ಬೆಂಗಳೂರಿನ 25 ಲಕ್ಷ ಆಸ್ತಿಗಳ ಡಿಜಿಟಲೀಕರಣ, ಬಿ ಖಾತಾದಿಂದ ಎ ಖಾತಾ, ಇ ಖಾತಾದ ಬಗ್ಗೆ ಡಿ.ಕೆ ಶಿವಕುಮಾರ್ ಅಪ್ಡೇಟ್ಸ್
Bengaluru property: ಬೆಂಗಳೂರಿನ ಆಸ್ತಿಗಳು ಹಾಗೂ ಬಿ ಖಾತಾದಿಂದ ಎ ಖಾತಾ ಪರಿವರ್ತನೆಗೆ ಸಂಬಂಧಿಸಿದಂತೆ ಉಪ ಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ ಶಿವಕುಮಾರ್ ಅವರು ಗುಡ್‌ನ್ಯೂಸ್ ಕೊಟ್ಟಿದ್ದಾರೆ.
ಬೆಂಗಳೂರು ನಗರದಾದ್ಯಂತ ಇದುವರೆಗೂ 25 ಲಕ್ಷ ಆಸ್ತಿಗಳನ್ನು ಡಿಜಿಟಲೀಕರಣ ಮಾಡಲಾಗಿದೆ. 9 ಲಕ್ಷ ಇ ಖಾತೆಗಳನ್ನು ಜನರಿಗೆ ಹಂಚಿಕೆ ಮಾಡಲಾಗಿದೆ. ಉಚಿತವಾಗಿ ಸ್ಪೆಷಲ್ ಇ ಖಾತಾ ಅಭಿಯಾನ ಪ್ರಾರಂಭ ಮಾಡಲು ಎಲ್ಲಾ ಪಾಲಿಕೆಗಳಿಗೆ ಸೂಚನೆ ನೀಡಲಾಗಿದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿಳಿಸಿದ್ದಾರೆ.

ವಿಧಾನಸೌಧದಲ್ಲಿ ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆಗಿರುವ ಶಿವಕುಮಾರ್ ಅವರು ಖಾತೆ ಪರಿವರ್ತನೆ ಮಾಡಿಸಿಕೊಂಡವರಿಗೆ ಸೋಮವಾರ ಖಾತಾ ಪತ್ರ ವಿತರಣೆ ಮಾಡಿ ಮಾಧ್ಯಮಗಳ ಜೊತೆ ಮಾತನಾಡಿದರು. ಆಸ್ತಿ ದಾಖಲೆಗಳ ಡಿಜಿಟಲೀಕರಣ ಈ ವರ್ಷದ ಪ್ರಮುಖ ತೀರ್ಮಾನ. ಏಕೆಂದರೆ ಕಳೆದ 50 ವರ್ಷಗಳಿಂದಲೂ ಇದು ಮುನ್ನೆಲೆಗೆ ಬಂದಿರಲಿಲ್ಲ. ಈ ಹಿಂದೆ ಕೃಷಿ ಭೂಮಿ ಡಿಜಿಟಲೀಕರಣಕ್ಕೆ ಭೂಮಿ ಯೋಜನೆ ತರಲಾಗಿತ್ತು.
ನಮ್ಮ ಬೆಂಗಳೂರಿನ ಎಲ್ಲಾ ಆಸ್ತಿ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಇ - ಖಾತೆ ವ್ಯವಸ್ಥೆ ತರಬೇಕು ಎಂದು ಹೊರಟಿದ್ದೇವೆ. ಈ ಮೂಲಕ ತೆರಿಗೆ ಸೋರಿಕೆ ತಡೆಯಬೇಕು ಎಂಬುದು ನಮ್ಮ ಉದ್ದೇಶ. ಸಬ್ ರಿಜಿಸ್ಟಾರ್ ಕಚೇರಿಗಳಲ್ಲಿ ಕಾವೇರಿ ಸಾಫ್ಟ್ ವೇರ್ ತಂದು ಇದನ್ನು ಪರಶೀಲನೆ ಮಾಡಲು ಅವಕಾಶ ನೀಡಿದ್ದೇವೆ. ಇದರ ಜೊತೆಗೆ ಪ್ರತಿಯೊಂದು ದಾಖಲೆಗಳು ಆಧಾರ್ ಜೊತೆ ಲಿಂಕ್ ಮಾಡುವ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಅವರು ವಿವರಿಸಿದ್ದಾರೆ.
