ಟಾಲ್ ಮುಂದೆ ನಿಂತಿದ್ದಾಗಲೂ ಟೆಕ್ಕಿಯೊಬ್ಬ ಕೈಯಲ್ಲಿ ಲ್ಯಾಪ್‌ಟಾಪ್ ಹಿಡಿದು ಕೆಲಸ ಮಾಡುತ್ತಿರುವ ಫೋಟೊ ಈಗ ಸಾಕಷ್ಟು ಗಮನ ಸೆಳೆಯುತ್ತಿದೆ. ಬೆಂಗಳೂರಿನ ಟೆಕ್ ಕೆಲಸಗಾರರ ಒತ್ತಡ ಹೇಗಿರುತ್ತದೆ ಎನ್ನುವುದಕ್ಕೆ ಇದು ಒಂದು ನಿದರ್ಶನವಾಗಿದೆ. ಈ ಫೋಟೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಬಗೆ ಬಗೆಯ ಕಮೆಂಟ್‌ಗಳನ್ನು ಪಡೆದುಕೊಂಡಿದೆ.

ಬೆಂಗಳೂರಿನಲ್ಲಿ ಮಾತ್ರ ಇಂತಹ ಸಂಗತಿಗಳನ್ನು ನೋಡಲು ಸಾಧ್ಯ ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ. ನೆಮ್ಮದಿಯಾಗಿ ತಿನ್ನಲು ಕೂಡ ಆಗದೆ ಕೆಲಸ ಮಾಡಬೇಕು ಅದೇ ಟೆಕ್ಕಿ ಕೆಲಸ ಎಂದು ಹಲವರು ಹೇಳಿದ್ದಾರೆ. ಇನ್ನೂ ಕೆಲವರು ಆತ ನಿಜವಾಗಿ ಕೆಲಸ ಮಾಡುತ್ತಿದ್ದಾನಾ ಅಥವಾ ಫೋಟೊಗಾಗಿ ಈ ರೀತಿ ಮಾಡಿದ್ದಾನಾ ಎಂದು ಕೂಡ ಅನುಮಾನ ವ್ಯಕ್ತಪಡಿಸಿದ್ದಾರೆ.
ನೆಟ್ಟಿಗರ ಪ್ರತಿಕ್ರಿಯೆ ಹೇಗಿತ್ತು?
ಕೃತಿಕಾ ಕುಮಾರಿ ಎನ್ನುವವರು ಎಕ್ಸ್‌ನಲ್ಲಿ ಈ ಫೋಟೊ ಹಂಚಿಕೊಂಡಿದ್ದು ಸದ್ಯ ವೈರಲ್ ಆಗಿದೆ. ಈಗಾಗಲೇ 41 ಸಾವಿರ ಮಂದಿ ಈ ಪೋಸ್ಟ್ ವೀಕ್ಷಿಸಿದ್ದಾರೆ. ಹಲವು ಮಂದಿ ಇದಕ್ಕೆ ಬಗೆ ಬಗೆಯ ಕಾಮೆಂಟ್ ಮಾಡಿದ್ದಾರೆ. ಕೆಲವು ಸಾಮಾಜಿಕ ಮಾಧ್ಯಮ ಬಳಕೆದಾರರು ಈ ದೃಶ್ಯದ ಬಗ್ಗೆ ತಮಾಷೆ ಮಾಡಲು ಪ್ರಾರಂಭಿಸಿದ್ದಾರೆ, ಕೆಲವರು ಅವರು ತಮ್ಮ ಫೋನ್ ಅನ್ನು ಕಚೇರಿಯಲ್ಲಿ ಮರೆತಿರಬಹುದು ಮತ್ತು ಅವರ ಲ್ಯಾಪ್‌ಟಾಪ್ ಅನ್ನು ಬಳಸುವುದನ್ನು ಬಿಟ್ಟು ಬೇರೆ ದಾರಿಯಿಲ್ಲ ಎಂದಿದ್ದಾರೆ.
ಇದೇ ಮೊದಲಲ್ಲ!
ಇನ್ನು ಬೆಂಗಳೂರಿನಲ್ಲಿ ಈ ರೀತಿಯ ಘಟನೆಗಳು ಇದೇ ಮೊದಲೇನಲ್ಲ. ಈ ಮೊದಲು ಕೂಡ ಇಂತಹ ಹಲವು ನಿದರ್ಶನಗಳನ್ನು ನೋಡಿದ್ದೇವೆ. ಬೈಕ್‌ನಲ್ಲಿ ಚಲಿಸುವಾಗ ಹಿಂಬದಿಯಲ್ಲಿ ಕೂತಿದ್ದ ಮಹಿಳೆಯೊಬ್ಬರು ಲ್ಯಾಪ್‌ಟಾಪ್‌ನಲ್ಲಿ ಕೆಲಸ ಮಾಡುತ್ತಿದ್ದ ವಿಡಿಯೋ ಈ ಮೊದಲು ವೈರಲ್ ಆಗಿತ್ತು. ಸಿನಿಮಾ ಚಿತ್ರಮಂದಿರದಲ್ಲಿ ಕೂತು ಕೆಲಸ ಮಾಡುತ್ತಿದ್ದ ಟೆಕ್ಕಿ ಫೋಟೊ ಕೂಡ ವೈರಲ್ ಆಗಿತ್ತು.












Click it and Unblock the Notifications