ಬೆಂಗಳೂರು: ಕಾಲ್ತುಳಿತಕ್ಕೆ ಸಿಕ್ಕ “ವಿವೇಕ ಭ್ರಷ್ಟತೆ” !
ಬೆಂಗಳೂರು ಕರಾಳ ಬುಧವಾರಕ್ಕೆ ಸಾಕ್ಷಿಯಾಗಿತ್ತು. ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಹಲವು ಕನ್ನಡಿಗರು ಬರೆದುಕೊಂಡಿದ್ದಾರೆ. ಕೆಲವು ವಿಶೇಷ ಬರಹಗಳು ಇಲ್ಲಿವೆ. ಕರ್ನಾಟಕ ಹಾಗೂ ಬೆಂಗಳೂರು ಹಿಂದೆಂದಿಗಿಂತಲೂ ಕರಾಳ ದಿನಕ್ಕೆ ಸಾಕ್ಷಿಯಾಗಿದೆ. 11 ಜನ ದಾರುಣವಾಗಿ ಸಾವನ್ನಪ್ಪಿದ್ದಾರೆ. ಕರ್ನಾಟಕದಲ್ಲಿ ಹಿಂದೆಂದೂ ನಡೆಯದ ದುರಂತ ಇದಾಗಿದೆ. ಈ ಬಗ್ಗೆ ಹಲವು ಕನ್ನಡಿಗರು ಕಂಬನಿ ಮಿಡಿದ್ದಾರೆ.
ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿರುವ ಪತ್ರಕರ್ತರಾದ ರಾಜಾರಾಂ ತಲ್ಲೂರು ಅವರು, 11 ಜನರನ್ನು ಬಲಿ ತೆಗೆದುಕೊಂಡ ನಿನ್ನೆಯ ಗುಂಪು ವರ್ತನೆಯಲ್ಲಿ ತಪ್ಪು ಯಾರದು? ಬೇಜವಾಬ್ದಾರಿ ಯಾರದು? ಎಂಬ ಪ್ರಶ್ನೆಗಳೆಲ್ಲ ಏಳುತ್ತಿವೆ. ರಾಜಕೀಯ ರಣಹದ್ದುಗಳು ಇಲ್ಲೂ ತಮ್ಮ ಮಾಂಸದ ಪಾಲಿಗೆ ಆಗಸದಲ್ಲಿ ಸುತ್ತಾಡುತ್ತಿವೆ. ಸರ್ಕಾರ ಬೀಸುವ ದೊಣ್ಣೆ ತಪ್ಪಿಸಿಕೊಳ್ಳುವ ಆತುರದಲ್ಲಿದೆ. ನಮ್ಮಲ್ಲಿ ಮತ್ತೆಮತ್ತೆ ಹೀಗೇಕೆ ಆಗುತ್ತಿರುತ್ತದೆ ?

