Bengaluru Rain: ಬೆಂಗಳೂರಿನಲ್ಲಿ ವರುಣನ ಆರ್ಭಟ: ಧಾರಾಕಾರ ಮಳೆಗೆ ವಾಹನ ಸವಾರರು ಹೈರಾಣ

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಸಂಜೆ ವೇಳೆಗೆ ಮಳೆ ಆರ್ಭಟ ಶುರುವಾಗಿದೆ. ನಗರದ ಮಲ್ಲೇಶ್ವರಂ, ರಾಜಾಜಿನಗರ, ಪೀಣ್ಯ, ಮಾದಾವರ, ಮಹದೇವಪುರ, ಕೆ.ಆರ್‌. ಸರ್ಕಲ್‌ ಸೇರಿದಂತೆ ಹಲವೆಡೆ ಧಾರಾಕಾರ ಮಳೆಯಾಗುತ್ತಿದ್ದು, ದಿಢೀರ್‌ ಮಳೆಯಿಂದಾಗಿ ವಾಹನ ಸವಾರರು ಪರದಾಡುವಂತಾಗಿದೆ.

ಬೆಳಗ್ಗೆಯಿಂದ ಬಿಸಿಲಿನ ಬೇಗೆಗೆ ತತ್ತರಿಸಿದ್ದ ಬೆಂಗಳೂರಿನ ಜನರಿಗೆ ಸಂಜೆ ವೇಳೆಗೆ ಸುರಿದ ಮಳೆ ಕೊಂಚ ನೆಮ್ಮದಿ ನೀಡಿದೆ. ಹಲವು ಪ್ರದೇಶಗಳಲ್ಲಿ ಮೊದಲು ಮೋಡ ಕವಿದ ವಾತಾವರಣ ನಿರ್ಮಾಣವಾಗಿದ್ದು, ಬಳಿಕ ಮಳೆ ಆರಂಭವಾಗಿದೆ.

Bengaluru Rain Heavy rain lashed several parts of Bengaluru including Malleswaram Rajajinagar Peenya

ಧಾರಾಕಾರ ಮಳೆ- ಬೈಕ್‌ ಸವಾರರು ತೊಂದರೆ

ಕಲಾಸಿಪಾಳ್ಯ, ಕಾರ್ಪೊರೇಷನ್‌ ಸುತ್ತಮುತ್ತ, ವಿಧಾನಸೌಧ, ಲಾಲ್‌ಬಾಗ್‌, ಜಯನಗರ ಹಾಗೂ ಶಾಂತಿನಗರ ಭಾಗಗಳಲ್ಲೂ ಮಳೆ ಸುರಿಯುತ್ತಿದೆ. ಮಳೆಯಿಂದಾಗಿ ರಸ್ತೆಯಲ್ಲಿ ಸಂಚಾರ ನಡೆಸುತ್ತಿದ್ದ ಬೈಕ್‌ ಸವಾರರು ತೊಂದರೆ ಅನುಭವಿಸುತ್ತಿದ್ದಾರೆ.

ನಗರದ ಕೆಲವು ಭಾಗಗಳಲ್ಲಿ ಏಕಾಏಕಿ ಮಳೆ ಸುರಿದಿರುವುದರಿಂದ ರಸ್ತೆಗಳಲ್ಲಿ ವಾಹನಗಳ ಸಂಚಾರ ನಿಧಾನಗೊಂಡಿದ್ದು, ಮಳೆ ಮುಂದುವರಿದರೆ ಇನ್ನಷ್ಟು ಕಡೆಗಳಲ್ಲಿ ಸಂಚಾರ ದಟ್ಟಣೆ ಉಂಟಾಗುವ ಸಾಧ್ಯತೆಯಿದೆ.

ಹನೂರಿನಲ್ಲಿ ಮಳೆ ಆರ್ಭಟ

ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನಲ್ಲಿ ಸುರಿದ ಭಾರೀ ಮಳೆಗೆ ಹಲವು ಕಡೆ ಹಾನಿಯಾಗಿದೆ. ಲಾಜರ್‌ ದೊಡ್ಡಿ ಪ್ರದೇಶದಲ್ಲಿ ನೀರಿನ ರಭಸಕ್ಕೆ ಸುಮಾರು 12 ವರ್ಷಗಳ ಹಿಂದೆ ನಿರ್ಮಿಸಲಾಗಿದ್ದ ಚೆಕ್‌ ಡ್ಯಾಂ ಕೊಚ್ಚಿಹೋಗಿದೆ. ಚೆಕ್‌ ಡ್ಯಾಂಗೆ ಅಳವಡಿಸಲಾಗಿದ್ದ ಕಲ್ಲುಗಳು ನೀರಿನ ರಭಸಕ್ಕೆ ಕುಸಿದು, ಸಂಪೂರ್ಣ ರಚನೆ ಹಾನಿಗೊಳಗಾಗಿದೆ.

