ಬಿಜೆಪಿ ಭದ್ರಕೋಟೆಯಲ್ಲಿ ಶೋಭಾ ಕರಂದ್ಲಾಜೆಗೆ ಕಠಿಣ ಸವಾಲು!
ಬೆಂಗಳೂರು, ಏಪ್ರಿಲ್ 23: ಬೆಂಗಳೂರು ನಗರದ ಲೋಕಸಭೆ ಚುನಾವಣೆ ಚಿತ್ರಣ ಕುತೂಹಲಕ್ಕೆ ಕಾರಣವಾಗಿದೆ. ಒಕ್ಕಲಿಗ ಸಮುದಾಯದ ಇಬ್ಬರು ನಾಯಕರು ಕಣದಲ್ಲಿರುವ ಬೆಂಗಳೂರು ಉತ್ತರದಲ್ಲಿ ಬಿಜೆಪಿಯ ಶೋಭಾ ಕರಂದ್ಲಾಜೆ ಹಲವು ಸವಾಲುಗಳನ್ನು ಎದುರಿಸುತ್ತಿದ್ದಾರೆ.
ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಹಾಲಿ ಸಂಸದೆ ಶೋಭಾ ಕರಂದ್ಲಾಜೆ. ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಖಾತೆ ರಾಜ್ಯ ಸಚಿವರಾದ ಅವರು ಈ ಬಾರಿ ಕ್ಷೇತ್ರ ಬದಲಾವಣೆ ಮಾಡಿದ್ದಾರೆ. ಬಿಜೆಪಿಯ ಭದ್ರಕೋಟೆಯಾದ ಬೆಂಗಳೂರು ಉತ್ತರದಿಂದ ಕಣಕ್ಕಿಳಿದಿದ್ದಾರೆ. ಎದುರಾಳಿಯಾಗಿ ಕಾಂಗ್ರೆಸ್‌ನಿಂದ ಪ್ರೊ. ಎಂ. ವಿ. ರಾಜೀವ್ ಗೌಡ ಇದ್ದಾರೆ.

2004ರಿಂದಲೂ ಬೆಂಗಳೂರು ಉತ್ತರ ಬಿಜೆಪಿ ಭದ್ರಕೋಟೆ. ಹಾಲಿ ಸಂಸದ ಡಿ. ವಿ. ಸದಾನಂದ ಗೌಡರಿಗೆ ಟಿಕೆಟ್ ಕೈ ತಪ್ಪಿದೆ. ಉಡುಪಿ-ಚಿಕ್ಕಮಗಳೂರು ಬಿಟ್ಟು ಶೋಭಾ ಕರಂದ್ಲಾಜೆ ಅವರಿಗೆ ಬೆಂಗಳೂರು ಉತ್ತರದ ಟಿಕೆಟ್ ನೀಡಲಾಗಿದೆ.
ಒಕ್ಕಲಿಗರು ನಿರ್ಣಾಯಕ: ಎನ್‌ಡಿಎ ಅಭ್ಯರ್ಥಿ ಶೋಭಾ ಕರಂದ್ಲಾಜೆ ಮತ್ತು ಕಾಂಗ್ರೆಸ್‌ನ ಪ್ರೊ. ಎಂ. ವಿ. ರಾಜೀವ್ ಗೌಡ ಇಬ್ಬರೂ ಸಹ ಒಕ್ಕಲಿಗ ಸಮುದಾಯಕ್ಕೆ ಸೇರಿದವರು. ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ದೇಶ ಹೇಗೆ ಅಭಿವೃದ್ಧಿಯಾಗುತ್ತಿದೆ? ಎಂದು ಜನರಿಗೆ ತಿಳಿಸುವ ಮೂಲಕ ಶೋಭಾ ಕರಂದ್ಲಾಜೆ ಮತವನ್ನು ಕೇಳುತ್ತಿದ್ದಾರೆ.
ಒಂದು ಕಾಲದಲ್ಲಿ ಕಾಂಗ್ರೆಸ್ ವಶದಲ್ಲಿದ್ದ ಬೆಂಗಳೂರು ಉತ್ತರವನ್ನು 2004ರಲ್ಲಿ ಬಿಜೆಪಿ ತನ್ನ ವಶಕ್ಕೆ ಪಡೆಯಿತು. ಕೇಂದ್ರದ ಮಾಜಿ ಸಚಿವ ಸಿ. ಕೆ. ಜಾಫರ್ ಷರೀಫ್ 7 ಬಾರಿ ಕ್ಷೇತ್ರವನ್ನು ಪ್ರತಿನಿಧಿಸಿದ್ದಾರೆ.
2004ರಿಂದ ಕ್ಷೇತ್ರದಲ್ಲಿ ಬಿಜೆಪಿಯ ಹೆಚ್. ಟಿ. ಸಾಂಗ್ಲಿಯಾನ, ಡಿ. ಬಿ. ಚಂದ್ರೇಗೌಡ ಮತ್ತು ಡಿ. ವಿ. ಸದಾನಂದ ಗೌಡ ಆಯ್ಕೆಯಾಗಿದ್ದಾರೆ. ಕ್ಷೇತ್ರದ 8 ವಿಧಾನಸಭಾ ಕ್ಷೇತ್ರಗಳಲ್ಲಿ 5ರಲ್ಲಿ ಬಿಜೆಪಿ ಶಾಸಕರು ಇದ್ದಾರೆ. ಉಳಿದ ಮೂರು ಕಾಂಗ್ರೆಸ್ ವಶದಲ್ಲಿದೆ. ಈ ಬಾರಿ ಬಿಜೆಪಿಗೆ ಜೆಡಿಎಸ್‌ನ ಬೆಂಬಲವೂ ಇದೆ.
