ಬೆಂಗಳೂರು ಮಳೆ, ರಸ್ತೆಗುಂಡಿ ಅವಾಂತರ: ರಾಜ್ಯ ಸರ್ಕಾರದಿಂದ ಮಧ್ಯಪ್ರವೇಶ!
ಬೆಂಗಳೂರಿನಲ್ಲಿ ಮಳೆ ಹಾಗೂ ರಸ್ತೆಗುಂಡಿ ಸೇರಿದಂತೆ ವಿವಿಧ ಸಮಸ್ಯೆಗಳು ಹೆಚ್ಚಾಗುತ್ತಿವೆ ಎನ್ನುವ ಆರೋಪಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಇದೀಗ ಸರ್ಕಾರವೇ ಮಧ್ಯಪ್ರವೇಶಿಸಿದೆ. ಬೆಂಗಳೂರು ನಗರದಲ್ಲಿ ಧಾರಾಕಾರ ಮಳೆಯಿಂದ ಉಂಟಾಗಿರುವ ಅನಾಹುತಗಳ ಬಗ್ಗೆ ವಿವಿಧ ಸ್ಥಳಗಳಿಗೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ ಶಾಲಿನಿ ರಜನೀಶ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಬೆಂಗಳೂರು ನಗರದಲ್ಲಿ ಸುರಿಯುತ್ತಿರುವ ಧಾರಕಾರ ಮಳೆಯಿಂದಾಗಿ ರಸ್ತೆ ಹಾಳಾದ ಹಾಗೂ ಇನ್ನಿತರೆ ಸಮಸ್ಯೆಗಳ ಬಗ್ಗೆ ಪರಿಶೀಲನೆ ಮಾಡಲು ಮಾನ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಾದ ಡಾ. ಶಾಲಿನಿ ರಜನೀಶ್ ಅವರು ಶುಕ್ರವಾರ ಬೆಂಗಳೂರು ನಗರದ ವಿವಿಧ ಪ್ರದೇಶಗಳಿಗೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿ ಸಮಸ್ಯೆಗಳನ್ನು ಪರಿಹರಿಸಲು ಕೂಡಲೇ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಸಿಲ್ಕ್ ಬೋರ್ಡ್ ಜಂಕ್ಷನ್: ಬೆಂಗಳೂರಿನ ಸಿಲ್ಕ್ ಬೋರ್ಡ್ ಜಂಕ್ಷನ್‍ನಲ್ಲಿ ಜಲಾವೃತವಾಗುವುದದನ್ನು ತಪ್ಪಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಿದ್ದಾರೆ. ಸಿಲ್ಕ್ ಬೋರ್ಡ್‌ನ ಮೇಲ್ಸೇತುವೆ ಕೆಳಭಾಗದ ಸುತ್ತಲೂ, ರಾಜಕಾಲುವೆಯಲ್ಲಿ ಸಂಪೂರ್ಣ ಸ್ವಚ್ಛತೆ ಕಾಪಾಡಬೇಕು. ಬಳಕೆಯಾಗದ ಜಾಗದಲ್ಲಿ ಡೆಬ್ರೀಸ್, ರಾಜಕಾಲುವೆಯಲ್ಲಿ ಹೂಳನ್ನು ಇಂದೇ ತೆರವುಗೊಳಿಸಿ ಸುಂದರೀಕರಣ ಮಾಡಿ, ಫೇವರ್ ಬ್ಲಾಕ್ಸ್ ಅಳವಡಿಸಬೇಕು ಎಂದು ತಿಳಿಸಿದ್ದಾರೆ.
ಮೆಟ್ರೋ ಇಲಾಖೆಯಿಂದ ಸ್ಕೈವಾಕ್ ನಿರ್ಮಾಣ ಮಾಡಿ, 2026 ಜೂನ್ ಅಂತ್ಯಕ್ಕೆ ಮೆಟ್ರೋ ಕಾಮಗಾರಿ ಪೂರ್ಣಗೊಳಿಸುವುದು. ಪಾಲಿಕೆಯಿಂದ ಹೈ ರೈಸ್ ಪೆಡೆಸ್ಟ್ರಿಯನ್ ಕ್ರಾಸಿಂಗ್ (HRPC) ಮಾಡುವುದು. ರಾಜಕಾಲುವೆಯಲ್ಲಿ ಹೂಳೆತ್ತಿದ ತಕ್ಷಣ, ಹೂಳನ್ನು ಸ್ಥಳದಲ್ಲಿಯೇ ಬಿಡದೆ ತಕ್ಷಣ ತೆರವುಗೊಳಿಸುವ ಕೆಲಸ ಮಾಡಬೇಕು ಎಂದಿದ್ದಾರೆ.
