ಬೆಂಗಳೂರಿಗೆ ಬೇಕು 'ಬಸ್ ಭಾಗ್ಯ' ಯೋಜನೆ
ಬೆಂಗಳೂರು, ಜ. 22 : ಬೆಂಗಳೂರಿನಲ್ಲಿ 'ಬಸ್ ಭಾಗ್ಯ' ಯೋಜನೆ ಜಾರಿಗೊಳಿಸಬೇಕು, ಸಾರಿಗೆ ಸಂಸ್ಥೆಗೆ 1,300 ಕೋಟಿ ರೂ. ಅನುದಾನ ನೀಡಿ ನಷ್ಟದಿಂದ ಹೊರತರಬೇಕು, ಬಸ್ ದರ ಕಡಿಮೆ ಮಾಡಬೇಕು ಎಂದು ಒತ್ತಾಯಿಸಿ ಅಭಿಯಾನ ಆರಂಭವಾಗಿದೆ.
ಬಸ್ ಪ್ರಯಾಣಿಕರ ವೇದಿಕೆಯು ಈ ಅಭಿಯಾನವನ್ನು ಆರಂಭಿಸಿದೆ. ವೇದಿಕೆಯ ಕಾರ್ಯಕರ್ತರು ಕೆಂಪೇಗೌಡ ಬಸ್ ನಿಲ್ದಾಣದಲ್ಲಿ ಇದಕ್ಕಾಗಿ ಸಹಿ ಸಂಗ್ರಹ ಅಭಿಯಾನ ನಡೆಸಿದರು. ಆನ್‌ಲೈನ್ ಮೂಲಕವೂ ಜನರು ಈ ಅಭಿಯಾನವನ್ನು ಬೆಂಬಲಿಸಬಹುದಾಗಿದೆ. [ಬಿಎಂಟಿಸಿ ಆಪ್ ನೋಡಿದ್ದೀರಾ?]

ಅಭಿಯಾನದ ಕುರಿತು ಮಾಹಿತಿ ನೀಡಿದ ಬಸ್ ಪ್ರಯಾಣಿಕರ ವೇದಿಕೆಯ ವಿನಯ್ ಶ್ರೀನಿವಾಸ್, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2015-16ನೇ ಸಾಲಿನ ಬಜೆಟ್‌ನಲ್ಲಿ 'ಬಸ್ ಭಾಗ್ಯ' ಯೋಜನೆ ಘೋಷಿಸಬೇಕು ಎಂದು ಈ ಅಭಿಯಾನವನ್ನು ಆರಂಭಿಸಲಾಗಿದೆ ಎಂದು ಹೇಳಿದರು. [ಆನ್ ಲೈನ್ ಮೂಲಕ ಸಹಿ ಮಾಡಿ]
ಬೇಡಿಕೆಗಳು : ಪ್ರಯಾಣ ದರ ಇಳಿಕೆ ಮಾಡಬೇಕು, ಎರಡು ಸಾವಿರ ಬಸ್ ಖರೀದಿ ಮತ್ತು ಸಂಸ್ಥೆಯ ಕಾರ್ಮಿಕರ ಬಾಕಿ ಹಣ ಪಾವತಿಗೆ 1000 ಕೋಟಿ ರೂ. ಅನುದಾನ ಮೀಸಲಿಡಬೇಕು. ಹಾಗೆಯೇ ಎಲ್ಲ ನಿಲ್ದಾಣಗಳಲ್ಲಿ ತಂಗುದಾಣಗಳ ನಿರ್ಮಾಣಕ್ಕೆ ಬಿಬಿಎಂಪಿಗೆ 300 ಕೋಟಿ ರೂ. ನೀಡಬೇಕು ಎಂಬುದು ಪ್ರಮುಖ ಬೇಡಿಯಾಗಿದೆ ಎಂದರು. [ಬಜೆಟ್ ಮಂಡಿಸಲು ಸಿಎಂ ಸಿದ್ದರಾಮಯ್ಯ ಸಿದ್ಧತೆ]
ಬಸ್ ಪಾಸ್ ದರಗಳನ್ನು ಇಳಿಸಿ : ಬೆಂಗಳೂರಿನಲ್ಲಿ ನೆಲೆಸಿರುವ ಶೇ.50ರಷ್ಟು ಕುಟುಂಬಗಳ ಮಾಸಿಕ ಆದಾಯ 5000 ರೂ.ಇದೆ. ಅವರು 1,050 ರೂ. ನೀಡಿ ಮಾಸಿಕ ಪಾಸ್ ಖರೀದಿಸಲು ಸಾಧ್ಯವೇ? ಎಂಬ ಬಗ್ಗೆ ಸರ್ಕಾರ ಆಲೋಚಿಸಿ, ಬಸ್ ಪಾಸ್ ದರವನ್ನು ಕಡಿತಗೊಳಿಸಬೇಕು ಎಂದು ಒತ್ತಾಯಿಸಿದರು.
ದಿನದ ಪಾಸ್ ದರವನ್ನು 25 ರೂ., ಮಾಸಿಕ ಪಾಸ್ ದರವನ್ನು 250 ರೂ.ಗೆ ಇಳಿಕೆ ಮಾಡಬೇಕು. ಕನಿಷ್ಠ ವೇತನಕ್ಕಿಂತ ಕಡಿಮೆ ಆದಾಯ ಗಳಿಸುತ್ತಿರುವ ಕಾರ್ಮಿಕರಿಗೆ ಉಚಿತವಾಗಿ ಬಸ್ ಪಾಸ್ ನೀಡಬೇಕು ಎಂದು ವೇದಿಕೆ ಸರ್ಕಾರಕ್ಕೆ ಮನವಿ ಮಾಡಿದೆ.












Click it and Unblock the Notifications