ಬೆಂಗಳೂರಿನಲ್ಲಿ ಎಷ್ಟು ಪ್ರವಾಹ ಪೀಡಿತ ಪ್ರದೇಶಗಳಿವೆ?; ಬಿಬಿಎಂಪಿ ಆಯುಕ್ತರು ನೀಡಿದ್ರು ಭಯಾನಕ ಮಾಹಿತಿ
ಭಾನುವಾರ, ಮೇ 21ರಂದು ರಾಜಧಾನಿ ಬೆಂಗಳೂರಿನಲ್ಲಿ ಕೇವಲ 1 ಗಂಟೆ ಸುರಿದ ಭಾರೀ ಮಳೆಗೆ ಉಂಟಾದ ಅವಾಂತರಗಳು ಒಂದೆರಡಲ್ಲ. ಒಂದೇ ದಿನ ಇಬ್ಬರು ಸಾವನ್ನಪ್ಪಿದ್ದಾರೆ. ಕೆಆರ್ ಸರ್ಕಲ್‌ನ ಅಂಡರ್‌ಪಾಸ್‌ನಲ್ಲಿ ಸಿಲುಕಿ ಯುವತಿ ಸಾವನ್ನಪ್ಪಿದರೆ, ರಾಜಕಾಲುವೆಯಲ್ಲಿ ಕೊಚ್ಚಿಹೋಗಿ ಯುವಕನೊಬ್ಬ ಮೃತನಾಗಿದ್ದಾನೆ.
ಇಷ್ಟೇ ಅಲ್ಲದೇ ಬೆಂಗಳೂರು ನಗರದಲ್ಲಿ ಹಲವು ಮರಗಳು, ಮನೆಗಳು ಹಾಗೂ ವಿದ್ಯುತ್ ಕಂಬಗಳು ಉರುಳಿ ಅಪಾರ ನಷ್ಟಕ್ಕೆ ಮಳೆ ಕಾರಣವಾಗಿದೆ.

ಈ ಕುರಿತು ಮಾತನಾಡಿರುವ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್, "ಭಾನುವಾರದ ಮಳೆಗೆ ದೊಡ್ಡ ಅವಘಡ ಸಂಭವಿಸಿದೆ. ಆದ್ದರಿಂದ ಬೆಂಗಳೂರಿನ ಎಲ್ಲಾ ಅಂಡರ್‌ಪಾಸ್‌ಗಳ ಆಡಿಟ್ ನಡೆಸುತ್ತಿದ್ದೇವೆ. ವರದಿ ಬಂದ ಬಳಿಕ ಸಂಚಾರ ಮಾಡಲು ಸೂಕ್ತವಿಲ್ಲದಿರುವ ಅಂಡರ್‌ಪಾಸ್‌ಗಳನ್ನು ಮುಚ್ಚುತ್ತೇವೆ," ಎಂದು ತಿಳಿಸಿದರು.
ಆದರೆ, ಬೆಂಗಳೂರಿನಲ್ಲಿ ಇನ್ನೂ 25 ಸೂಕ್ಷ್ಮ ಪ್ರದೇಶಗಳಿದ್ದು, ಆ ಪ್ರದೇಶಗಳಲ್ಲಿ ಹೆಚ್ಚಿನ ಮಳೆ ಬಂದರೆ, ಪ್ರವಾಹ ಪರಿಸ್ಥಿತಿ ಉಂಟಾಗಲಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಮಾಹಿತಿ ನೀಡಿದರು.

