ಬೆಂಗಳೂರಿನ ಪ್ರಮುಖ ರಸ್ತೆ ಅಗಲೀಕರಣ: ಈ ಭಾಗದ ಆಸ್ತಿದಾರರಿಗೆ ಬಂಪರ್ ನಿರೀಕ್ಷೆ!
ಬೆಂಗಳೂರಿನ ಪ್ರಮುಖ ರಸ್ತೆ ಅಗಲೀಕರಣಕ್ಕೆ ಗ್ರೇಟರ್ ಬೆಂಗಳೂರು ಆಡಳಿತದ ಪಾಲಿಕೆಯೊಂದು ಮುಂದಾಗಿದ್ದು. ನಗರದ ಪ್ರಮುಖ ಭಾಗದಲ್ಲಿ ಟ್ರಾಫಿಕ್ ಜಾಮ್ ಸಮಸ್ಯೆಗೆ ಪರಿಹಾರ ಸಿಗಲಿದೆ ಎಂದು ನಿರೀಕ್ಷೆ ಮಾಡಲಾಗಿದೆ. ಅದರ ಸಂಪೂರ್ಣ ವಿವರ ಇಲ್ಲಿದೆ.
ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ಟ್ರಾಫಿಕ್ ಜಾಮ್ ಸಮಸ್ಯೆ ಹೆಚ್ಚಳವಾಗುತ್ತಿದೆ. ಇದೀಗ ಪೀಕ್ ಅವರ್‌ನಲ್ಲಿ ಮಾತ್ರವಲ್ಲದೆ ಉಳಿದ ಸಮಯದಲ್ಲೂ ಬೆಂಗಳೂರಿನಲ್ಲಿ ಟ್ರಾಫಿಕ್ ಜಾಮ್ ಸಮಸ್ಯೆ ಹೆಚ್ಚಳವಾಗುತ್ತಿದೆ. ಈ ಸಮಸ್ಯೆಗೆ ಪರಿಹಾರಕಂಡುಕೊಳ್ಳುವ ನಿಟ್ಟಿನಲ್ಲಿ ಕೆಲವೊಂದು ಪ್ರಮುಖ ಯೋಜನೆಗಳನ್ನು ರೂಪಿಸಲಾಗುತ್ತಿದೆ. ಇದೀಗ ಬೆಂಗಳೂರಿನ ಪಣತ್ತೂರು ಬಳಗೆರೆ ರಸ್ತೆ ಅಗಲೀಕರಣ ಪ್ರಸ್ತಾವನೆ ಹಾಗೂ ರಸ್ತೆ ಅಭಿವೃದ್ಧಿ ಕಾಮಗಾರಿಯನ್ನು ಆದ್ಯತೆ ಮೇರೆಗೆ ಶೀಘ್ರದಲ್ಲಿ ಪೂರ್ಣಗೊಳಿಸಲು ಬೆಂಗಳೂರು ಆಡಳಿತ ಮುಂದಾಗಿದೆ.

ಬೆಂಗಳೂರು ಪೂರ್ವ ನಗರ ಪಾಲಿಕೆ ಆಯುಕ್ತರಾದ ಡಿ.ಎಸ್.ರಮೇಶ್ ಅವರು ಶನಿವಾರ (ಸೆಪ್ಟೆಂಬರ್ 13ರಂದು) ನಗರ ಪಾಲಿಕೆ ವ್ಯಾಪ್ತಿಯ ಪಣತ್ತೂರು ಬಳಗೆರೆ ರಸ್ತೆ, ಬೃಹತ್ ರಾಜಕಾಲುವೆಗಳ ಪರಿಶೀಲನೆಯನ್ನು ನಡೆಸಿದರು. ಆಯುಕ್ತರ ನೇತೃತ್ವದಲ್ಲಿ ಪೂರ್ವ ನಗರ ಪಾಲಿಕೆಗೆ ಬರುವ ಹೈ ಡೆನ್ಸಿಟಿ ಕಾರಿಡಾರ್‌ಗಳಲ್ಲಿ ಪಾದಚಾರಿ ಮಾರ್ಗ ಒತ್ತುವರಿ, ಅನಧಿಕೃತ ಜಾಹೀರಾತು ಹೋರ್ಡಿಂಗ್ಸ್ ತೆರವು ಮತ್ತು ಅನಧಿಕೃತ ಕೇಬಲ್‌ಗಳ ತೆರವು ಕಾರ್ಯಾಚರಣೆಯನ್ನು ಬಿರುಸಿನಿಂದ ನಡೆಸಲಾಯಿತು.
