Bengaluru Sub Urban Rail: 'ಕನಕ' ಕಾರಿಡಾರ್‌ಗೆ 115 ಎಕರೆ ಭೂಮಿ ಹಸ್ತಾಂತರ, ಪೂರ್ಣ ಮಾಹಿತಿ
ಬೆಂಗಳೂರು, ಏಪ್ರಿಲ್ 15: ಬೆಂಗಳೂರಿನಲ್ಲಿ ಉಪನಗರ ರೈಲು ಯೋಜನೆಗೆ ವೇಗ ಸಿಗುವ ಎಲ್ಲ ಲಕ್ಷಣಗಳು ಕಾಣುತ್ತಿವೆ. ನಗರದ ಹೀಲಲಿಗೆಯಿಂದ ರಾಜಾನುಕುಂಟೆವರೆಗೆ ಸಂಪರ್ಕಿಸುವ ಮಾರ್ಗಕ್ಕೆ ಅಗತ್ಯ ಭೂಮಿ ನೀಡಲಾಗಿದೆ.
ಹೌದು, ಉಪನಗರ ರೈಲ್ವೆ ಯೋಜನೆಯ ಭಾಗವಾಗಿ ಬೆಂಗಳೂರಿನ ದಕ್ಷಿಣದಲ್ಲಿರುವ ಹೀಲಲಿಗೆ-ಉತ್ತರದ ರಾಜಾನುಕುಂಟೆಗೆ ಸಂಪರ್ಕ ಸಾಧಿಸುವ 'ಕನಕ' ಮಾರ್ಗ ನಿರ್ಮಿಸಲಿರುವ 'ಕೆ-ರೈಡ್' ಕಂಪನಿಗೆ ಬೆಂಗಳೂರು ನೈಋತ್ಯ ರೈಲ್ವೆ (SWR) ಅಂತಿಮ 115 ಎಕರೆ ಭೂಮಿಯನ್ನು ಹಸ್ತಾಂತರಿಸಿದೆ.

ಒಟ್ಟು 46.88 ಕಿಮೀ ಇರುವ ಕನಕ ಮಾರ್ಗವು ಯೋಜನ ನಾಲ್ಕು ಕಾರಿಡಾರ್‌ಗಳಲ್ಲಿ ಒಂದಾಗಿದೆ. ಇದಕ್ಕಾಗಿ ನೈಋತ್ಯ ರೈಲ್ವೆಯು (SWR) 115.472 ಎಕರೆ ಭೂಮಿಯನ್ನು ರೈಲ್ವೇ ಇನ್‌ಫ್ರಾಸ್ಟ್ರಕ್ಚರ್ ಡೆವಲಪ್‌ಮೆಂಟ್ ಕಂಪನಿ ಲಿಮಿಟೆಡ್‌ಗೆ (K-RIDE) ದೀರ್ಘಾವಧಿಯ ಗುತ್ತಿಗೆ ಅಡಿ ನೀಡಿದೆ.
ಭೂಮಿ ಹಸ್ತಾಂತರ ಪ್ರಕ್ರಿಯೆ ಪೂರ್ಣ
ಒಟ್ಟು ಈ 'ಕನಕ' ಕಾರಿಡಾರ್‌ಗಾಗಿ 157.07 ಎಕರೆ ಅಗತ್ಯತೆ ಬಗ್ಗೆ ಊಹಿಸಲಾಗಿತ್ತು. ಆದರೆ ಅದನ್ನು ಇಲಾಖೆ 85.707 ಎಕರೆಗೆ ಇಳಿಸಿತು. ಸದ್ಯ ಭೂಮಿ ಹಸ್ತಾಂತರ ಬಗ್ಗೆ ಒಪ್ಪಂದ ನಡೆದಿದೆ. ಔಪಚಾರಿಕ ಎಲ್ಲ ಪ್ರಕ್ರಿಯೆಗಳು ಪೂರ್ಣಗೊಂಡಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
L&T ಕಂಪನಿಗೆ ಗುತ್ತಿಗೆ
ಬೆಂಗಳೂರಲ್ಲಿ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರ ಸಹಾಯಹಸ್ತದಿಂದ K-RIDE ಸಂಸ್ಥೆಯು ಒಟ್ಟು 149 ಕಿಲೋ ಮೀಟರ್ ರೈಲ್ವೆ ಉಪನಗರ ಮಾರ್ಗ ನಿರ್ಮಿಸುತ್ತಿದೆ. ಕಾರಿಡಾರ್ 4 (ಕನಕ ಲೈನ್) ಗಾಗಿ ವೈಡಕ್ಟ್‌ಗಳನ್ನು ವಿನ್ಯಾಸಗೊಳಿಸಲು ಮತ್ತು ನಿರ್ಮಿಸಲು L&T ಲಿಮಿಟೆಡ್‌ಗೆ ಕಳೆದ ವರ್ಷ ಡಿಸೆಂಬರ್‌ನಲ್ಲಿ ಗುತ್ತಿಗೆ ನೀಡಲಾಗಿದೆ.