"ಭಾನುವಾರ ಮಧ್ಯಾಹ್ನದ ನಂತರ ಸಂಜೆಯೊಳಗೆ 50 ಮಿ.ಮೀ.ಗಿಂತ ಹೆಚ್ಚಿನ ಮಳೆ ಸುರಿದಿದೆ. ಈ ವೇಳೆ ಕೆ.ಆರ್. ಸರ್ಕಲ್‌ನ ಅಂಡರ್‌ಪಾಸ್‌ನಲ್ಲಿ ಕಾರು ಸಿಲುಕಿ ಯುವತಿ ಸಾವನ್ನಪ್ಪಿದ್ದಾಳೆ. ಹೀಗಾಗಿ ನಗರದ ಎಲ್ಲ ಅಂಡರ್‌ಪಾಸ್‌ಗಳ ಆಡಿಟ್ ನಡೆಸುತ್ತಿದ್ದೇವೆ. ರೈಲ್ವೆ ಅಂಡರ್‌ಪಾಸ್‌ಗಳೂ ಸೇರಿದಂತೆ 18 ಕಡೆ ತಕ್ಷಣ ಕ್ರಮ ತೆಗೆದುಕೊಳ್ಳುತ್ತೇವೆ," ಎಂದು ತುಷಾರ್ ಗಿರಿನಾಥ್ ಹೇಳಿದರು.
"ಇನ್ನು ಮಹಾಲಕ್ಷ್ಮಿ ಲೇಔಟ್‌ನಲ್ಲಿ ರಾಜಕಾಲುವೆ ಕೆಲಸ ನಡೆಯುತ್ತಿದ್ದ ಹಿನ್ನೆಲೆಯಲ್ಲಿ ಯುವಕನೊಬ್ಬ ಮೃತಪಟ್ಟಿದ್ದಾನೆ. ಅಲ್ಲಿ 20 ಮನೆಗಳಿಗೆ ಮಳೆ ನೀರು ನುಗ್ಗಿದೆ. ಕೆ.ಆರ್. ಸರ್ಕಲ್‌ನಲ್ಲಿ ಮತ್ತು ಇತರ ಅಂಡರ್‌ಪಾಸ್‌ಗಳಲ್ಲಿ ನೀರು ನಿಂತುಕೊಳ್ಳಲು ಕಾರಣವಿದೆ. ಬಿರುಗಾಳಿ ಹಾಗೂ ಆಲಿಕಲ್ಲು ಮಿಶ್ರಿತ ಮಳೆಯಾದ ಕಾರಣ ಎಲೆಗಳು, ಕಸ-ಕಡ್ಡಿ ನೀರಿನೊಂದಿಗೆ ಹರಿದುಬಂದು ಅಂಡರ್‌ಪಾಸ್‌ನಲ್ಲಿ ಸಿಲುಕಿಕೊಂಡಿವೆ".
"ಈ ವೇಳೆ ನೀರು ಹರಿದುಹೋಗುವ ಜಾಗದಲ್ಲಿ ಎಲೆಗಳು ಬ್ಲಾಕ್ ಮಾಡಿದ್ದರಿಂದ ನೀರು ನಿಂತು ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಅದೇ ರೀತಿ ಕೆ.ಆರ್. ಸರ್ಕಲ್ ಅಂಡರ್‌ಪಾಸ್‌ನಲ್ಲಿ ದುರಂತ ಸಂಭವಿಸಿದೆ," ಎಂದು ತುಷಾರ್ ಗಿರಿನಾಥ್ ಮಾಹಿತಿ ನೀಡಿದರು.

ಸತತ ಮಳೆ ಬಂದರೆ ಬೆಂಗಳೂರು ಮುಳುಗಡೆ
"ಕೆ.ಆರ್. ಸರ್ಕಲ್ ಅಂಡರ್‌ಪಾಸ್‌ನಲ್ಲಿ ನಡೆದ ಘಟನೆಗೆ ಹಲವು ಕಾರಣಗಳಿವೆ. ಸುತ್ತಮುತ್ತಲಿನ ಪ್ರದೇಶದಿಂದ ಮಳೆ ನೀರು ಹೆಚ್ಚಾಗಿ ಬರಲಿದೆ. ಇದರಿಂದ ಅಂಡರ್‌ಪಾಸ್‌ಗಳಲ್ಲಿ ನೀರು ನಿಲ್ಲುತ್ತದೆ. ಪೊಲೀಸ್ ಇಲಾಖೆಯಿಂದ ಸೂಕ್ಷ್ಮ ಹಾಗೂ ಅತಿ ಸೂಕ್ಷ್ಮ ಪ್ರದೇಶಗಳಲ್ಲಿ ದುರಸ್ತಿ ಕಾರ್ಯ ಮಾಡಲಾಗಿದೆ," ಎಂದು ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್ ತಿಳಿಸಿದರು.
