ಕಳೆದ 10 ವರ್ಷಗಳಲ್ಲೇ ಜುಲೈನಲ್ಲಿ ಅತ್ಯಧಿಕ ಮಳೆ ದಾಖಲಿಸಿದ ಬೆಂಗಳೂರು
ಬೆಂಗಳೂರು, ಜುಲೈ 26: ಈ ಬಾರಿ ನೈಋತ್ಯ ಮುಂಗಾರು ಅಬ್ಬರಿಸುತ್ತಿದ್ದು, ಬೆಂಗಳೂರು ನಗರ ಪ್ರದೇಶದಲ್ಲಿ ಜುಲೈ ತಿಂಗಳಿನಲ್ಲಿ ಕಳೆದ ಹತ್ತು ವರ್ಷಗಳಲ್ಲೇ ಅತ್ಯಧಿಕ ಮಟ್ಟದಲ್ಲಿ ಮಳೆ ಪ್ರಮಾಣ ದಾಖಲಾಗಿದೆ.
ಸೋಮವಾರ ಬೆಳಿಗ್ಗೆ 8.30ರವರೆಗೂ 59.8 ಎಂಎಂ ಮಳೆ ಪ್ರಮಾಣ ದಾಖಲಾಗಿದ್ದು, ಜುಲೈ ತಿಂಗಳಿನಲ್ಲಿ ಬೆಂಗಳೂರು ನಗರ ಪ್ರದೇಶ 203.3 ಮಿ.ಮೀ ಮಳೆ (ಸರಾಸರಿಗಿಂತ 80% ಹೆಚ್ಚು ಮಳೆ) ಪಡೆದಿದೆ.
ಇದರೊಂದಿಗೆ, "ಮುಂದಿನ ಐದು ದಿನಗಳ ಕಾಲ ಬೆಂಗಳೂರಿನಲ್ಲಿ ಮಳೆ ಮುಂದುವರೆಯಲಿದೆ" ಎಂದು ಬೆಂಗಳೂರು ಹವಾಮಾನ ಇಲಾಖೆ ನಿರ್ದೇಶಕ ಸಿ.ಎಸ್. ಪಾಟೀಲ್ ತಿಳಿಸಿದ್ದಾರೆ.

ಜೂನ್ ತಿಂಗಳಿನಲ್ಲಿ ರಾಜ್ಯದಲ್ಲಿ 223.3 ಮಿ.ಮೀ ಮಳೆ ದಾಖಲಾಗಿತ್ತು. ಆದರೆ ಸಾಮಾನ್ಯವಾಗಿ ಹೆಚ್ಚಿನ ಮಳೆ ದಾಖಲಾಗುವ ಪ್ರದೇಶಗಳಾದ ತುಮಕೂರು ಹಾಗೂ ಬೆಂಗಳೂರು ನಗರ ಪ್ರದೇಶದಲ್ಲಿ ಕಡಿಮೆ ಮಳೆ ದಾಖಲಾಗಿತ್ತು. ಇದೀಗ ಜುಲೈನಲ್ಲಿ ಅತ್ಯಧಿಕ ಮಳೆ ದಾಖಲಾಗಿದೆ.
ಜೂನ್ 6ರಂದು ಮುಂಗಾರು ರಾಜ್ಯ ಪ್ರವೇಶಿಸಿದ್ದು, ನಂತರ ಇಡೀ ರಾಜ್ಯವನ್ನು ಮುಂಗಾರು ಆವರಿಸಿತ್ತು. ಜೂನ್ ತಿಂಗಳ ಮೊದಲ ವಾರದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗಿತ್ತು. ಆದರೆ ಜೂನ್ ಮಧ್ಯಭಾಗದಲ್ಲಿ ಏಕಾಏಕಿ ಮಳೆ ಕಡಿಮೆಯಾಯಿತು. ಜುಲೈ ಎರಡನೇ ವಾರ ಕಳೆಯುತ್ತಿದ್ದಂತೆ ರಾಜ್ಯದಲ್ಲಿ ಉತ್ತಮ ಪ್ರಮಾಣದಲ್ಲಿ ಮಳೆಯಾಗಿದೆ.












Click it and Unblock the Notifications