Bengaluru Roads: ಬೆಂಗಳೂರಿನ ರಸ್ತೆ ಸ್ವಚ್ಛತೆಗೆ ಹೈಟೆಕ್ ಮೆಷಿನ್; ದಿನಕ್ಕೆ 160 ಕಿಲೋ ಮೀಟರ್ ಕ್ಲೀನ್
ಬೆಂಗಳೂರು: ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ನಗರದ ರಸ್ತೆಗಳ ಸ್ವಚ್ಛತೆಗೆ ಈಗಾಗಲೇ ಕೆಲವು ಸ್ವಚ್ಛತಾ ವಾಹನ ಬಳಸುತ್ತಿದೆ. ಹೊಸ ತಂತ್ರಜ್ಞಾನಗಳನ್ನು ಉಪಯೋಗಿಸುತ್ತಿದೆ. ಇದೀಗ ಅತ್ಯಾಧುನಿಕ ಮೆಕ್ಯಾನಿಕಲ್ ಸ್ವೀಪಿಂಗ್ ಯಂತ್ರಗಳ ಬಳಕೆಗೆ ಮುಂದಾಗಿದೆ. ಸದ್ಯ ಪ್ರಾಯೋಗಿಕವಾಗಿ ಬಳಸಲಿದ್ದು, ಶೀಘ್ರವೇ ಶಾಶ್ವತವಾಗಿ ಬಳಸಲು ಪ್ಲ್ಯಾನ್ ಮಾಡಲಾಗಿದೆ. ಟೆಂಡರ್‍ನಲ್ಲಿ ಕೆಲವು ಸಂಸ್ಥೆಗಳು ಪಾಲ್ಗೊಂಡಿದ್ದು, ಶೀಘ್ರವೇ ಬಿಡ್ ಆರಂಭಗೊಳ್ಳಲಿದೆ.
ಬೆಂಗಳೂರು ದಕ್ಷಿಣ ನಗರ ಪಾಲಿಕೆ ವ್ಯಾಪ್ತಿಯ ರಸ್ತೆಗಳ ಸ್ವಚ್ಛತೆ ಕಾಪಾಡುವ ನಿಟ್ಟಿನಲ್ಲಿ, ಅತ್ಯಾಧುನಿಕ ಮೆಕ್ಯಾನಿಕಲ್ ಸ್ವೀಪಿಂಗ್ ಯಂತ್ರಗಳ ಪ್ರಾಯೋಗಿಕ ಕಾರ್ಯವೈಖರಿಯನ್ನು ತಪಾಸಣೆ ಮಾಡಲಾಯಿತು. ಪಾಲಿಕೆ ಆಯುಕ್ತರಾದ ಕೆ. ಎನ್. ರಮೇಶ್ ರವರ ನೇತೃತ್ವದ ತಾಂತ್ರಿಕ ಮೌಲ್ಯಮಾಪನ ಸಮಿತಿಯು ಶನಿವಾರ ಜಯನಗರದ ಸೌತ್ ಎಂಡ್ ಸರ್ಕಲ್ ಬಳಿ ತಪಾಸಣೆ ಕೈಗೊಂಡಿತು.

160 ಕಿ.ಮೀ ಉದ್ದದ ರಸ್ತೆ ಸ್ವಚ್ಛತೆ
ಜಯನಗರ ಹಾಗೂ ಬೊಮ್ಮನಹಳ್ಳಿ ವಲಯಗಳಲ್ಲಿ ಪ್ರತಿ ಕಿಲೋಮೀಟರ್ ಪಾವತಿ ಆಧಾರದ ಮೇಲೆ ದಿನಕ್ಕೆ ಒಟ್ಟು 160 ಕಿ.ಮೀ ಉದ್ದದ ರಸ್ತೆಗಳನ್ನು ಆಧುನಿಕ ಯಾಂತ್ರೀಕೃತ ರಸ್ತೆ ಕಸ ಗುಡಿಸುವ ಕಾಮಗಾರಿಗೆ ಕರೆಯಲಾಗಿದ್ದ ಟೆಂಡರ್ ನಲ್ಲಿ ಭಾಗವಹಿಸಿದ್ದಂತಹ ಸಂಸ್ಥೆಗಳ ಮೆಕ್ಯಾನಿಕಲ್ ಸ್ವೀಪಿಂಗ್ ಯಂತ್ರಗಳ ಕಾರ್ಯನಿರ್ವಹಣೆಯನ್ನು ಸಮಿತಿ ಖುದ್ದು ಪರಿಶೀಲಿಸಿತು.
ಎರಡು ಸಂಸ್ಥೆಗಳ ಯಂತ್ರಗಳು
ಮೆಕ್ಯಾನಿಕಲ್ ಸ್ವೀಪಿಂಗ್ ಯಂತ್ರದ ಒದಗಿಸುವ ಟೆಂಡರ್ ನಲ್ಲಿ ಭಾಗವಹಿದ್ದಂತಹ ಎರಡು ಸಂಸ್ಥೆಗಳ ಮೆಕ್ಯಾನಿಕಲ್ ಸ್ವೀಪಿಂಗ್ ಯಂತ್ರಗಳನ್ನು ಪ್ರಾಯೋಗಿಕವಾಗಿ ಇಂದಿನಿಂದ ರಸ್ತೆ ಸ್ವಚ್ಛಗೊಳಿಸಲಿದ್ದು, ರಸ್ತೆ ಬದಿಯ ಕಸ ಹಾಗೂ ಧೂಳನ್ನು ಅತಿ ಸಮರ್ಥವಾಗಿ ಸ್ವಚ್ಛಗೊಳಿಸುವ ಸಾಮರ್ಥ್ಯ ಹೊಂದಿರುವ ವಾಹನಗಳನ್ನು ಆಯ್ಕೆ ಮಾಡಲಾಗುವುದು ಎಂದು ಆಯುಕ್ತರು ಸ್ಪಷ್ಟಪಡಿಸಿದರು.
