ಮಹಿಳೆಗೆ 'ಆ' ಚಿತ್ರಗಳನ್ನು ಕಳಿಸುತ್ತಿದ್ದವನಿಗೆ ಪೊಲೀಸರ ಹುಡುಕಾಟ
ಬೆಂಗಳೂರು, ಜನವರಿ 9: ಮೊಬೈಲ್ ನಂಬರ್ ಹ್ಯಾಕ್ ಮಾಡಿ ಬೇರೆಯವರೊಬ್ಬರ ಹೆಂಡತಿಗೆ ಅಶ್ಲೀಲ ಚಿತ್ರಗಳನ್ನು ಕಳಿಸುತ್ತಿದ್ದ ವ್ಯಕ್ತಿಯೊಬ್ಬನಿಗೆ ಬೆಂಗಳೂರು ಪೊಲೀಸರು ಹುಡುಕಾಟ ನಡೆಸಿದ್ದಾರೆ.
"ಅಪರಿಚಿತ ವ್ಯಕ್ತಿಯೊಬ್ಬ ತಮ್ಮ ಹೆಂಡತಿಗೆ ಮೊಬೈಲ್‌ನಲ್ಲಿ ಅಶ್ಲೀಲ ಚಿತ್ರಗಳನ್ನು ಹಾಗೂ ಅಶ್ಲೀಲ ಸಂದೇಶಗಳನ್ನು ಕಳಿಸಿ ಮಾನಸಿಕ ಕಿರುಕುಳ ನೀಡುತ್ತಿದ್ದಾನೆ. ಅವನನ್ನು ಪತ್ತೆ ಹಚ್ಚಿ ಕ್ರಮ ಕೈಗೊಳ್ಳಿ' ಎಂದು ಬೆಂಗಳೂರಿನ ದೊಡ್ಡಪಾಳ್ಯ ಪೊಲೀಸ್ ಠಾಣೆಯಲ್ಲಿ ಸುರೇಶ್ ಎನ್ನುವವರು ಬುಧವಾರ ದೂರು ದಾಖಲಿಸಿದ್ದಾರೆ.
ಆದರೆ, ಬೇರೆಯವರ ಹೆಂಡತಿಗೆ ಅಶ್ಲೀಲ ಚಿತ್ರಗಳನ್ನು ಕಳಿಸುತ್ತಿರುವ ಈ ಅಸಾಮಿ, ದೂರುದಾರರಿಗೆ ಪರಿಚಿತನೇ ಅಥವಾ ಅಪರಿಚಿತನೇ ಎಂದು ಈಗಲೇ ಹೇಳಲಾಗುವುದಿಲ್ಲ. ಅವನ ಸುಳಿವು ಸಿಕ್ಕಿದ್ದು, ಬಂಧನಕ್ಕೆ ಬಲೆ ಬೀಸಿದ್ದೇವೆ ಎಂದು ದೊಡ್ಡಪಾಳ್ಯ ಪೊಲೀಸರು ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಇತ್ತೀಚೆಗೆ ಸೈಬರ್ ಅಪರಾಧಗಳನ್ನು ಹತ್ತಿಕ್ಕಲು ಬೆಂಗಳೂರು ಪೊಲೀಸರು ವ್ಯಾಪಕ ಕ್ರಮ ಕೈಗೊಳ್ಳುತ್ತಿದ್ದರೂ, ದುಷ್ಟರು ಮಾತ್ರ ತಮ್ಮ ಕೈಚಳಕವನ್ನು ತೋರಿಸುತ್ತಲೇ ಇದ್ದಾರೆ.












Click it and Unblock the Notifications