ಇತಿಹಾಸ ಸೇರಲಿದೆ ಲಾಕಪ್ ಡೆತ್, ಸಿಎಂ ರಾಜೀನಾಮೆಗೆ ಸಾಕ್ಷಿಯಾಗಿದ್ದ ಪೊಲೀಸ್ ಠಾಣೆ
ಬೆಂಗಳೂರು, ಫೆಬ್ರವರಿ 20: ಕರ್ನಾಟಕದ ಮೊದಲ ಲಾಕಪ್ ಡೆತ್, ಪ್ರತಿಪಕ್ಷಗಳ ಆಕ್ರೋಶ, ಮುಖ್ಯಮಂತ್ರಿಗಳ ರಾಜೀನಾಮೆಗೆ ಸಾಕ್ಷಿಯಾಗಿದ್ದ ಬೆಂಗಳೂರು ನಗರದ ಕಟ್ಟಡವೊಂದು ಇತಿಹಾಸ ಸೇರಲಿದೆ. ಈ ಕಟ್ಟದಲ್ಲಿದ್ದ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣವೊಂದು ಆಗ ಮುಖ್ಯಮಂತ್ರಿಯಾಗಿದ್ದ ಎಸ್. ನಿಜಲಿಂಗಪ್ಪ ರಾಜೀನಾಮೆಗೆ ಕಾರಣವಾಗಿತ್ತು. ಈ ಕಟ್ಟಡ ಇರುವುದು ಬೆಂಗಳೂರು ನಗರದ ಶೇಷಾದ್ರಿಪುರಂನಲ್ಲಿ.
ಶೇಷಾದ್ರಿಪುರಂ ಪೊಲೀಸ್ ಠಾಣೆಯ ಕಟ್ಟಡವನ್ನು ಕೆಡವಿ ಹೊಸ ಕಟ್ಟವನ್ನು ನಿರ್ಮಾಣ ಮಾಡಲಾಗುತ್ತದೆ. ಈಗಾಗಲೇ ಪೊಲೀಸ್ ಠಾಣೆಯನ್ನು ಬೇರೆ ಕಟ್ಟಡಕ್ಕೆ ಸ್ಥಳಾಂತರ ಮಾಡಲಾಗಿದೆ. ಹೊಸ ಕಟ್ಟಡ ನಿರ್ಮಾಣ ಕಾರ್ಯ ಶೀಘ್ರದಲ್ಲೇ ಆರಂಭವಾಗಲಿದೆ.

1893ರಲ್ಲಿ ಮೈಸೂರು ದಿವಾನರಾಗಿದ್ದ ಶೇಷಾದ್ರಿ ಅಯ್ಯರ್ ಅವರ ಹೆಸರಿನಲ್ಲಿ ನಿರ್ಮಾಣವಾದ ಬಡಾವಣೆ ಶೇಷಾದ್ರಿಪುರಂ. ಈ ಬಡಾವಣೆಯಲ್ಲಿ ಸರ್ಕಾರಿ ಕಛೇರಿಯಾಗಿದ್ದ ಕಟ್ಟಡ ಬಳಿಕ ಪೊಲೀಸ್ ಠಾಣೆಯಾಗಿತ್ತು. ದಶಕಗಳ ಇತಿಹಾಸ ಹೊಂದಿರುವ ಈ ಕಟ್ಟಡವನ್ನು ಈಗ ನೆಲಸಮಗೊಳಿಸಲಾಗುತ್ತಿದೆ.
ಸಿಎಂ ರಾಜೀನಾಮೆ: 1958, ಏಪ್ರಿಲ್ 9ರಂದು ಕಳ್ಳತನ ಪ್ರಕರಣದಲ್ಲಿ ಪೊಲೀಸರು ಮುನಿಯಮ್ಮ ಎಂಬ ಮಹಿಳೆಯನ್ನು ಬಂಧಿಸಿದ್ದರು. ಮಹಿಳೆ ಶೇಷಾದ್ರಿಪುರಂ ಪೊಲೀಸ್ ಠಾಣೆಯಲ್ಲಿ ಪೊಲೀಸರ ವಶದಲ್ಲಿರುವಾಗಲೇ ಮೃತಪಟ್ಟಿದ್ದರು. ಕರ್ನಾಟಕದಲ್ಲಿ ದಾಖಲಾದ ಮೊದಲ ಲಾಕ್ ಅಪ್ ಡೆತ್ ಪ್ರಕರಣ ಇದು ಎಂದು ಈಗಲೂ ಹಲವು ಅಧಿಕಾರಿಗಳು ನೆನಪು ಮಾಡಿಕೊಳ್ಳುತ್ತಾರೆ.
