ಬೆಂಗಳೂರು ಉಪನಗರ ರೈಲು ಯೋಜನೆ: 764 ಮರಗಳನ್ನು ಕಡಿಯಲು ಬಿಬಿಎಂಪಿ ಅನುಮತಿ
ಬೆಂಗಳೂರು, ಏಪ್ರಿಲ್. 04: ಸಿಲಿಕಾನ್ ಸಿಟಿಯಲ್ಲಿ ಯಾವುದೇ ಅಭಿವೃದ್ಧಿ ಕಾಮಗಾರಿ ನಡೆಬೇಕಿದ್ದರೂ ಮೊದಲು ಕೊಡಲಿ ಪೆಟ್ಟು ಬೀಳುವುದು ಇಲ್ಲಿನ ಮರಗಳಿಗೆ. ಹೌದು, ಪ್ರಮುಖ ಬೆಂಗಳೂರು ಉಪನಗರ ರೈಲು ಯೋಜನೆಯನ್ನು (ಬಿಎಸ್‌ಆರ್‌ಪಿ) ಕಾರ್ಯಗತಗೊಳಿಸುತ್ತಿರುವ ಕರ್ನಾಟಕ ರೈಲ್ ಇನ್ಫ್ರಾಸ್ಟ್ರಕ್ಚರ್ ಡೆವಲಪ್‌ಮೆಂಟ್ (ಕೆ-ರೈಡ್) ಲಿಮಿಟೆಡ್ ಇತ್ತೀಚೆಗೆ 1,500 ಮರಗಳನ್ನು ಕಡಿಯಲು ಬಿಬಿಎಂಪಿ ಅರಣ್ಯ ಅಧಿಕಾರಿಗಳಿಂದ ಅನುಮತಿ ಕೇಳಿದೆ.
ಕರ್ನಾಟಕ ರೈಲ್ ಇನ್ಫ್ರಾಸ್ಟ್ರಕ್ಚರ್ ಡೆವಲಪ್‌ಮೆಂಟ್ (K-RIDE) ಕರ್ನಾಟಕ ಸರ್ಕಾರ ಮತ್ತು ರೈಲ್ವೆ ಸಚಿವಾಲಯದ ಜಂಟಿ ಉದ್ಯಮವಾಗಿದೆ. ಈಗಾಗಲೇ ಕಾಮಗಾರಿ ಆರಂಭವಾಗಿರುವ ಬೈಯಪನಹಳ್ಳಿ - ಚಿಕ್ಕಬಾಣಾವರ ನಡುವಿನ ಮೊದಲ ಹಂತದ ಕಾರಿಡಾರ್ ಗಾಗಿ ಮರ ಕಡಿಯಲು ಅನುಮತಿ ಕೋರಲಾಗಿದೆ. ಆದರೆ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) 764 ಮರಗಳನ್ನು ಕಡಿಯಲು ಅನುಮತಿ ನೀಡಿದೆ.

"ಕೆ-ರೈಡ್ 1,500 ಮರಗಳನ್ನು ಕಡಿಯಲು ಅನುಮತಿ ಕೋರಿದ್ದರೆ, 764 ಮರಗಳನ್ನು ಕಡಿಯಲು ಅನುಮೋದನೆ ನೀಡಿದ್ದೇವೆ. ಆದರೆ, ಕಡಿತಕ್ಕೆ ಒಳಗಾಗುವ ಮರಗಳ ಸಂಖ್ಯೆ ಇನ್ನೂ ಕಡಿಮೆಯಾಗಲಿದೆ ಎಂದು ನಾನು ವಿಶ್ವಾಸವಿದೆ" ಎಂದು ಬಿಬಿಎಂಪಿ ಅರಣ್ಯ ಇಲಾಖೆಯ ಅಧಿಕಾರಿ ಹೇಳಿದ್ದಾರೆ. ನಾಗರಿಕ ಮಂಡಳಿಯ ಮೂಲಗಳ ಪ್ರಕಾರ, ಉಪನಗರ ರೈಲು ಯೋಜನೆಯ ಕಾರಿಡಾರ್ ಎರಡರಲ್ಲಿ ಮರಗಳನ್ನು ಕಡಿಯಲು ಸಾರ್ವಜನಿಕ ನೋಟಿಸ್ ನೀಡಿದ ನಂತರ ಯಾವುದೇ ಆಕ್ಷೇಪಣೆಗಳನ್ನು ಬಂದಿಲ್ಲ.
