Bengaluru House Rent: ಐಟಿ ಕೇಂದ್ರಗಳ ಸುತ್ತಮುತ್ತ ಬಾಡಿಗೆ ಮನೆಗಳಿಗೆ ಹೆಚ್ಚಾಯ್ತು ಡಿಮ್ಯಾಂಡ್, ಅಂಕಿಸಂಖ್ಯೆ
ಬೆಂಗಳೂರು, ನವೆಂಬರ್ 27: ಸಿಲಿಕಾನ್ ಸಿಟಿ, ಐಟಿ ಕೇಂದ್ರವಾಗಿರುವ ಪ್ರತಿಷ್ಠಿತ ಬೆಂಗಳೂರಿನಲ್ಲಿ ಇಂದಿಗೂ ಸಹ ಹಲವು ಪ್ರದೇಶಗಳಲ್ಲಿ ಮನೆ ಬಾಡಿಗೆ ದರ ಗಗನಕ್ಕೇರುತ್ತಿದೆ. ಐಟಿ ಕೇಂದ್ರ, ಉದ್ಯೋಗ ಪ್ರದೇಶ, ಮೆಟ್ರೋ ಕಾರಿಡಾರ್ ಬಿಟ್ಟು ಉಳಿದೆಲ್ಲಡೆ ಮನೆ ಬಾಡಿಗೆ ಮಾಸಿಕ ಬೆಲೆ ಸ್ಥಿರವಾಗಿದೆ. ಆದರೆ ಬನಶಂಕರಿ, ಕೆ.ಆರ್.ಪುರಂ, ರಾಮಮೂರ್ತಿ ನಗರ ಸೇರಿದಂತೆ ವಿವಿಧ ಕಡೆಗಳಲ್ಲಿ ಶೇಕಡಾ 20ರಷ್ಟು ಮನೆ ಬಾಡಿಗೆ ಹೆಚ್ಚಳಗೊಂಡಿದೆ. ನೀವು ಈ ಪ್ರದೇಶಗಳಲ್ಲಿ ಮನೆ ಹುಡುಕುತ್ತಿದ್ದರೆ ನಿಮಗೆ ಈ ಲೇಖನ ಉಪಯೋಗಕ್ಕೆ ಬರಬಹುದು.
ಬೆಂಗಳೂರಿನ ಐಟಿ ಕಂಪನಿಗಳು ಫುಲ್‌ಟೈಮ್ ಕಚೇರಿ, ಹೈಬ್ರೀಡ್ ಮಾದರಿಯಲ್ಲಿ ಕೆಲಸ ನಡೆಸುತ್ತಿವೆ. ಹಲವಾರು ಕಂಪನಿಗಳು ವರ್ಕ್ ಫ್ರಂ ಹೋಂಗೆ ವಿದಾಯ ಹೇಳಿವೆ. ಇದರಿಂದಾಗಿ ಉದ್ಯೋಗಿಗಳು ತಮ್ಮ ಕಚೇರಿ ಸಮೀಪವೇ, ಸಾರಿಗೆ ಸುವ್ಯವಸ್ಥೆ ಇರುವ ಕಡೆಗಳ ಮನೆಗಳನ್ನು ಹುಡುಕುತ್ತಿದ್ದಾರೆ. ಇದರಿಂದ ನಿರ್ದಿಷ್ಟು ಭಾಗದ ಪ್ರದೇಶಗಳಲ್ಲಿ ಬಾಡಿಗೆ ಮನೆಗಳಿಗೆ ಬೇಡಿಕೆ ಮುಂದುವರಿದಿದೆ.

ನಮ್ಮ ಮೆಟ್ರೋ ಮಾರ್ಗಗಳ ಅಕ್ಕಪಕ್ಕ (ವಿಶೇಷವಾಗಿ ನೇರಳೆ ಮಾರ್ಗ) , ವಾಣಿಜ್ಯ ಕೇಂದ್ರಗಳು, ಐಟಿ ಕಾರಿಡಾರ್ ಸಮೀಪದ ಬಡಾವಣೆಗಳಲ್ಲಿ ಬಾಡಿಗೆ ಮನೆಗಳಿಗೆ ಡಿಮ್ಯಾಂಡ್ ಹೆಚ್ಚಿದೆ. ಎಚ್‌ಎಸ್‌ಆರ್ ಬಡಾವಣೆ, ಮಹಾದೇವಪುರ, ಎಲೆಕ್ಟ್ರಾನಿಕ್ ಸಿಟಿ, ಕೆ.ಆರ್.ಪುರಂ, ವೈಟ್‌ಫಿಲ್ಡ್ ಹೀಗೆ ಕಂಪನಿಗಳು, ಮೆಟ್ರೋ ಇರುವ ಕಡೆಗಳಲ್ಲಿ ಮನೆ ಬಾಡಿಗೆ ಶೇಕಡಾ 20ರಷ್ಟು ಹೆಚ್ಚಾಗಿದೆ. ಉಳಿದ ಪ್ರದೇಶಗಳಲ್ಲಿ ಹಿಂದಿನಂತೆ ಬಾಡಿಗೆ ದರ ಸ್ಥಿರವಾಗಿದೆ.
