ಬೆಂಗಳೂರು: ಬೇಸಿಗೆಯಲ್ಲಿ ನೀರಿನ ಹಾಹಾಕಾರ ತಪ್ಪಿಲು ಜಲಮಂಡಳಿಯಿಂದ 'ಮಿನಿ ವಾಟರ್ ಟ್ಯಾಂಕ್' ವ್ಯವಸ್ಥೆ, ಏಲ್ಲೆಲ್ಲಿ?
ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಪ್ರತಿ ವರ್ಷ ಬೇಸಿಗೆಯಲ್ಲಿ ಹಲವಾರು ಕಡೆಗಳಲ್ಲಿ ಕುಡಿಯುವ ನೀರು ಪೂರೈಕೆಯಲ್ಲಿ ತೊಂದರೆ ಆಗುತ್ತದೆ. ಹಾಹಾಕಾರ ಸೃಷ್ಟಿಯಾಗುತ್ತದೆ. ಹೀಗೆ ಬೇಸಿಗೆಯ ನೀರಿನ ಬವಣೆ ತಪ್ಪಿಸಲು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (BWSSB) ಒಂದೊಳ್ಳೆ ಪ್ಲಾನ್ ಮಾಡಿದ್ದು, ಜಾರಿಗೆ ತರುವ ಕುರಿತು ಅಗತ್ಯ ತಯಾರಿ ಮಾಡಿಕೊಂಡಿದೆ.
ನಗರದ ಜಲಮಂಡಳಿ ಕೇಂದ್ರ ಕಚೇರಿಯಲ್ಲಿ ಮುಂಬರುವ ಬೇಸಿಗೆಯ ಸಿದ್ದತೆಗಳ ಬಗ್ಗೆ ಹಿರಿಯ ಅಧಿಕಾರಿಗಳೊಂದಿಗೆ ಮಹತ್ವದ ಸಭೆ ನಡೆಸಿ ಸಿದ್ಧತೆಗಳ ಪರಿಶೀಲನೆ ನಡೆಸಿದ ಮಂಡಳಿ ಅಧ್ಯಕ್ಷರಾದ ಡಾ. ವಿ. ರಾಮ್ ಪ್ರಸಾತ್ ಮನೋಹರ್ ಅವರು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಬೇಸಿಗೆಯಲ್ಲಿ ಎದುರಾಗಬಹುದಾದ ನೀರಿನ ಬೇಡಿಕೆ ಹಾಗು ನೀರಿನ ಅಭಾವದ ಪ್ರದೇಶಗಳಲ್ಲಿ ಪರಿಸ್ಥಿತಿಯನ್ನು ಪರಿಣಾಮಕಾರಿಯಾಗಿ ನಿಭಾಯಿಸಬೇಕು ಎಂದರು.

'ಮಿನಿ ವಾಟರ್ ಟ್ಯಾಂಕ್' ವ್ಯವಸ್ಥೆ
ನಗರದಾದ್ಯಂತ ಈ ಬಾರಿ ಬೇಸಿಗೆಯನ್ನು ಸಮರ್ಥವಾಗಿ ಎದುರಿಸಲು ಬೆಂಗಳೂರು ಜಲಮಂಡಳಿ ಸಿದ್ದವಾಗಿದೆ. ಈಗಾಗಲೇ, ನೀರಿನ ಅಭಾವ ಎದುರಾಗಬಹುದಾದ ಹಾಗೂ ಜನಸಾಂದ್ರಿತ ಪ್ರದೇಶಗಳನ್ನು ಗುರುತಿಸಲಾಗಿದೆ. ಈ ಪ್ರದೇಶಗಳಲ್ಲಿನ ಜನರಿಗೆ ಉಚಿತವಾಗಿ ಕುಡಿಯುವ ನೀರು ಒದಗಿಸಲು 'ಮಿನಿ ವಾಟರ್ ಟ್ಯಾಂಕ್'ಗಳನ್ನು (ಸಿಂಟೆಕ್ಸ್ ಟ್ಯಾಂಕ್) ಅಳವಡಿಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.
