ಹಳಿತಪ್ಪಿದ ಬೆಂಗಳೂರು-ಮೈಸೂರು ಹೈಸ್ಪೀಡ್ ರೈಲು ಯೋಜನೆ
ಬೆಂಗಳೂರು, ಡಿಸೆಂಬರ್ 15 : ಬೆಂಗಳೂರು-ಮೈಸೂರು ನಡುವಿನ ಹೈಸ್ಪೀಡ್ ರೈಲು ಯೋಜನೆಯನ್ನು ಕೈಬಿಡಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಇದರ ಬದಲು ಆರು ಪಥದ ರಸ್ತೆ ನಿರ್ಮಾಣ ಕಾಮಗಾರಿಯನ್ನು 2016ರ ಆರಂಭದಲ್ಲಿ ಕೈಗೆತ್ತಿಕೊಳ್ಳಲು ತೀರ್ಮಾನಿಸಲಾಗಿದೆ.
ಗೃಹ ಕಚೇರಿ ಕೃಷ್ಣಾದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಕುರಿತು ಮಾಹಿತಿ ನೀಡಿದರು, 'ಬೆಂಗಳೂರು-ಮೈಸೂರು ನಡುವೆ ಹೈಸ್ಪೀಡ್ ರೈಲು ಯೋಜನೆ ಜಾರಿಗೊಳಿಸುವುದು ಕ್ಲಿಷ್ಟಕರ ಎಂಬ ವರದಿ ಬಂದಿದೆ. ಆದ್ದರಿಂದ ಯೋಜನೆಯನ್ನು ಕೈಬಿಡಲಾಗುತ್ತಿದೆ' ಎಂದು ಹೇಳಿದರು. [ಬೆಂಗಳೂರು-ಮೈಸೂರು ನಡುವೆ 6 ಪಥದ ರಸ್ತೆ ನಿರ್ಮಾಣ]

160 ಕಿ.ಮೀ. ವೇಗ ಮಾತ್ರ ಸಾಧ್ಯ : 'ರೈಲ್ವೆ ವಿಕಾಸ ನಿಗಮ ಮತ್ತು ಹೈಸ್ಪೀಡ್ ರೈಲ್ವೆ ಕಾರ್ಪೊರೇಷನ್ ಜಂಟಿಯಾಗಿ ಬೆಂಗಳೂರು-ಮೈಸೂರು ನಡುವಿನ ಮಾರ್ಗದಲ್ಲಿ ಸಮೀಕ್ಷೆ ನಡೆಸಿವೆ. ಮಾರ್ಗದಲ್ಲಿ 160 ಕಿ.ಮೀ.ಗಿಂತ ಹೆಚ್ಚಿನ ವೇಗದಲ್ಲಿ ರೈಲು ಸಂಚರಿಸುವುದು ಕಷ್ಟ ಎಂದು ವರದಿ ನೀಡಿವೆ' ಎಂದು ಸಿದ್ದರಾಮಯ್ಯ ತಿಳಿಸಿದರು. [ಬೆಂಗಳೂರು-ಮೈಸೂರು ರೈಲ್ವೆ ಪ್ರಯಾಣಿಕರಿಗೆ ಸಿಹಿ ಸುದ್ದಿ]
2015-16ನೇ ಸಾಲಿನ ಕೇಂದ್ರ ಬಜೆಟ್‌ನಲ್ಲಿ ಚೆನ್ನೈ ಮತ್ತು ಮೈಸೂರು ನಡುವಿನ ಹೈಸ್ಪೀಡ್ ರೈಲು ಯೋಜನೆ ಘೋಷಣೆಯಾಗಿತ್ತು. ಇದನ್ನು ಬೆಂಗಳೂರು ತನಕವೂ ವಿಸ್ತರಣೆ ಮಾಡುವ ಕುರಿತು ಸಿದ್ದರಾಮಯ್ಯ ಅವರು ಚೀನಾದ ಪ್ರತಿನಿಧಿಗಳೊಂದಿಗೆ ಮಾತುಕತೆ ನಡೆಸಿದ್ದರು. ಉಭಯ ನಗರಗಳ ನಡುವೆ ಹೈಸ್ಪೀಡ್ ರೈಲು ಯೋಜನೆ ಜಾರಿ ಅಸಾಧ್ಯ ಎಂದು ದೆಹಲಿ ಮೆಟ್ರೋ ಕಾರ್ಪೊರೇಷನ್ ಸಲಹೆಗಾರ ಶ್ರೀಧರನ್ ಹೇಳಿದ್ದರು.
ಆರು ಪಥದ ರಸ್ತೆ ನಿರ್ಮಾಣ : 'ಹೈಸ್ಪೀಡ್ ರೈಲು ಯೋಜನೆಯ ಬದಲು ಬೆಂಗಳೂರು-ಮೈಸೂರು ಹೆದ್ದಾರಿಯನ್ನು 6 ಪಥದ ರಸ್ತೆಯಾಗಿ ಅಭಿವೃದ್ಧಿಪಡಿಸಲಾಗುತ್ತದೆ. ಕೇಂದ್ರ ಸರ್ಕಾರವೂ ಈ ಯೋಜನೆಗೆ ಅನುಮತಿ ನೀಡಿದ್ದು, 2016ರ ಆರಂಭದಲ್ಲಿ ಕಾಮಗಾರಿ ಕೈಗೊಳ್ಳಲಾಗುತ್ತದೆ' ಎಂದು ಮುಖ್ಯಮಂತ್ರಿಗಳು ವಿವರಣೆ ನೀಡಿದರು.
'ಆರು ಪಥದ ರಸ್ತೆ ನಿರ್ಮಾಣದ ವೇಳೆ ಬಿಡದಿ, ರಾಮನಗರ, ಚನ್ನಪಟ್ಟಣ ಮತ್ತು ಮಂಡ್ಯದಲ್ಲಿ ಹೊರವರ್ತುಲ ರಸ್ತೆ ನಿರ್ಮಾಣ ಮಾಡಲಾಗುತ್ತದೆ. ಜನವರಿಯಿಂದ ಭೂ ಸ್ವಾಧೀನ ಕಾರ್ಯ ಆರಂಭಿಸಲಾಗುತ್ತದೆ. ಭೂ ಸ್ವಾಧೀನಕ್ಕೆ 2 ಸಾವಿರ ಕೋಟಿ ಮತ್ತು ರಸ್ತೆ ನಿರ್ಮಾಣಕ್ಕೆ 3 ಸಾವಿರ ಕೋಟಿ ಬೇಕಾಗಬಹುದು ಎಂದು ಅಂದಾಜಿಸಲಾಗಿದೆ' ಎಂದರು.












Click it and Unblock the Notifications