Namma Metro: ಹೊಸ ವರ್ಷ ಸಂಭ್ರಮದಲ್ಲಿ ದಾಖಲೆ ಬರೆದ ಮೆಟ್ರೋ: ಒಂದೇ ದಿನ ₹3.8 ಕೋಟಿ ಆದಾಯ
ಬೆಂಗಳೂರು: ಹೊಸ ವರ್ಷಾಚರಣೆ 2026 ಪ್ರಯುಕ್ತ ಬೆಂಗಳೂರು ನಮ್ಮ ಮೆಟ್ರೋ (Bengaluru Metro) ಕಳೆದ ಡಿಸೆಂಬರ್ 31 ಮಧ್ಯರಾತ್ರಿವರೆಗೂ ರೈಲು ಸೇವೆ ವಿಸ್ತರಣೆ ಮಾಡಲಾಗಿತ್ತು. ಮೂರೂ ಮೆಟ್ರೋ ಮಾರ್ಗಗಳಲ್ಲಿ ಅತ್ಯಧಿಕ ಪ್ರಮಾಣಿಕರ ಸಂಚಾರ ಕಂಡು ಬಂತು. ಇದರಿಂದ ಒಂದೇ ದಿನದಲ್ಲಿನ ಮೆಟ್ರೋ ನಿಗಮಕ್ಕೆ ಭರ್ಜರಿ ಆದಾಯ ಸಂಗ್ರಹವಾಗಿದೆ. ಇದು ಈವರೆಗಿನ ಬಿಎಂಆರ್‌ಸಿಎಲ್ ಇತಿಹಾಸದಲ್ಲಿ ಏಕದಿನದ ಅತ್ಯಧಿಕ ಆದಾಯವಾಗಿದೆ.
ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ಡಿಸೆಂಬರ್ 31ರಂದು ಮಧ್ಯರಾತ್ರಿ 3ಗಂಟೆವರೆಗು ಮೆಟ್ರೋ ರೈಲುಗಳ ಕಾರ್ಯಾಚರಣೆ ನಡೆಸಿತು. ಕೊನೆಯ ರೈಲು ಮೆಜೆಸ್ಟಿಕ್‌ನಿಂದ ಬೆಳಗಿನ ಜಾವ 2.45 ಗಂಟೆಗೆ ಹೊರಟಿತು. ಮೆಟ್ರೋ ಸೇವೆ ವಿಸ್ತರಣೆಯಿಂದ ಹೊಸ ವರ್ಷ ಆಚರಿಸಿದ ಪ್ರಯಾಣಿಕರಿಗೆ ಮನೆಗೆ ತೆರಳಲು ಅನುಕೂಲವಾಯಿತು. ಬೆಂಗಳೂರು ಸಂಚಾರಿ ಪೊಲೀಸರ ಡ್ರಿಂಕ್ ಆಂಡ್ ಡ್ರೈವ್ ತಪಾಸಣೆ ಹಿನ್ನೆಲೆ ಹೆಚ್ಚಿನ ಸಂಖ್ಯೆಯ ಜನರು ಮೆಟ್ರೋದಲ್ಲಿ ಸಂಚಾರ ಮಾಡಿದರು ಎಂದು ನ್ಯೂಸ್ ಏಟಿನ್ ವರದಿ ಮಾಡಿದೆ.

ಡಿಸೆಂಬರ್ 31ರಂದು ನಮ್ಮ ಮೆಟ್ರೋ ರೈಲುಗಳಲ್ಲಿ ಬರೋಬ್ಬರಿ 8,93,000ಕ್ಕೂ ಅಧಿಕ ಜನರು ಪ್ರಯಾಣ ಮಾಡಿದ್ದಾರೆ. ಎಲೆಕ್ಟ್ರಾನಿಕ್ ಸಿಟಿಕಡೆಗಿನ ಹಳದಿ ಮಾರ್ಗ (Metro Yellow Line), ವೈಟ್‌ಫಿಲ್ಡ್-ಚಲಘಟ್ಟವರೆಗಿನ ನೇರಳೆ ಮಾರ್ಗ (Metro Purple Line) ಮತ್ತು ರೇಷ್ಮೆಸಂಸ್ಥೆ-ಮಾದಾವರ ವರೆಗಿನ ಹಸಿರು ಮಾರ್ಗಗಳಲ್ಲಿ (Metro Green Line) ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಕರು ಪ್ರಯಾಣ ಮಾಡಿದರು. ಇದರಿಂದ ಅಂದು ಒಂದೇ ದಿನಕ್ಕೆ ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ಗೆ ಕೋಟಿ ಕೋಟಿ ರೂಪಾಯಿ ಆದಾಯ ಹರಿದು ಬಂದಿದೆ.
