ಬೆಂಗಳೂರು | ನಾಗರಿಕ ಸಮಸ್ಯೆಗಳ ಮುಕ್ತಿಗೆ ₹1,675 ಕೋಟಿ ಅನುದಾನಕ್ಕೆ ಶಿಫಾರಸು: ಹಣಕಾಸು ಆಯೋಗ
ಬೆಂಗಳೂರು: ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ವ್ಯಾಪ್ತಿಯಲ್ಲಿ ಸಾಕಷ್ಟು ನಾಗರಿಕ ಸಮಸ್ಯೆಗಳಿದ್ದು, ಪರಿಹರಿಸುವ ಕಾರ್ಯ ನಡೆಯುತ್ತಿವೆ. ಇದೀಗ ಬೆಂಗಳೂರು ದಕ್ಷಿಣ ನಗರ ಪಾಲಿಕೆಗೆ ಭೇಟಿ ನೀಡಿದ ಐದನೇ ರಾಜ್ಯ ಹಣಕಾಸು ಆಯೋಗದ ಅಧ್ಯಕ್ಷರಿಗೆ ನಗರ ರಸ್ತೆ ಗುಂಡಿ ಸಮಸ್ಯೆ, ಕೆರೆಗಳು, ಉದ್ಯಾನಗಳ ಅಭಿವೃದ್ಧಿ, ತ್ಯಾಜ್ಯ ನಿರ್ವಹಣೆ, ನಾಗರಿಕರಿಗೆ ಆರೋಗ್ಯ ಸೇವೆ ಒದಗಿಸುವುದು ಸೇರಿದಂತೆ ಪ್ರಮುಖ ಸಮಸ್ಯೆಗಳನ್ನು ತಿಳಿಸಿದರು. ಮಾತ್ರವಲ್ಲದೇ ಅಭಿವೃದ್ಧಿಗಾಗಿ 1,675 ಕೋಟಿ ರೂಪಾಯಿ ಅನುದಾನ ಕೋರಲಾಯಿತು.
ಐದನೇ ರಾಜ್ಯ ಹಣಕಾಸು ಆಯೋಗದ ಅಧ್ಯಕ್ಷರಾದ ಡಾ. ಸಿ. ನಾರಾಯಣಸ್ವಾಮಿ ಹಾಗೂ ಸದಸ್ಯರು ಗುರುವಾರ ಬೆಂಗಳೂರು ದಕ್ಷಿಣ ನಗರ ಪಾಲಿಕೆಗೆ ಭೇಟಿ ನೀಡಿದರು. ಪಾಲಿಕೆಯ ಆರ್ಥಿಕ ಅಗತ್ಯತೆಗಳು, ಅಭಿವೃದ್ಧಿ ಕಾಮಗಾರಿಗಳು ಹಾಗೂ ಆಡಳಿತಾತ್ಮಕ ಸುಧಾರಣೆಗಳ ಕುರಿತು ಪ್ರಗತಿ ಪರಿಶೀಲನೆ ನಡೆಸಿದರು. ವಿಶೇಷ ಅನುದಾನ ಇದೆ ಎಂದು ಸಕಾರಾತ್ಮಕ ಭರವಸೆ ನೀಡಿದ್ದಾರೆ. ಅಂದುಕೊಂಡಂತಾದರೆ ಪಾಲಿಕೆ ವ್ಯಾಪ್ತಿಯ ಸಮಸ್ಯೆಗಳಿಗೆ ಮುಕ್ತಿ ಸಿಗುವ ದಿನಗಳು ಸಮೀಪಿಸಲಿವೆ.