ಜನಸಂಖ್ಯೆಯ ವೈಪರೀತ್ಯದ ಕಾರಣದಿಂದಾಗಿ, ನಮ್ಮಲ್ಲೊಂದು ವಿಚಿತ್ರ ಮಾನಸಿಕತೆ ಇದೆ. "ಇಲ್ಲಿ ಕಾನೂನು ಉಳ್ಳವರ ಮನೆಯ ಸಾಕು ಪ್ರಾಣಿ; ಹಾಗಾಗಿ ಬಲಿಷ್ಟರು ಮಾತ್ರ ಬದುಕಬಲ್ಲರು" ಎಂದು ನಂಬಿರುವ ಮನಸ್ಥಿತಿ ಅದು. ಇದೇನೂ ಹೊಸದಾಗಿ ಮೂಡಿರುವಂತಹದಲ್ಲ. ಸಿಕ್ಕವರಿಗೆ ಸೀರುಂಡೆ ನಮ್ಮ ರಕ್ತದಲ್ಲೇ ಇದೆ. ಒಂದು ಫೈನಾನ್ಸ್ /ಚಿಟ್‌ಫಂಡ್ ಮುಳುಗಿದಾಗ ಅಲ್ಲಿಗೆ ನುಗ್ಗಿ ಸಿಕ್ಕಿದ್ದನ್ನು ಎತ್ತಿ ಸಾಗಿಸುವ ಗುಂಪು, ನೋಟು ರದ್ಧತಿ ಕಾಲದಲ್ಲಿ 2000ದ ನೋಟಿಗೆ ಸರತಿ ಸಾಲಿನಲ್ಲಿ ಜೀವ ಕಳೆದುಕೊಂಡವರು, ಕೋವಿಡ್ ಕಾಲದಲ್ಲಿ "ಕಳ್ಳ ಹಾದಿಯಲ್ಲಿ" ಆಕ್ಸಿಜನ್ ಸಿಲಿಂಡರ್ ಗಳಿಸಿಕೊಂಡವರು... ಹೀಗೆ ನೂರಾರು ನಿದರ್ಶನಗಳನ್ನು ಕೊಡುತ್ತಾ ಹೋಗಬಹುದು ಎಂದು ಹೇಳಿದ್ದಾರೆ.
ಇದು ವಿವೇಕದಲ್ಲಿರುವ ಭ್ರಷ್ಟ ಸ್ಥಿತಿ. ಎಂತಹ ಸಜ್ಜನ, ಸುಶಿಕ್ಷಿತ ಕೂಡ ಅವಕಾಶ ಸಿಕ್ಕಿದರೆ, ಸಾರ್ವಜನಿಕ ಸರತಿ ಸಾಲುಗಳಲ್ಲಿ ಲೈನ್ ಬ್ರೇಕ್ ಮಾಡಿ ಆನಂದ ಅನುಭವಿಸಬಲ್ಲರು (ವೈದ್ಯರ ಕ್ಲಿನಿಕ್‌ಗಳಲ್ಲಿ, ಏರ್ಪೋರ್ಟ್‌ಗಳಲ್ಲಿ... ಇತ್ಯಾದಿ). ಇದು ಜೆನ್ X ಮನಸ್ಥಿತಿ. ಇದರೊಂದಿಗೆ, ನಮ್ಮ ಜೆನ್ Y ಹಾಗೂ Zಗಳು ತಮ್ಮ ಶಿಕ್ಷಣದ ವಿಧಾನದ ಕಾರಣಕ್ಕೆ, ತಮಗಿರುವ ಡಿಜಿಟಲ್ ಎಕ್ಸ್‌ಪೋಷರ್ ಕಾರಣಕ್ಕೆ, ಸಾಂಸ್ಕೃತಿಕ ಪೊಳ್ಳುತನದ ಕಾರಣಕ್ಕೆ, ತಮ್ಮದಲ್ಲದ ಸಾಮಾಜಿಕ ಮಾದರಿಗಳ ಅನುಕರಣೆಯ ಕಾರಣಕ್ಕೆ, ತಮ್ಮ ಸಾಮಾಜಿಕ ಬದುಕಿನ ಒಬ್ಬಂಟಿತನ- ಕೂಡು ಕುಟುಂಬದ ಆರೈಕೆ ಇಲ್ಲದಿರುವಿಕೆ- ಹೊಂದಿಕೊಂಡು ಬಾಳುವುದನ್ನು ಕಲಿತಿರದ ಕಾರಣಕ್ಕೆ... ಹೀಗೆ ಹತ್ತಾರು ಕಾರಣಗಳಿಗೆ ತಮ್ಮ "ಅಟೆನ್ಷನ್ ಸ್ಪ್ಯಾನ್"ಅನ್ನು ದಿನಕಳೆದಂತೆ ಸಣ್ಣದುಗೊಳಿಸಿಕೊಳ್ಳುತ್ತಿದ್ದಾರೆ. ಅವರ ಸಂತೋಷ-ದುಃಖ, ಸಿಟ್ಟು, ಬೇಸರ, ಸಂಭ್ರಮ ಎಲ್ಲವೂ ಕ್ಷಣಿಕ ಮತ್ತು ಆಸ್ಫೋಟಕ ಎಂದು ಬರೆದುಕೊಂಡಿದ್ದಾರೆ.
