ಬೆಂಗಳೂರು ಯುವಕನಿಗೆ 60 ಲಕ್ಷ ರೂಪಾಯಿಯ ಉದ್ಯೋಗ ನೀಡಿದ ಗೂಗಲ್
ಬೆಂಗಳೂರು, ಜೂನ್ 27: ಬೆಂಗಳೂರು ಇಂಟರ್ ನ್ಯಾಶ್ನಲ್ ಇನ್ ಸ್ಟಿಟ್ಯೂಟ್ ಆಫ್ ಇನ್ ಫರ್ಮೇಶನ್ ಟೆಕ್ನಾಲಜಿಯ(ಐಐಐಟಿ-ಬಿ) 24 ವರ್ಷ ವಯಸ್ಸಿನ ವಿದ್ಯಾರ್ಥಿಯೊಬ್ಬರಿಗೆ ಗೂಗಲ್ ಕಂಪನಿ ವಾರ್ಷಿಕ 60 ಲಕ್ಷ ರೂ. ವೇತನದ ಉದ್ಯೋಗ ನೀಡಿದೆ.
ಚೆನ್ನೈ ಮೂಲದ ಮೂಲದ ಕೆಬಿ ಶ್ಯಾಮ್ ಬೆಂಗಳೂರಿನ ಈ ಇನ್ ಸ್ಟಿಟ್ಯೂಟ್ ನಲ್ಲಿ ಐದು ವರ್ಷಗಳಲ್ಲಿ ಎರಡು ಪದವಿಯನ್ನು ಪಡೆದಿದ್ದರು. ಐಎಂ ಟೆಕ್ ಪ್ರೊಗ್ರಾಮ್ ಮುಗಿಸಿರುವ ಇವರು ಗೂಗಲ್ ನಲ್ಲಿ ಕೆಲಸಕ್ಕೆ ಸೇರಲು ಈ ಅಕ್ಟೋಬರ್ ನಲ್ಲಿ ಪೊಲಾಂಡ್ ಗೆ ತೆರಳಲಿದ್ದಾರೆ.
ಜನವರಿಯಲ್ಲಿ ಕೆಲಸಕ್ಕೆ ಅರ್ಜಿ ಸಲ್ಲಿಸಿದ್ದ ಶ್ಯಾಮ್, ಆನ್ ಲೈನ್ ಸಂದರ್ಶನ ಮತ್ತಿತರ ಟಾಸ್ಕ್ ಗಳನ್ನು ಯಶಸ್ವಿಯಾಗಿ ಮುಗಿಸಿದ್ದಾರೆ.

"ನಾನು ಗೂಗಲ್ ಕ್ಲೌಡ್ ನಲ್ಲಿ ಕೆಲಸ ಮಾಡಲಿದ್ದೇನೆ" ಎಂದು ಶ್ಯಾಮ್ ತಿಳಿಸಿದ್ದಾರೆ. ಶ್ಯಾಮ್ ಅವರ ತಂದೆ ಕೆ ಎನ್ ಬಾಬು ಕೇಂದ್ರ ಸರ್ಕಾರದ ನೌಕರರಾಗಿದ್ದು, ತಾಯಿ ತಮಿಳುನಾಡು ಸರ್ಕಾರದಲ್ಲಿ ನೌಕರರಾಗಿದ್ದಾರೆ.
ದ್ವಿತೀಯ ಪಿಯುಸಿಯಲ್ಲಿ ಶೇ.95.2 ಅಂಕ ಪಡೆದಿದ್ದ ಶ್ಯಾಮ್ ಅವರು ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸುತ್ತಿದ್ದುದು ಈ ಸಂದರ್ಶನಕ್ಕೆ ಸಹಕಾರಿಯಾಯಿತು ಎಂದಿದ್ದಾರೆ.
ಕಂಪ್ಯೂಟರ್ ವಿಜ್ಞಾನದ ಮೂಲಭೂತ ಜ್ಞಾನ, ಸಮಸ್ಯೆಯನ್ನು ಬಗೆ ಹರಿಸುವ ಜಾಣತನವಿರುವ ವಿದ್ಯಾರ್ಥಿಗಳು ಗೂಗಲ್ ನಲ್ಲಿ ಕೆಲಸಕ್ಕೆ ಸೇರಲು ಸಾಕಷ್ಟು ಅವಕಾಶವಿದೆ ಎಂದು ಶ್ಯಾಮ್ ಹೇಳಿದರು. ಕೆಲಕಾಲ ಲಂಡನ್ನಿನಲ್ಲಿ ಫೇಸ್ ಬುಕ್ ಕಂಪನಿಯಲ್ಲಿಯೂ ಕೆಲಸ ಮಾಡಿದ ಅನುಭವವನ್ನು ಅವರು ಪಡೆದಿದ್ದಾರೆ.












Click it and Unblock the Notifications