Bengaluru rain: ಮೇ 8ರವರೆಗೆ ನಗರಕ್ಕೆ ಭಾರಿ ಮಳೆ , ನೆನ್ನೆ ಬಿದ್ದ ಜೋರು ಮಳೆಗೆ ನಲುಗಿದ ಪಶ್ಚಿಮ ವಲಯ
ಬೆಂಗಳೂರು, ಮೇ 05: ಚಂಡಮಾರುತ 'ಮೋಚಾ' ಪ್ರಭಾವದಿಂದಾಗಿ ರಾಜ್ಯ ರಾಜಧಾನಿ ಬೆಂಗಳೂರು ನೆನ್ನೆ ರಾತ್ರಿ ಸುರಿದ ಜೋರು ಮಳೆಗೆ ತತ್ತರಿಸಿದೆ. ಪಶ್ಚಿಮ ವಲಯದ ಬಡಾವಣೆಗಳಲ್ಲಿನ ತಗ್ಗು ಪ್ರದೇಶಗಳಲ್ಲಿ ನೀರು ನುಗ್ಗಿದೆ. ಅನೇಕ ಕಡೆಗಳಲ್ಲಿ ರಸ್ತೆಗಳು ಕೆರೆಯಂತಾಗಿದ್ದವು. ಈ ಧಾರಾಕಾರ ಮಳೆ ವಾತಾವರಣ ಮೇ 8ರವರೆಗೆ ಹೀಗೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಬೆಂಗಳೂರಿನಲ್ಲಿ ಗುರುವಾರ ರಾತ್ರಿ ಕಾಟನ್‌ಪೇಟೆಯಲ್ಲಿ ಅತ್ಯಧಿಕ 58.5 ಮಿಲಿ ಮೀಟರ್ ಮಳೆ ದಾಖಲಾಗಿದೆ. ಗಾಳಿ ಸಹಿತ ಬಂದ ಜೋರು ಮಳೆಗೆ ಬಾಗಲಗುಂಟೆ ನಿಸರ್ಗ ಗ್ರ್ಯಾಂಡ್ ಹೋಟೆಲ್ ಬಳಿ ಹಾಗೂ ಮಲ್ಲೇಶ್ವರಂ ನಾಲ್ಕನೇ ಕ್ರಾಸ್ ಬಳಿ ಒಂದು ಮರದ ಕೊಂಬೆ ಬಿದ್ದಿದೆ. ಇತ್ತ ಮಳೆಗೂ ಮುನ್ನವೇ ಕೋರಮಂಗಲದ ಮಾರವೇಲ್ ಆಸ್ಪತ್ರೆ ಬಳಿ ಮರವೊಂದು ಗಾಳಿಗೆ ಧರೆಗುರಳಿದೆ.

