Women's day: ಮಹಿಳೆಯರ ಸುರಕ್ಷತೆಗೆ ಆದ್ಯತೆ, ಸೇಫ್‌ಸಿಟಿ ಯೋಜನೆಯಡಿ 7,000ಸಿಸಿ ಕ್ಯಾಮರಾ ಅಳವಡಿಕೆ:CM
ಮಹಿಳೆಯರ ಅಭಿವೃದ್ಧಿಗೆ ಆದ್ಯತೆ ನೀಡುವ ಸರ್ಕಾರ ಬೆಂಗಳೂರಲ್ಲಿ ಸೇಫ್ ಸಿಟಿ ಯೋಜನೆಯಡಿ ಮಹಿಳೆಯರ ಸುರಕ್ಷತೆಗಾಗಿ 7 ಸಾವಿರ ಸಿಸಿ ಕ್ಯಾಮೆರಾ ಅಳವಡಿಸಲಾಗಿದೆ ಎಂದು ಸಿಎಂ ಬೊಮ್ಮಾಯಿ ಹೇಳಿದರು.
ಬೆಂಗಳೂರು, ಮಾರ್ಚ್ 08: ಮಹಿಳೆಯರ ಸುರಕ್ಷತೆ ಆದ್ಯತೆ ನೀಡುವ ರಾಜ್ಯ ಸರ್ಕಾರ ಬೆಂಗಳೂರಿನಲ್ಲಿ 'ಸೇಫ್ ಸಿಟಿ ಯೋಜನೆ' ಅಡಿಯಲ್ಲಿ 7,000 ಸಿಸಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ. ಅಷ್ಟೇ ಅಲ್ಲದೇ ಸ್ತ್ರೀ ಸಬಲೀಕರಣ, ಸ್ವಾವಲಂಬನೆಯ ಬದುಕು, ಮಹಿಳೆಯರಿಗೆ ಶಿಕ್ಷಣ, ಆರೋಗ್ಯ ಸುಧಾರಣೆಗೆ ಸರ್ಕಾರ ಬದ್ಧವಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಬೆಂಗಳೂರಿನಲ್ಲಿ ನಡೆದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಸಮಾರಂಭದಲ್ಲಿ ಮಾತನಾಡಿದ ಅವರು, ಅರ್ಹರಿಗೆ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು. ಮಹಿಳೆಯರಿಗೆ ಪ್ರೋತ್ಸಾಹ ನೀಡಲೆಂದೆ ಬಿಜೆಪಿ ಸರ್ಕಾರ ಸಾಕಷ್ಟು ಯೋಜನೆಯನ್ನು ಜಾರಿಗೊಳಿಸಿದೆ. ಸ್ತ್ರೀಸಾಮರ್ಥ್ಯ ಯೋಜನೆಯಡಿ ಪ್ರತಿ ಗ್ರಾಮದ ಎರಡು ಸ್ತ್ರೀಶಕ್ತಿ ಸಂಘಗಳಿಗೆ ಆರ್ಥಿಕ ಸಹಾಯ, ತರಬೇತಿ ಹಾಗೂ ಉತ್ಪನ್ನಗಳಿಗೆ ಮಾರುಕಟ್ಟೆ ಒದಗಿಸುವ ಯೋಜನೆ ಜಾರಿಗೆ ತಂದಿದ್ದೇವೆ. ಹೊಲದಲ್ಲಿ ದುಡಿಯುವ ಮಹಿಳೆಯ ಅನುಕೂಲಕ್ಕಾಗಿ ಪೌಷ್ಟಿಕ ಆಹಾರ ಒದಗಿಸುವ ಯೋಜನೆ ಹಾಗೂ ಮಹಿಳಾ ಕಾರ್ಮಿಕರ ಮಕ್ಕಳಿಗಾಗಿ 4000 ಅಂಗನವಾಡಿಗಳನ್ನು ಪ್ರಾರಂಭಿಸಲಾಗಿದೆ ಎಂದು ಅವರು ತಿಳಿಸಿದರು.

