Bengaluru : ಬಹುತೇಕ ಸಾರ್ವಜನಿಕ ಶೌಚಾಲಯಗಳು ಬಳಕೆಗೆ ಯೋಗ್ಯವಿಲ್ಲ - ಬಿಎನ್‌ಪಿ ವರದಿ ಬಿಚ್ಚಿಟ್ಟ ಕರಾಳ ಸತ್ಯ
ಬೆಂಗಳೂರು: ನಗರದ ಘನತ್ಯಾಜ್ಯ ನಿರ್ವಹಣಾ ಲಿಮಿಟೆಡ್ (ಬಿಎಸ್‌ಡಬ್ಲ್ಯೂಎಲ್) ಮತ್ತು ಜಿಬಿಎ ರಾಷ್ಟ್ರಮಟ್ಟದ ಪ್ರತಿಷ್ಠಿತ 'ಸ್ವಚ್ಛ ಸರ್ವೇಕ್ಷಣ್' ಸಮೀಕ್ಷೆಯಲ್ಲಿ ಉತ್ತಮ ಶ್ರೇಯಾಂಕ ಪಡೆಯಲು ಸಜ್ಜಾಗುತ್ತಿರುವ ಬೆನ್ನಲ್ಲೇ, ನಗರದ ನೈಜ ನೈರ್ಮಲ್ಯದ ಚಿತ್ರಣವನ್ನು ಬಯಲಿಗೆಳೆಯುವ ವರದಿಯೊಂದು ಹೊರಬಿದ್ದಿದೆ. ಬೆಂಗಳೂರು ನವನಿರ್ಮಾಣ ಪಕ್ಷ (ಬಿಎನ್‌ಪಿ) ಕಳೆದ ಮೂರು ತಿಂಗಳಲ್ಲಿ ನಡೆಸಿದ 'ಶೌಚಾಲಯ ಲೆಕ್ಕಪರಿಶೋಧನೆ'ಯಲ್ಲಿ, ನಗರದ ಸಾರ್ವಜನಿಕ ಶೌಚಾಲಯಗಳ ಸ್ಥಿತಿ ಅತ್ಯಂತ ಶೋಚನೀಯವಾಗಿದೆ ಎಂಬ ಆತಂಕಕಾರಿ ಅಂಶ ಕಂಡುಬಂದಿದೆ.

ಬಿಎನ್‌ಪಿ ತಂಡವು ನಗರದ 21 ವಾರ್ಡ್‌ಗಳಲ್ಲಿರುವ ಒಟ್ಟು 38 ಸಾರ್ವಜನಿಕ ಶೌಚಾಲಯಗಳನ್ನು ಪರಿಶೀಲನೆಗೆ ಒಳಪಡಿಸಿತ್ತು. ಕೇವಲ 17 ಶೌಚಾಲಯಗಳು (44.7%) ಮಾತ್ರ ಸಾರ್ವಜನಿಕರ ಬಳಕೆಗೆ ಯೋಗ್ಯವಾಗಿವೆ. ಉಳಿದಂತೆ ಶೇ. 55 ರಷ್ಟು ಶೌಚಾಲಯಗಳು ಭಾಗಶಃ ಹಾಳಾಗಿವೆ ಅಥವಾ ನಿರ್ವಹಣೆ ಕೊರತೆಯಿಂದ ಬಳಕೆಗೆ ಬಾರದಂತಿವೆ. ಸುಮಾರು 10.5% ಶೌಚಾಲಯಗಳು ಸಂಪೂರ್ಣವಾಗಿ ಕಾರ್ಯನಿರ್ವಹಿಸುತ್ತಿಲ್ಲ.