ಮುಂದುವರಿದು ಯಾರು ಸಹ ಒಂದೇ ಒಂದು ರೂಪಾಯಿ ಲಂಚ ನೀಡದೆ ಇ ಖಾತೆ ಪಡೆಯಬಹುದು. ಮನೆ ಬಾಗಿಲಿಗೆ ಖಾತೆ ತಲುಪಿಸಬೇಕು ಎಂದು ತಿಳಿಸಿದ್ದೇನೆ. ನನಗೆ ನನ್ನ ಜೀವನದಲ್ಲಿ ಸಮಾಧಾನ ನೀಡಿದ ದೊಡ್ಡ ತೀರ್ಮಾನ. ಎಷ್ಟೋ ಜನಕ್ಕೆ ಅವರ ಆಸ್ತಿಗಳು ಯಾರ ಹೆಸರಿನಲ್ಲಿ ಇದೆ ಎಂದು ಗೊತ್ತಿರಲಿಲ್ಲ. ಈ ಕೆಲಸ ನೋಡಿ ಕೇಂದ್ರ ಸರ್ಕಾರ ನಮ್ಮ ಅಧಿಕಾರಿಗಳಿಗೆ ಪ್ರಶಂಸನಾ ಪತ್ರ ನೀಡಿದೆ ಎಂದಿದ್ದಾರೆ.
15 ದಿನದಲ್ಲಿ ಬಿ ಖಾತೆಯಿಂದ ಎ ಖಾತೆಗೆ ವರ್ಗಾವಣೆ
ಯೂನಿಫಾರ್ಮ್ ಲ್ಯಾಂಡ್ ರೆಕಾರ್ಡ್ ಮ್ಯಾನೇಜ್ ಮೆಂಟ್ ಸಿಸ್ಟಮ್ ಮೂಲಕ ಬಿ ಖಾತೆ ಮೂಲಕ ಎ ಖಾತೆ ನೀಡುವ ಯೋಜನೆ ಇದಾಗಿದೆ. ಈಗಾಗಲೇ 7 ಸಾವಿರ ಅರ್ಜಿಗಳು ಇದಕ್ಕೆ ಬಂದಿವೆ. ಇದಕ್ಕೆ ಇನ್ನೂ ಲಕ್ಷಗಟ್ಟಲೆ ಅರ್ಜಿಗಳು ಬರಬೇಕಿದೆ. ಈಗಾಗಲೇ ಅರ್ಜಿ ಹಾಕಿರುವವರಿಗೆ 15 ದಿನದಲ್ಲಿ ಬಿ ಖಾತೆಯಿಂದ ಎ ಖಾತೆಗೆ ವರ್ಗಾವಣೆ ಮಾಡಲು ಸಮಯ ನಿಗದಿ ಮಾಡಿದ್ದೇವೆ. ಅಧಿಕಾರಿಗಳು ಖಾತೆ ನೀಡುವಾಗ ಸ್ಥಳ ಪರಿಶೀಲನೆ ಮಾಡಲಿದ್ದಾರೆ.
