Bengaluru-Mysuru expressway: ಎರಡೂ ಮಹಾನಗರಗಳಲ್ಲಿ ಮತ್ತಷ್ಟು ವಾಹನ ದಟ್ಟಣೆ- ಮೂಲ ಕಾರಣ ತಿಳಿಸಿದ IISc ತಜ್ಞರು
ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇಗೆ ಪ್ರಧಾನಿ ನರೇಂದ್ರ ಮೋದಿ ಅವರು ಅಧಿಕೃತವಾಗಿ ಚಾಲನೆ ನೀಡಿದ್ದು, ಎರಡೂ ನಗರದಲ್ಲಿ ಸಂಚಾರ ದಟ್ಟಣೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಯಿದೆ ಎಂದು ಸಂಚಾರ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಬೆಂಗಳೂರು, ಮಾರ್ಚ್ 13: ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇಗೆ ಪ್ರಧಾನಿ ನರೇಂದ್ರ ಮೋದಿ ಅವರು ಅಧಿಕೃತವಾಗಿ ಚಾಲನೆ ನೀಡಿದ್ದು, ಎರಡೂ ನಗರದಲ್ಲಿ ಸಂಚಾರ ದಟ್ಟಣೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಯಿದೆ ಎಂದು ಸಂಚಾರ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಎಕ್ಸ್‌ಪ್ರೆಸ್‌ವೇಯ ಪ್ರವೇಶ ಮತ್ತು ನಿರ್ಗಮನ ಸ್ಥಳಗಳಲ್ಲಿ ಈಗಾಗಲೇ ದಟ್ಟಣೆ ಇದೆ ಎಂದು ಐಐಎಸ್‌ಸಿಯ ಮೊಬಿಲಿಟಿ ತಜ್ಞ ಡಾ ಆಶಿಶ್ ವರ್ಮಾ 'ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್'ಗೆ ಹೇಳಿದ್ದಾರೆ.

ವೈಯಕ್ತಿಕ ವಾಹನಗಳ ಹೆಚ್ಚಳ
ವೈಯಕ್ತಿಕ ವಾಹನಗಳ ಹೆಚ್ಚಳವಾಗಿರುವುದು ದಟ್ಟಣೆಯ ಮೂಲ ಕಾರಣ. ಬೆಂಗಳೂರು- ಮೈಸೂರು ಎಕ್ಸ್‌ಪ್ರೆಸ್‌ವೇ ಈ ಮೂಲ ಸಮಸ್ಯೆಯನ್ನು ಪರಿಹರಿಸುವ ಬದಲು, ಇದನ್ನು ಉತ್ತೇಜಿಸುತ್ತದೆ. ಉಳಿಸಿದ ಸಮಯವು ನಗರಗಳಲ್ಲಿನ ವಾಹನ ದಟ್ಟಣೆಯಲ್ಲಿ ಕಳೆದುಹೋಗುತ್ತದೆ. ಕಾಲಾನಂತರದಲ್ಲಿ ತೀವ್ರವಾಗಿ ಹದಗೆಡಲಿದೆ ಎಂದು ಡಾ ವರ್ಮಾ ಎಚ್ಚರಿಸಿದ್ದಾರೆ. ಎರಡೂ ಬದಿಯ ಅರ್ಧದಷ್ಟು ರಸ್ತೆಯಲ್ಲಿ 'ಬಸ್ ರಾಪಿಡ್ ಟ್ರಾನ್ಸಿಟ್ ಸಿಸ್ಟಮ್' (ಬಿಆರ್‌ಟಿಎಸ್) ಇರಬೇಕು ಎಂದು ವರ್ಮಾ ಸಲಹೆ ನೀಡಿದ್ದಾರೆ.

