ಒಂದೇ ತಿಂಗಳಿನಲ್ಲಿ ಬನಶಂಕರಿ ದೇವಾಲಯದ 13 ಹುಂಡಿ ಭರ್ತಿ!
ಬೆಂಗಳೂರು, ಮೇ 07: ಬೇಸಿಗೆ ರಜೆ ಸೇರಿದಂತೆ ವಿವಿಧ ಕಾರಣಕ್ಕೆ ದೇವಾಲಯಗಳಿಗೆ ಭಕ್ತರು ಭೇಟಿ ನೀಡುವ ಸಂಖ್ಯೆಯಲ್ಲಿ ಗಣನೀಯ ಏರಿಕೆ ಕಂಡುಬಂದಿದೆ. ಬೆಂಗಳೂರು ನಗರದ ದೇವಾಲಯವೊಂದರ 13 ಹುಂಡಿ ಒಂದು ತಿಂಗಳಿನಲ್ಲಿಯೇ ಭರ್ತಿಯಾಗಿದ್ದು, 44 ಲಕ್ಷ ರೂ. ಹಣ ಕಾಣಿಕೆ ಸಂಗ್ರಹವಾಗಿದೆ.
ಮುಜರಾಯಿ ಇಲಾಖೆ ವ್ಯಾಪ್ತಿಗೆ ಒಳಪಡುವು ಶ್ರೀ ಬನಶಂಕರಿ ದೇವಾಲಯವು ಬೆಂಗಳೂರು ನಗರದ ಮಧ್ಯ ಭಾಗದಲ್ಲಿದೆ. ಇಲಾಖೆಗೆ ಹೆಚ್ಚು ಆದಾಯ ತಂದು ಕೊಡುವ 'ಎ' ವರ್ಗದ ದೇವಾಲಯದಲ್ಲಿ ಬನಶಂಕರಿ ದೇವಾಲಯ ಸಹ ಒಂದು.

ಸೋಮವಾರ ಶ್ರೀ ಬನಶಂಕರಿ ದೇವಾಲಯದ ಹುಂಡಿಯ ಎಣಿಕೆ ಕಾರ್ಯವನ್ನು ನಡೆಸಲಾಗಿದೆ. ಹಣ ಹೊರತುಪಡಿಸಿ 96 ಗ್ರಾಂ ಚಿನ್ನ ಮತ್ತು 573 ಗ್ರಾಂ ಬೆಳ್ಳಿ ಹುಂಡಿಯಲ್ಲಿ ಸಿಕ್ಕಿದೆ. ಮಲೇಷ್ಯಾ, ಭೂತಾನ್, ಅಮೆರಿಕ ಸೇರಿ 5 ದೇಶದ ವಿದೇಶಿ ಕರೆನ್ಸಿಗಳು ಸಹ ಹುಂಡಿಯಲ್ಲಿ ಸಿಕ್ಕಿವೆ.
ಹುಂಡಿಯಲ್ಲಿನ ಕಾಣಿಕೆ ಸಂಗ್ರಹ ಮಾಹಿತಿ: ಸೋಮವಾರ ನಡೆದ ಶ್ರೀ ಬನಶಂಕರಿ ದೇವಾಲಯದ ಹುಂಡಿ ಎಣಿಕೆ ಕಾರ್ಯದಲ್ಲಿ 44.04 ಲಕ್ಷ ರೂ. ಸಂಗ್ರಹವಾಗಿದೆ. ದೇವಾಲಯದಲ್ಲಿ ಒಟ್ಟು 13 ಹುಂಡಿಗಳಿವೆ. ಈ ಬಾರಿ ಹೆಚ್ಚು ಭಕ್ತರು ದೇವಾಲಯಕ್ಕೆ ಭೇಟಿ ನೀಡಿದ್ದು, ಒಂದು ತಿಂಗಳು, 8 ದಿನದಲ್ಲಿಯೇ ಹುಂಡಿಗಳು ಭರ್ತಿಯಾಗಿವೆ.
ಹುಂಡಿಯಲ್ಲಿ 42,38,4, 465 ರೂ.ಗಳು ಹಣ ಪತ್ತೆಯಾಗಿದೆ. ನಾಣ್ಯಗಳು 1,66,375 ರೂ.ಗಳು ಎಂದು ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಲಕ್ಷ್ಮೀ ಹೇಳಿದ್ದಾರೆ. ಇದರ ಜೊತೆಗೆ 96 ಗ್ರಾಂ ಚಿನ್ನ, 573 ಗ್ರಾಂ ಬೆಳ್ಳಿ ಸಹ ಸಂಗ್ರಹವಾಗಿದೆ.
ಹುಂಡಿಗಳಲ್ಲಿ 500 ರೂ.ಗಳ 16,41,500 ನೋಟುಗಳು, 200 ರೂ.ಗಳ 1076 ನೋಟುಗಳು, 100 ರೂ.ಗಳ 29,700 ಹಾಗೂ 50 ರೂ.ಗಳ 7,775 ನೋಟುಗಳು. ಉಳಿದಂತೆ 10, 10, 5, 2 ಮತ್ತು 1 ರೂ.ಗಳ ನೋಟುಗಳು ಸಹ ಪತ್ತೆಯಾಗಿವೆ.