ಅಂಗವಿಕಲರು ಮತ್ತು ಮಹಿಳೆಯರಿಗೆ ಸಂಕಷ್ಟ:
ಈ ಶೌಚಾಲಯಗಳು ತಾಂತ್ರಿಕವಾಗಿ 'ತೆರೆದಿವೆ' ಎಂದು ತೋರಿಸಲಿದ್ದರೂ, ವಾಸ್ತವದಲ್ಲಿ ಇವು ಅಂಗವಿಕಲರು, ವೃದ್ಧರು ಮತ್ತು ಮಹಿಳೆಯರಿಗೆ ಸುರಕ್ಷಿತವಾಗಿಲ್ಲ. ಸಮೀಕ್ಷೆಯ ಪ್ರಕಾರ, ಶೇ. 92 ರಷ್ಟು ಶೌಚಾಲಯಗಳಿಗೆ ಪ್ರವೇಶಿಸಲು ಮೆಟ್ಟಿಲುಗಳಿದ್ದು, ವ್ಹೀಲ್ ಚೇರ್ ಹೋಗಲು ಯಾವುದೇ ರ‍್ಯಾಂಪ್ ವ್ಯವಸ್ಥೆಯಿಲ್ಲ. ಇದರಿಂದಾಗಿ ಶೇ. 95 ರಷ್ಟು ಶೌಚಾಲಯಗಳು ದಿವ್ಯಾಂಗರಿಗೆ ನಿಷ್ಪ್ರಯೋಜಕವಾಗಿವೆ. ಇನ್ನು ನಗರದ ಯಾವುದೇ ವಾರ್ಡ್‌ನಲ್ಲೂ ತೃತೀಯಲಿಂಗಿಗಳಿಗೆ ಪ್ರತ್ಯೇಕ ಶೌಚಾಲಯಗಳಿಲ್ಲದಿರುವುದು ವ್ಯವಸ್ಥೆಯ ನಿರ್ಲಕ್ಷ್ಯಕ್ಕೆ ಕನ್ನಡಿ ಹಿಡಿದಿದೆ.
ಯೆಲೇನಹಳ್ಳಿ, ಬೆಳ್ಳಂದೂರು, ನಾಗವಾರಪಾಳ್ಯ, ಕೂಡ್ಲು ಮತ್ತು ಹೊಸಪಾಳ್ಯದಂತಹ ಜನನಿಬಿಡ ಪ್ರದೇಶಗಳಲ್ಲಿ ಸಾರ್ವಜನಿಕ ಶೌಚಾಲಯಗಳ ತೀವ್ರ ಕೊರತೆಯಿದೆ. ಇರುವ ಕೆಲವು ಶೌಚಾಲಯಗಳನ್ನು ಗುರುತಿಸುವುದೇ ಕಷ್ಟಕರವಾಗಿದೆ.
ಬಿಎನ್‌ಪಿ ಆಗ್ರಹವೇನು?
"ಬೆಂಗಳೂರಿನ ಸಾರ್ವಜನಿಕ ಶೌಚಾಲಯಗಳು ಆಡಳಿತದ ಸ್ಥಿತಿಯನ್ನು ಪ್ರತಿಬಿಂಬಿಸುತ್ತವೆ. ಇವುಗಳನ್ನು ಯೋಜನೆಯಿಲ್ಲದೆ ನಿರ್ಮಿಸಲಾಗಿದೆ ಮತ್ತು ಉತ್ತರದಾಯಿತ್ವವಿಲ್ಲದೆ ನಡೆಸಲಾಗುತ್ತಿದೆ," ಎಂದು ಬಿಎನ್‌ಪಿ ಆರೋಪಿಸಿದೆ. ತಕ್ಷಣವೇ ಜಿಬಿಎ ಎಚ್ಚೆತ್ತುಕೊಂಡು ' ದುರಸ್ತಿ ಅಭಿಯಾನ' ಕೈಗೊಳ್ಳಬೇಕು ಎಂದು ಪಕ್ಷ ಶಿಫಾರಸು ಮಾಡಿದೆ.
ಸ್ವಚ್ಛತೆಯ ರ‍್ಯಾಂಕಿಂಗ್ ಪಡೆಯುವ ಮುನ್ನ, ನಾಗರಿಕರಿಗೆ ಮೂಲಭೂತ ಸೌಕರ್ಯ ಒದಗಿಸುವುದು ಪಾಲಿಕೆಯ ಆದ್ಯತೆಯಾಗಬೇಕಿದೆ.












Click it and Unblock the Notifications