ಬೆಂಗಳೂರಿನಲ್ಲಿ ಅನವಶ್ಯಕ ವಸ್ತುಗಳ ವಿಲೇವಾರಿಗೆ ಹೊಸ ವ್ಯವಸ್ಥೆ ಶೀಘ್ರ ಜಾರಿ, ಏನದು ?
ಬೆಂಗಳೂರಿನಲ್ಲಿ ತಮಗೆ ಬೇಡವಾದ ವಸ್ತುಗಳನ್ನು ವಿಲೇವಾರಿ ಮಾಡುವುದಕ್ಕೆ ಜನ ಪರದಾಡುವ ಪರಿಸ್ಥಿತಿ ಇದೆ. ಅಲ್ಲದೇ ಬೇಡದೆ ಇರುವ ವಸ್ತುಗಳನ್ನು ಹೇಗೆ ವಿಲೇವಾರಿ ಮಾಡುವುದು ಎನ್ನುವುದೇ ಬಹುದೊಡ್ಡ ಟಾಸ್ಕ್ ಇದೀಗ ಈ ವಿಷಯಕ್ಕೆ ಸಂಬಂಧಿಸಿದಂತೆ ಕೊನೆಗೂ ಪರಿಹಾರ ಸಿಕ್ಕಂತಾಗಿದೆ. ಅನುಪಯುಕ್ತ ಗೃಹಪಯೋಗಿ ಸಾಮಗ್ರಿಗಳ ವಿಲೇವಾರಿಗಾಗಿ ಹೊಸ ತಂತ್ರಾಂಶ ಬಿಡುಗಡೆ ಮಾಡುವುದಾಗಿ ಬೆಂಗಳೂರು ಸ್ಥಳೀಯ ಆಡಳಿತ ಹೇಳಿದೆ.
ಗ್ರೇಟರ್ ಬೆಂಗಳೂರು ವ್ಯಾಪ್ತಿಯಲ್ಲಿ ಅನುಪಯುಕ್ತ ಗೃಹಪಯೋಗಿ ಸಾಮಗ್ರಿಗಳ ವಿಲೇವಾರಿಗಾಗಿ ಹೊಸ ತಂತ್ರಾಂಶವನ್ನು ಅಭಿವೃದ್ಧಿಪಡಿಸಲಾಗುತ್ತಿದ್ದು, ಇದೇ ತಿಂಗಳ 20ರಂದು ತಂತ್ರಾಂಶವನ್ನು ಬಿಡುಗಡೆ ಮಾಡುವುದಾಗಿ ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ನಿಯಮಿತದ ಮುಖ್ಯ ಕಾರ್ಯಾಚರಣಾಧಿಕಾರಿಯಾದ ಕರೀಗೌಡ ಅವರು ತಿಳಿಸಿದ್ದಾರೆ.

ಬೆಂಗಳೂರು ನಗರದಲ್ಲಿ ವಿವಿಧ ಬಗೆಯ ಘನತ್ಯಾಜ್ಯ ಮರುಬಳಕೆದಾರರ ಜೊತೆ ಮಲ್ಲೇಶ್ವರಂನ ಐಪಿಪಿ ಕೇಂದ್ರದ ಸಭಾಂಗಣದಲ್ಲಿ ನಡೆದ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ನಗರದಲ್ಲಿ ತ್ಯಾಜ್ಯ ವಿಲೇವಾರಿಯಲ್ಲಿ ಸಾಕಷ್ಟು ಮಾರ್ಪಾಡುಗಳನ್ನು ಮಾಡಲಾಗುತ್ತಿದೆ. ನಾಗರಿಕರ ಬೇಡಿಕೆಯ ಆಧಾರದ ಮೇಲೆ, ಅನುಪಯುಕ್ತ, ಗೃಹಪಯೋಗಿ ಸಾಮಗ್ರಿಗಳ ಸೂಕ್ತ ವಿಲೇವಾರಿಗಾಗಿ ತಂತ್ರಾಂಶವನ್ನು ಬಿಡುಗಡೆ ಮಾಡುತ್ತಿರುವುದಾಗಿ ತಿಳಿಸಿದ್ದಾರೆ.
