ಇಂದಿನಿಂದ ಅಕ್ಟೋಬರ್ 25ರವರೆಗೆ ಬೆಂಗಳೂರಿನ ಈ ಅಂಚೆ ಕಚೇರಿಗಳಲ್ಲಿ ಸೇವೆ ವ್ಯತ್ಯಯ
ಬೆಂಗಳೂರು: ರಾಜಧಾನಿ ಬೆಂಗಳೂರಿನ ಅಂಚೆ ಕಚೇರಿಗಳ ಮೂಲಕ ನಿತ್ಯ ವ್ಯವಹಾರ ನಡೆಸುವ ಗ್ರಾಹಕರಿಗೆ ಪ್ರಮುಖ ಮಾಹಿತಿಯೊಂದು ಹೊರಬಿದ್ದಿದೆ. ತಂತ್ರಜ್ಞಾನವನ್ನ ಮೇಲ್ದರ್ಜೆಗೇರಿಸುವ ಉದ್ದೇಶದಿಂದ ಇಂದಿನಿಂದ ಅಂದರೆ ಅಕ್ಟೋಬರ್ 22 ರಿಂದ ಅಕ್ಟೋಬರ್ 25ರವರೆಗೆ ನಗರದ ಪ್ರಮುಖ ಅಂಚೆ ಕಚೇರಿಗಳಲ್ಲಿ ಸೇವೆಗಳು ಸಂಪೂರ್ಣವಾಗಿ ಅಲಭ್ಯವಾಗಲಿವೆ.
ಬೆಂಗಳೂರು ಅಂಚೆ ಮಹಾ ಕಾರ್ಯಾಲಯದ (GPO) ವ್ಯಾಪ್ತಿಗೆ ಬರುವ ಹಲವು ಉಪ ಕಚೇರಿಗಳಲ್ಲಿ ಗ್ರಾಹಕರು ಈ ನಾಲ್ಕು ದಿನಗಳ ಕಾಲ ಪರ್ಯಾಯ ಮಾರ್ಗಗಳನ್ನ ಕಂಡುಕೊಳ್ಳಬೇಕಾಗಿದೆ ಎಂದು ಇಲಾಖೆ ಪ್ರಕಟಣೆಯಲ್ಲಿ ಸ್ಪಷ್ಟಪಡಿಸಿದೆ.

ಅಂಚೆ ಕಚೇರಿಯಲ್ಲಿ ತಂತ್ರಜ್ಞಾನ ಉನ್ನತೀಕರಣ
ಗ್ರಾಹಕರಿಗೆ ಹೆಚ್ಚು ವೇಗ ಮತ್ತು ನಿಖರವಾದ ಸೇವೆಯನ್ನ ಒದಗಿಸುವ ನಿಟ್ಟಿನಲ್ಲಿ ಅಂಚೆ ಇಲಾಖೆಯು ಹೊಸ ಹೆಜ್ಜೆ ಇರಿಸಿದೆ. ವಿಶೇಷವಾಗಿ ಅಂಚೆ ಜೀವ ವಿಮೆ (PLI) ಮತ್ತು ಗ್ರಾಮೀಣ ಅಂಚೆ ಜೀವ ವಿಮೆ (RPLI) ಗ್ರಾಹಕರಿಗೆ ಅತ್ಯುತ್ತಮ ಡಿಜಿಟಲ್ ಸೇವೆ ಒದಗಿಸುವ ಗುರಿಯೊಂದಿಗೆ ಪ್ರಸ್ತುತ ಇರುವ ಹಳೆಯ ಸಾಫ್ಟ್‌ವೇರ್ ವ್ಯವಸ್ಥೆಯನ್ನ ಬದಲಾಯಿಸಲಾಗುತ್ತಿದೆ. ಇದರ ಬದಲಾಗಿ ಅತ್ಯಾಧುನಿಕವಾದ 'ಇನ್ಫೋಸಿಸ್' ಸಾಫ್ಟ್‌ವೇರ್ ತಂತ್ರಜ್ಞಾನವನ್ನ ಅಳವಡಿಸಿಕೊಳ್ಳಲಾಗುತ್ತಿದೆ.
ಈ ತಾಂತ್ರಿಕ ಪ್ರಕ್ರಿಯೆಗೆ ನಾಲ್ಕು ದಿನಗಳ ಕಾಲಾವಕಾಶ ಬೇಕಾಗಿರುವುದರಿಂದ ಸೇವೆಗಳನ್ನ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಅಕ್ಟೋಬರ್ 26 ರಿಂದ ಈ ನೂತನ ತಂತ್ರಜ್ಞಾನವು ಸಂಪೂರ್ಣವಾಗಿ ಜಾರಿಗೆ ಬರಲಿದ್ದು, ಅಂದಿನಿಂದ ಸೇವೆಗಳು ಎಂದಿನಂತೆ ಸುಗಮವಾಗಿ ನಡೆಯಲಿವೆ.
ಸ್ಪೀಡ್ ಪೋಸ್ಟ್ ಸೇವೆ ವ್ಯತ್ಯಯ
ಈ ತಂತ್ರಜ್ಞಾನ ಬದಲಾವಣೆಯ ಅವಧಿಯಲ್ಲಿ ಗ್ರಾಹಕರು ಪಡೆಯುತ್ತಿದ್ದ ದಿನನಿತ್ಯದ ಹಲವು ಪ್ರಮುಖ ಸೇವೆಗಳಿಗೆ ಅಡ್ಡಿಯಾಗಲಿದೆ. ಮುಖ್ಯವಾಗಿ ಸ್ಪೀಡ್ ಪೋಸ್ಟ್, ನೋಂದಾಯಿತ ಅಂಚೆ, ಮನಿ ಆರ್ಡರ್ ಪಾವತಿ ಹಾಗೂ ಸ್ವೀಕೃತಿ ಪ್ರಕ್ರಿಯೆಗಳು ಲಭ್ಯವಿರುವುದಿಲ್ಲ.
