ಬೆಂಗಳೂರಿನ ಆಸ್ತಿದಾರರಿಗೆ ಸೆಟ್‌ಬ್ಯಾಕ್ ವಿಚಾರದಲ್ಲಿ ಶಾಕ್ ಕೊಟ್ಟ ಜಿಬಿಎ: ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಹೇಳಿದ್ದೇನು
Bengaluru Property: ಬೆಂಗಳೂರು ನಗರದ ಆಸ್ತಿದಾರರಿಗೆ ಸೆಟ್‌ಬ್ಯಾಕ್ ವಿಚಾರದಲ್ಲಿ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ಶಾಕ್ ಕೊಟ್ಟಿದೆ. ಈ ವಿಚಾರವಾಗಿ ಬೆಂಗಳೂರಿನ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಅವರು ಅಧಿಕಾರಿಗಳಿಗೆ ಮಹತ್ವದ ಸೂಚನೆ ನೀಡಿದ್ದಾರೆ. ಇದರ ಸಂಪೂರ್ಣ ವಿವರ ಇಲ್ಲಿದೆ.
ಬೆಂಗಳೂರು ನಗರದ ದೊಮ್ಮಲೂರು ಬಳಿ ಸೆಟ್‌ಬ್ಯಾಕ್ ಬಿಡದೆ ನಿರ್ಮಾಣ ಹಂತದಲ್ಲಿರುವ ಕಟ್ಟಡಕ್ಕೆ ನೋಟೀಸ್ ಜಾರಿಗೊಳಿಸಿ, ತೆರವು ಕಾರ್ಯಾಚರಣೆ ಕೈಗೊಳ್ಳಬೇಕೆಂದು ಜಿಬಿಎ ಮುಖ್ಯ ಆಯುಕ್ತರಾದ ಮಹೇಶ್ವರ್ ರಾವ್ ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಬೆಂಗಳೂರು ಕೇಂದ್ರ ನಗರ ಪಾಲಿಕೆ ವ್ಯಾಪ್ತಿಯ ವಿವಿಧ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ವೇಳೆ ಮಾತನಾಡಿದ ಅವರು, ದೊಮ್ಮಲೂರು ಬಳಿ ಹಳೆಯ ಕಟ್ಟಡವನ್ನು ನೆಲಸಮಗೊಳಿಸಿ ನೂತನ ಕಟ್ಟಡ ನಿರ್ಮಿಸಲಾಗುತ್ತಿದೆ. ಆದರೆ, ಕಟ್ಟಡದ ನಾಲ್ಕೂ ಬದಿಗಳಲ್ಲಿ ಸೆಟ್‌ಬ್ಯಾಕ್ ಬಿಡದೆ ನಿರ್ಮಾಣ ಕಾಮಗಾರಿ ಕೈಗೊಳ್ಳುತ್ತಿರುವುದು ಗಮನಕ್ಕೆ ಬಂದಿದೆ. ಈ ಸಂಬಂಧ ಕಟ್ಟಡ ಮಾಲೀಕರಿಗೆ ಕೂಡಲೇ ನೋಟೀಸ್ ಜಾರಿಗೊಳಿಸಿ, ತೆರವು ಕಾರ್ಯಾಚರಣೆ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಇದೇ ಮಾದರಿಯನ್ನು ಬೆಂಗಳೂರಿನಾದ್ಯಂತ ಅನುಸರಿಸುವ ಸಾಧ್ಯತೆ ಇದೆ.
Bengaluru Property: ಸೆಟ್‌ಬ್ಯಾಕ್ ಉಲ್ಲಂಘನೆ: ನೋಟಿಸ್ ಜಾರಿ
ಇದೇ ಸ್ಥಳದಲ್ಲಿ ಸೆಟ್‌ಬ್ಯಾಕ್ ಇಲ್ಲದೆ ವಾಣಿಜ್ಯ ಕಟ್ಟಡ ನಿರ್ಮಿಸಿರುವುದನ್ನು ಗಮನಿಸಿ, ಸದರಿ ಕಟ್ಟಡಕ್ಕೆ ನೀಡಿರುವ ವಿದ್ಯುತ್ ಸಂಪರ್ಕವನ್ನು ಕೂಡಲೇ ಕಡಿತಗೊಳಿಸುವಂತೆ ಸೂಚಿಸಿದ್ದಾರೆ. ದೊಮ್ಮಲೂರು ಮುಖ್ಯ ರಸ್ತೆಯ ಬದಿಯಲ್ಲಿ ಪಾದಚಾರಿ ಮಾರ್ಗ ಸಾಕಷ್ಟು ವಿಸ್ತಾರವಾಗಿದ್ದು, ಸದರಿ ಜಾಗದಲ್ಲಿ ವೆಂಡಿಂಗ್ ಜೋನ್ ಅಥವಾ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲು ಸಾಧ್ಯವೇ ಎಂಬುದನ್ನು ಪರಿಶೀಲಿಸಿ, ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸಿದರು. ಇದೇ ಸ್ಥಳದಲ್ಲಿ ಪಾದಚಾರಿ ಮಾರ್ಗದಲ್ಲಿರುವ ಗೋಡೆಗಳನ್ನು ತೆರವುಗೊಳಿಸಿ, ಸುಗಮ ಪಾದಚಾರಿ ಮಾರ್ಗ ನಿರ್ಮಿಸುವಂತೆ ನಿರ್ದೇಶನ ನೀಡಿದರು.