ಈಗಾಗಲೇ 115 ಕಡೆ ದುರಸ್ತಿ ಕಾರ್ಯ ಮಾಡಲಾಗಿದ್ದು, ಅಲ್ಲಿ ಯಾವುದೇ ಸಮಸ್ಯೆ ಕಂಡುಬಂದಿಲ್ಲ. ಇನ್ನೂ 25 ಸೂಕ್ಷ್ಮ ಪ್ರದೇಶಗಳಲ್ಲಿ ಸರಿಪಡಿಬೇಕಿದೆ. ಇಲ್ಲಿ ಹೆಚ್ಚಿನ ಮಳೆ ಬಂದರೆ ಪ್ರವಾಹ ಪರಿಸ್ಥಿತಿ ಎದುರಾಗಲಿದೆ. ನಾವು ಮುಂಜಾಗ್ರತಾ ಕ್ರಮ ಕೈಗೊಂಡಿದ್ದೇವೆ ಎಂದು ಮಾಹಿತಿ ನೀಡಿದರು.
ಕೋರ್ಟ್‌ನಲ್ಲಿ 607 ಒತ್ತುವರಿ ಪ್ರಕರಣಗಳು
"ಬೆಂಗಳೂರಿನಲ್ಲಿ ರಾಜಕಾಲುವೆ ಕೆಲಸಗಳು ನಿರಂತರವಾಗಿ ನಡೆಯುತ್ತಿವೆ. ರಾಜಕಾಲುವೆಯ ದುರಸ್ತಿಯ ನಂತರ ನಗರದಲ್ಲಿ ದೊಡ್ಡ ಪ್ರಮಾಣದ ಮಳೆ ಬಂದರೂ, ಈ ಹಿಂದೆ ನಡೆಯುತ್ತಿದ್ದ ಹಾಗೆ ಹೆಚ್ಚಿನ ಅವಘಡಗಳು ಸಂಭವಿಸಿಲ್ಲ. ಬಿಬಿಎಂಪಿ ವ್ಯಾಪ್ತಿಯಲ್ಲಿ 607 ಸ್ಥಳಗಳಲ್ಲಿ ರಾಜಕಾಲುವೆ ಒತ್ತುವರಿ ಆಗಿರುವ ಕುರಿತು ನ್ಯಾಯಾಲಯಗಳಲ್ಲಿ ಪ್ರಕರಣ ನಡೆಯುತ್ತಿವೆ".
"ಹೀಗಾಗಿ, ಅಂತಹ ಪ್ರದೇಶಗಳಲ್ಲಿ ತೆರವು ಕಾರ್ಯಾಚರಣೆಗೆ ವಿಳಂಬವಾಗುತ್ತಿದೆ. ಉಳಿದ 500 ಕಡೆ ರಾಜಕಾಲುವೆ ಒತ್ತುವರಿಯನ್ನು ತೆರವು ಮಾಡಲಾಗುತ್ತಿದೆ. ಮಹಾದೇವಪುರ ವಲಯದಲ್ಲಿ ಈಗಾಗಲೇ ಒತ್ತುವರಿ ತೆರವು ಕಾರ್ಯ ನಡೆಯುತ್ತಿದೆ," ಎಂದು ತುಷಾರ್ ಗುರುನಾಥ್ ಹೇಳಿದರು.












Click it and Unblock the Notifications