ಬೆಳ್ಳಂದೂರಿನಿಂದ ಬನಶಂಕರಿ ತಲುಪಿದ ಒಂದು ಮಳೆಯ ರಾತ್ರಿ ಅನುಭವ
ಬೆಂಗಳೂರು, ಸೆಪ್ಟೆಂಬರ್ 27: ಮಂಗಳವಾರ ರಾತ್ರಿ ಬೆಂಗಳೂರಿನಲ್ಲಿ ಸುರಿದ ಮಳೆ ನೀಡಿದ ತೊಂದರೆಗಳು ಒಂದೊಂದಾಗಿ ಹೊರಬರುತ್ತಿದೆ. ಬೆಳ್ಳಂದೂರು ಎಕೋಸ್ಪೇಸ್ ನಲ್ಲಿರುವ ಆಕ್ಸೆಂಚರ್ ಬಿಪಿಒನಲ್ಲಿ ಟೀಮ್ ಲೀಡ್ ಆಗಿ ಕಾರ್ಯ ನಿರ್ವಹಿಸುವ ಎಂ.ಕುಮಾರ ಅವರು ಬನಶಂಕರಿ ಮೂರನೇ ಹಂತದ ಹೊಸಕೆರೆಹಳ್ಳಿಯಲ್ಲಿನ ತಮ್ಮ ಮನೆಯನ್ನು ತಲುಪುವಷ್ಟರಲ್ಲಿ ಜೀವ ಬಾಯಿಗೆ ಬಂದಿದೆ.
"ನೈಟ್ ಶಿಫ್ಟ್ ನಲ್ಲಿ ಆಫೀಸಿನಿಂದ ಮನೆಗೆ ಬರುವುದಕ್ಕೆ ನಲವತ್ತೈದು ನಿಮಿಷ ಸಮಯ ಹಿಡಿಸುತ್ತದೆ. ಆದರೆ ನಿನ್ನೆ ರಾತ್ರಿ ಒಂದೂ ಮುಕ್ಕಾಲು ಗಂಟೆ ಆಯಿತು. ಸಿಲ್ಕ್ ಬೋರ್ಡ್ ಹತ್ತಿರ ಬಂದರೆ ಸಾಲಾಗಿ ಅದಾಗಲೇ ಗಾಡಿಗಳು ನಿಂತಿವೆ. ರಸ್ತೆಯುದ್ದಕ್ಕೂ ನೀರು. ಅಲ್ಲೊಂದು ಡ್ರೈನೇಜ್ ಇದೆ. ಅದರ ನೀರು ಸಹ ರಸ್ತೆ ಮೇಲೆ ಹರಿಯುತ್ತಿತ್ತು" ಎಂದು ತಮ್ಮ ಅನುಭವವನ್ನು ಒನ್ಇಂಡಿಯಾ ಕನ್ನಡದ ಜತೆಗೆ ಹಂಚಿಕೊಂಡರು.

"ಅಲ್ಲಿ ವಿಪರೀತ ಮಳೆ ನೀರು ಅನ್ನೋ ಕಾರಣಕ್ಕೆ ಬಲಕ್ಕೆ ತಿರುಗಿ ಕೋರಮಂಗಲ- ನಿಮ್ಹಾನ್ಸ್ ಕಡೆಯಿಂದ ಹೋಗೋಣ ಅಂತ ಹೊರಟರೆ ಆ ದಾರಿಯಲ್ಲೂ ಅದೇ ಸಮಸ್ಯೆ. ನಿಮ್ಹಾನ್ಸ್ ಹತ್ತಿರ ಬ್ರ್ಯಾಂಡ್ ಫ್ಯಾಕ್ಟರಿ ಅಂತಿದೆ. ಅಲ್ಲೂ ಸಿಕ್ಕಾಪಟ್ಟೆ ನೀರು. ಕಾರಿನ ಚಕ್ರವೇ ಮುಳುಗಿ ಹೋಗ್ತಿತ್ತು. ಆಗ ಮೊದಲನೇ ಗೇರ್ ನಲ್ಲಿ ಹಾಕಿಕೊಂಡು, ಆಕ್ಸಲರೇಟರ್ ಹೆಚ್ಚಿಸಿಕೊಂಡು ಹರಸಾಹಸ ಪಟ್ಟು ಬಂದೆವು" ಎಂದು ಹೇಳಿದರು.
"ಆದರೆ, ಎಲ್ಲೂ ಕರೆಂಟ್ ಇರಲಿಲ್ಲ. ರಸ್ತೆಯಲ್ಲಿ ನೀರು ವಿಪರೀತ ಹರಿಯುತ್ತಿದ್ದರಿಂದ ಎಲ್ಲಿ ಹಳ್ಳ, ಉಬ್ಬು ಯಾವುದೂ ಗೊತ್ತಾಗ್ತಾ ಇರಲಿಲ್ಲ. ಮನೆ ಹತ್ತಿರ ಬಂದಾಗ ನಮ್ಮ ಬಡಾವಣೆಯಲ್ಲಿ ವಿದ್ಯುತ್ ಇತ್ತು. ಮತ್ತೆ ಆಫೀಸಿಗೆ ಹೋಗಬೇಕಿದ್ದ ಕಾರ್ ಡ್ರೈವರ್ ಕೂಡ ಫೋನ್ ಮಾಡಿ ತಿಳಿಸಿ, ತಮ್ಮ ಮನೆಗೆ ಹೋದರು. ಇನ್ನೂ ಆಫೀಸಿನಲ್ಲೇ ಇದ್ದ ಬೈಕ್ ನಲ್ಲಿ ಬಂದವರ ಪಾಡು ಹೇಗಿತ್ತೋ ಏನೋ" ಎಂದು ಕುಮಾರ ತಮ್ಮ ಅನುಭವ ಹೇಳಿಕೊಂಡರು.












Click it and Unblock the Notifications