ಕಾಂಗ್ರೆಸ್ ತೊರೆದು ಜೆಡಿಎಸ್ ಸೇರಿದ ವೈಎಸ್‌ವಿ ದತ್ತಾ ವಿರುದ್ಧ ಜಾಮೀನು ರಹಿತ ಬಂಧನ ವಾರಂಟ್- ಕಾರಣ ತಿಳಿಯಿರಿ
ಬೆಂಗಳೂರು, ಏಪ್ರಿಲ್ 15: ಚೆಕ್ ಬೌನ್ಸ್ ಪ್ರಕರಣದಲ್ಲಿ ಬೆಂಗಳೂರಿನ ನ್ಯಾಯಾಲಯವು ಜಾಮೀನು ರಹಿತ ಬಂಧನ ವಾರಂಟ್ ಹೊರಡಿಸಿದ ನಂತರ ಜೆಡಿಎಸ್ ನಾಯಕ ವೈಎಸ್‌ವಿ ದತ್ತಾ ಅವರ ಸಂಕಷ್ಟ ಮುಂದುವರೆದಿದೆ.
ಟಿವಿ9 ಪ್ರಕಾರ, ದತ್ತಾ ಶನಿವಾರ ಮೊತ್ತವನ್ನು ಪಾವತಿಸಬೇಕಿತ್ತು. ಅವರು ಹಾಜರಾಗದ ಕಾರಣ, ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ವಾರಂಟ್ ಬಿಡುಗಡೆ ಮಾಡಿದೆ. ಹಾಜರಾತಿಯಿಂದ ವಿನಾಯಿತಿ ಕೋರಿ ದತ್ತಾ ಸಲ್ಲಿಸಿದ್ದ ಮನವಿಯನ್ನೂ ನ್ಯಾಯಾಲಯ ವಜಾಗೊಳಿಸಿದೆ.

ಏಪ್ರಿಲ್ 26 ರಂದು ಹಾಜರಾಗುವಂತೆ ದತ್ತಾ ಅವರಿಗೆ ನ್ಯಾಯಾಲಯ ಸೂಚಿಸಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಈ ಹಿಂದೆ ಸಿಎಸ್ ಸೋಮೇಗೌಡ ಎಂಬುವರು ಚೆಕ್ ಬೌನ್ಸ್ ಪ್ರಕರಣ ದಾಖಲಿಸಿದ್ದರು. ಈ ಹಿಂದೆಯೂ ದತ್ತಾ ವಿರುದ್ಧ ಹಲವು ಬಂಧನ ವಾರಂಟ್‌ಗಳನ್ನು ಹೊರಡಿಸಲಾಗಿತ್ತು.
ಇತ್ತೀಚೆಗೆ ಕಾಂಗ್ರೆಸ್‌ಗೆ ಸೇರ್ಪಡೆಯಾಗಿದ್ದ ಕಡೂರಿನ ಮಾಜಿ ಶಾಸಕ ವೈಎಸ್‌ವಿ ದತ್ತ ಗುರುವಾರ ಪಕ್ಷದ ಮುಖಂಡ ಹೆಚ್‌ಡಿ ರೇವಣ್ಣ, ಅವರ ಪುತ್ರ ಪ್ರಜ್ವಲ್ ರೇವಣ್ಣ ಹಾಗೂ ನೂರಾರು ಬೆಂಬಲಿಗರು ಹಾಗೂ ಪಕ್ಷದ ಕಾರ್ಯಕರ್ತರ ಸಮ್ಮುಖದಲ್ಲಿ ಜೆಡಿಎಸ್‌ಗೆ ಮರಳಿದರು.
ಈ ವೇಳೆ, ಮಾತನಾಡಿರುವ ಹಾಸನ ಸಂಸದ ಪ್ರಜ್ವಲ್ ರೇವಣ್ಣ, 'ದತ್ತಣ್ಣ ಹಾಗೂ ಅವರ ಹಿಂಬಾಲಕರಿಗೆ ಕಾಂಗ್ರೆಸ್ ದ್ರೋಹ ಬಗೆದಿದೆ. ಇತ್ತೀಚಿನ ಬೆಳವಣಿಗೆಗಳಿಂದ ಅವರಿಗೆ ನೋವಾಗಿದೆ. ಅವರು ನಮ್ಮನ್ನು ಅಗಲಿದಾಗ ನಾವು ಕೂಡ ನೋವಿನಲ್ಲಿದ್ದೆವು. ಹಿಂದಿನದನ್ನು ಸಮಾಧಿ ಮಾಡಿ ಮುಂದೆ ಸಾಗುವ ಸಮಯ. ನಾವು ಅವರನ್ನು ಪಕ್ಷಕ್ಕೆ ಮುಕ್ತ ತೋಳುಗಳೊಂದಿಗೆ ಸ್ವಾಗತಿಸುತ್ತೇವೆ' ಎಂದು ಹೇಳಿದ್ದಾರೆ.