ಮುಜರಾಯಿ ಇಲಾಖೆ ಮಾಹಿತಿ ಪ್ರಕಾರ 2022ರಲ್ಲಿ ಶ್ರೀ ಬನಶಂಕರಿ ದೇವಾಲಯದ ಆದಾಯ 5.95 ಕೋಟಿ ರೂ.ಗಳು ಮತ್ತು 2023ರಲ್ಲಿ 10.58 ಕೋಟಿ ರೂ.ಗಳು. ಕರ್ನಾಟಕ ಸರ್ಕಾರ ಮಹಿಳೆಯರ ಉಚಿತ ಪ್ರಯಾಣ ಯೋಜನೆ 'ಶಕ್ತಿ' ಜಾರಿಗೊಳಿಸಿದ ಬಳಿಕ ದೇವಾಲಯಕ್ಕೆ ಭೇಟಿ ನೀಡುವ ಭಕ್ತರ ಸಂಖ್ಯೆಯೂ ಹೆಚ್ಚಾಗಿದೆ.
ಬೆಂಗಳೂರು ನಗರದ ಶ್ರೀ ಬನಶಂಕರಿ ದೇವಾಲಯ ಬಹಳ ಪ್ರಸಿದ್ಧಿ. ಈ ದೇವಾಲಯವನ್ನು 1984ರಲ್ಲಿ ಸರ್ಕಾರದ ವಶಕ್ಕೆ ಪಡೆಯಲಾಯಿತು. ದೇವಾಲಯದ ಅಭಿವೃದ್ಧಿ ಉದ್ದೇಶದಿಂದ 2010ರಲ್ಲಿ ಧಾರ್ಮಿಕ ದತ್ತಿ ಇಲಾಖೆ, ಕರ್ನಾಟಕ ಸರ್ಕಾರವು ಜೀರ್ಣೋದ್ದಾರಗೊಳಿಸಿದೆ.
ಶ್ರೀ ಬನಶಂಕರಿ ದೇವಾಲಯ ನಗರದ ಎಸ್. ಕರಿಯಪ್ಪ ರಸ್ತೆಯಲ್ಲಿದೆ. ದೇವಾಲಯವು 20ನೇ ಶತಮಾನಕ್ಕೆ ಸೇರಿದ್ದು ಎಂದು ಇತಿಹಾಸದ ದಾಖಲೆಗಳು ಹೇಳುತ್ತವೆ. ದೇವಾಲಯದ ಮೂಲ ಮೂರ್ತಿಯು ಶ್ರೀ ಬನಶಂಕರಿ ದೇವಿಯಾಗಿದ್ದು, ಅಪಾರ ಭಕ್ತರು ದೇವಿಯ ದರ್ಶನಕ್ಕಾಗಿ ಆಗಮಿಸುತ್ತಾರೆ. ಶ್ರೀವರಪ್ರಸಾದ ಆಂಜನೇಯಸ್ವಾಮಿ ದೇವಾಲಯವೂ ಸಹ ಇಲ್ಲಿದೆ.
ದೇವಾಲಯವು ಲಿಂಬೆ ಹಣ್ಣಿನ ದೀಪದಿಂದಲೂ ಪ್ರಸಿದ್ಧಿಯಾಗಿದೆ. ಭಾನುವಾರ, ಮಂಗಳವಾರ ಮತ್ತು ಶುಕ್ರವಾರ ದೇವಿಗೆ ನಿಂಬೆಹಣ್ಣಿನ ಸಿಪ್ಪೆಯಲ್ಲಿ ದೀಪ ಬೆಳಗುವುದರಿಂದ ಭಕ್ತಾದಿಗಳಿಗೆ ಕಂಕಣ ಭಾಗ್ಯ, ಸಂತಾನ ಭಾಗ್ಯ ಹಾಗೂ ಅವರವರ ಇಷ್ಟಾರ್ಥ ಸಿದ್ಧಿಯಾಗುತ್ತದೆ ಎಂಬ ನಂಬಿಕೆ ಇದೆ. ಯಾವುದೇ ರೀತಿಯ ಜಾತಕ ದೋಷಗಳು ಇದ್ದಲ್ಲಿ, ಅದು ದೇವಿಯ ಅನುಗ್ರಹದಿಂದ ನಿವಾರಣೆಯಾಗುತ್ತದೆ ಎಂಬ ನಂಬಿಕೆ ಇದೆ. ನವರಾತ್ರಿ ಸಮಯದಲ್ಲಿ ದೇವಿಗೆ ವಿಶೇಷ ಪೂಜೆ, ಅಲಂಕಾರಗಳನ್ನು ನಡೆಸಲಾಗುತ್ತದೆ.












Click it and Unblock the Notifications