ಆಗ ರಾಜ್ಯದ ಮುಖ್ಯಮಂತ್ರಿಯಾಗಿದ್ದವರು ಎಸ್. ನಿಜಲಿಂಗಪ್ಪ. ಈ ಪ್ರಕರಣದ ಸಮಯದಲ್ಲಿ ವಿಧಾನಸಭೆ ಅಧಿವೇಶನ ನಡೆಯುತ್ತಿತ್ತು. ಮಹಿಳೆಯ ಲಾಕ್ ಅಪ್ ಡೆತ್ ಪ್ರಕರಣ ಭಾರೀ ಚರ್ಚೆಗೆ ಕಾರಣವಾಯಿತು. ಪ್ರಜಾ ಸೋಷಿಯಲಿಸ್ಟ್ ಪಕ್ಷದ ವಿರೋಧ ಪಕ್ಷದ ನಾಯಕ ಶಾಂತವೇರಿ ಗೋಪಾಲ ಗೌಡರು ಸರ್ಕಾರದ ವಿರುದ್ಧ ಆಕ್ರೋಶಗೊಂಡರು.
ಪ್ರತಿಪಕ್ಷಗಳ ಆಕ್ರೋಶದ ನಡುವೆ ಗೃಹ ಸಚಿವರಾಗಿದ್ದ ಪೂಣಚ್ಚ ತಣ್ಣಗಾದರು. ಮುಖ್ಯಮಂತ್ರಿಯಾಗಿದ್ದ ಎಸ್. ನಿಜಲಿಂಗಪ್ಪ ಪೊಲೀಸರಿಗೆ ಮುನಿಯಮ್ಮರನ್ನು ಸಾಯಿಸುವ ಉದ್ದೇಶವಿರಲಿಲ್ಲ ಎಂದು ಹೇಳಿಕೆ ನೀಡಿಬಿಟ್ಟರು. ಇದು ಸರ್ಕಾರ ಪೊಲೀಸರು ಹಲ್ಲೆ ಮಾಡಿದ್ದಾರೆ ಎಂದು ಒಪ್ಪಿಕೊಂಡ ಹಾಗೆ ಎಂದು ದೊಡ್ಡ ಗದ್ದಲಕ್ಕೆ ಕಾರಣವಾಯಿತು.
ಈ ಘಟನೆ ರಾಜ್ಯ ರಾಜಕೀಯದಲ್ಲಿ ಭಾರೀ ಸಂಚಲನಕ್ಕೆ ಕಾರಣವಾಯಿತು. ಇದು ನಡೆದದ್ದು 1958ರ ಏಪ್ರಿಲ್‌ನಲ್ಲಿ. ಮೇ 16, 1958ರಲ್ಲಿ ಹೈಕಮಾಂಡ್ ನಾಯಕರು ಬಂದರು. ಶಾಸಕರ ಅಭಿಪ್ರಾಯ ಸಂಗ್ರಹಣೆ ಮಾಡಿ ಮುಖ್ಯಮಂತ್ರಿಗಳ ರಾಜೀನಾಮೆಗೆ ಸೂಚನೆ ನೀಡಿದರು. ಎಸ್. ನಿಜಲಿಂಗಪ್ಪ ರಾಜೀನಾಮೆ ನೀಡಿ, ಬಿ. ಡಿ. ಜತ್ತಿ ಮುಖ್ಯಮಂತ್ರಿಯಾದರು.
ಶೇಷಾದ್ರಿಪುರಂ ಪೊಲೀಸ್ ಠಾಣೆ ಕಟ್ಟಡಕ್ಕೆ ಇನ್ನೊಂದು ಇತಿಹಾಸವಿದೆ. ಬೆಂಗಳೂರು ನಗರದ ಈ ಸ್ಟೇಷನ್‌ನಲ್ಲಿ ಮಾತ್ರ ಗಂಟೆಗೊಮ್ಮೆ ಬೆಲ್ ಬಾರಿಸಲಾಗುತ್ತಿತ್ತು. ವಾಚ್ ಇಲ್ಲದ ಸಮಯದಲ್ಲಿ ಗಸ್ತು ತಿರುಗುವ ಪೊಲೀಸರಿಗೆ ಸಹಾಯವಾಗಲು ಸಂಜೆ 6 ರಿಂದ ಬೆಳಗ್ಗೆ 6 ಗಂಟೆಯ ತನಕ ಸ್ಟೇಷನ್‌ನಲ್ಲಿ ಬೆಲ್ ಬಾರಿಸಲಾಗುತ್ತಿತ್ತು.
ಬೆಂಗಳೂರು ನಗರದ ಹಲವು ಹಳೆಯ ಪೊಲೀಸ್ ಠಾಣೆ ಕಟ್ಟಡಗಳನ್ನು ಕೆಡವಿ ಹೊಸ ಕಟ್ಟಡವನ್ನು ನಿರ್ಮಾಣ ಮಾಡಲಾಗುತ್ತಿದೆ. ಈಗ ಇತಿಹಾಸ ಹೊಂದಿರುವ ಶೇಷಾದ್ರಿಪುರಂ ಕಟ್ಟಡವನ್ನು ಕೆಡವಲಾಗುತ್ತಿದೆ.












Click it and Unblock the Notifications