ಬಳಗೆರೆ ರಸ್ತೆ ಪರಿಶೀಲನೆ: ಮಹದೇವಪುರದ ಪಣತ್ತೂರು ಬಳಗೆರೆ ಮುಖ್ಯರಸ್ತೆಯಲ್ಲಿ ಖಾಸಗಿ ಶಾಲಾ ಬಸ್ ಚಕ್ರವು ರಸ್ತೆ ಬದಿಯಲ್ಲಿನ ಚರಂಡಿಗೆ ಹೂತು ಹೋಗಿದ್ದು, ಈ ಘಟನೆಗೆ ಸಂಬಂಧಿಸಿದಂತೆ ಬೆಂಗಳೂರು ಪೂರ್ವ ನಗರ ಪಾಲಿಕೆ ಆಯುಕ್ತರಾದ ಡಿ.ಎಸ್ ರಮೇಶ್ ಅವರು ಇಂದು ಸ್ಥಳ ಪರಿಶೀಲನೆ ನಡೆಸಿದ್ದಾರೆ.
ಪಣತ್ತೂರು ಬಳಗೆರೆಯ ಹಾಲಿ ಇರುವ ರಸ್ತೆಯನ್ನು 18 ಮೀ ಅಗಲಕ್ಕೆ ರಸ್ತೆ ಅಗಲೀಕರಣಗೊಳಿಸುವ ಪ್ರಸ್ತಾವನೆಯಿದ್ದು, ಈ ರಸ್ತೆ ಅಗಲೀಕರಣಕ್ಕೆ ಸಂಬಂಧಿಸಿದಂತೆ ಭೂ ಸ್ವಾಧೀನ ಪ್ರಕ್ರಿಯೆಯಲ್ಲಿರುವುದರಿಂದ ಬಳಗೆರೆ ರಸ್ತೆ ಅಗಲೀಕರಣ ಕಾಮಗಾರಿ ನಿಧಾನವಾಗಿರುತ್ತದೆ ಎಂದು ಅವರು ತಿಳಿಸಿದರು. ಬಳಗೆರೆ ರಸ್ತೆ ಅಗಲೀಕರಣಕ್ಕೆ ಅವಶ್ಯವಿರುವ ಜಾಗಕ್ಕೆ ಸ್ವತ್ತಿನ ಮಾಲೀಕರಿಗೆ ಟಿಡಿಆರ್ ನೀಡುವ ಮೂಲಕ ಶೀಘ್ರದಲ್ಲಿ ಭೂಸ್ವಾಧೀನ ಪಡಿಸಿಕೊಂಡು ಕಾಮಗಾರಿಯನ್ನು ಆದ್ಯತೆ ಮೇರೆಗೆ ಪೂರ್ಣಗೊಳಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಮತ್ತು ಗುತ್ತಿಗೆದಾರರಿಗೆ ಸೂಚಿಸಿದ್ದಾರೆ. ಈ ಮೂಲಕ ಈ ಭಾಗದಲ್ಲಿ ಭೂಮಿಗೆ ಬಂಗಾರದ ಬೆಲೆ ಬರುವ ನಿರೀಕ್ಷೆ ಇದೆ.
ಬಳಗೆರೆ ರಸ್ತೆ ಅಗಲೀಕರಣಕ್ಕೆ ಸಂಬಂಧಿಸಿದಂತೆ ಶುಕ್ರವಾರ ಖಾಸಗಿ ಶಾಲಾ ಬಸ್‌ನ ಚಕ್ರ ಹೂತು ಹೋಗಿದ್ದ ಜಾಗಕ್ಕೆ ಹೊಂದಿಕೊಂಡಂತಿರುವ ಜಾಗದಲ್ಲಿ 18 ಮೀಟರ್ ಅಗಲದ ರಸ್ತೆ ಅಗಲೀಕರಣಕ್ಕೆ ಅವಶ್ಯಕತೆ ಇರುವ ಜಾಗದಲ್ಲಿದ್ದ ಕಾಂಪೌಂಡನ್ನು ತೆರವುಗೊಳಿಸಿ ರಸ್ತೆ ಅಗಲೀಕರಣ ಕಾಮಗಾರಿಯನ್ನು ಈಗಾಗಲೇ ಕೈಗೊಳ್ಳಲಾಗಿದೆ ಎಂದು ಪೂರ್ವ ನಗರ ಪಾಲಿಕೆ ಆಯುಕ್ತರು ತಿಳಿಸಿದ್ದಾರೆ.
