Bengaluru Dogs: ಬೆಂಗಳೂರಿನಲ್ಲಿ ನಾಯಿ ಕಡಿತ ಪ್ರಕರಣಗಳು ಭಾರಿ ಏರಿಕೆ
ಬೆಂಗಳೂರು, ಅಕ್ಟೋಬರ್ 4: ಬಿಬಿಎಂಪಿ ವ್ಯಾಪ್ತಿಯಲ್ಲಿ ನಾಯಿ ಕಡಿತ ಪ್ರಕರಣಗಳ ಸಂಖ್ಯೆಯಲ್ಲಿ ಭಾರಿ ಹೆಚ್ಚಳವಾಗಿದ್ದು, ನಾಗರಿಕರಲ್ಲಿ ಆತಂಕ ಮೂಡಿಸಿದೆ. ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಈ ವರ್ಷ ನಾಯಿ ಕಡಿತ ಪ್ರಕರಣಗಳ ಸಂಖ್ಯೆ 5,526 ಹೆಚ್ಚಾಗಿದೆ.
ಬಿಬಿಎಂಪಿ ದಾಖಲೆಗಳ ಪ್ರಕಾರ 2022-2023ರಲ್ಲಿ ಅದರ ವ್ಯಾಪ್ತಿಯಲ್ಲಿ 23,236 ನಾಯಿ ಕಡಿತ ಪ್ರಕರಣಗಳು ವರದಿಯಾಗಿವೆ. 2021-2022 ರಲ್ಲಿ 17,610 ನಾಯಿ ಕಡಿತ ಪ್ರಕರಣಗಳು ವರದಿಯಾಗಿದ್ದವು.

ನಾಯಿ ಕಡಿತ ಪ್ರಕರಣಗಳ ಸಂಖ್ಯೆಯಲ್ಲಿ ಹೆಚ್ಚಳಕ್ಕೆ ಕಾರಣ ಪ್ರಚೋದನೆ ಮತ್ತು ಆಕ್ರಮಣಶೀಲತೆಯಾಗಿದೆ. ಏರಿಯಾ, ತಾಯ್ತನ, ಲೈಂಗಿಕ ಮತ್ತು ಆಹಾರಗಳು ಕೂಡ ನಾಯಿ ಕಡಿತ ಹೆಚ್ಚಳಕ್ಕೆ ಕಾರಣ ಎಂದು ಬಿಬಿಎಂಪಿಯ ಪಶುಪಾಲನಾ ವಿಭಾಗದ ಪಶುವೈದ್ಯರು ಹೇಳಿರುವುದಾಗಿ ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
ಪಶುವೈದ್ಯರು ಹೇಳಿದ್ದೇನು?
"ಜನರಿಗೆ ಈ ಅಂಶಗಳ ಬಗ್ಗೆ ಹೆಚ್ಚಿನ ಅರಿವು ಇರುವುದಿಲ್ಲ ಅದಕ್ಕಾಗಿ ನಾಯಿ ಕಡಿತಕ್ಕೆ ಒಳಗಾಗುತ್ತಾರೆ. ಉದಾಹರಣೆಗೆ, ಕಾಲೋನಿ ಅಥವಾ ವಸತಿ ಪ್ರದೇಶಕ್ಕೆ ಪ್ರವೇಶಿಸುವ ಅಪರಿಚಿತರನ್ನು ನೋಡಿ ಕೆಲವು ಬೀದಿ ನಾಯಿಗಳು ಬೊಗಳುತ್ತವೆ. ವ್ಯಕ್ತಿಯು ಅವುಗಳನ್ನು ಓಡಿಸಲು ಪ್ರಯತ್ನಿಸಿದರೆ, ಹೆದರಿಸಲು ನೋಡಿದಾಗ, ನಾಯಿಗಳು ಕೆಲವೊಮ್ಮೆ ದಾಳಿ ಮಾಡಿ ಕಚ್ಚಬಹುದು. ಅಂತೆಯೇ, ಹೆಣ್ಣುಗಳು ಮರಿ ಹಾಕಿದಾಗ ಆಕ್ರಮಣಕಾರಿ. ನಾಯಿಮರಿಗಳ ಬಳಿ ಹೋಗುವವರ ಮೇಲೆ ದಾಳಿ ಮಾಡಬಹುದು. ಈ ಎಲ್ಲ ಅಂಶಗಳ ಬಗ್ಗೆ ಬಿಬಿಎಂಪಿ ಮಕ್ಕಳು ಮತ್ತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುತ್ತಿದೆ" ಎಂದು ಪಶುಸಂಗೋಪನಾ ವಿಭಾಗದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.