ಅನುದಾನಕ್ಕೆ ಶಿಫಾರಸು ಮಾಡುವೆ
ಪಾಲಿಕೆ ಅಧಿಕಾರಿಗಳ ಜೊತೆಗೆ ಸಭೆ ನಡೆಸಿ ಚರ್ಚಿಸಿದ ಬಳಿಕ ಮಾತನಾಡಿದ ಆಯೋಗದ ಅಧ್ಯಕ್ಷರಾದ ಡಾ. ಸಿ. ನಾರಾಯಣಸ್ವಾಮಿ ಅವರು, ನಗರ ಪ್ರದೇಶಗಳಲ್ಲಿ ಕುಡಿಯುವ ನೀರು, ಘನತ್ಯಾಜ್ಯ ನಿರ್ವಹಣೆ ಮತ್ತು ವಾರ್ಡ್ ಮಟ್ಟದ ಮೇಲ್ವಿಚಾರಣೆಗೆ ಸರ್ಕಾರ ಹೆಚ್ಚಿನ ಆದ್ಯತೆ ನೀಡಲಿದೆ. 2011ರ ಜನಗಣತಿಯ ಆಧಾರದ ಮೇಲೆ 10 ಲಕ್ಷಕ್ಕೂ ಹೆಚ್ಚು ಜನಸಂಖ್ಯೆ ಇರುವ ನಗರಗಳಿಗೆ ಕೇಂದ್ರ ಸರ್ಕಾರದ 'ಮಿಲಿಯನ್ ಪ್ಲಸ್' ಯೋಜನೆಯಡಿ ವಿಶೇಷ ಅನುದಾನ ಲಭ್ಯ ಇದೆ. ಪಾಲಿಕೆಯು ನಿಖರವಾದ ಅಂಕಿ ಅಂಶಗಳನ್ನು ನೀಡಿದಲ್ಲಿ ರಾಜ್ಯ ಸರ್ಕಾರಕ್ಕೆ ಮುಂದಿನ ಹಣಕಾಸು ವರ್ಷಕ್ಕೆ ಸೂಕ್ತ ಶಿಫಾರಸು ಮಾಡಲಾಗುವುದು ಎಂದು ತಿಳಿಸಿದರು.
ಆಯುಕ್ತರಿಂದ ಪಾಲಿಕೆಯ ಸ್ಥಿತಿಗತಿ ವಿವರಣೆ
ಪಾಲಿಕೆಯ ಆಯುಕ್ತರು ಆಡಳಿತ ಕುರಿತು ವಿವರವಾದ ಮಾಹಿತಿ ನೀಡಿದರು. ಪ್ರಸ್ತುತ 4.5 ಲಕ್ಷ ಕುಟುಂಬಗಳು ಜನಸಂಖ್ಯೆಗೆ ಅನುಗುಣವಾಗಿ ಸಿಬ್ಬಂದಿ ಕೊರತೆ ಅವಶ್ಯಕತೆ ಇರುವುದನ್ನು ಆಯೋಗದ ಗಮನಕ್ಕೆ ತಂದರು. ಸವಾಲುಗಳ ಕುರಿತು ಮಾತನಾಡಿದ ಅವರು, ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಸುಸಜ್ಜಿತ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳು, ತಾಯಿ-ಮಗು ಆಸ್ಪತ್ರೆಗಳು ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳ (PHC) ಮೂಲಸೌಕರ್ಯ ಬಲವರ್ಧನೆಗೆ ಒತ್ತು ನೀಡುತ್ತಿದ್ದೇವೆ.
ರಸ್ತೆ ಮತ್ತು ಮೂಲಸೌಕರ್ಯದ ವಿಚಾರದಲ್ಲಿ ಒಟ್ಟು 2,294 ಕಿ.ಮೀ ರಸ್ತೆಯಲ್ಲಿ, ಇನ್ನೂ 430 ಕಿ.ಮೀ ಕಚ್ಚಾ ರಸ್ತೆಗಳಿವೆ. ಅವುಗಳ ಡಾಂಬರೀಕರಣ ಹಾಗೂ ಪಂಚಾಯತ್ ವ್ಯಾಪ್ತಿಯಿಂದ ಸೇರ್ಪಡೆಯಾದ ಪ್ರದೇಶಗಳಲ್ಲಿ ಫುಟ್‌ಪಾತ್ ನಿರ್ಮಾಣಕ್ಕೆ ಅನುದಾನದ ಅವಶ್ಯಕತೆ ಇದೆ ಎಂದು ತಿಳಿಸಿದರು.
ಪರಿಸರ ಮತ್ತು ಉದ್ಯಾನವನಕ್ಕೆ ಸಂಬಂಧಿಸಿದಂತೆ 303 ಉದ್ಯಾನವನಗಳ ಅಭಿವೃದ್ಧಿ, 59 ಕೆರೆಗಳ ಸಂರಕ್ಷಣೆ (ಬೇಲಿ ಮತ್ತು ಭದ್ರತೆ) ಹಾಗೂ ಕೆರೆಗಳ ನಡುವಿನ ಸಂಪರ್ಕ ಕಾಲುವೆಗಳ (SWD) ನಿರ್ವಹಣೆಗೆ ಅನುದಾನ ಬೇಕಾಗಿದೆ. ಆಟೋ ಟಿಪ್ಪರ್, ಕಾಂಪಾಕ್ಟರ್‌ಗಳ ಖರೀದಿ, 'ಕಸ ಕಿಯೋಸ್ಕ್' ಮತ್ತು ಬಯೋ-ಮಿಥೇನ್ ಗ್ಯಾಸ್ ಪ್ಲಾಂಟ್‌ಗಳ ಸ್ಥಾಪನೆ ಮೂಲಕ ತ್ಯಾಜ್ಯ ನಿರ್ವಹಣೆ ಮಾಡಬೇಕಿದೆ.