ಇದರ ಜೊತೆಗೆ ಪ್ರೀಪೇಯ್ಡ್ ರಂಗ, ಕವರ್‌ಗಳ ಖರೀದಿ ಹಾಗೂ ಕೌಂಟರ್‌ಗಳಲ್ಲಿ ಸಿಗುವ ಇತರೆ ಗ್ರಾಹಕ ಸೇವೆಗಳು ಸಹ ಅಕ್ಟೋಬರ್ 25ರವರೆಗೆ ಸಂಪೂರ್ಣ ಸ್ಥಗಿತಗೊಳ್ಳಲಿವೆ ಎಂದು ಜಿಪಿಒ ಮುಖ್ಯ ಅಂಚೆಪಾಲರು ಮಾಹಿತಿ ನೀಡಿದ್ದಾರೆ. ತುರ್ತು ಅಂಚೆ ಸೇವೆಗಳನ್ನ ಬಯಸುವವರು ಈ ದಿನಗಳಲ್ಲಿ ಅಡಚಣೆ ಎದುರಿಸುವ ಸಾಧ್ಯತೆಯಿದೆ.
ಯಾವ ಯಾವ ಅಂಚೆ ಕಚೇರಿಗಳು ಬಂದ್?
ಈ ವ್ಯತ್ಯಯ ಕೇವಲ ಜಿಪಿಒಗೆ ಮಾತ್ರ ಸೀಮಿತವಾಗಿಲ್ಲ. ಬೆಂಗಳೂರು ಅಂಚೆ ಮಹಾ ಕಾರ್ಯಾಲಯದ ಅಧೀನದಲ್ಲಿ ಬರುವ ಹಲವು ಪ್ರಮುಖ ಬಡಾವಣೆಗಳ ಅಂಚೆ ಕಚೇರಿಗಳಲ್ಲೂ ಸೇವೆ ಇರುವುದಿಲ್ಲ. ಬಸವನಗುಡಿ, ಜಯನಗರ, ಕೊರಮಂಗಲ ಕೋರ್ಟ್, ಹೈಕೋರ್ಟ್, ಎಚ್‌ಎಎಲ್ 2ನೇ ಹಂತ, ಹೊಸೂರು, ಜಾಲಹಳ್ಳಿ ಡಿಪೋ, ಕಲ್ಯಾಣ ನಗರ, ಕೆಂಗೇರಿ, ಮಲ್ಲೇಶ್ವರಂ ಮಾರ್ಕೆಟ್, ಮಾರುತಿ ಸೇವಾನಗರ, ಮೈಸೂರು ರಸ್ತೆ, ರಾಜಾಜಿನಗರ, ಶಿವಾನಂದ ಸರ್ಕಲ್, ವಿವೇಕಾನಂದ ನಗರ, ವಸಂತನಗರ, ಹಾಗೂ ವಿಧಾನಸೌಧ ಅಂಚೆ ಕಚೇರಿಗಳಲ್ಲಿ ಸೇವೆಗಳು ಲಭ್ಯವಿರುವುದಿಲ್ಲ. ಆರ್.ಎಫ್ ಡಿಪೋ ಮತ್ತು ರಂಗರಾಜಪುರ ಅಂಚೆ ಕಚೇರಿಗಳ ಮೇಲೂ ಈ ತಂತ್ರಜ್ಞಾನ ಅಳವಡಿಕೆ ಪರಿಣಾಮ ಬೀರಲಿದೆ.
ಪರ್ಯಾಯ ಮಾರ್ಗವೇನು?
ಈ ನಾಲ್ಕು ದಿನಗಳ ಕಾಲ ಗ್ರಾಹಕರು ಆತಂಕಪಡುವ ಅಗತ್ಯವಿಲ್ಲ. ಬೆಂಗಳೂರು ಜಿಪಿಒ ಹಾಗೂ ಮೇಲೆ ತಿಳಿಸಿದ ನಿರ್ದಿಷ್ಟ ಕಚೇರಿಗಳನ್ನ ಹೊರತುಪಡಿಸಿ, ನಗರದ ಇತರ ಮುಖ್ಯ ಅಂಚೆ ಕಚೇರಿಗಳಲ್ಲಿ ಸೇವೆಗಳು ಎಂದಿನಂತೆ ಮುಂದುವರಿಯಲಿವೆ. ಪಾರ್ಸಲ್ ಪಡೆದವರು ಅಥವಾ ಕಳುಹಿಸುವವರು ಬೇರೆ ಕಚೇರಿಗಳನ್ನ ಸಂಪರ್ಕಿಸಬಹುದು.
ಅಲ್ಲದೆ, ಪ್ರೀಪೇಯ್ಡ್ ಅಂಚೆ ಪಾವತಿ ಮತ್ತು ಇತರ ಕೆಲ ಸೇವೆಗಳನ್ನ ಆನ್‌ಲೈನ್ ಮೂಲಕವೂ ಮುಂದುವರಿಸಲು ಅವಕಾಶ ಕಲ್ಪಿಸಲಾಗಿದೆ. ಅಕ್ಟೋಬರ್ 26ರ ಬಳಿಕ ಹೊಸ ವ್ಯವಸ್ಥೆಯೊಂದಿಗೆ ವಿಮೆ ಮತ್ತು ಅಂಚೆ ಸೇವೆಗಳು ಇನ್ನಷ್ಟು ತ್ವರಿತವಾಗಿ ಗ್ರಾಹಕರ ಕೈಸೇರಲಿವೆ.


Click it and Unblock the Notifications