ಬೆಂಗಳೂರು ಉಪನಗರ ರೈಲು ಯೋಜನೆಗೆ ಇದ್ದ ಅಡೆತಡೆಗಳು ಒಂದೊಂದಾಗೆ ನಿವಾರಣೆ ಆಗುತ್ತಿವೆ. ನೈಋತ್ಯ ರೈಲ್ವೆಯು ಕಾರಿಡಾರ್ 4ರ ಪರಿಷ್ಕೃತ ಜೋಡಣೆ ಯೋಜನೆಗೆ ಒಪ್ಪಿಗೆ ನೀಡಿದೆ. ಸದ್ಯ ಕೆರೈಡ್ ಭೌತಿಕ ಅಡಚಣೆಗಳನ್ನು ತೆರವು ಮಾಡಿ, ಈ ಕಾರಿಡಾರ್‌ಗಾಗಿ ಖಾಸಗಿ ಭೂಮಿ ಸ್ವಾಧೀನಪಡಿಸಿಕೊಳ್ಳಲು ಆರಂಭಿಸಿದೆ.
ಕೆಎಸ್‌ಆರ್ ಬೆಂಗಳೂರು-ದೇವನಹಳ್ಳಿ ಜೋಡಣೆ
ಈ ನಾಲ್ಕನೇ ಕಾರಿಡಾರ್ ಒಟ್ಟು 19 ರೈಲ್ವೆ ನಿಲ್ದಾಣಗಳನ್ನು ಹೊಂದಿರಲಿದೆ. 2026ರ ಡಿಸೆಂಬರ್ ಒಳಗೆ ಈ ಯೋಜನೆ ಪೂರ್ಣಗೊಳ್ಳಲಿದೆ ಎಂದು ರೈಲ್ವೆ ಅಧಿಕಾರಿಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇದರ ನಡುವೆ ಕೆ-ರೈಡ್ KSR ಬೆಂಗಳೂರು ರೈಲು ನಿಲ್ದಾಣದಿಂದ ದೇವನಹಳ್ಳಿ/ವಿಮಾನ ನಿಲ್ದಾಣವರೆಗಿನ 41.4 ಕಿಮೀ ಪರಿಷ್ಕೃತ ಜೋಡಣೆ ಬಗ್ಗೆ ಪ್ರಸ್ತಾಪಿಸಿದೆ.
ಕಾರಿಡಾರ್ 1ರ ಜೋಡಣೆ ಬಗ್ಗೆ ವಿವರ ಕೇಳಲಾಗಿದೆ. ಇದೇ ವರ್ಷ ಫೆಬ್ರವರಿಯಲ್ಲಿ ಕೈಗಾರಿಕೆ ಸಚಿವ ಎಂಬಿ ಪಾಟೀಲ್ ಅವರು, ಕಾರಿಡಾರ್ 1 ಯೋಜನೆನ್ನು ಡಿಸೆಂಬರ್ 2027 ರ ಒಳಗೆ ಪೂರ್ಣಗೊಳಿಸುವಂತೆ ಗಡುವು ನೀಡಿದರು. ಜೊತೆಗೆ ಕಾಮಗಾರಿಗೆ ವೇಗ ನೀಡುವಂತೆ ಅಧಿಕಾರಿಗಳಿಗೆ ಅವರು ತಿಳಿಸಿದ್ದರು.












Click it and Unblock the Notifications