Cyclone Effect: ಬೆಂಗಳೂರಿಗೆ ಇಂದು ಸಹ ವ್ಯಾಪಕ ಮಳೆ, ಮುನ್ಸೂಚನೆ ಏನಿದೆ? ಗಮನಿಸಿ
ಬೆಂಗಳೂರು, ಮೇ 03: ಬದಲಾದ ಹವಾಮಾನ ಪರಿಸ್ಥಿತಿಗಳಿಂದಾಗಿ ಬೆಂಗಳೂರಿನಲ್ಲಿ ಮಳೆಯ ವಾತಾವರಣ ಕಂಡು ಸೃಷ್ಟಿಯಾಗಿದೆ. ಮುಂದಿನ ಕೆಲವು ದಿನಗಳವರೆಗೆ ನಗರದಲ್ಲಿ ಸಾಧಾರಣದಿಂದ ಉತ್ತಮ ಮಳೆಯ ವಾತಾವರಣವೇ ಮುಂದುವರಿಯಲಿದೆ. ಇಂದು ಬುಧವಾರ ಸಂಜೆ ಹೊತ್ತಿಗೆ ಜೋರು ಮಳೆಯ ಆಗಮನವಾಗಲಿದೆ.
ಬೆಂಗಳೂರಿನ ನಾಗರಿಕರಲ್ಲಿ ಬಹುತೇಕರು ನಿತ್ಯ ಒಂದಲ್ಲಾ ಒಂದು ಕಡೆ ಮಳೆಯಲ್ಲಿ ಸಿಲುಕಿಕೊಳ್ಳುತ್ತಿದ್ದಾರೆ. ಇದು ಅನಾರೋಗ್ಯ ತರುವ ಸಾಧ್ಯತೆಯೂ ಇದೆ. ನಾಗರಿಕರ ಅನುಕೂಲಕ್ಕಾಗಿ ಇಂದಿನ (ಮೇ 3)ಮಳೆ ಕುರಿತು ಮಾಹಿತಿ ಇಲ್ಲಿದೆ ಒದಗಿಸಲಾಗಿದೆ.

#ಬಿಬಿಎಂಪಿ ಮಳೆ ನಕ್ಷೆ: 02nd ಮೇ 2023 8.30AM ರಿಂದ 03rd ಮೇ 2023ರ 8.30AM ರವರೆಗೆ, ಅತ್ಯಧಿಕ 12.5ಮಿಮೀ ಮಳೆ @ಬೆಂಗಳೂರು ನಗರ_ರಾಜರಾಜೇಶ್ವರಿನಗರ_ಹೆಮ್ಮಿಗೆಪುರ. pic.twitter.com/PqouwaMqib
— Karnataka State Natural Disaster Monitoring Centre (@KarnatakaSNDMC) May 3, 2023
ಭಾನುವಾರ ರಾತ್ರಿ ಒಂದೇ ದಿನದಲ್ಲಿ 111ಮಿ.ಮೀ. ಮಳೆ ದಾಖಲಾಗಿತ್ತು. ಅಂತಹದ್ದೇ ಮಳೆ ಮುಂದಿನ ಒಂದು ವಾರರದವರೆಗೆ ಬರುವ ನಿರೀಕ್ಷೆ ಇದೆ. ಇಂದು ಬೆಳಗ್ಗೆಯಿಂದಲೇ ಮೋಡ ಕವಿದ ವಾತಾವರಣ ನಿರ್ಮಾಣವಾಗಿದೆ. ಕೆಲವೆಡೆ ಆಗಾಗ ಸೋನೆ ಮಳೆ ಆಗುತ್ತಿದೆ. ಬಿಸಿಲು ಸಂಪೂರ್ಣ ಮರೆಯಾಗಿದ್ದು, ಇದು ಸಂಜೆ ವೇಳೆಗೆ ಜೋರಾಗಿ ಸುರಿಯಬಹುದಾಗಿ ಮಳೆಯ ಲಕ್ಷಣ ಎನ್ನಲಾಗಿದೆ.