ಈ ಮಿನಿ ಟ್ಯಾಂಕ್‌ಗಳಿಗೆ ನೀರು ತುಂಬಿಸಲು ಬೆಂಗಳೂರು ಜಲಮಂಡಳಿ ಹಾಗೂ ಸಂಚಾರಿ ಕಾವೇರಿ ಟ್ಯಾಂಕರ್ ಗಳಿಗೆ ಆದ್ಯತೆ ನೀಡಬೇಕು, ಅನಿವಾರ್ಯ ಸಂದರ್ಭದಲ್ಲಿ ಮಾತ್ರ ಖಾಸಗಿ ಟ್ಯಾಂಕರ್‌ಗಳನ್ನು ಬಾಡಿಗೆಗೆ ಪಡೆಯಬೇಕು ಎಂದು ಕಟ್ಟುನಿಟ್ಟಿನ ನಿರ್ದೇಶನ ನೀಡಿದರು.
ಅಧಿಕಾರಿಗಳು ನಿತ್ಯ ಆಯಾ ಪ್ರದೇಶಗಳಿಗೆ ಭೇಟಿ ನೀಡಿ
ಬೇಸಿಗೆ ನಿರ್ವಹಣೆಯಲ್ಲಿ ಯಾವುದೇ ನಿರ್ಲಕ್ಷ್ಯ ತೋರಬಾರದು ಎಂದು ಎಚ್ಚರಿಸಿದರು. ಎಲ್ಲಾ ಮುಖ್ಯ ಅಭಿಯಂತರರು, ಸಹಾಯಕ ಕಾರ್ಯಪಾಲಕ ಅಭಿಯಂತರರು ಮತ್ತು ನೀರು ಪರಿವೀಕ್ಷಕರು ಕಚೇರಿಯಲ್ಲಿ ಕುಳಿತುಕೊಳ್ಳದೆ ಕ್ಷೇತ್ರದಲ್ಲೇ ಹಾಜರಿರಬೇಕು. ಅಧಿಕಾರಿಗಳು ಪ್ರತಿದಿನ ತಮ್ಮ ವ್ಯಾಪ್ತಿಯ ಪ್ರದೇಶಗಳಿಗೆ ಭೇಟಿ ನೀಡಿ, ಪರಿಸ್ಥಿತಿಯನ್ನು ಅವಲೋಕಿಸಬೇಕು ಮತ್ತು ಗುರುತಿಸಲಾದ ಪ್ರದೇಶಗಳಿಗೆ ನೀರು ತಲುಪುವುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ನಿರ್ದೇಶಿಸಿದರು.
ಈ ಬಾರಿ ಅಗತ್ಯದಷ್ಟು ಮಳೆ ಆಗಿದ್ದು, ಕಾವೇರಿ ನದಿ ನೀರು ಕೆಆರ್‌ಎಸ್ ಜಲಾಶಯದಲ್ಲಿ ಹೇರಳ ಸಂಗ್ರಹವಿದೆ. ಅಲ್ಲಿಂದ ಬೆಂಗಳೂರಿಗೆ ನೀರು ಸರಬರಾಜು ಆಗುತ್ತದೆ. ಈ ಬಾರಿ ಬೇಸಿಗೆಯಲ್ಲಿ ನಿಭಾಯಿಸುವಷ್ಟು ನೀರಿದ್ದರೂ ಸಹಿತ ನಗರದ ಹಲವು ಕಡೆಗಳಲ್ಲಿ ನೀರಿನ ಸಮಸ್ಯೆ ಉಂಟಾಗಬಹುದೆಂದು ಜಲಮಂಡಳಿ ಒಂದಷ್ಟು ಪ್ರದೇಶಗಳನ್ನು ಗುರುತಿಸಿದೆ. ಅಲ್ಲಿ ಅಗತ್ಯ ವ್ಯವಸ್ಥೆ ಮಾಡಲಿದೆ.












Click it and Unblock the Notifications