ಈ ಚೆಕ್‌ ಡ್ಯಾಂನಿಂದ ಸ್ಥಳೀಯ ರೈತರಿಗೆ ನೀರಾವರಿಗೆ ಅನುಕೂಲವಾಗುತ್ತಿತ್ತು. ಇದೀಗ ಚೆಕ್‌ ಡ್ಯಾಂ ಕೊಚ್ಚಿಹೋಗಿರುವುದರಿಂದ ಕೃಷಿ ಚಟುವಟಿಕೆಗಳ ಮೇಲೂ ಪರಿಣಾಮ ಬೀರುವ ಆತಂಕ ಎದುರಾಗಿದೆ. ಹೀಗಾಗಿ ಸ್ಥಳದಲ್ಲಿ ಹೊಸ ಚೆಕ್‌ ಡ್ಯಾಂ ನಿರ್ಮಿಸಿಕೊಡಬೇಕು ಎಂದು ಸ್ಥಳೀಯರು ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.

ಪ್ರವಾಹದ ನೀರಿಗೆ ಕೊಚ್ಚಿಹೋದ ಮನೆ

ಇದೇ ವೇಳೆ ಎಲ್ಲೇಮಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವೈಶಂಪಾಳ್ಯ ಗ್ರಾಮದಲ್ಲಿ ಭಾನುವಾರ ರಾತ್ರಿ ಸುರಿದ ಭಾರೀ ಮಳೆಗೆ ಕುಟುಂಬವೊಂದು ಸಂಕಷ್ಟಕ್ಕೆ ಸಿಲುಕಿದೆ. ರಾಮಸ್ವಾಮಿ ಅವರಿಗೆ ಸೇರಿದ ಮನೆಗೆ ರಾತ್ರಿ ಸುಮಾರು 9 ಗಂಟೆ ವೇಳೆಗೆ ಹಳ್ಳದ ನೀರು ನುಗ್ಗಿದ್ದು, ಕೆಲವೇ ಕ್ಷಣಗಳಲ್ಲಿ ಮನೆಯ ಬಹುತೇಕ ಭಾಗ ನೀರಿನ ರಭಸಕ್ಕೆ ಕೊಚ್ಚಿಹೋಗಿದೆ.

ಮನೆಯೊಳಗೆ ರಾಮಸ್ವಾಮಿ ಅವರ ತಾಯಿ ಮಲಗಿದ್ದ ವೇಳೆ ನೀರು ನುಗ್ಗಿದ್ದು, ಕೂಡಲೇ ಅವರನ್ನು ಸುರಕ್ಷಿತವಾಗಿ ಹೊರಗೆ ಕರೆತರಲಾಗಿದೆ. ಹೀಗಾಗಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

ಚಿನ್ನಾಭರಣ, ನಗದು ಸೇರಿ ಅಪಾರ ನಷ್ಟ

ಮನೆ ನೀರಿನಲ್ಲಿ ಕೊಚ್ಚಿಹೋದ ಪರಿಣಾಮ ಬಟ್ಟೆ-ಬರೆ, ಬೀರು, ಪಾತ್ರೆ-ಪಡಗ ಸೇರಿದಂತೆ ಹಲವು ಗೃಹೋಪಯೋಗಿ ವಸ್ತುಗಳು ನೀರುಪಾಲಾಗಿವೆ. ಸುಮಾರು 40 ಗ್ರಾಂ ಚಿನ್ನಾಭರಣ ಹಾಗೂ 70 ಸಾವಿರ ರೂಪಾಯಿ ನಗದು ಕೂಡ ನೀರಿನಲ್ಲಿ ಕೊಚ್ಚಿಹೋಗಿದೆ ಎಂದು ಸಂತ್ರಸ್ತ ಕುಟುಂಬ ತಿಳಿಸಿದೆ.

ಮನೆಗೆ ಸುಮಾರು 2 ಲಕ್ಷ ರೂಪಾಯಿಗೂ ಅಧಿಕ ನಷ್ಟವಾಗಿದ್ದು, ಕುಟುಂಬ ಇದೀಗ ವಾಸಿಸಲು ಸೂರಿಲ್ಲದೆ ಸಂಕಷ್ಟಕ್ಕೆ ಸಿಲುಕಿದೆ. "50ರಿಂದ 60 ವರ್ಷಗಳ ಹಿಂದೆ ಈ ರೀತಿಯ ನೀರು ಬಂದಿತ್ತು ಎಂದು ಹಿರಿಯರು ಹೇಳುತ್ತಾರೆ. ಆದರೆ ನಮ್ಮ ಜೀವನದಲ್ಲಿ ಇಂತಹ ಪ್ರವಾಹವನ್ನು ನೋಡಿರಲಿಲ್ಲ ಎಂದು ರಾಮಸ್ವಾಮಿ ನೋವು ತೋಡಿಕೊಂಡಿದ್ದಾರೆ.

ಪರಿಹಾರಕ್ಕೆ ಗ್ರಾಮಸ್ಥರ ಆಗ್ರಹ

ಭಾರೀ ಮಳೆಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಸಂಬಂಧಪಟ್ಟ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಬೇಕು. ಮನೆ ಕಳೆದುಕೊಂಡಿರುವ ಕುಟುಂಬಕ್ಕೆ ತಕ್ಷಣ ಸೂಕ್ತ ಪರಿಹಾರ ಹಾಗೂ ವಾಸದ ವ್ಯವಸ್ಥೆ ಕಲ್ಪಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಜೊತೆಗೆ ಕೊಚ್ಚಿಹೋದ ಚೆಕ್‌ ಡ್ಯಾಂ ಅನ್ನು ಮರುನಿರ್ಮಿಸಿ ರೈತರಿಗೆ ನೀರಾವರಿ ಸೌಲಭ್ಯ ಕಲ್ಪಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+