ಮೇಲ್ಸೇತುವೆ ನಿರ್ಮಾಣಕ್ಕೆ ಬೇಡಿಕೆ
ಮಣಿಪಾಲ ಆಸ್ಪತ್ರೆ ಜಂಕ್ಷನ್‌ನಲ್ಲಿ ಮೈಸೂರು ನಗರ ಪ್ರವೇಶಿಸುವಾಗ ವಾಹನಗಳ ದಟ್ಟಣೆ ಹೆಚ್ಚಿದ್ದು, ಮೇಲ್ಸೇತುವೆ ನಿರ್ಮಾಣಕ್ಕೆ ಬೇಡಿಕೆ ಬಂದಿದೆ ಎಂದು ಡಾ ವರ್ಮಾ ಹೇಳಿದ್ದಾರೆ. ಪ್ರವೇಶ ಮತ್ತು ನಿರ್ಗಮನದ ಸ್ಥಳಗಳಲ್ಲಿ ಎಕ್ಸ್‌ಪ್ರೆಸ್‌ವೇ ಇಂದ ವ್ಯಾಪಕ ದಟ್ಟಣೆ ಉಂಟಾಗಲಿದೆ ಎಂದು ಅವರು ತಿಳಿಸಿದ್ದಾರೆ.

ಮೇಲ್ಸೇತುವೆಗಳ ಬಗ್ಗೆ ತಜ್ಞರು ಕೇಳಿದ್ದೇನು?
ಇದನ್ನು ಪರಿಹರಿಸಲು, ನಗರದೊಳಗೆ ಮತ್ತೊಂದು ಮೇಲ್ಸೇತುವೆ ನಿರ್ಮಿಸುತ್ತಾರೆ. ಫ್ಲೈಓವರ್‌ನಿಂದ ಬೇರೆ ಸ್ಥಳಕ್ಕೆ ಸಂಚಾರ ಸ್ಥಳಾಂತರಗೊಂಡ ನಂತರ, ಅಲ್ಲಿ ಮತ್ತೊಂದು ಮೇಲ್ಸೇತುವೆಯನ್ನು ಪ್ರಸ್ತಾಪಿಸಿ ನಿರ್ಮಿಸುತ್ತಾರೆ. ಟ್ರಾಫಿಕ್ ಸಮಸ್ಯೆಯನ್ನು ಪರಿಹರಿಸಲು ಸರ್ಕಾರ ಎಷ್ಟು ಮೇಲ್ಸೇತುವೆಗಳನ್ನು ನಿರ್ಮಿಸಲು ಉದ್ದೇಶಿಸಿದೆ ಎಂದು ಅವರು ಕೇಳಿದ್ದಾರೆ.

ಎಕ್ಸ್‌ಪ್ರೆಸ್‌ವೇ ದೀರ್ಘಕಾಲೀನ ಪರಿಹಾರವಲ್ಲ
'ಎಕ್ಸ್‌ಪ್ರೆಸ್‌ವೇ ಪ್ರಯಾಣದ ಸಮಯವನ್ನು ಕಡಿಮೆ ಮಾಡುತ್ತದೆ ಎಂಬುದರಲ್ಲಿ ಸಂದೇಹವಿಲ್ಲ. ಆದಾಗ್ಯೂ, ಇದು ದೀರ್ಘಕಾಲೀನ ಪರಿಹಾರವಾಗುವುದಿಲ್ಲ. ಉದಾಹರಣೆಗೆ, ವಿಮಾನ ನಿಲ್ದಾಣದ ಮೇಲ್ಸೇತುವೆ ನಿರ್ಮಾಣದ ಮೊದಲು ಹೆಬ್ಬಾಳದ ಮೇಲ್ಸೇತುವೆಯು ಚಾಕ್-ಎ-ಬ್ಲಾಕ್ ಆಗಿರಲಿಲ್ಲ. ಆದರೆ ಈಗ ವಾಹನಗಳ ಓಡಾಟದ ಪ್ರಮಾಣ ಅಧಿಕವಾಗಿ ವಾಹನ ದಟ್ಟಣೆ ವ್ಯಾಪಕವಾಗಿದೆ' ಎಂದು ಅವರು ತಿಳಿಸಿದ್ದಾರೆ.
ಭೂಮಿಯನ್ನು ಖರೀದಿಸುವಾಗ, ಸರ್ಕಾರವು ಸ್ವಲ್ಪ ಹೆಚ್ಚು ವಿಸ್ತರಿಸಬಹುದಿತ್ತು. ಇದನ್ನು ಹೈ-ಸ್ಪೀಡ್ ರೈಲಿಗೆ (ಎಚ್‌ಎಸ್‌ಆರ್) ಹಂಚಿಕೆ ಮಾಡಬಹುದಿತ್ತು. ವಂದೇ ಭಾರತ್‌ನಂತಹ ಉನ್ನತ-ಮಟ್ಟದ ರೈಲುಗಳನ್ನು ಓಡಿಸಬಹುದಿತ್ತು ಎಂದು ಡಾ ವರ್ಮಾ ಹೇಳಿದ್ದಾರೆ.