ಅಲ್ಲದೇ, ಮೆಟ್ರೋ, ಐಟಿ ಕಂಪನಿಗಳು ಇರುವ ಕಡೆಗೆ ಮೂಲ ಸೌಕರ್ಯಗಳು ಸುಧಾರಣೆಗೊಳ್ಳುತ್ತಿವೆ. ಸಾರಿಗೆ ತಡೆರಹಿ ಸೇವೆ ಲಭ್ಯವಿದೆ. ಇಂತಹ ಪ್ರದೇಶಗಳಲ್ಲಿ (ಬನಶಂಕರಿ) 2bhk ಫ್ಲ್ಯಾಟ್ ಮಾಸಿಕ ಬಾಡಿಗೆ ಬೆಲೆ 30,000 ರೂಪಾಯಿ ಇದೆ. ಇನ್ನೂ ಐಟಿ ಕೇಂದ್ರಗಳ ಹತ್ತಿರ ಇಂತದ್ದೇ ಫ್ಲಾಟ್, ಮನೆಗಳಿಗೆ 40,000 ರೂಪಾಯಿ ಇದೆ. ಇಲ್ಲೆಲ್ಲ ಮನೆ ವಿಚಾರದಲ್ಲಿ ಹಣದುಬ್ಬರದ ವಾತಾವರಣ ಇದೆ. ಡಿಮ್ಯಾಂಡ್‌ಗೆ ತಕ್ಕಂತೆ ಹೊಸ ಮನೆಗಳೂ ನಿರ್ಮಾಣಗೊಳ್ಳುತ್ತಿವೆ.
ಹೀಗಾಗಿ ಈ ಭಾಗದಲ್ಲಿ ಐಟಿ ನೌಕರರು ಹಾಗೂ ಅವರ ಹೊರತಾಗಿ ಬೇರೆ ಕಾರ್ಮಿಕ ವರ್ಗದವರು ಬಾಡಿಗೆ ಮನೆ ಮಾಡುವ ಮುನ್ನ ಆಲೋಚಿಸಬೇಕಿದೆ.
ಎಲ್ಲೆಲ್ಲಿ ಬಾಡಿಗೆ ಮನೆಗೆ ಬೇಡಿಕೆ, ದರ ಹೆಚ್ಚಿದೆ
ಬನಶಂಕರಿ ಎಲೆಕ್ಟ್ರಾನಿಕ್ಸ್ ಸಿಟಿ, ಬನ್ನೇರುಘಟ್ಟ ರಸ್ತೆ, ಮತ್ತು ರಿಂಗ್ ರಸ್ತೆ ಭಾಗದಲ್ಲಿ ಬರುವ ಪ್ರಮುಖ ಐಟಿ ಕಂಪನಿಗಳು, ಬನಶಂಕರಿಯಿಂದ ಬರೀ 2.8 ಕಿಮೀ ದೂರದಲ್ಲಿವೆ. ಹೀಗಾಗಿಯೇ ಆ ಭಾಗದ ಐಟಿ ಉದ್ಯೋಗಿಗಳು ಬನಶಂಕರಿ ಭಾಗದಲ್ಲಿ ಮನೆ ಮಾಡುವ ಕಾರಣ ಬೇಡಿಕೆ ಹೆಚ್ಚಾಗಿ, ಬಾಡಿಗೆ ಗಗನಕ್ಕೆರಿದೆ. ಕೆಆರ್ ಪುರಂ ಅಂತಾರಾಷ್ಟ್ರೀಯ ಟೆಕ್ ಪಾರ್ಕ್ ಸಮೀಪವು ಇದೇ ಸ್ಥಿತಿ ಇದೆ.
ರಾಮಮೂರ್ತಿ ನಗರ, ಕೆ.ಆರ್. ಪುರಂ, ವೈಟ್‌ಫೀಲ್ಡ್ ಮತ್ತು ಹೊರ ವರ್ತುಲ ರಸ್ತೆ (ORR) ಮೂಲಕ ಉದ್ಯೋಗಿಗಳು ಕಂಪನಿಗೆ ತೆರಳುತ್ತಾರೆ. ನಿತ್ಯ ಓಡಾಟ ದುಸ್ತರ ಹಿನ್ನೆಲೆ ಕಚೇರಿ ಸಮೀಪವೆ ಮನೆ ಮಾಡುವುದು ಸಾಮಾನ್ಯವಾಗಿದೆ. ಇದರಿಂದ ಸಂಚಾರ ಕಿರಿಕಿರಿ ತಪ್ಪಲಿದೆ.