ನೆನ್ನೆ ಸಂಜೆ 7 ಗಂಟೆ ನಂತರ ದಿಢೀರನೆ ಜೋರು ಮಳೆ ಆರಂಭವಾಯಿತು. ಸುಮಾರು ಒಂದು ಗಂಟೆ ಕಾಲ ಎಡೆಬಿಡದೇ ಸುರಿದ ಮಳೆಗೆ ಜನಜೀವ ಅಸ್ತವೆಸ್ತವಾಯಿತು. ಮಳೆಗೆ ನಗರದ ಪಶ್ಚಿಮ ವಲಯ ವ್ಯಾಪ್ತಿಯಲ್ಲಿ ರಾತ್ರಿ ಹೆಚ್ಚು ಮಳೆ ಬಂದ ಪರಿಣಾಮ ಅಲ್ಲಿನ ಬಡಾವಣೆಗಳು ಅಕ್ಷರಶಃ ನಲುಗಿವೆ. ರಸ್ತೆಗಳಲ್ಲಿ ನೀರು ನಿಂತು ವಾಹನ ಸಂಚಾರಕ್ಕೆ ತೊಂದರೆ ಆಗಿದೆ. ಲಾಲ್‌ಬಾಗ್ ರಸ್ತೆಯಲ್ಲಿ, ಜೆ.ಸಿ,ರಸ್ತೆ, ಕೆ. ಆರ್.ಮಾರುಕಟ್ಟೆ ಪ್ರದೇಶಗಳಲ್ಲಿ ರಸ್ತೆ ಮೇಲೆ ನೀರು ನಿಂತ ವಾಹನ ದಟ್ಟಣೆ ಉಂಟಾಗಿತ್ತು.
ಬಿದ್ದ ಮಳೆ ಪ್ರಮಾಣ
ಬಿಬಿಎಂಪಿ ವ್ಯಾಪ್ತಿಯ ಪಶ್ವಿಮ ವಲಯದ ಪ್ರದೇಶಗಳಾದ ರಾಜಮಹಲ್ ಗುಟ್ಟಹಳ್ಳಿ 55 ಮಿಲಿ ಮೀಟರ್, ನಾಯಂಡಹಳ್ಳಿ 43ಮಿಲಿ ಮೀಟರ್ ಮತ್ತು ಕೆಂಗೇರಿ 42.5ಮಿಲಿ ಮೀಟರ್, ಕೆಂಗೇರಿ (2)41.5ಮಿಲಿ ಮೀಟರ್, ಹೆಮ್ಮಿಗೆಪುರ 41.5ಮಿಲಿ ಮೀಟರ್, ಸಂಪಂಗಿರಾಮನಗರ 39.5ಮಿಲಿ ಮೀಟರ್, ಕೊಟ್ಟಿಗೆಪಾಳ್ಯ 38.5 ಮಿಲಿ ಮೀಟರ್, ನಾಗಪುರ ಹಾಗೂ ರಾಜಾಜಿನಗರ 37, ಆರ್‌ಆರ್ ನಗರ 36, ಹಂಪಿನಗರ ಮತ್ತು ವಿವಿಪುರಂನಲ್ಲಿ ತಲಾ 32 ಮಿಲಿ ಮೀಟರ್ ಮಳೆ ದಾಖಲಾಗಿದೆ.

ಮೇ 8 ರವರೆಗೆ ಜೋರು ಮಳೆಗೆ ಕಾರಣ
ಬಂಗಾಳಕೊಲ್ಲಿಯ ಆಗ್ನೇಯ ಭಾಗದಲ್ಲಿ ವಾಯುಭಾರ ಕುಸಿತಗೊಂಡಿದೆ. ಇದರ ಪರಿಣಾಮವಾಗಿ ಬೆಂಗಳೂರು ಸೇರಿದಂತೆ ರಾಜ್ಯದ ಒಳನಾಡು ಜಿಲ್ಲೆಗಳಲ್ಲಿ ಭಾರೀ ಪ್ರಮಾಣದಲ್ಲಿ ಮಳೆ ಆರ್ಭಟಿಸುತ್ತಿದೆ. ಬೆಂಗಳೂರು ನಗರದಲ್ಲಿ ಮೇ 8ರವರೆಗೆ ನಿತ್ಯ ಸಂಜೆ ನಂತರ ವರುಣರಾಯ ಅಬ್ಬರಿಸಲಿದ್ದಾನೆ. ಈಗಾಗಲೇ ಮೂರು ನಾಲ್ಕು ದಿನದಿಂದ ನಗರದಲ್ಲಿ ತಂಪು ವಾತಾವರಣ ನಿರ್ಮಾಣವಾಗಿದೆ.
ಮುಂದಿನ ಮೂರು ದಿನ ತಾಪಮಾನ ಕಡಿಮೆಯಾಗಲಿದ್ದು, ಗರಿಷ್ಠ 33 ಮತ್ತು ಕನಿಷ್ಠ 22ಡಿಗ್ರಿ ಸೆಲ್ಸಿಯಸ್ ದಾಖಲಾಗುವ ನಿರೀಕ್ಷೆ ಇದೆ ಎನ್ನಲಾಗಿದೆ. ಬಂಗಾಳಕೊಲ್ಲಿಯನ್ನು ವಾಯುಭಾರದ ಕುಸಿತ ತೀವ್ರ ಸ್ವರೂಪ ಪಡೆದು ನಾಳೆ ಮೇ 6ಕ್ಕೆಅದು 'ಮೋಚಾ' ಚಂಡಮಾರುತವಾಗಿ ಬದಲಾಗಲಿದೆ. ಹೀಗಾಗಿ ಇಂದಿನಿಂದ ಮೇಳೆ ಸುರಿಯುವ ಪ್ರಮಾಣದಲ್ಲೂ ಏರಿಕೆ ಆಗುವ ಸಾದ್ಯತೆ ಇದೆ.












Click it and Unblock the Notifications