ಜುಲೈನಲ್ಲಿ ನಡೆಸಲಾದ ಬೀದಿ ನಾಯಿ ಗಣತಿಯಲ್ಲಿ ಅನೇಕ ಮಧ್ಯಸ್ಥಗಾರರು ಭಾಗಿಯಾಗಿದ್ದಾರೆ ಎಂದು ಅವರು ಹೇಳಿದರು. ಸಾರ್ವಜನಿಕರಲ್ಲಿ ಜಾಗೃತಿ ಅಭಿಯಾನವನ್ನು ತೀವ್ರಗೊಳಿಸಲು ಪ್ರದೇಶವಾರು ಯೋಜನೆಯನ್ನು ಈಗ ಸಿದ್ಧಪಡಿಸಲಾಗುತ್ತಿದೆ ಎಂದು ಹೇಳಿದ್ದಾರೆ.
ನಾಗರಿಕರಿಗೆ ಶಿಕ್ಷಣ ನೀಡಲಾಗುವುದು
ಕಚ್ಚುವ ಬೀದಿ ನಾಯಿಗಳನ್ನು ಸ್ಥಳಾಂತರಿಸುವಂತೆ ಅನೇಕ ನಿವಾಸಿಗಳು ಬಿಬಿಎಂಪಿ ಅಧಿಕಾರಿಗಳನ್ನು ಕೇಳುತ್ತಾರೆ ಆದರೆ ಬೀದಿ ನಾಯಿಗಳನ್ನು ಸ್ಥಳಾಂತರಿಸಬಾರದು ಎಂಬ ಕಾನೂನಿನ ಬಗ್ಗೆ ಅವರಿಗೆ ತಿಳಿದಿಲ್ಲ. ಸಹಬಾಳ್ವೆಯನ್ನು ಖಚಿತಪಡಿಸಿಕೊಳ್ಳಲು, ನಾಯಿ ಕಡಿತದ ಹಿಂದಿನ ನಿಯಮಗಳು ಮತ್ತು ಕಾರಣಗಳ ಬಗ್ಗೆ ನಾಗರಿಕರಿಗೆ ಶಿಕ್ಷಣ ನೀಡಲಾಗುವುದು ಎಂದು ಅಧಿಕಾರಿ ಹೇಳಿದರು.
ತಮ್ಮ ಮಕ್ಕಳ ಮೇಲಿನ ಗಾಯದ ಗುರುತು ಮತ್ತು ಕಚ್ಚಿದ ಗುರುತುಗಳನ್ನು ಪರೀಕ್ಷಿಸುವ ಮಹತ್ವದ ಬಗ್ಗೆ ಪೋಷಕರಿಗೆ ತಿಳಿಸಲಾಗುತ್ತಿದೆ ಮತ್ತು ಅವುಗಳನ್ನು ನಿರ್ಲಕ್ಷಿಸದಂತೆ ಸಲಹೆ ನೀಡಲಾಗುತ್ತದೆ. ಅವರು ಅವುಗಳನ್ನು ಪರೀಕ್ಷಿಸಬೇಕು ಮತ್ತು ನಾಯಿ ಕಡಿತ ಎಂದು ದೃಢಪಟ್ಟರೆ, ರೇಬೀಸ್ ಸೋಂಕನ್ನು ತಡೆಗಟ್ಟಲು ಆಂಟಿ ರೇಬಿಸ್ ಲಸಿಕೆಯನ್ನು ತಕ್ಷಣವೇ ನೀಡಬೇಕು ಎಂದು ಅಧಿಕಾರಿಗಳು ಮನವಿ ಮಾಡಿದ್ದಾರೆ.












Click it and Unblock the Notifications