ಯಲಚೇನಹಳ್ಳಿ ಮೆಟ್ರೋ ನಿಲ್ದಾಣದ ಬಳಿ ಲಾಂಗ್ ಝಳಪಿಸಿದವರು ಅರೆಸ್ಟ್
ಬೆಂಗಳೂರು, ಏಪ್ರಿಲ್ 05 : ಯಲಚೇನಹಳ್ಳಿ ಮೆಟ್ರೋ ನಿಲ್ದಾಣದ ಬಳಿ ವ್ಯಕ್ತಿಯೊಬ್ಬರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದ್ದ ಇಬ್ಬರು ಯುವಕರನ್ನು ಬಂಧಿಸಲಾಗಿದೆ. ಹಾಡಗಲೇ ಹಲ್ಲೆ ನಡೆಸಿ, ಸಾರ್ವಜನಿಕರಿಗೂ ಯುವಕರು ಬೆದರಿಕೆ ಹಾಕಿದ್ದರು.
ಹರ್ಷಿತ್ ಗೌಡ (20) ಮತ್ತು ಶರಣ್ (20) ಎಂಬ ಆರೋಪಿಗಳನ್ನು ಸುಬ್ರಮಣ್ಯಪುರ ಉಪ ವಿಭಾಗದ ಪೊಲೀಸರು ಬಂಧಿಸಿದ್ದಾರೆ. ಬುಧವಾರ ಸಂಜೆ 5.30ಕ್ಕೆ ಯಲಚೇನಹಳ್ಳಿ ಮೆಟ್ರೋ ನಿಲ್ದಾಣದ ಬಳಿ ವ್ಯಕ್ತಿಯೊಬ್ಬರಿಗೆ ಯುವಕರು ಥಳಿಸಿದ್ದರು.
ಹಲ್ಲೆ ಮಾಡುತ್ತಿರುವ ದೃಶ್ಯವನ್ನು ಚಿತ್ರೀಕರಿಸುತ್ತಿದ್ದ ಸಾರ್ವಜನಿಕರಿಗೆ ಬೆದರಿಕೆ ಹಾಕಿದ್ದರು. ವಾಹನದ ಗಾಜುಗಳನ್ನು ಒಡೆದು ಕೊಲೆ ಬೆದರಿಕೆ ಹಾಕಿದ್ದರು. ಸಾಮಾಜಿಕ ಜಾಲತಾಣದಲ್ಲಿ ಈ ಹಲ್ಲೆಯ ದೃಶ್ಯ ವೈರಲ್ ಆಗಿತ್ತು.

ಯಲಚೇನಹಳ್ಳಿಯಿಂದ ಸುಬ್ರಮಣ್ಯಪುರ ಪೊಲೀಸ್ ಠಾಣಾ ವ್ಯಾಪ್ತಿಯ ಕೋಣನಕುಂಟೆ ಮುಖ್ಯ ರಸ್ತೆಯ ಡಿ.ಕೆ.ಚಿಕನ್ ಸಮೀಪ ಸಂಜೆ 6.45ಕ್ಕೆ ಬೊಲೆರೋ ವಾಹನ ಚಾಲಕನನ್ನು ಅಡ್ಡಗಟ್ಟಿ ವಾಹನದ ಗಾಜನ್ನು ಒಡೆದು ಹಾಕಿದ್ದರು. ಇಲ್ಲಿಯೂ ಸಹ ಜನರಿಗೆ ಬೆದರಿಕೆ ಹಾಕಿದ್ದರು.
ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ್ದ ದಕ್ಷಿಣ ವಿಭಾಗದ ಡಿಸಿಪಿ ಅಣ್ಣಾಮಲೈ ಅವರು ಆರೋಪಿಗಳ ಪತ್ತೆಗೆ 3 ತಂಡಗಳನ್ನು ರಚನೆ ಮಾಡಿದ್ದರು. ಘಟನೆ ನಡೆದ 8 ಗಂಟೆಯೊಳಗೆ ಪೊಲೀಸರು ಆರೋಪಿಗಳನ್ನು ಪತ್ತೆ ಹಚ್ಚಿದ್ದಾರೆ.
ಕೇವಲ 20 ವರ್ಷದ ಈ ಇಬ್ಬರು ಆರೋಪಿಗಳ ವಿರುದ್ಧ ಕುಮಾರಸ್ವಾಮಿ ಬಡಾವಣೆ ಮತ್ತು ಜಯನಗರ ಪೊಲೀಸ್ ಠಾಣೆಯಲ್ಲಿ ಕೊಲೆ ಮತ್ತು ದರೋಡೆ ಪ್ರಕರಣಗಳು ದಾಖಲಾಗಿವೆ. ಆರೋಪಿಗಳ ವಿಚಾರಣೆಯನ್ನು ಪೊಲೀಸರು ನಡೆಸುತ್ತಿದ್ದಾರೆ.












Click it and Unblock the Notifications