5 ದಿನಗಳ ಸ್ವೀಪಿಂಗ್ ಯಂತ್ರಗಳ ಕಾರ್ಯಾಚರಣೆ
ನಾಳೆ ಭಾನುವಾರದಿಂದ 5 ದಿನಗಳ ಕಾಲ ಪಾಲಿಕೆ ವ್ಯಾಪ್ತಿಯ ಪ್ರಮುಖ ಆರ್ಟಿರಿಯಲ್ ರಸ್ತೆಗಳಲ್ಲಿ ಮೆಕ್ಯಾನಿಕಲ್ ಸ್ಲೀಪಿಂಗ್ ಯಂತ್ರಗಳು ಕಾರ್ಯಚರಣೆ ಕೈಗೊಳ್ಳಲಾಗುವುದು. ಆರ್ಟೀರಿಯಲ್ ಮತ್ತು ಸಬ್-ಆರ್ಟೀರಿಯಲ್ ರಸ್ತೆಗಳನ್ನು ಗುಡಿಸಲು ಅತ್ಯುತ್ತಮ ಯಂತ್ರಗಳ ಕಾರ್ಯಾಚರಣೆ ಮತ್ತು ನಿರ್ವಹಣಾ ವೇಳಾಪಟ್ಟಿಯ ಆಧಾರದ ಮೇಲೆ ಆಯ್ಕೆ ಮಾಡಲು, ಆರ್ಥಿಕ ಬಿಡ್‌ಗಳನ್ನು ತೆರೆಯುವ ಮೊದಲು ಕಾರ್ಯಕ್ಷಮತೆ ಅಂಕಗಳನ್ನು ನೀಡಲಾಗುತ್ತದೆ ಎಂದು ಮುಖ್ಯ ಅಭಿಯಂತರರು ತಿಳಿಸಿದರು.
ಟೆಂಡರ್ ತಾಂತ್ರಿಕ ಮಾನದಂಡ ಆಧಾರದಲ್ಲಿ ಬಿಡ್
ಪಾಲಿಕೆ ವ್ಯಾಪ್ತಿಯ 4 ಲೇನ್ ಹೊಂದಿರುವ 160 ಕಿ.ಮೀ ಉದ್ದದ ರಸ್ತೆಗಳ ಸ್ವಚ್ಛತೆ ಮಾರ್ಗ (160*4 ರಂತೆ) ಒಟ್ಟು 640 ಕಿಮೀ ಆಗಲಿದ್ದು, ಪ್ರತಿ ಸ್ವೀಪಿಂಗ್ ವಾಹನಗಳು ಪ್ರತಿ ನಿತ್ಯ 40 ಕಿಮೀ ಸ್ವಚ್ಛತಾ ಮಾರ್ಗವನ್ನು ಕ್ರಮಿಸಿ ಸ್ವಚ್ಚಗೊಳಿಸಬೇಕಿರುತ್ತದೆ.
ರಸ್ತೆ ಸ್ವಚ್ಛತೆಗಾಗಿ ಕನಿಷ್ಠ 5 ಕ್ಯೂಬಿಕ್ ಮೀಟರ್ ಸಾಮರ್ಥ್ಯದ 8 ಮೆಕ್ಯಾನಿಕಲ್ ಸ್ವೀಪಿಂಗ್ ಯಂತ್ರಗಳನ್ನು ಕಾರ್ಯಾಚರಣೆ ಹಾಗೂ ನಿರ್ವಹಣೆ (Operation and Maintenance) ಅಡಿಯಲ್ಲಿ ಸೇವೆ ಪಡೆಯಲು ನಿರ್ಧರಿಸಿದ್ದು, ಬಿಎಸ್-6 ಎಮಿಷನ್ ನಿಯಮ, ಪಿಎಂ 2.5 ನಿಯಂತ್ರಣದ ಡಸ್ಟ್ ಕಂಟ್ರೋಲ್ ಸಿಸ್ಟಂ, 360-ಡಿಗ್ರಿ ಕ್ಯಾಮೆರಾ, ಎಎಸ್-140 ಜಿಪಿಎಸ್ ವ್ಯವಸ್ಥೆ, ಹೈ ಪ್ರೆಶರ್ ವಾಟರ್ ಪಂಪ್ ಹಾಗೂ ಆಟೋಮ್ಯಾಟಿಕ್ ಲೆವೆಲಿಂಗ್ ಸಿಸ್ಟಂ ಮುಂತಾದ ತಾಂತ್ರಿಕ ಮಾನದಂಡಗಳ ಆಧಾರದ ಮೇಲೆ ಅತ್ಯುತ್ತಮ ಕಾರ್ಯಕ್ಷಮತೆ ತೋರುವ ಯಂತ್ರಗಳ ಸೇವೆ ಪಡೆಯಲಾಗುವುದು ಎಂದು ಆಯುಕ್ತರು ತಿಳಿಸಿದರು.


Click it and Unblock the Notifications