ಪಕ್ಷದ ಮುಖಂಡ ಹಾಗೂ ಮಾಜಿ ಸಚಿವ ಎಚ್‌ಡಿ ರೇವಣ್ಣ ಮಾತನಾಡಿ, 'ದತ್ತ ಅವರು ಪಕ್ಷಕ್ಕೆ ನೀಡಿದ ಕೊಡುಗೆ ನಮಗೆಲ್ಲರಿಗೂ ತಿಳಿದಿದೆ. ದತ್ತ ಅವರು ಕಡೂರಿನಿಂದ ಸ್ಪರ್ಧಿಸಬೇಕೆಂದು ನಾವು ಬಯಸುತ್ತೇವೆ' ಎಂದಿದ್ದಾರೆ.
ಕಳೆದ ವಾರ ಕಾಂಗ್ರೆಸ್ ಟಿಕೆಟ್ ನಿರಾಕರಿಸಿದ ಹಿನ್ನೆಲೆಯಲ್ಲಿ ಕಡೂರಿನಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿ ದತ್ತ ಘೋಷಿಸಿದ್ದರು. ಕೆಎಸ್ ಆನಂದ್ ಅವರಿಗೆ ಕಾಂಗ್ರೆಸ್ ಕಡೂರು ಟಿಕೆಟ್ ನೀಡಿತ್ತು.
ಜೆಡಿಎಸ್ ಟಿಕೆಟ್
ಕರ್ನಾಟಕದಲ್ಲಿ ಮೇ 10 ರಂದು ನಡೆಯಲಿರುವ ವಿಧಾನಸಭಾ ಚುನಾವಣೆಗೆ ಜೆಡಿಎಸ್ ತನ್ನ 49 ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಶುಕ್ರವಾರ ಪ್ರಕಟಿಸಿದೆ. ಕಡೂರಿನಿಂದ ವೈಎಸ್‌ವಿ ದತ್ತಾ ಅವರನ್ನು ಕಣಕ್ಕಿಳಿಸಲು ಜೆಡಿಎಸ್ ನಿರ್ಧರಿಸಿದೆ.
ತೀವ್ರ ಕುತೂಹಲ ಕೆರಳಿಸಿದ್ದ ಹಾಸನ ಟಿಕೆಟ್ ಅನ್ನು ಸ್ವರೂಪ್ ಅವರಿಗೆ ಜೆಡಿಎಸ್ ನೀಡಿದೆ. ಅಲ್ಲಿ ಸ್ಪರ್ಧಿಸಲು ಬಯಸಿದ್ದ ಎಚ್‌ಡಿ ರೇವಣ್ಣ ಅವರ ಪತ್ನಿ ಭವಾನಿ ಅವರಿಗೆ ಮುಖಭಂಗವಾಗಿದೆ. ಕುಮಾರಸ್ವಾಮಿ ಅವರ ಬಯಕೆಯಂತೆ 'ಸಾಮಾನ್ಯ ಕಾರ್ಯಕರ್ತ ಸ್ವರೂಪ್' ಅವರಿಗೆ ಟಿಕೆಟ್ ಘೋಷಿಸಿದೆ.
ಭವಾನಿ ಅವರಿಗೆ ಟಿಕೆಟ್ ನೀಡಬೇಕೆಂದು ಅವರ ಪುತ್ರರಾದ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಹಾಗೂ ಎಂಎಲ್‌ಸಿ ಸ್ವರೂಪ್ ಅವರು ಒತ್ತಾಯಿಸಿದ್ದರು. ಆದರೆ, ಕುಮಾರಸ್ವಾಮಿ ಅವರು ಇದಕ್ಕೆ ಮಣೆ ಹಾಕಲಿಲ್ಲ. ಈ ಹಿನ್ನೆಲೆಯಲ್ಲಿ ಸ್ವರೂಪ್ ಅವರಿಗೆ ಜೆಡಿಎಸ್ ಟಿಕೆಟ್ ಘೋಷಿಸಿದೆ.
ಮೇ 10 ರಂದು ನಡೆಯಲಿರುವ ಕರ್ನಾಟಕ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ ಮೂರನೇ ಪಟ್ಟಿ ಬಿಡುಗಡೆ ಮಾಡಿದೆ. ಬಿಜೆಪಿ ಎರಡು ಪಟ್ಟಿಯನ್ನು ಬಿಡುಗಡೆ ಮಾಡಿದೆ. ಜೆಡಿಎಸ್ ಮೂರು ಪಟ್ಟಿಯನ್ನು ಪ್ರಕಟಿಸಿದೆ. ಇಂದು ಬಿಡುಗಡೆಗೊಂಡ ಪಟ್ಟಿಯಲ್ಲಿ ಐವರನ್ನು ಹೆಸರಿಸಲಾಗಿದೆ.












Click it and Unblock the Notifications