ನೀವು ಇಸ್ಲಾಂ ವಿರೋಧಿಗಳು ಎಂದು ಬಾಂಬ್ ಬೆದರಿಕೆ: ಪ್ರಮೋದ್ ಮುತಾಲಿಕ್ ಹೇಳಿದ್ದಿಷ್ಟು
ಧಾರವಾಡ, ಡಿಸೆಂಬರ್ 01: ಇಸ್ಲಾಂ ಧರ್ಮಕ್ಕೆ ಮತಾಂತರವಾಗಿ ಎನ್ನುವುದರ ಜೊತೆಗೆ ಬಾಂಬ್ ಬೆದರಿಕೆ ಹಾಕಿ ಬೆಂಗಳೂರಿನ ವಿವಿಧ ಶಾಲೆಗಳಿಗೆ ಈ-ಮೇಲ್ ಬಂದ ವಿಚಾರವಾಗಿ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ ಮುತಾಲಿಕ್ ಪ್ರತಿಕ್ರಿಯೆ ನೀಡಿದ್ದಾರೆ.
ಧಾರವಾಡದಲ್ಲಿ ಮಾತನಾಡಿರುವ ಅವರು, ಬೆಂಗಳೂರಿನ 17 ಶಾಲೆಗಳಿಗೆ ಈ ರೀತಿ ಈ-ಮೇಲ್ ಹಾಕಲಾಗಿದೆ. ಇಸ್ಲಾಂಗೆ ಮತಾಂತರವಾಗಿ ಇಲ್ಲವೇ ಸಾಯಲು ಮುಂದಾಗಿ ಎಂಬ ಸಂದೇಶ ಕಳುಹಿಸಲಾಗಿದೆ. ಇಡೀ ಹಿಂದೂಗಳಿಗೆ ಇವರು ಈ ರೀತಿಯ ಆಹ್ವಾನ ನೀಡಿದ್ದಾರೆ. ಈ ದೇಶವನ್ನು ಇಸ್ಲಾಂ ಮಾಡುತ್ತೇವೆ. ಖಡ್ಗದ ಆಧಾರದ ಮೇಲೆ ಮತಾಂತರ ಮಾಡುತ್ತೇವೆ ಎಂದಿದ್ದಾರೆ. ಮುಜಾಹಿದ್ದೀನ್ ಎಂಬ ಹಿಂದೂ ವಿರೋಧಿಯಿಂದ ಈ ರೀತಿಯ ಮೇಲ್ ಬಂದಿದೆ ಎಂದು ಹೇಳಿದರು.

ಇದು ಬಹು ದೊಡ್ಡ ಆತಂಕದ ಸಂಗತಿ. ಇದಕ್ಕೆ ಕಾಂಗ್ರೆಸ್ ಸರ್ಕಾರ ಕಾರಣ. ಕಾಂಗ್ರೆಸ್‌ನ ತುಷ್ಟೀಕರಣ ಪರಿಣಾಮದಿಂದ ಮುಸ್ಲಿಂರು ನಮ್ಮದೇ ರಾಜ್ಯ ಎನ್ನುವ ಭ್ರಮೆಯಲ್ಲಿದ್ದಾರೆ. ಶಾಲಾ, ಕಾಲೇಜುಗಳಿಗೆ ಬೆದರಿಕೆ ಬರುತ್ತಿರುವುದು ಗಂಭೀರ ವಿಚಾರ.
ಜನರು ತಮ್ಮ ಸುರಕ್ಷತೆ ಬಗ್ಗೆ ವಿಚಾರ ಮಾಡಬೇಕು. ಈ ಮೇಲ್ ಎಲ್ಲಿಂದ ಯಾರಿಗೆ ಬಂದಿದೆ ಎಂಬುದನ್ನು ಪತ್ತೆ ಮಾಡಬೇಕು. ಇದೊಂದು ಭಯೋತ್ಪಾದನೆಗೆ ಸಂಬಂಧಪಟ್ಟಿದ್ದು. ಮುಂದಿನ ದಿನಗಳಲ್ಲಿ ದೊಡ್ಡಮಟ್ಟದ ಘಟನೆಗಳು ಆಗುವ ಬಗ್ಗೆ ಮೇಲ್‌ನಲ್ಲಿ ಸೂಚನೆ ಇದೆ.
ಘಟನೆ ಖಂಡನೀಯ: ಹದ್ದು ಬಸ್ತಿನಲ್ಲಿಡಿ
ಸರ್ಕಾರ ಇಂತವರನ್ನು ಹದ್ದುಬಸ್ತಿನಲ್ಲಿ ಇಡಬೇಕು. ಇವರನ್ನು ಒದ್ದು ಒಳಗೆ ಹಾಕಬೇಕು. ಮೂರ್ತಿ ಉಪಾಸಕರನ್ನು ಕೊಲ್ಲಬೇಕು ಎಂದು ಕುರಾನ್‌ನಲ್ಲಿ ಬರೆಯಲಾಗಿದೆ. ಇದಕ್ಕೆ ಪುಷ್ಠಿಯಾಗಿ ಈ ಮೇಲ್ ಬಂದಿದೆ. ಇದನ್ನು ನಾನು ವಿರೋಧಿಸುತ್ತೇನೆ ಎಂದರು.