ಈ ಮೇಲಿನ ಎಲ್ಲ ಸಮಸ್ಯೆಗಳು, ಪರಿಹಾರಕ್ಕೆ ವಿವಿಧ ತುರ್ತು ಅಭಿವೃದ್ಧಿ ಕಾಮಗಾರಿಗಳಿಗಾಗಿ ಒಟ್ಟು 1,675 ಕೋಟಿ ರೂಪಾಯಿ ಅನುದಾನ ನೀಡುವಂತೆ ಪಾಲಿಕೆ ಆಯುಕ್ತರು ಆಯೋಗದ ಅಧ್ಯಕ್ಷರಲ್ಲಿ ಮನವಿ ಮಾಡಿದರು. ಸಿಬ್ಬಂದಿ ವೇತನ, ಕೆರೆಗಳು ಮತ್ತು ತೋಟಗಾರಿಕೆ ಅಭಿವೃದ್ಧಿ, ಇಂದಿರಾ ಕ್ಯಾಂಟೀನ್, 100 ಹಾಸಿಗೆಗಳ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ, ವಿಪತ್ತು ನಿರ್ವಹಣೆ ಉಪಕರಣಗಳು, ಬೀದಿ ದೀಪಗಳ ನಿರ್ವಹಣೆ ಹಾಗೂ ಹೊಸ ವಾರ್ಡ್ ಕಚೇರಿಗಳ ನಿರ್ಮಾಣವು ಸೇರಿ ಎಂದರು.
ಆಯೋಗ ಕೊಟ್ಟ ಸಲಹೆಗಳು
ಹಣಕಾಸು ಆಯೋಗದ ಅಧ್ಯಕ್ಷರು ಪಾಲಿಕೆಯ ಸ್ವಂತ ಆದಾಯವನ್ನು ಹೆಚ್ಚಿಸಿಕೊಳ್ಳಲು ಜಾಹೀರಾತು ಮತ್ತು ಉದ್ದಿಮೆ ಪರವಾನಗಿ (Trade License) ಶುಲ್ಕಗಳ ಮೇಲೆ ಗಮನಹರಿಸಬೇಕು. ಅಲ್ಲದೆ, ವಿದ್ಯುತ್ ಉಳಿತಾಯಕ್ಕಾಗಿ ಸಿ.ಎಸ್.ಆರ್ (CSR) ನಿಧಿಯಡಿ ಸೋಲಾರ್ ರೂಫ್ ಟಾಪ್ ಅಳವಡಿಸಿಕೊಳ್ಳುವಂತೆ ಸಸಲು ಸಲಹೆ ನೀಡಿದರು.
ನಂತರ ಆಯೋಗದ ಸದಸ್ಯರು ಕೋರಮಂಗಲದ ವಾರ್ಡ್ ಕಚೇರಿ ಹಾಗೂ 'ಕಸ ರಸ' (Kasa Rasa) ಕೇಂದ್ರಕ್ಕೆ ಭೇಟಿ ನೀಡಿ, ಅಲ್ಲಿನ ತ್ಯಾಜ್ಯ ವಿಂಗಡಣೆ ಮತ್ತು ಸಂಸ್ಕರಣಾ ವಿಧಾನಗಳನ್ನು ಪ್ರತ್ಯಕ್ಷವಾಗಿ ವೀಕ್ಷಿಸಿದರು. ವಾರ್ಡ್ ಮಟ್ಟದಲ್ಲಿ ಸಣ್ಣಪುಟ್ಟ ಸಿವಿಲ್ ಕೆಲಸಗಳಿಗೆ 'ಗ್ಯಾಂಗ್‌ಮನ್' ಮತ್ತು 'ವರ್ಕ್ ಇನ್ಸ್‌ಪೆಕ್ಟರ್'ಗಳ ನೇಮಕಾತಿಯ ಅಗತ್ಯದ ಬಗ್ಗೆ ಇಂಜಿನಿಯರ್‌ಗಳೊಂದಿಗೆ ಚರ್ಚಿಸಿದರು.












Click it and Unblock the Notifications