ಇನ್ನೂ ಅನೇಕರು ಸೇಲ್ ಡೀಡ್ ಇಟ್ಟುಕೊಂಡು ಖಾತೆಯನ್ನೇ ಹೊಂದಿಲ್ಲ. 1.20 ಲಕ್ಷ ಜನ ಈ ಬಗ್ಗೆ ಅರ್ಜಿ ನೀಡಿದ್ದಾರೆ. 60 ಸಾವಿರ ಜನರ ಅರ್ಜಿ ಒಪ್ಪಿತವಾಗಿದೆ. 40 ಸಾವಿರ ಅರ್ಜಿ ರದ್ದಾಗಿದೆ. 15 ಸಾವಿರ ಅರ್ಜಿಗಳು ವಿವಿಧ ಹಂತದಲ್ಲಿವೆ. ಅರ್ಜಿಗಳು ಏಕೆ ತಿರಸ್ಕೃತವಾಗಿವೆ ಎಂದು ಮತ್ತೊಮ್ಮೆ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ.
ನಂಬಿಕೆ ನಕ್ಷೆ ಯೋಜನೆ; 12 ಸಾವಿರ ನಕ್ಷೆ ಹಂಚಿಕೆ
ನಂಬಿಕೆ ನಕ್ಷೆ ಯೋಜನೆಯಡಿ 12 ಸಾವಿರ ನಕ್ಷೆಗಳನ್ನು ನೀಡಲಾಗಿದೆ. ಇದರಿಂದ ಭ್ರಷ್ಟಾಚಾರ ನಿಂತಿದೆ. ಕೆಲಸದ ವೇಗ ಹೆಚ್ಚಿದೆ. ನಾಗರಿಕ ಸ್ನೇಹಿ ವಾತಾವರಣ ಉಂಟಾಗಿದೆ. ಓಟಿಎಸ್ ಯೋಜನೆಯ ಅಡಿ ದಂಡ ಹಾಗೂ ಬಡ್ಡಿಯನ್ನು ರದ್ದು ಮಾಡಲಾಯಿತು. ಇದರಿಂದ 2 ಲಕ್ಷ ಜನರಿಗೆ ಅನುಕೂಲವಾಗಿದೆ. ಜಿಬಿಎ ವ್ಯಾಪ್ತಿಯಲ್ಲಿ 1,200 ಕೋಟಿ ಹಣ ಸಂಗ್ರಹವಾಗಿದೆ. ಟಿಡಿಆರ್ ಅಡಿ ಬೆಂಗಳೂರು ಬಿಜಿನೆಸ್ ಕಾರಿಡಾರ್ ಯೋಜನೆಗೆ ಎಂದು ಭೂಮಿ ಕಳೆದುಕೊಂಡವರಿಗೆ ಹೆಚ್ಚು ಅನುಕೂಲವಾಗಲಿದೆ ಎಂದು ಡಿಸಿಎಂ ಡಿ.ಕೆ ಶಿವಕುಮಾರ್ ಅವರು ಹೇಳಿದ್ದಾರೆ.
ನಾವು ಜಾರಿಗೆ ತಂದಿದ್ದ ಪ್ರಿಮೀಯಂ ಎಫ್ ಎಆರ್ ಅನ್ನು ರಾಜ್ಯಪಾಲರು ತಡೆ ನೀಡಿದರು. ಬಿಜೆಪಿ ಸಮಯದಲ್ಲಿ ತಂದಿದ್ದ ಕಾನೂನನ್ನೇ ನಾನು ಜಾರಿಗೆ ತಂದಿದ್ದೇವೆ. ಒಂದಷ್ಟು ಜನ ಇದರ ವಿರುದ್ಧ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಈಗ ಅಲ್ಲಿಂದಲೂ ವಾಪಸ್ ಕಳುಹಿಸಿದ್ದಾರೆ. ಒಂದಷ್ಟು ಜನ ಪ್ರಿಮೀಯಂ ಎಫ್ ಎಆರ್ ಅನ್ನು ತೆಗೆದುಕೊಳ್ಳುತ್ತಿದ್ದಾರೆ. ಇದರಿಂದ 1 ಸಾವಿರ ಕೋಟಿ ಬರುವ ನಿರೀಕ್ಷೆಯಿದೆ ಎಂದರು.












Click it and Unblock the Notifications