ನಮ್ಮ ಮೆಟ್ರೋ 2025ರ ಕೊನೆ ದಿನದ ಸಂಚಾರ ಸೇವೆ ವಿಸ್ತರಣೆ ಕಾರಣದಿಂದಾಗಿ ಒಟ್ಟಾರೆ 03.8 ಕೋಟಿ ರೂಪಾಯಿ ಆದಾಯ ಸಂಗ್ರಹವಾಗಿದೆ. ಪ್ರಯಾಣಿಕರ ಸಂಖ್ಯೆಯಲ್ಲಿನ ಏರಿಕೆಯಿಂದಾಗಿ ಈ ಗರಿಷ್ಠ ಆದಾಯ ಗಳಿಕೆ ಸಾಧನೆ ಮಾಡಲಾಗಿದೆ. ಈವರೆಗಿನ ಮೆಟ್ರೋ ಇತಿಹಾಸದಲ್ಲಿ ಒಂದೇ ದಿನದಲ್ಲಿ (2025 ಡಿಸೆಂಬರ್ 31ರಂದು) ಅತ್ಯಧಿಕ ಸಾರ್ವಕಾಲಿಕ ದಾಖಳೆ ಆದಾಯ ಸಂಗ್ರಹವಾಗಿದೆ ಎಂದು ಬಿಎಂಆರ್‌ಸಿಎಲ್ ಅಧಿಕಾರಿಗಳು ತಿಳಿಸಿದ್ದಾರೆ.
ಮೆಟ್ರೋ ಸೇವೆ ವಿಸ್ತರಣೆಗೆ ಪ್ರಯಾಣಿಕರ ಸಂತಸ
ಇನ್ನೂ ಮಧ್ಯರಾತ್ರಿವರೆಗೂ ನಮ್ಮ ಮೆಟ್ರೋ ವಿಸ್ತರಣೆ ಮಾಡಿದ್ದರಿಂದಾಗಿ ಹೊಸ ವರ್ಷದ ಜೋಶ್ ನಲ್ಲಿದ್ದ ಸಾವಿರಾರು ಪ್ರಯಾಣಿಕರಿಗೆ ಮನೆ ತಲುಪಲು ಸಹಾಯವಾಯಿತು. ಇಲ್ಲವಾದರೆ ನಡು ರಾತ್ರಿಯಲ್ಲಿ ಕ್ಯಾಬ್, ಟ್ಯಾಕ್ಸಿ ಅಟೋಗಳಿಗೆ ನೂರಾರು ರೂಪಾಯಿ ಕೊಡಬೇಕಾಗಿತ್ತು ಎಂದು ಪ್ರಯಾಣಿಕರೊಬ್ಬರು ಪ್ರತಿಕ್ರಿಯಿಸಿದ್ದಾರೆ. ಹೆಚ್ಚುವರಿ ಶುಲ್ಕವಿಲ್ಲದೇ ಮಹಿಳೆಯರು, ಯುವ ಸಮೂಹ ಸೂಕ್ತ ಸಮಯಕ್ಕೆ ಸುರಕ್ಷತೆಯಿಂದ ಮನೆ ತಲುಪಲು ಸಾಧ್ಯವಾಯಿತು ಎಂದು ಬಿಎಂಆರ್‌ಸಿಎಲ್ ಸೇವೆಗೆ ಕೆಲವರು ಧನ್ಯವಾದ ತಿಳಿಸಿದ್ದಾರೆ.
ಮೆಟ್ರೋ ಸಾರಿಗೆ ಅವಲಂಬನೆ ಏರಿಕೆ
ಪ್ರಯಾಣದ ದರ ಹೆಚ್ಚಳದಿಂದಾಗಿ ಒಂದು ಲಕ್ಷದಷ್ಟು ಪ್ರಯಾಣಿಕರು ಮೆಟ್ರೋ ಸಾರಿಗೆಯಿಂದ ವಿಮುಖರಾಗಿದ್ದರು. ಕಳೆದ ವರ್ಷ ಆಗಸ್ಟ್ 10ರಂದು ಆರ್.ವಿ.ರಸ್ತೆ-ಬೊಮ್ಮಸಂದ್ರವರೆಗಿನ ಹಳದಿ ಮಾರ್ಗ ತೆರೆದ ಬೆನ್ನಲ್ಲೆ ನಿರಂತರವಾಗಿ ಮೆಟ್ರೋ ಸಾರಿಗೆ ಮೇಲಿನ ಜನರ ಅವಲಂಬನೆ ಹೆಚ್ಚಾಯಿತು. ವಿಶೇಷ ಸಂದರ್ಭಗಳಲ್ಲಿ ಮೆಟ್ರೋ ಪ್ರಯಾಣಿಕರ ಸಂಖ್ಯೆ ಒಟ್ಟಾರೆ ಸುಮಾರು 10 ಲಕ್ಷ ಆಸುಪಾಸು ಇದೆ. ದಿನದಿಂದ ದಿನಕ್ಕೆ ಮಟ್ರೋ ಪ್ರಯಾಣಿಕರ ಸಂಖ್ಯೆ ಹೆಚ್ಚಾಗುತ್ತಿದೆ. ಉದ್ದೇಶಿತ ಹೊಸ ನೀಲಿ ಮಾರ್ಗ, ಗುಲಾಬಿ ಮಾರ್ಗಗಳು ತೆರೆದರೆ ಈ ಪ್ರಯಾಣಿಕರ ಸಂಖ್ಯೆಯಲ್ಲಿ ಮತ್ತಷ್ಟು ಏರಿಕೆ ಕಂಡು ಬರಲಿದೆ.












Click it and Unblock the Notifications