ಕೆ-ರೈಡ್ ಯೋಜನೆಗಾಗಿ ಮರಗಳನ್ನು ತೆರವುಗೊಳಿಸುವ ಮೊದಲು 56 ಮರಗಳನ್ನು ಸ್ಥಳಾಂತರಿಸಲು ಬಿಬಿಎಂಪಿ ಆದೇಶಿಸಿದೆ. ಇನ್ನು, ಕೆ-ರೈಡ್‌ಗೆ ಬೇಡಿಕೆಯಿರುವ ಉಳಿದ 736 ಮರಗಳನ್ನು ಕಡಿಯುವ ಪ್ರಸ್ತಾವನೆಯನ್ನು ತಜ್ಞರು ಮತ್ತು ಟ್ರೀ ಆಫೀಸರ್‌ಗಳನ್ನು ಒಳಗೊಂಡಿರುವ ಬಿಬಿಎಂಪಿ ವೃಕ್ಷ ಸಮಿತಿಯು ಇನ್ನೂ ಪರಿಶೀಲಿಸುತ್ತಿದೆ.

ಕೆ-ರೈಡ್‌ನ ಹಿರಿಯ ಅಧಿಕಾರಿಯೊಬ್ಬರು, "ಯೋಜನೆಗೆ ಬಳಸುತ್ತಿರುವ ಸುಮಾರು 80 ಪ್ರತಿಶತದಷ್ಟು ಭೂಮಿ ರೈಲ್ವೆ ಭೂಮಿಯಾಗಿದೆ. ಭಾರತೀಯ ರೈಲ್ವೆಯು ಮಾರ್ಗದ ಹಕ್ಕನ್ನು ಹೊಂದಿದೆ. ಸ್ವಾಧೀನಕ್ಕೆ ಒಳಗಾಗುತ್ತಿರುವುದು ಚಿಕ್ಕಬಾಣಾವರ ಮತ್ತು ಬೈಯಪನಹಳ್ಳಿ ಕಾರಿಡಾರ್‌ಗಳ ನಡುವಿನ ಸಣ್ಣ ಭಾಗವಾಗಿದೆ. ನಾವು ಸರಿಯಾದ ಪ್ರಕ್ರಿಯೆಯನ್ನು ಅನುಸರಿಸುತ್ತಿದ್ದೇವೆ ಮತ್ತು ಮರಗಳನ್ನು ಕಡಿಯಲು ಮತ್ತು ಸ್ಥಳಾಂತರಿಸಲು ನಾಗರಿಕ ಏಜೆನ್ಸಿಗಳ ಜೊತೆಯಲ್ಲಿ ಕೆಲಸ ಮಾಡುತ್ತಿದ್ದೇವೆ" ಎಂದಿದ್ದಾರೆ.