ಇಂದು ವ್ಯಾಪಕ ಮಳೆ ಮುನ್ಸೂಚನೆ ಇದೆ
ಆದ್ದರಿಂದ ಸಾರ್ವಜನಿಕರು ಮಧ್ಯಾಹ್ನದ ನಂತರ ವಾತಾವರಣ ಗಮನಿಸಿ ನಗರದಲ್ಲಿ ಸಂಚಾರ ಮಾಡಬಹುದು. ಸಂಜೆ 5 ಗಂಟೆ ನಂತರ ನಗರಾದ್ಯಂತ ಮೊದಲು ತುಂತುರು ರೂಪದಲ್ಲಿ ಮಳೆ ಶುರುವಾಗಲಿದೆ. ಬಳಿಕ ಕ್ರಮೇಣ ಜೋರಾಗಿ ತಡರಾತ್ರಿವರೆಗೂ ಉತ್ತಮ ಮಳೆಯಾಗುವ ಸಾಧ್ಯತೆ ಇದೆ. ಇಂದು ಬೆಂಗಳೂರು ನಗರಕ್ಕೆ ವ್ಯಾಪಕ ಮಳೆ ನಿರೀಕ್ಷೆ ಇದೆ ಎಂದು ಮಂಗಳವಾರವೇ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಕೆಲಸ ಮುಗಿಸಿ ಮನೆಗೆ ತೆರಳುವವರು, ಬೀದಿ ಬದಿ ವ್ಯಾಪಾರಿಗಳು ಸೇರಿದಂತೆ ಸಾರ್ವಜನಿಕರು ಮಳೆಯಿಂದ ರಕ್ಷಣೆಗೆ ಹೆಚ್ಚು ಜಾಗೃತರಾಗಬೇಕಾದ ಅಗತ್ಯತೆ ಇದೆ. ಚಳಿಯ ವಾತವರಣವು ನಿರ್ಮಾಣವಾಗಿದ್ದು,ಬೆಚ್ಚಗಿನ ಧಿರಿಸು ಧರಿಸುವುದು, ಮನೆಯಲ್ಲಿ ಮಕ್ಕಳು ಮತ್ತು ಹಿರಿಯ ನಾಗರಿಕರು ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕಿದೆ.
ನಗರದಲ್ಲಿ ಮಂಗಳವಾರದಿಂದ ಬುಧವಾರ ಬೆಳಗಿನವರೆಗಿನ ಅವಧಿಯಲ್ಲಿ ಅಂಜನಾಪುರದಲ್ಲಿ ಅಧಿಕ ಮಳೆ 18 ಮಿಲಿ ಮೀಟರ್ ಮಳೆ ಯಾಗಿದೆ. ಉಳಿದಂತೆ ಹೆಮ್ಮಿಗೆಪುರ 12.5 ಮಿಲಿ ಮೀಟರ್, ದೊರೆಸಾನಿಪಾಳ್ಯ 11.5ಮಿಲಿ ಮೀಟರ್, ಎಚ್.ಗೊಲ್ಲಹಳ್ಳಿ10.5 ಮಿಲಿ ಮೀಟರ್, ಬೇಗೂರು (2) ಮತ್ತು ಬಿಳೆಕಳಿ ಯಲ್ಲಿ ತಲಾ 10 ಮಿಲಿ ಮೀಟರ್ ಮಳೆ ದಾಖಲಾಗಿದೆ.
ಬೆಂಗಳೂರು ಮಳೆಗೆ ಕಾರಣ ತಿಳಿಯಿರಿ
ಬಂಗಾಳಕೊಲ್ಲಿಯ ಆಗ್ನೇಯ ಭಾಗದಲ್ಲಿ ಗಾಳಿಯ ಒತ್ತಡದ ಪ್ರದೇಶ ಸೃಷ್ಟಿಯಾಗಿದೆ. ಅಂದರೆ ಅಲ್ಲಿ ವಾಯುಭಾರ ಕುಸಿತ ಪ್ರದೇಶ ನಿರ್ಮಾಣವಾಗಿದ್ದು, ಅದು ದಿನೇ ದಿನೆ ತೀವ್ರಗೊಳ್ಳುತ್ತಿದೆ. ಇದು ಮೇ 06ರಂದು ಇನ್ನಷ್ಟು ಹೆಚ್ಚಾಗಿ 'ಚಂಡಮಾರುತ'ವಾಗಿ ಬದಲಾಗಲಿದೆ ಎಂದು ಹವಾಮಾನ ಇಲಾಖೆ ಖಚಿತಪಡಿಸಿದೆ.
ಈ ಸೈಕ್ಲೋನ್ ತಮಿಳುನಾಡು, ಆಂಧ್ರಪ್ರದೇಶ, ಓಡಿಶಾ ಕರಾವಳಿ ಭಾಗಕ್ಕೆ ಅತ್ಯಧಿಕ ಮಳೆ ಸುರಿಯುವಿಕೆಗೆ ಕಾರಣವಾಗಲಿದೆ. ಸದ್ಯ ಇದರ ಪರಿಣಾಮವನ್ನು ಈ ಎಲ್ಲ ರಾಜ್ಯಗಳ ಜೊತೆಗೆ ಕರ್ನಾಟಕ ಮತ್ತು ಬೆಂಗಳೂರು ಸಹ ಎದುರಿಸುತ್ತಿದೆ. ಹೀಗಾಗಿಯೇ ರಾಜ್ಯದಲ್ಲಿ ಬೆಂಗಳೂರು ಸೇರಿ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಮಳೆಯ ಆಗಮನವಾಗುತ್ತಿದೆ.












Click it and Unblock the Notifications