ಮುಂದುವರಿದು ಇಂತಹದೊಂದು X,Y,Zಗಳ ಲೀಥಲ್ ಕಾಂಬಿನೇಷನ್ ನಿನ್ನೆಯ ದುರಂತದ ಮೂಲದಲ್ಲಿದೆ. ಮೊನ್ನೆ ಮ್ಯಾಚ್ ದಿನ ತಡರಾತ್ರಿಯೇ ಸಂಭ್ರಮ ಸಕಾರಣವಿಲ್ಲದೇ ಉತ್ತುಂಗಕ್ಕೆ ತಲುಪಿತ್ತು. ರಾಜಕಾರಣ ಇದನ್ನು ಎನ್‌ಕ್ಯಾಷ್ ಮಾಡಿಕೊಳ್ಳಬಯಸಿತು. 35,000 ಸಾಮರ್ಥ್ಯದ ಸ್ಟೇಡಿಯಂಗೆ 2ಲಕ್ಷಕ್ಕೂ ಮಿಕ್ಕಿ ಜನ ಪ್ರವೇಶಿಸಲು ಸಿದ್ಧರಾಗಿದ್ದಾರೆ ಎಂಬುದನ್ನು ಕಂಡ ಬಳಿಕವಾದರೂ ಕಾನೂನು-ವ್ಯವಸ್ಥೆಯ ನಿಯಂತ್ರಣದ ಹೊಣೆ ಹೊತ್ತವರು ಎಚ್ಚರಗೊಳ್ಳಬಹುದಿತ್ತು. ಅದು ಆಗಲಿಲ್ಲ ಎಂದು ಹೇಳಿದ್ದಾರೆ.
ರಾಜಕೀಯವಾಗಿ ಇದನ್ನು ಇಂಟೆಲಿಜೆನ್ಸ್ ವೈಫಲ್ಯ, ತೀರ್ಮಾನದ-ವ್ಯವಸ್ಥೆಯ ವೈಫಲ್ಯ ಎನ್ನಲಾಗುತ್ತಿದೆ! ನಮ್ಮ ಇಂಟೆಲಿಜೆನ್ಸ್ ಏನೂ ರಿಯಲ್ ಟೈಮ್ ವೇಗದ್ದಲ್ಲ. ಇಂಟೆಲಿಜೆನ್ಸ್ ರಾಜ್ಯದ್ದು ಮಾತ್ರ ಅಲ್ಲ - ಭಾರತ ಸರ್ಕಾರದ್ದೂ ಇದೆ. ಸಕಾಲದಲ್ಲಿ ಎಚ್ಚರಿಸುವ ಕೆಲಸವನ್ನು ಎರಡೂ ಮಾಡಿಲ್ಲ. ಗೊಂದಲಗಳಿಗೆ ಎಲ್ಲರೂ ಇನ್ನಷ್ಟು ತುಪ್ಪ ಸುರಿಯುತ್ತಿದ್ದಾರೆಯೇ ಹೊರತು, ಯಾರಿಗೂ ಜನರ ಜೀವ ಅಮೂಲ್ಯ ಅನ್ನಿಸುತ್ತಿಲ್ಲ.
ಇದಕ್ಕೆ ಪರಿಹಾರ ಏನು?