ಸ್ತ್ರೀಶಕ್ತಿ ಸಂಘಗಳಿಗೆ 1800 ಕೋಟಿ ರೂಪಾಯಿ
ಹಿಂದಿನ ಜಾರಿಗೊಳಿಸಿದ್ದ ರೈತ ವಿದ್ಯಾನಿಧಿ ಬಳಿಕ ಈ ವರ್ಷ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ವಿತರಿಸುತ್ತಿದ್ದೇವೆ. ದುಡಿಯುವ ಮಹಿಳೆಗೆ ಉಚಿತ ಬಸ್ ಪಾಸ್ ನೀಡಲಾಗುತ್ತಿದ್ದು, ಈ ಪ್ರಕ್ರಿಯೆ ಇನ್ನೇನು ಆರಂಭವಾಗಲಿದೆ. ಪಿಯುಸಿ ಪದವಿ ವರೆಗೆ ಡಿಗ್ರಿವರೆಗೆ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ, ಸ್ತ್ರೀಶಕ್ತಿ ಸಂಘಗಳಿಗೆ 1800 ಕೋಟಿ ರೂ.ಗಳಷ್ಟು ಶೂನ್ಯಬಡ್ಡಿದರದಲ್ಲಿ ಸಾಲಸೌಲಭ್ಯವನ್ನು ನೀಡಲಾಗಿದೆ. ಇಂತಹ ಸೌಲಭ್ಯಗಳಿಂದ ಸಮಾಜದಲ್ಲಿ ಸಾಕಷ್ಟು ಸವಾಲು ಎದುರಿಸುತ್ತಿರುವ ಮಹಿಳೆಯರು ಸಾಧನೆ ಮಾಡಲು ಸಾಧ್ಯವಾಗಲಿದೆ ಎಂದರು.
ಬುದಕಿನಲ್ಲಿ ಮಹಿಳೆಯ ಪಾತ್ರವೇ ದೊಡ್ಡದು
ಮನುಷ್ಯನ ಬುದಕಿನಲ್ಲಿ ಮಹಿಳೆಯ ಪಾತ್ರ ದೊಡ್ಡದು. ಸಂಬಂಧದಿಂದ ಸಾಧನೆವರೆಗೆ ಅವಳ ಪಾತ್ರವಿದೆ. ಅದಕ್ಕಾಗಿಯೇ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಆಚರಣೆ ಬಂದಿದೆ. ಜನ್ಮ ಪೂರ್ವದ ಸಂಬಂಧ ತಾಯಿ ಸಂಬಂಧ, ಒಂಬತ್ತು ತಿಂಗಳು ಹೊತ್ತು ಹೆತ್ತು ತನ್ನ ಸರ್ವಸರ್ವವನ್ನೂ ಹಂಚಿ ಭೂಮಿಗೆ ಬರಲು ಅವಕಾಶ ಮಾಡಿಕೊಡುವವಳು ತಾಯಿ. ಇದನ್ನು ಅರ್ಥ ಮಾಡಿಕೊಂಡರೆ ನಮ್ಮ ತಾಯಂದಿರನ್ನು ಹೇಗೆ ಗೌರವಿಸಬೇಕೆಂದು ತಿಳಿಯುತ್ತದೆ. ಇದರ ಅರಿವು ಬಹುತೇಕ ಜನರಿಗಿಲ್ಲ ಎಂದು ಮುಖ್ಯಮಂತ್ರಿಗಳು ಕಳವಳ ವ್ಯಕ್ತಪಡಿಸಿದರು.
ಅವಕಾಶ ಸಿಗುವಂತೆ ಮಾಡಿದರೆ ಪ್ರತಿ ಕ್ಷೇತ್ರದಲ್ಲೂ ಮಹಿಳೆಯರು ದೊಡ್ಡ ಸಾಧನೆ ಮಾಡುತ್ತಾರೆ. ಏರೋಸ್ಪೇಸ್‌ನಲ್ಲಿ ಮಹಿಳೆಯರು ತೊಡಗಿಸಿಕೊಂಡಿದ್ದಾರೆ. ಅತ್ಯಂತ ಕಠಿಣವಾದ ಕೆಲಸಗಳನ್ನೂ ಮಾಡಿ ಸೈ ಎನಿಸಿಕೊಂಡಿದ್ದಾರೆ ಎಂದು ಮಹಿಳೆಯರ ಸಾಧನೆ ಸ್ಮರಿಸಿದರು.

ಕಾರ್ಯಕ್ರಮದಲ್ಲಿ ಕೃಷಿ ಮತ್ತು ರೈತ ಕಲ್ಯಾಣ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ , ಚಿತ್ರನಟಿ ಸಪ್ತಮಿ ಗೌಡ, ವಿಜಯವಾಣಿ ಸಂಪಾದಕ ಚನ್ನೇಗೌಡ, ಪತ್ರಿಕಾ ಸಂಪಾದಕ ರುದ್ರಣ್ಣ ಹರ್ತಿಕೋಟೆ, ವಿಜಯಾನಂದ ಟ್ರಾವೆಲ್ಸ್ ವ್ಯವಸ್ಥಾಪಕ ನಿರ್ದೇಶಕ ಶಿವ ಸಂಕೇಶ್ವರ್ ಮತ್ತಿತರರು ಉಪಸ್ಥಿತರಿದ್ದರು.












Click it and Unblock the Notifications