ಶುಕ್ರವಾರ ಬೆಳಗ್ಗೆ ಬೆಂಗಳೂರಿನ 15 ಶಾಲೆಗಳಿಗೆ ಇಮೇಲ್ ಮೂಲಕ ಬಾಂಬ್ ಬೆದರಿಕೆ ಕರೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಶಾಲೆಯ ಆವರಣದಲ್ಲಿ ಸ್ಫೋಟಕಗಳನ್ನು ಇರಿಸಲಾಗಿದೆ ಎಂದು ಇಮೇಲ್ ಸಂದೇಶದಲ್ಲಿ ಉಲ್ಲೇಖಿಸಿದೆ.
ಮಾಹಿತಿ ಮೇರೆಗೆ ಸ್ಥಳಕ್ಕೆ ಬಂದ ಪೊಲೀಸರು ಯಾವುದೇ ಅನುಮಾನಾಸ್ಪದ ವಸ್ತುಗಳಿಗಾಗಿ ಶಾಲೆಗಳಲ್ಲಿ ಶೋಧ ನಡೆಸುತ್ತಿದ್ದಾರೆ. ವೈಟ್‌ಫೀಲ್ಡ್, ಬಸವೇಶನಗರ, ಕೋರಮಂಗಲ, ಯಲಹಂಕ ಮತ್ತು ಸದಾಶಿವನಗರ ಸೇರಿದಂತೆ ಬಾಂಬ್ ಬೆದರಿಕೆ ಬಂದಿರುವ ಎಲ್ಲ ಶಾಲೆಗಳಿಗೆ ಬಾಂಬ್ ನಿಷ್ಕ್ರಿಯ ದಳ ರವಾನಿಸಿದ್ದಾರೆ.
ಬಾಂಬ್ ಬೆದರಿಕೆ ಹಿನ್ನೆಲೆಯಲ್ಲಿ ಶಾಲೆಯೊಂದು ಪೋಷಕರಿಗೆ ಸಲಹೆ ನೀಡಿದೆ. ಅದರಲ್ಲಿ ಇಂದು ಶಾಲಾ ಮಂಡಳಿ ಅನಿರೀಕ್ಷಿತ ಪರಿಸ್ಥಿತಿಯನ್ನು ಎದುರಿಸಿದೆ. ಶಾಲೆಗೆ ಅಪರಿಚಿತ ಮೂಲಗಳಿಂದ ಭದ್ರತಾ ಬೆದರಿಕೆ ಸಂದೇಶ ಬಂದಿದೆ. ನಮ್ಮ ಮಕ್ಕಳ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡುತ್ತೇವೆ, ತಕ್ಷಣವೇ ವಿದ್ಯಾರ್ಥಿಗಳನ್ನು ಮನೆಗೆ ಕಳುಹಿಸಲು ನಿರ್ಧರಿಸಿದ್ದೇವೆ ಎಂದು ಹೇಳಿದರು.












Click it and Unblock the Notifications