ಬಾಡಿಗೆ ಮನೆ ಸಿಗುವುದು ವಿರಳದ ಸ್ಥಿತಿ
ಹಾಲಿ ಇರುವ ಬಾಡಿಗೆ ಮನೆಗಳು ತುಂಬಿವೆ. ಮೊದಲೆಲ್ಲ Tolet ಬೋರ್ಡ್ ಕಾಣಿಸುತ್ತಿದ್ದವು. ಈಗ ಅಲ್ಲೊಂದು ಇಲ್ಲೊಂದು ಬಾಡಿಗೆ ಮನೆ ಖಾಲಿ ಇದೆ ಎಂದು ಕಂಡರೆ ಅಪರೂಪ ಎಂಬಂತಾಗಿದೆ. ಸಿದ್ಧಮನೆಗಳು ಕೊರತೆ ಇದ್ದಾಗ ಮತ್ತು ಬೇಡಿಕೆ ಹೆಚ್ಚಿದ್ದಾಗ ಸಾಮಾನ್ಯವಾಗಿ ಬಾಡಿಗೆ ದರ ಸಹ ಹೆಚ್ಚಾಗುತ್ತಿದೆ. ಬಾಡಿ ಮನೆಗೆ ಹೋಗುವವರು ಹಣದುಬ್ಬರ, ಬೆಲೆ ಏರಿಕೆಯ ಬಿಸಿ ಎದುರಿಸುತ್ತಿದ್ದಾರೆ.
ವರ್ಷ ಹಿಂದೆ ಬಾಡಿಗೆ ಎಷ್ಟಿತ್ತು? ಈಗ ಎಷ್ಟಿದೆ?
ನಗರದಲ್ಲಿ ಕೆಲವು ತಿಂಗಳುಗಳಿಂದ ಬಾಡಿಗೆ ಮನೆ ವಿಚಾರದಲ್ಲಿ ಮಹತ್ವದ ಬದಲಾವಣೆಗಳು ಆಗಿವೆ. ಕೆ.ಆರ್.ಪುರಂ, ಬನಶಂಕರಿ, ಎಲೆಕ್ಟ್ರಾನಿಕ್ ಸಿಟಿ, ರಾಮಮೂರ್ತಿನಗರದಂತಹ ಪ್ರದೇಶಗಳಲ್ಲಿ ಬಾಡಿಗೆ ಹೆಚ್ಚಾಗಿವೆ. 2BHK ಫ್ಲಾಟ್‌ನ ಸರಾಸರಿ ಬಾಡಿಗೆ ಸದ್ಯಕ್ಕೆ ರೂ.24,000- 26,000 ರೂ. ಇದೆ. ಇದೇ ಮನೆಗೆ ಕಳೆದ ವರ್ಷ ಕೇವಲ 18000 ರೂಪಾಯಿ ಇತ್ತು ಎಂದು ನೋ ಬ್ರೋಕರ್ ಮುಖ್ಯಸ್ಥರೊಬ್ಬರು ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಕೆ.ಆರ್.ಪುರಂನಲ್ಲಿ 2BHK ಮನೆಯ ಮಾಸಿಕ ಬಾಡಿಗೆ ಸರಾಸರಿ ರೂ.20,000ರಿಂದ 22,000 ರೂ.ಗೆ ಹೆಚ್ಚಾಗಿದೆ. ಇದು ಕಳೆದ ವರ್ಷ 14,500 ರೂ.ನಷ್ಟಿತ್ತು. ರಾಮಮೂರ್ತಿನಗರದಲ್ಲಿ ಬಾಡಿಗೆ 17,200 ರೂಪಾಯಿಯಿಂದ ಸದ್ಯ ರೂ.24,000 ರಿಂದ 27,000 ರೂ.ಆಗಿದೆ. ನೀವು ಬಾಡಿಗೆ ಮನೆ ಮಾಡುವ ಮುನ್ನ ಯಾವ ಪ್ರದೇಶದಲ್ಲಿ ಮಾಡಿದರೆ ಒಳಿತ ಎಂಬುದನ್ನು ಗಮನಿಸಿ ಮಾಡಬೇಕು. ಐಟಿ ಉದ್ಯೋಗಿಗಳಿಗೆ ಲಕ್ಷ ಲಕ್ಷ ಸಂಬಳ ತೆಗೆದುಕೊಳ್ಳುವವರೆ ಖರ್ಚು ವೆಚ್ಚದಿಂದ ಕುಗ್ಗಿ ಹೋಗಿರುತ್ತಾರೆ. ಇನ್ನೂ ಖಾಸಗಿ, ಕಾರ್ಪೋರೇಷನ್ ಕಂಪನಿ ಉದ್ಯೋಗಿಗಳ ಪಾಡು ಹೇಳತೀರದಾಗಿರುತ್ತದೆ.












Click it and Unblock the Notifications