ಪೂರ್ವ ನಗರ ಪಾಲಿಕೆ ಆಯುಕ್ತರ ಪರಿಶೀಲನೆ ವೇಳೆ ಬಳಗೆರೆ ರಸ್ತೆ ಮೂಲಕ ಹಾದೂ ಹೋಗುವ ಬೃಹತ್ ರಾಜಕಾಲುವೆ ಒತ್ತುವರಿಯಾಗಿರುವುದು ಕಂಡುಬಂದಿದ್ದು, ಪ್ರಸ್ತುತ ಮಳೆಗಾಲವಿರುವುದರಿಂದ ಒತ್ತುವರಿಯಿಂದಾಗಿ ರಸ್ತೆಯಲ್ಲಿ ನೀರು ನಿಲ್ಲುವಂತಾಗುತ್ತದೆ. ವರ್ತೂರು ಕೆರೆಗೆ ಸರಾಗವಾಗಿ ನೀರು ಹರಿದು ಹೋಗುವಂತೆ ವ್ಯವಸ್ಥೆ ಕಲ್ಪಿಸಲು ರಾಜಕಾಲುವೆ ಒತ್ತುವರಿ ತೆರವು ಕಾರ್ಯಚರಣೆಯನ್ನು ಕೈಗೊಂಡು, ಕಾಮಗಾರಿಯನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಕೆ.ಆರ್.ಪುರ ವ್ಯಾಪ್ತಿಯ ದೇವಸಂದ್ರ ಮತ್ತು ಪೈ ಬಡಾವಣೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ರಾಜಕಾಲುವೆಗಳಲ್ಲಿ ತುಂಬಿದ್ದ ಹೂಳನ್ನು ಜೆಸಿಬಿ ಯಂತ್ರಗಳ ಮೂಲಕ ತೆಗೆಸಿ, ಕಾಲುವೆಗಳಲ್ಲಿ ನೀರು ಸರಾಗವಾಗಿ ಹರಿಯುವಂತೆ ವ್ಯವಸ್ಥೆ ಕಲ್ಪಿಸಲಾಯಿತು ಎಂದು ಪೂರ್ವ ನಗರ ಪಾಲಿಕೆ ಆಯುಕ್ತರು ಹೇಳಿದ್ದಾರೆ.
ಪೂರ್ವ ನಗರ ಪಾಲಿಕೆ ಆಯುಕ್ತರ ನಿರ್ದೇಶನದಂತೆ ನಗರ ಪಾಲಿಕೆ ವ್ಯಾಪ್ತಿಯ ಹೈ ಡೆನ್ಸಿಟಿ ಕಾರಿಡಾರ್‌ಗಳಲ್ಲಿ ಪಾದಚಾರಿ ಮಾರ್ಗ ಒತ್ತುವರಿ ತೆರವು, ಅನಧಿಕೃತ ಹೋರ್ಡಿಂಗ್ಸ್ ಮತ್ತು ಜಾಹೀರಾತು ಫಲಕಗಳ ತೆರವು ಹಾಗೂ ಅನಧಿಕೃತ ಕೇಬಲ್‌ಗಳನ್ನು ತೆರವು ಕಾರ್ಯಾಚರಣೆಯನ್ನು ಸಂಬಂಧಪಟ್ಟ ವಿಭಾಗಗಳ ಕಾರ್ಯಪಾಲಕ ಎಂಜಿನಿಯರ್‌ಗಳ ನೇತೃತ್ವದಲ್ಲಿ ಚುರುಕು ಕಾರ್ಯಾಚರಣೆಯೊಂದಿಗೆ ನಡೆಸಲಾಯಿತು.
ಸಿ.ಎ ನಿವೇಶನದ ಒತ್ತುವರಿ ತೆರವು: ಮಹದೇವಪುರದಲ್ಲಿನ ಎ.ಇ.ಸಿ.ಎಸ್ ಬಡಾವಣೆಯಲ್ಲಿರುವ ಸಿ.ಎ ನಿವೇಶನವನ್ನು ಎಇಸಿಎಸ್ ಅಸೋಸಿಯೇಷನ್ ಅವರು ಒತ್ತುವರಿ ಮಾಡಿಕೊಂಡಿರುವುದು ಕಂಡುಬಂದಿದ್ದು, ಪೂರ್ವ ನಗರ ಪಾಲಿಕೆ ಆಯುಕ್ತರ ನೇತೃತ್ವದಲ್ಲಿ ಸಿ.ಎ ನಿವೇಶನದ ಒತ್ತುವರಿಯನ್ನು ತೆರವುಗೊಳಿಸಲಾಯಿತು. ಭಾನುವಾರ ನಡೆದ ಪರಿಶೀಲನೆ ಮತ್ತು ಕಾರ್ಯಾಚರಣೆಯಲ್ಲಿ ಪೂರ್ವ ನಗರ ಪಾಲಿಕೆ ಆಯುಕ್ತರೊಂದಿಗೆ ಅಪರ ಆಯುಕ್ತರು (ಕಂದಾಯ) ಆದ ಡಾ: ದಾಕ್ಷಾಯಿಣಿ.ಕೆ. ಸೇರಿದಂತೆ ಹಲವು ಅಧಿಕಾರಿಗಳು ಹಾಜರಿದ್ದರು.












Click it and Unblock the Notifications