ರಾಜ್ಯಸಭೆಯ ಮಾಜಿ ಸದಸ್ಯರಾದ ಪ್ರೊ. ರಾಜೀವ್ ಗೌಡ ಮೊದಲ ಬಾರಿಗೆ ಲೋಕಸಭೆ ಚುನಾವಣೆ ಎದುರಿಸುತ್ತಿದ್ದಾರೆ. ಕರ್ನಾಟಕದಲ್ಲಿ ಮೋದಿ ಅಲೇಯೇ ಇಲ್ಲ ಎಂದು ರಾಜೀವ್ ಗೌಡ ಮತ್ತು ಕಾಂಗ್ರೆಸ್ ಕಾರ್ಯಕರ್ತರು ಪ್ರಚಾರದಲ್ಲಿ ತೊಡಗಿದ್ದಾರೆ.
ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಇರುವುದು. ಪಕ್ಷ ಅಧಿಕಾರಕ್ಕೆ ಬಂದ ಬಳಿಕ ಜಾರಿಗೊಳಿಸಿರುವ ಗ್ಯಾರಂಟಿ ಯೋಜನೆಗಳು ಸಹಾಯಕವಾಗಲಿದೆ ಎಂಬ ನಿರೀಕ್ಷೆಯಲ್ಲಿದ್ದಾರೆ ಕಾಂಗ್ರೆಸ್ ನಾಯಕರು. ಏಪ್ರಿಲ್ 26ರಂದು ಬೆಂಗಳೂರು ಉತ್ತರದಲ್ಲಿ ಮತದಾನ ನಡೆಯಲಿದ್ದು,ಪ್ರಚಾರ ಜೋರಾಗಿ ಸಾಗಿದೆ.
ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಹಾಲಿ ಸಂಸದೆ ಶೋಭಾ ಕರಂದ್ಲಾಜೆ ಕ್ಷೇತ್ರದಲ್ಲಿ ಗೋ ಬ್ಯಾಕ್ ಅಭಿಯಾನ ಎದುರಿಸಿದ್ದರು. ಆಗ ಪಕ್ಷ ಅವರನ್ನು ಬೆಂಗಳೂರು ಉತ್ತರದಿಂದ ಕಣಕ್ಕಿಳಿಸಿದೆ. ಮೊದಲು ಇಲ್ಲಿಯೂ ಅವರಿಗೆ ಟಿಕೆಟ್ ನೀಡಲು ವಿರೋಧ ವ್ಯಕ್ತವಾಗಿತ್ತು. ಈಗ ಎಲ್ಲವೂ ಸರಿ ಇದೆ ಎಂಬಂತೆ ಚುನಾವಣಾ ಪ್ರಚಾರ ಸಾಗುತ್ತಿದೆ.
ಬೆಂಗಳೂರು ಉತ್ತರದಲ್ಲಿ ಕಳೆದ ಚುನಾವಣೆಯಲ್ಲಿ ಬಿಜೆಪಿಯ ಡಿ. ವಿ. ಸದಾನಂದ ಗೌಡ 824,500 ಮತಗಳನ್ನು ಪಡೆದು ಜಯಗಳಿಸಿದ್ದರು. ಕಾಂಗ್ರೆಸ್‌ನ ಕೃಷ್ಣ ಬೈರೇಗೌಡ 676,982 ಮತಗಳನ್ನು ಪಡೆದಿದ್ದರು. ಕ್ಷೇತ್ರದಲ್ಲಿ ಕಳೆದ ಬಾರಿ ಅಧಿಕ ನೋಟ ಮತಗಳು ಚಲಾವಣೆಗೊಂಡಿದ್ದವು. ಈ ಬಾರಿ ಯಾರಿಗೆ ಗೆಲುವು ಎಂದು ಕಾದು ನೋಡಬೇಕು.
ಬಿಜೆಪಿ ಶಾಸಕರು, ಜೆಡಿಎಸ್ ನಾಯಕರ ಜೊತೆ ಶೋಭಾ ಕರಂದ್ಲಾಜೆ ಈಗಾಗಲೇ ಪ್ರಚಾರವನ್ನು ಬಿರುಸಿನಿಂದ ಕೈಗೊಂಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಸಹ ಒಂದು ಬಾರಿ ಪ್ರಚಾರವನ್ನು ಮುಗಿಸಿ ಹೋಗಿದ್ದಾರೆ. ಆದರೆ ಶೋಭಾ ಕರಂದ್ಲಾಜೆ ಸ್ಥಳೀಯರು ಅಲ್ಲ ಎನ್ನುವ ಅಂಶ ಚುನಾವಣೆಯಲ್ಲಿ ಸವಾಲಾಗಿ ಪರಿಣಮಿಸಬಹುದು ಎಂಬುದು ಲೆಕ್ಕಾಚಾರವಾಗಿದೆ.












Click it and Unblock the Notifications