ಇಂದಿರಾನಗರ 80 ಅಡಿ ರಸ್ತೆಯ ದೊಮ್ಮಲೂರು ಜಂಕ್ಷನ್ ಅನ್ನು ಅಭಿವೃದ್ಧಿಪಡಿಸುವ ಕಾರ್ಯ ಕೈಗೊಳ್ಳಬೇಕು. ಜೊತೆಗೆ, ರಸ್ತೆ ದುರಸ್ತಿ ಕಾರ್ಯವನ್ನು ಸಮರ್ಪಕವಾಗಿ ಕೈಗೊಳ್ಳುವಂತೆ ನಿರ್ದೇಶನ ನೀಡಿದರು. ಸಾಯಿಬಾಬಾ ಟೆಂಪಲ್ ರಸ್ತೆ ಹದಗೆಟ್ಟಿದ್ದು, ಸದರಿ ರಸ್ತೆಗೆ ಡಾಂಬರೀಕರಣ ಕಾರ್ಯ ಕೈಗೊಳ್ಳುವಂತೆ ಸೂಚಿಸಿದರು.
ದೊಮ್ಮಲೂರು ಭಾಗದ ರಸ್ತೆಗಳಲ್ಲಿ ಜಲಮಂಡಳಿ ವತಿಯಿಂದ ಕೈಗೊಂಡಿರುವ ಸ್ಯಾನಿಟರಿ ಲೈನ್ ಕಾಮಗಾರಿ ಪೂರ್ಣಗೊಂಡಿದ್ದರೂ ರಸ್ತೆ ಪುನಶ್ಚೇತನ ಕಾರ್ಯ ಕೈಗೊಳ್ಳದಿರುವುದನ್ನು ಗಮನಿಸಿದ ಅವರು, ಸಂಬಂಧಪಟ್ಟ ಅಧಿಕಾರಿಗಳಿಗೆ ಕೂಡಲೇ ರಸ್ತೆ ದುರಸ್ತಿ ಹಾಗೂ ಪುನಶ್ಚೇತನ ಕಾರ್ಯ ಕೈಗೊಳ್ಳುವಂತೆ ಸೂಚಿಸಿದರು. ರಸ್ತೆಯ ಮೇಲೆ ಬೀಳುವ ಮಳೆ ನೀರು ಚರಂಡಿಗೆ ಸರಾಗವಾಗಿ ಹರಿದುಹೋಗುವಂತೆ ಸೂಕ್ತ ವ್ಯವಸ್ಥೆ ಕಲ್ಪಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಆಸ್ಪತ್ರೆಗೆ ಕ್ಯಾಮೆರಾ ಅಳವಡಿಸಿ
ಕೋಡಿಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ವೇಳೆ, ಬಯೋಮೆಡಿಕಲ್ ತ್ಯಾಜ್ಯಕ್ಕೆ ಪ್ರತ್ಯೇಕ ಕೊಠಡಿ ವ್ಯವಸ್ಥೆ ಕಲ್ಪಿಸುವಂತೆ ಹಾಗೂ ಆಸ್ಪತ್ರೆಯ ಭದ್ರತೆಯ ದೃಷ್ಟಿಯಿಂದ ಸಿಸಿ ಕ್ಯಾಮೆರಾಗಳನ್ನು ಅಳವಡಿಸುವಂತೆ ಸೂಚಿಸಿದರು. ಇನ್ನು ವಿಂಡ್ ಟನಲ್ ಕೆಳಸೇತುವೆ ಕಾಮಗಾರಿ ಶೇ. 80ರಷ್ಟು ಪೂರ್ಣಗೊಂಡಿದ್ದು, ಬಾಕ್ಸ್ ಪುಶಿಂಗ್ ಕಾರ್ಯ ಕೈಗೊಳ್ಳಬೇಕಿದೆ. ಬಾಕಿ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಿ, ನವೆಂಬರ್ ಅಂತ್ಯದೊಳಗೆ ಕೆಳಸೇತುವೆ ಕಾಮಗಾರಿಯನ್ನು ಪೂರ್ಣಗೊಳಿಸುವಂತೆ ಸೂಚಿಸಿದರು.
ಈ ವೇಳೆ ಕೇಂದ್ರ ನಗರ ಪಾಲಿಕೆ ಆಯುಕ್ತರಾದ ಜಿ. ಜಗದೀಶ್, ಅಪರ ಆಯುಕ್ತರಾದ ವೆಂಕಟಾಚಲಪತಿ, ಮುಖ್ಯ ಎಂಜಿನಿಯರರಾದ ಹೇಮಲತಾ, ಕಾರ್ಯಪಾಲಕ ಎಂಜಿನಿಯರರು ಸೇರಿದಂತೆ ಹಲವರು ಇದ್ದರು.


Click it and Unblock the Notifications