ರಾಯಭಾರಿಗಳ ಆಯ್ಕೆ ಹಾಗೂ ಸನ್ಮಾನ:
ಸಭೆಯಲ್ಲಿ ಘನತ್ಯಾಜ್ಯ ನಿರ್ವಹಣಾ (SWM) ರಾಯಭಾರಿಗಳಾಗಿ ಆಯ್ಕೆಯಾದ ಸದಸ್ಯರನ್ನು ಸನ್ಮಾನಿಸಿ ಗೌರವಿಸಲಾಯಿತು.
ಸನ್ಮಾನಿತ ರಾಯಭಾರಿಗಳ ವಿವರ
1. ಶೋಭಾ ಭಟ್ - ಆರ್. ಆರ್. ನಗರ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘ (RWA)
2. ಡಾ: ಶಾಂತಿ ತುಮ್ಮಲ - ಎಚ್.ಎಸ್.ಆರ್. ಸಿಟಿಜನ್ಸ್ ಫೋರಮ್
3. ಅನಿರುದ್ಧ ದತ್ತ - ಲೆಟ್ಸ್ ಬಿ ದ ಚೇಂಜ್
4. ನಳಿನಿ ಶೇಖರ್ - ಹಸಿರು ದಳ ಎನ್. ಜಿ.ಓ
5. ಅಮಿತ್ ಅಮರನಾಥ - ಯುವ ಫಾರ್ ಪರಿವರ್ತನ
6. ಸುನಿತ್ - ಸಾಹಸ್ ಎನ್. ಜಿ.ಓ
7. ಪದ್ಮಶ್ರೀ ಬಾಲರಾಮ್ - ಕೊರಮಂಗಲ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘ (RWA)
ಬೃಹತ್ ಪ್ರಮಾಣದ ತ್ಯಾಜ್ಯ ಮರುಬಳಕೆದಾರರು ನೀಡಿರುವ ಸಲಹೆಗಳು:
1. ಸಂಗ್ರಹಿಸಲಾದ ಸೋಫಾ, ಬೆಡ್, ಕಾಮೋಡ್ ಮುಂತಾದ ವಸ್ತುಗಳನ್ನು ಕೇಂದ್ರಿತವಾಗಿ ಶೇಖರಿಸಿ, ನಂತರ ಮರುಬಳಕೆದಾರರಿಗೆ ತಲುಪಿಸುವ ವ್ಯವಸ್ಥೆಯನ್ನು ರೂಪಿಸುವುದು ಉತ್ತಮ.
2. ಸಣ್ಣ ಪ್ರಮಾಣದ ತ್ಯಾಜ್ಯವನ್ನು ಸಾಗಣೆ ಮಾಡುವುದು ಕಷ್ಟಕರ ಜೊತೆಗೆ ಸಾಗಣೆ ವೆಚ್ಚ ಅಧಿಕವಾಗಿದ್ದು, ಈ ಬಗ್ಗೆ ಕ್ರಮ ಕೈಗೊಳ್ಳಲು ಮನವಿ.
3. ಸಹಾಯಕ ಪ್ರಧಾನ ವ್ಯವಸ್ಥಾಪಕರು ಬೃಹತ್ ತ್ಯಾಜ್ಯ ಸಂಗ್ರಹಣೆಗಾಗಿ ಶೇಖರಣಾ ಘಟಕಗಳ ಸ್ಥಳ ಗುರುತಿಸುವುದು ಮತ್ತು ಸಾಗಣೆಯನ್ನು ವ್ಯವಸ್ಥಿತವಾಗಿ ಅನುಷ್ಠಾನಗೊಳಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಮನವಿ ಮಾಡಲಾಗಿದೆ.
ಈ ವೇಳೆ ಪಶ್ಚಿಮ ನಗರ ಪಾಲಿಕೆಯ ಆಯುಕ್ತರಾದ ಡಾ: ರಾಜೇಂದ್ರ ಕೆ.ವಿ, ಬೆಂ.ಘ.ನಿ.ನಿ ದ ಮುಖ್ಯ ಕಾರ್ಯಚರಣಾಧಿಕಾರಿ ರಮಾಮಣಿ, ಡಿಜಿಎಂ, ಎಜಿಎಂಗಳು, 50ಕ್ಕೂ ಹೆಚ್ಚು ಘನತ್ಯಾಜ್ಯಗಳ ಸಂಸ್ಥಾಪಕರು ಸೇರಿದಂತೆ ಹಲವರು ಹಾಜರಿದ್ದರು.












Click it and Unblock the Notifications