ಮೆಟ್ರೋ ಇಲಾಖೆಯಿಂದ 25 ಮೀ. ನಿಂದ 45 ಮೀಟರ್ ಗೆ ಮೇಲ್ಸೇತುವೆ ನಿರ್ಮಾಣ ಮಾಡಲಾಗುವುದು. ಕೆ.ಎ.ಎಸ್ ಕಾಲೋನಿಯಲ್ಲಿ ಅಳವಡಿಸಲು ಬೃಹತ್ ಪೈಪ್‍ಗಳನ್ನು ಜಂಕ್ಷನ್‍ನಲ್ಲಿ ಹಾಕಿದ್ದು, ಅದನ್ನು ಕೂಡಲೇ ತೆರವುಗೊಳಿಸಲು ಹಾಗೂ ಸಿಲ್ಕ್ ಬೋರ್ಡ್ ಮೆಟ್ರೋ ಇಲಾಖೆಯು ಕಾಮಗಾರಿ ನಡೆಯುವ ಸ್ಥಳದಲ್ಲಿ ಕಬ್ಬಣಿ, ಸ್ಕ್ರ್ಯಾಪ್ ರಸ್ತೆಯಲ್ಲೇ ಹಾಕಿದ್ದು, ಅದನ್ನು ಈ ಕೂಡಲೆ ತೆರವುಗೊಳಿಸಲು ಸೂಚನೆ ನೀಡಿದರು
ಹೆಚ್.ಎಸ್.ಆರ್ 5 & 6ನೇ ಸೆಕ್ಟರ್: ಹೆಚ್.ಎಸ್.ಆರ್ 6ನೇ ಸೆಕ್ಟರ್ (ಮಂಗಮ್ಮನ ಪಾಳ್ಯ ಮುಖ್ಯ ರಸ್ತೆ ಬಳಿ) ಮೆಟ್ರೋ ಕಾಮಗಾರಿಯ ಮೀಡಿಯನ್ ಸರಿಯಾಗಿ ಅಳವಡಿಸದೇ ಇರುವುದು, ಅನುಪಯುಕ್ತ ಮೆಟಿರಿಯಲ್ ಅನ್ನು ಕೂಡಲೇ ತೆರವುಗೊಳಿಸಬೇಕು. ಜೊತೆಗೆ ರಸ್ತೆ ಬದಿ ಸ್ವಚ್ಛತೆ ಹಾಗೂ ಡಾಂಬರೀಕರಣ ಹಾಕಿ ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲು ಮೆಟ್ರೋ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.
ಹೆಚ್.ಎಸ್.ಆರ್ 5ನೇ ಸೆಕ್ಟರ್ ರಸ್ತೆ ತಿರುವು ಬಳಿ ಪಾದಚಾರಿ, ಎಲೆಕ್ಟ್ರಿಕಲ್ ಕಂಬ, ಡ್ರೈನ್ ಅನ್ನು ಸರಿಯಾಗಿ ಮಾಡಿ ಸುಗಮ ವಾಹನಗಳ ಸಂಚಾರಕ್ಕೆ ಅನುವಾಗುವಂತೆ ಮಾಡುವುದು ಮತ್ತು ರಸ್ತೆ ಮೇಲೆ ನೀರು ನಿಲ್ಲುತ್ತದೆ, ಕೂಡಲೇ ಡ್ರೈನ್ ಕಾಮಗಾರಿ ನಡೆಸಿ ನೀರು ಸರಾಗವಾಗಿ ಹೋಗಲು ವ್ಯವಸ್ಥೆ ಮಾಡುವಂತೆ ಸೂಚಿಸಿದರು.
ಅಗರ ಕೆರೆ ರಸ್ತೆ ಪರಿಶೀಲನೆ: ವೈಟ್ ಟಾಪಿಂಗ್ ಕಾಮಗಾರಿ ಕೈಗೆತ್ತಿಕೊಂಡಿದ್ದು, ರಸ್ತೆಯನ್ನು ಸಂಪೂರ್ಣ ಸುಸ್ಥಿತಿಯಲ್ಲಿಡಬೇಕು. ಕೂಡಲೆ ಡ್ರೈನೇಜ್ ಕೆಲಸ ಮುಗಿಸಬೇಕು. ಹಾಳಾಗಿರುವ ಕಡೆ ರಸ್ತೆ ಲೆವೆಲ್ ಮಾಡಿ ರೋಲ್ ಮಾಡಿ, ವೆಟ್ ಮಿಕ್ಸ್ ಹಾಕಿ ಮೋಟರೆಬಲ್ ಮಾಡಲು ತಿಳಿಸಿದರು.