* ಕ್ರೈಸಿಸ್‌ಗಳನ್ನೆಲ್ಲ "ಜುಗ್ಗಡ್‌ತಂತ್ರ"ದ ಮೂಲಕವೇ ನಿಭಾಯಿಸುವುದು ಭಾರತದ ಅಭ್ಯಾಸ. ಕೋವಿಡ್ ಕಾಲದಲ್ಲಿ ಇದನ್ನು ಸ್ಪಷ್ಟವಾಗಿ ಗುರುತಿಸಲಾಗಿದೆ. "ತಯಾರಾಗಿಲ್ಲದಿರುವುದೇ ನಮ್ಮ ತಯಾರಿ" ಎಂದು ನಂಬಿಕೊಂಡು ನಾವು ಇಲ್ಲಿಯ ತನಕ ಬಂದಿದ್ದೇವೆ. ಇನ್ನಾದರೂ ಮೂಲಭೂತ ಸರ್ವೈವಲ್ ಕೌಶಲಗಳನ್ನು, ಸಾರ್ವಜನಿಕ ಶಿಸ್ತುಗಳನ್ನು, ಸಾಮಾಜಿಕ ಎಚ್ಚರಗಳನ್ನು ನಮ್ಮ ಪ್ರಾಥಮಿಕ ಶಿಕ್ಷಣದ ಭಾಗ ಆಗಿಸಬೇಕು.
* ನಮ್ಮ ಸಾರ್ವಜನಿಕ ವ್ಯವಸ್ಥೆ ವಿವೇಕ ಭ್ರಷ್ಟತೆಗೆ ಅವಕಾಶ ತೆರೆಯಬಾರದು. ಹಿರಿಯಕ್ಕನ ಚಾಳಿಯೇ ಮನೆಮಂದಿಯದೆಲ್ಲ. ಜನ ಗುಂಪಾದಾಗ ಆ ಗುಂಪಿಗೆ ಮೆದುಳು ಇರುವುದಿಲ್ಲ. ಆ ಗುಂಪಿನ ನಿರ್ವಹಣೆ ಮಾಡಬೇಕಾದುದು ಸಾರ್ವಜನಿಕ ಆಡಳಿತ ವ್ಯವಸ್ಥೆಯ ವಿವೇಕ. ಇದು ಪರಿಣಾಮಕಾರಿ ಮತ್ತು ಉತ್ತರದಾಯಿ ಕೂಡ ಆಗಿರಬೇಕು. ಆಳುವವರಲ್ಲಿ ಇದು ಯಾವುದೇ ಕಾರಣಕ್ಕೂ ಕೊರತೆ ಆಗಬಾರದು. ಆಪತ್ತಿನ ಸ್ಥಿತಿಗಳಲ್ಲಿ ರಾಜಕಾರಣ ಮಾಡುವುದು ಅತ್ಯಂತ ಹೀನ. ಶಾಸಕಾಂಗ ಎಂದರೆ ಆಡಳಿತ ಪಕ್ಷ ಮಾತ್ರವಲ್ಲ, ವಿರೋಧ ಪಕ್ಷ ಕೂಡ ಎಂಬ ಅರಿವು ಇರುವವರು ನಮ್ಮನ್ನು ಪ್ರತಿನಿಧಿಸಬೇಕು.
ಇದೆರಡೂ ಸಾಧ್ಯ ಆದರೆ, ಯಾರೂ ಬೇಕುಬೇಕೆಂದು ಹೋಗಿ ಕೈಕಾಲಡಿ ಬಿದ್ದು ಸಾಯಬಯಸುವುದಿಲ್ಲ. ಅಷ್ಟು ಅರ್ಥ ಮಾಡಿಕೊಳ್ಳಿ ಎಂದಿದ್ದಾರೆ.
ಕವಿ ರಾಜೇಂದ್ರ ಪ್ರಸಾದ್ ಅವರು, Absolutely.. ಡಿ ಕೆ ಶಿವಕುಮಾರ್ ಅವರ ಪ್ರಚಾರ ಪ್ರಿಯತೆಯ ಫಲ ಎಂದು ಹೇಳಿದ್ದಾರೆ.












Click it and Unblock the Notifications