ಭಾರತಮಾಲಾ ಯೋಜನೆ
ಕೇಂದ್ರ ಸರ್ಕಾರದ ಪ್ರಮುಖ ಮತ್ತು ಮಹತ್ವಾಕಾಂಕ್ಷೆಯ ಯೋಜನೆಯಾಗಿರುವ ಭಾರತಮಾಲಾ ಯೋಜನೆ (ಭಾರತಮಾಲಾ ಪರಿಯೋಜನಾ) ಅಡಿಯಲ್ಲಿ ಇದನ್ನು ನಿರ್ಮಿಸಲಾಗಿದೆ. ಬೆಂಗಳೂರಿನಿಂದ ಮೈಸೂರಿಗೆ 3 ಗಂಟೆ ಸಮಯ ತೆಗೆದುಕೊಳ್ಳುತ್ತಿದ್ದ ಪ್ರಯಾಣ ಇನ್ನು 75 ನಿಮಿಷ ಮಾತ್ರ ತೆಗೆದುಕೊಳ್ಳುತ್ತದೆ.

ಸಾರಿಗೆ ಸಚಿವ ನಿತಿನ್ ಗಡ್ಕರಿ ಟ್ವೀಟ್
ಕೇಂದ್ರ ರಸ್ತೆ ಮತ್ತು ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು ಇತ್ತೀಚೆಗೆ ಟ್ವೀಟ್ ಮಾಡುವ ಮೂಲಕ ಈ ಬಗ್ಗೆ ಮಾಹಿತಿ ನೀಡಿದ್ದಾರೆ. 8478 ಕೋಟಿ ವೆಚ್ಚದಲ್ಲಿ ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್ ವೇ ನಿರ್ಮಿಸಲಾಗಿದೆ. ಈ 118 ಕಿಮೀ ಉದ್ದದ ಎಕ್ಸ್‌ಪ್ರೆಸ್‌ವೇ ಕರ್ನಾಟಕದ ಎರಡು ಪ್ರಮುಖ ನಗರಗಳ ನಡುವಿನ ಪ್ರಯಾಣದ ಸಮಯವನ್ನು ಕಡಿಮೆ ಮಾಡುತ್ತದೆ. ಅಲ್ಲದೆ, ಈ ಪ್ರವೇಶ ನಿಯಂತ್ರಣ ಎಕ್ಸ್‌ಪ್ರೆಸ್‌ವೇ ಮೂಲಕ, ನೀವು ಬೆಂಗಳೂರಿನಿಂದ ಮೈಸೂರಿಗೆ ಕೇವಲ 75 ನಿಮಿಷಗಳಲ್ಲಿ ತಲುಪುತ್ತೀರಿ ಎಂದು ಅವರು ಹೇಳಿದ್ದಾರೆ.

ಪ್ರವಾಸೋದ್ಯಮಕ್ಕೂ ಉತ್ತೇಜನ
ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ ಷಟ್ಪಥವನ್ನಾಗಿ ಮಾಡಲಾಗಿದೆ. ಈ ಎಕ್ಸ್ ಪ್ರೆಸ್ ವೇಯ ಎರಡೂ ಬದಿಯಲ್ಲಿ ದ್ವಿಪಥದ ಸರ್ವೀಸ್ ರಸ್ತೆ ನಿರ್ಮಿಸಲಾಗಿದೆ. ಇದು ಪ್ರವಾಸೋದ್ಯಮಕ್ಕೂ ಉತ್ತೇಜನ ನೀಡಲಿದೆ. ಬೆಂಗಳೂರು ಕರ್ನಾಟಕದ ಆರ್ಥಿಕ ರಾಜಧಾನಿಯಾಗಿದ್ದರೆ, ಮೈಸೂರು ಸಾಂಸ್ಕೃತಿಕ ರಾಜಧಾನಿ ಎಂದು ಪರಿಗಣಿಸಲಾಗಿದೆ.












Click it and Unblock the Notifications