ಸ್ಯಾನಿಟರಿ (ಕೊಳಚೆ ನೀರು) ಲೈನ್ ಬಳಿ ಸುರಕ್ಷಾ ಕ್ರಮಗಳನ್ನು ಕೈಗೊಳ್ಳುವುದು. ಫೆಬ್ರಬರಿಯಲ್ಲಿ ಕೆಲಸ ಪ್ರಾರಂಭವಾಗಿದ್ದು, ಕೆಲಸಕ್ಕೆ ಮಾತ್ರ ವೇಗ ನೀಡಲ್ಲ ಎಂದು ನಾಗರಿಕರು ದೂರಿದರು. ಈ ಸಂಬಂಧ ಅಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡ ಮುಖ್ಯ ಕಾರ್ಯದರ್ಶಿಗಳು ದಕ್ಷಿಣ ನಗರ ಪಾಲಿಕೆಯ ಏನು ಕೆಲಸ ನಡೆಯುತ್ತಿದೆ, ಯಾರು ಗುತ್ತಿಗೆದಾರರು, ಯವಾಗ ಕೆಲಸ ಪ್ರಾರಂಭಿಸಲಾಗಿದೆ, ಯಾವಾಗ ಮುಗಿಯುತ್ತದೆ ಎಂಬುದನ್ನು ಸಂಪೂರ್ಣ ಮಾಹಿತಿ ತಿಳಿಸಬೇಕು ಎಂದು ಸೂಚಿಸಿದರು.
ಅಗರ ಜಂಕ್ಷನ್ ಪರಿಶೀಲನೆ: ಅಗರ ಜಂಕ್ಷನ್ ಬಳಿ ಮೇಲ್ಸೇತುವೆಯ ಮೇಲೆ ಬೀಳುವ ನೀರಿಗೆ ಅಳವಡಿಸಿರುವ ಪೈಪ್ ಹಾಳಾಗಿದ್ದು, ರಸ್ತೆ ಮೇಲೆ ನೀರು ಬೀಳುತ್ತಿದೆ. ಈ ಸಂಬಂಧ ರಸ್ತೆ ಮೇಲೆ ನೀರು ಬೀಳದಂತೆ ಪೈಪ್ ಗಳನ್ನು ಅಳವಡಿಸಬೇಕು. ಮುಖ್ಯ ರಸ್ತೆಯನ್ನು ಮೆಟ್ರೋ, ಸರ್ವೀಸ್ ರಸ್ತೆಯನ್ನು ಪಾಲಿಕೆ ದುರಸ್ತಿ ಮಾಡಬೇಕಿದ್ದು, ಈ ಕ್ಷಣವೇ ರಸ್ತೆ ದುರಸ್ತಿ ಕಾರ್ಯ ಕೈಗೊಳ್ಳಲು ಮೆಟ್ರೋ ಅಧಿಕಾರಿಗೆ ಸೂಚನೆ ನೀಡಿದರು.
ಇಬ್ಲೂರು ಜಂಕ್ಷನ್ ಪರಿಶೀಲನೆ: ಸರ್ಜಾಪುರ ಸರ್ವೀಸ್ ರಸ್ತೆಯನ್ನು ಆದ್ಯತೆ ಮೇರೆಗೆ ಅಭಿವೃದ್ಧಿಪಡಿಸಲು ದಕ್ಷಿಣ ಪಾಲಿಕೆ ಆಯುಕ್ತರಿಗೆ ಸೂಚಿಸಿದ ಮುಖ್ಯ ಕಾರ್ಯದರ್ಶಿಗಳು, ಇಬ್ಲೂರು ಜಂಕ್ಷನ್ ಬಳಿ ಪಾದಚಾರಿಗಳ ಸುಗಮ ಸಂಚಾರಕ್ಕೆ ಸ್ಕೈವಾಕ್ ನಿರ್ಮಾಣ ಮಾಡುವಂತೆ ತಿಳಿಸಿದರು.