ರೈಲು ಟ್ರ್ಯಾಕ್‌ಗಳನ್ನು ಹಾಕಲು, ನಿಲ್ದಾಣಗಳನ್ನು ನಿರ್ಮಿಸಲು, ಪ್ರಯಾಣಿಕರ ಸೌಲಭ್ಯಗಳು ಮತ್ತು ಇತರ ಮೂಲಸೌಕರ್ಯಗಳನ್ನು ನಿರ್ಮಿಸಲು ಮರಗಳನ್ನು ಕಡಿಯುವುದು ಅಗತ್ಯ ಎಂದು ಕೆ-ರೈಡ್ ಅಧಿಕಾರಿಗಳು ಹೇಳಿದ್ದಾರೆ. ಕಾರಿಡಾರ್ ಎರಡರ (ಹೆಬ್ಬಾಳ ಮೂಲಕ ಬೈಯಪನಹಳ್ಳಿ - ಚಿಕ್ಕಬಾಣಾವರ) ಒಟ್ಟು ಉದ್ದ 25.01 ಕಿ.ಮೀ. ಆಗಿದೆ. ಮಾರ್ಗದ ಉದ್ದಕ್ಕೂ ಇರುವ ಒಟ್ಟು ನಿಲ್ದಾಣಗಳ ಸಂಖ್ಯೆ 14.

ಉಪನಗರ ರೈಲು ಯೋಜನೆಯ ಮೊದಲ ಹಂತದ ನಾಲ್ಕು ಕಾರಿಡಾರ್‌ಗಳಲ್ಲಿ ಕಾರಿಡಾರ್ ಎರಡರ ಕೆಲಸ ಮಾತ್ರ ಪ್ರಾರಂಭವಾಗಿದೆ ಎಂದು ತಜ್ಞರು ಗಮನಸೆಳೆದಿದ್ದಾರೆ. 40 ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸುವುದಾಗಿ ಪ್ರಧಾನಿ ನರೇಂದ್ರ ಮೋದಿ ಭರವಸೆ ನೀಡಿದ್ದರು. ಈಗಾಗಲೇ ಶೇ 25ರಷ್ಟು ಸಮಯ ಕಳೆದಿದೆ. ಬೈಯಪನಹಳ್ಳಿ-ಚಿಕ್ಕಬಾಣಾವರ ಮಧ್ಯೆ ಕಾಮಗಾರಿ ಆರಂಭವಾಗಿದ್ದರೂ ಅತ್ಯಂತ ನಿಧಾನ ಗತಿಯಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳಲಾಗುತ್ತಿದೆ.
ಇತ್ತ, ಹೀಲಲಿಗೆ ಮತ್ತು ರಾಜನಕುಂಟೆ ನಡುವಿನ ಕಾರಿಡಾರ್ ನಾಲ್ಕಕ್ಕೆ ಟೆಂಡರ್ ಪ್ರಕ್ರಿಯೆ ನಡೆಯುತ್ತಿದೆ. ಕೆಎಸ್‌ಆರ್ ಬೆಂಗಳೂರು ನಗರ - ದೇವನಹಳ್ಳಿ ನಡುವಿನ ಕಾರಿಡಾರ್ ಒಂದಕ್ಕೆ ಸಂಬಂಧಿಸಿದಂತೆ ಟೆಂಡರ್ ದಾಖಲೆಗಳನ್ನು ಸಿದ್ಧಪಡಿಸಲು ಕ್ಷೇತ್ರ ಪರಿಶೀಲನೆ ಕಾರ್ಯ ನಡೆಯುತ್ತಿದೆ. ಕೆಂಗೇರಿ-ವೈಟ್‌ಫೀಲ್ಡ್ ಮಾರ್ಗದಲ್ಲಿ (ಕಾರಿಡಾರ್ 3) ಯಾವುದೇ ಪ್ರಗತಿಯಾಗಿಲ್ಲ. ಬೆಂಗಳೂರಿನಲ್ಲಿ 15,767 ಕೋಟಿ ರೂಪಾಯಿ ವೆಚ್ಚದಲ್ಲಿ 148 ಕಿಮೀ ಉದ್ದದ ಉಪನಗರ ರೈಲ್ವೆ ಜಾಲವನ್ನು ಅಭಿವೃದ್ಧಿಪಡಿಸಲಾಗುತ್ತಿದೆ.












Click it and Unblock the Notifications