Bengaluru Rains : ಬೆಂಗಳೂರು ಮಳೆ: ಬುಧವಾರದವರೆಗೂ ಮುಂದುವರೆಯಲಿದೆ ಮಳೆ
ಬೆಂಗಳೂರು, ಡಿಸೆಂಬರ್ 13: ಬೆಂಗಳೂರಿನ ವಾತಾವರಣದಲ್ಲಿ ಮಂಗಳವಾರವೂ ಚಳಿ ಮತ್ತು ತೇವದ ಪರಿಸ್ಥಿತಿ ಮುಂದುವರೆದಿದೆ. ಈ ವಾರ ಬುಧವಾರದವರೆಗೆ ಮಳೆ ಬರುವ ಮುನ್ಸೂಚನೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.
ಶನಿವಾರ ಮುಂಜಾನೆ ತಮಿಳುನಾಡಿನ ಕರಾವಳಿಯನ್ನು ದಾಟಿದ ಮಾಂಡೌಸ್ ಚಂಡಮಾರುತದ ಪ್ರಭಾವದಿಂದ ಬೆಂಗಳೂರು ನಗರದಲ್ಲಿ ಶೀತ ವಾತಾವರಣವು ಹೆಚ್ಚು ಪ್ರಭಾವ ಬೀರಿದೆ. ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ನಿರ್ವಹಣಾ ಕೇಂದ್ರ (ಕೆಎಸ್‌ಎನ್‌ಡಿಎಂಸಿ) ದಕ್ಷಿಣ ಒಳನಾಡು ಪ್ರದೇಶ (ಎಸ್‌ಐಕೆ), ಮಲೆನಾಡು ಮತ್ತು ಕರಾವಳಿ ಜಿಲ್ಲೆಗಳಲ್ಲಿ ವ್ಯಾಪಕ ಮಳೆಯಾಗುವ ಮುನ್ಸೂಚನೆ ನೀಡಿದೆ. ಉತ್ತರ ಒಳನಾಡು ಪ್ರದೇಶದಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ.
ಚಿಕ್ಕಮಗಳೂರು, ಚಿತ್ರದುರ್ಗ, ಶಿವಮೊಗ್ಗ ಮತ್ತು ತುಮಕೂರು, ಹಾಸನ ಮತ್ತು ದಾವಣಗೆರೆಯ ಕೆಲವು ಭಾಗಗಳಲ್ಲಿ ಭಾರೀ ಮಳೆಯಾಗುವ ನಿರೀಕ್ಷೆಯಿದೆ ಎಂದು ಹವಾಮಾನ ಇಲಾಖೆ ರಾಜ್ಯ ನಕ್ಷೆ ತೋರಿಸಿದೆ. ಬೆಂಗಳೂರಿನ ಬಿಬಿಎಂಪಿ ವ್ಯಾಪ್ತಿಯಲ್ಲಿ ವ್ಯಾಪಕ, ಅತಿ ಹಗುರದಿಂದ ಸಾಧಾರಣ ಮಳೆಯಾಗುವ ಮುನ್ಸೂಚನೆ ನೀಡಿದೆ. ನಗರದ ಬಹುತೇಕ ಭಾಗವು ಹಳದಿ ಅಲರ್ಟ್ ನೀಡಿದ್ದು ಕೆಎಸ್‌ಎನ್‌ಡಿಎಂಸಿ ಕಡಿಮೆ ಮಳೆ ಬರುವ ಸೂಚನೆ ನೀಡಿದೆ.

ರಾಜ್ಯದಲ್ಲಿ ಸೋಮವಾರ ಚಾಮರಾಜನಗರ, ಚಿಕ್ಕಮಗಳೂರು ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಅತಿ ಹೆಚ್ಚು ಮಳೆಯಾಗಿದೆ ಎಂದು ಕೆಎಸ್‌ಎನ್‌ಡಿಎಂಸಿ ತಿಳಿಸಿದೆ. ಕರಾವಳಿ ಕರ್ನಾಟಕದ ಕೆಲವು ಭಾಗಗಳಲ್ಲಿ ಸೋಮವಾರ ಭಾರತೀಯ ಹವಾಮಾನ ಇಲಾಖೆ (IMD) ಭಾರೀ ಮಳೆಯ ಎಚ್ಚರಿಕೆಯ ನಂತರ ಕೆಎಸ್‌ಎನ್‌ಡಿಎಂಸಿ ಪ್ರಕಟಣೆ ಹೊರಡಿಸಿದೆ. ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಚಾಮರಾಜನಗರ, ಚಿಕ್ಕಮಗಳೂರು, ಕೊಡಗು, ಮೈಸೂರು ಮತ್ತು ಶಿವಮೊಗ್ಗ ಜಿಲ್ಲೆಗಳಿಗೆ ಹಳದಿ ಎಚ್ಚರಿಕೆ ನೀಡಲಾಗಿದೆ.

ಚಳಿಗಾಲದ ಆರಂಭದೊಂದಿಗೆ ಮಾಂಡೌಸ್ ಚಂಡಮಾರುತದ ಕ್ಷೀಣತೆಯಿಂದಾಗಿ ಬೆಂಗಳೂರಿನಲ್ಲಿಯೂ ಕಡಿಮೆ ತಾಪಮಾನ ಕಂಡುಬಂದಿದೆ. ಕರ್ನಾಟಕದ ರಾಜಧಾನಿಯು ಶನಿವಾರದಂದು ದಶಕದ ಅತ್ಯಂತ ಕಡಿಮೆ ಡಿಸೆಂಬರ್ ತಾಪಮಾನವನ್ನು ದಾಖಲಿಸಿದೆ ಎಂದು ಡೆಕ್ಕನ್ ಹೆರಾಲ್ಡ್ ವರದಿ ಮಾಡಿದೆ. ಶನಿವಾರ ನಗರದ ಗರಿಷ್ಠ ತಾಪಮಾನ 19.6 ಡಿಗ್ರಿ ಸೆಲ್ಸಿಯಸ್ ಇತ್ತು, ಇದು ಸಾಮಾನ್ಯಕ್ಕಿಂತ ಏಳು ಡಿಗ್ರಿ ಕಡಿಮೆಯಾಗಿದೆ.












Click it and Unblock the Notifications