ರಸ್ತೆಯಲ್ಲಿ ಜಲಾವೃತವಾಗದಂತೆ ಹಾಗೂ ಜಂಕ್ಷನ್ ನ ಸಮಗ್ರ ಅಭಿವೃದ್ಧಿ ಮಾಡಬೇಕು. ಪಾದಚಾರಿ ಮಾರ್ಗ ದುರಸ್ತಿ ಕಾರ್ಯ ನಡೆಸಿ, ಸ್ವಚ್ಛವಾಗಿಡಬೇಕು. ಇಬ್ಲೂರು ಜಂಕ್ಷನ್ ನಿಂದ ಮಾರತಹಳ್ಳಿಯವರೆಗೆ ಮುಖ್ಯ ರಸ್ತೆ ಹಾಗೂ ಸರ್ವೀಸ್ ರಸ್ತೆ ವಿಲೀನ ಮಾಡಿದರೆ ಬಹಳಷ್ಟು ಸಂಚಾರ ದಟ್ಟಣೆ ಕಡಿಮೆ ಆಗಲಿದ್ದು, ಅದಕ್ಕೆ ಅಗತ್ಯ ಕ್ರಮವಹಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಪಣತ್ತೂರು ಮುಖ್ಯ ರಸ್ತೆ ಪರಿಶೀಲನೆ: ಪಣತ್ತೂರು ರಸ್ತೆ ಸಂಪೂರ್ಣ ಹಾಳಾಗಿದ್ದು, ರಸ್ತೆಯಲ್ಲಿ ಸ್ಯಾನಿಟರಿ ಓವರ್ ಫ್ಲೋ ಆಗುತ್ತಿದೆ. ಕೂಡಲೇ ದುರಸ್ತಿ ಕಾರ್ಯ ನಡೆಸಲು ತಿಳಿಸಿದರು. ಪಾದಚಾರಿ ಮಾರ್ಗ ಸ್ಲ್ಯಾಬ್ ಹಾಳಾಗಿದ್ದು, ಅದನ್ನು ಬದಲಿಸಿ, ಡ್ರೈನ್‍ನಲ್ಲಿ ಹೂಳೆತ್ತಿ ನೀರು ಸರಾಗವಾಗಿ ಹೋಗುವಂತೆ ಮಾಡಲು ತಿಳಿಸಿದರು. ಪಣತ್ತೂರು ಆರ್.ಓ.ಬಿ ಬಳಿ ಜಲಾವೃತ ಆಗುವುದನ್ನು ತಪ್ಪಿಸಲು ಅಗತ್ಯ ಕ್ರಮ ವಹಿಸುವುದು ಹಾಗೂ ಪಣತ್ತೂರು ರಸ್ತೆ ಅಗಲೀಕರಣಕ್ಕೆ ವೇಗ ನೀಡವುದು. ಸೈಡ್ ಡ್ರೈನ್‍ಗಳಲ್ಲಿ ಹೂಳೆತ್ತಿ, ಕೂಡಲೇ ಅದನ್ನು ತೆರವುಗೊಳಿಸುವುದು ಮತ್ತು ಕಲ್ವರ್ಟ್ ಕಾಮಗಾರಿ ಪ್ರಗತಿಯಲ್ಲಿದ್ದು ಅದನ್ನು ಬೇಗ ಮುಗಿಸುವಂತೆ ಸೂಚನೆ ನೀಡಿದರು.
ವಿಬ್‍ಗಯಾರ್ ಸ್ಕೂಲ್ ರಸ್ತೆ ಪರಿಶೀಲನೆ : ವಿಬ್‍ಗಯಾರ್ ಸ್ಕೂಲ್ ರಸ್ತೆ ತೂಬರಹಳ್ಳಿ ಬಳಿ ರಸ್ತೆ ಹಾಗೂ ಡ್ರೈನ್ ಕಾಮಗಾರಿಗೆ ವೇಗ ನೀಡಿ ಪೂರ್ಣಗೊಳಿಸಬೇಕು. ಕೆಲಸ ಮುಗಿದ ಬಳಿಕ ಯಾವುದೇ ಡೆಬ್ರಿಸ್ ಇರಬಾರದು. ವಿಪತ್ತು ನಿರ್ವಹಣೆ ಕಾಯ್ದೆ ಅಡಿ ನೀರುಗಾಲುವೆ ಮಾಡಲು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಪರಿಶೀಲನೆಯ ವೇಳೆ ಮುಖ್ಯ ಆಯುಕ್ತರಾದ ಮಹೇಶ್ವರ್ ರಾವ್, ಸಂಚಾರಿ ವಿಭಾಗದ ಜಂಟಿ ಪೊಲೀಸ್ ಆಯುಕ್ತರಾದ ಕಾರ್ತಿಕ್ ರೆಡ್ಡಿ, ನಗರ ಪಾಲಿಕೆಗಳ ಆಯುಕ್ತರಾದ ರಮೇಶ್ ಕೆ.ಎನ್, ರಮೇಶ್ ಡಿ.ಎಸ್, ಬಿಸ್ಮೈಲ್ ತಾಂತ್ರಿಕ ನಿರ್ದೇಶಕರಾದ ಡಾ. ಬಿ.ಎಸ್ ಪ್ರಹ್ಲಾದ್, ಮುಖ್ಯ ಎಂಜಿನಿಯರು ಸೇರಿದಂತೆ ಹಲವರು ಹಾಜರಿದ್ದರು.












Click it and Unblock the Notifications