Bengaluru-Mysuru Expressway: ಬೈಕ್, ಆಟೋ ನಿಷೇಧ ನಿಯಮ ಉಲ್ಲಂಘನೆ, ಒಂದೇ ದಿನದಲ್ಲಿ ಭರ್ಜರಿ ದಂಡ ಸಂಗ್ರಹ
ಬೆಂಗಳೂರು, ಆಗಸ್ಟ್ 02: ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇ (Bengaluru-Mysuru Expressway) ನಲ್ಲಿ ಆಗಸ್ಟ್ 1ರಿಂದಲೇ ದ್ವಿಚಕ್ರ ಮತ್ತು ತ್ರಿಚಕ್ರ ವಾಹನ, ಟ್ರ್ಯಾಕ್ಟರ್‌ಗಳು, ಆಟೋಗಳನ್ನು ನಿಷೇಧಿಸಿದರೂ ಸಹಿತ ಒಂದೇ ದಿನದಲ್ಲಿ ನೂರಕ್ಕೂ ಅಧಿಕ ನಿಯಮ ಉಲ್ಲಂಘನೆ ಪ್ರಕರಣಗಳು ವರದಿಯಾಗಿದೆ. ಇದರಿಂದ ಭರ್ಜರಿ ದಂಡ ಸಂಗ್ರಹವಾಗಿದೆ. ಎಷ್ಟು ಪ್ರಕರಣಗಳು, ನಿಷೇಧಿತ ವಾಹನ ಸವಾರರಿಂದ ಸಂಗ್ರಹವಾದ ಮೊತ್ತವೆಷ್ಟು? ಎಂಬ ಎಲ್ಲ ಮಾಹಿತಿ ಇಲ್ಲಿ ತಿಳಿಯಿರಿ.
ಎಕ್ಸ್‌ಪ್ರೆಸ್ ವೇನಲ್ಲಿ ಬೈಕ್, ಆಟೋ, ಟ್ರ್ಯಾಕ್ಟರ್, ತ್ರಿಚಕ್ರ ವಾಹನಗಳನ್ನು ನಿಷೇಧಿಸಿ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು (NHAI) ವಾರದ ಹಿಂದೆಯೇ ಹೊರಡಿಸಿದ್ದ ಆದೇಶ ಆಗಸ್ಟ್ 1 ಮಂಗಳವಾರದಿಂದ ಅನುಷ್ಠಾನಕ್ಕೆ ಬಂದಿತು. ಹೀಗಿದ್ದರೂ ಸಹ ನಿಯಮ ಉಲ್ಲಂಘಿಸಿದದವರ ವಿರುದ್ಧ 137 ಪ್ರಕರಣಗಳನ್ನು ರಾಮನಗರ ಪೊಲೀಸರು ದಾಖಲಿಸಿದ್ದಾರೆ. ಇದರಿಂದ ಒಟ್ಟು 68,500 ರೂಪಾಯಿ ದಂಡ ಸಂಗ್ರಹಿಸಿದ್ದೇವೆ ಎಂದು ರಾಮನಗರ ಪೊಲೀಸ್ ಅಧಿಕಾರಿಗಳು ಟ್ವಿಟ್ಟರ್ (X) ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

ಎಕ್ಸ್‌ಪ್ರೆಸ್ ವೇನಲ್ಲಿ ನಿಗದಿತ ವಾಹನಗಳ ನಿಷೇಧಿಸಿದ ಮಂಗಳವಾರ ಮೊದಲ ದಿನವೇ 137 ಪ್ರಕರಣಗಳು ವರದಿ ಆಗಿದೆ. ದಂಡದಿಂದ ತಪ್ಪಿಸಿಕೊಳ್ಳಲು ಈ ವಾಹನ ಸವಾರರಿಗೆ ಪರ್ಯಾಯ ಮಾರ್ಗವೆಂದರೆ ಅದು ಸರ್ವೀಸ್ ರಸ್ತೆಯಲ್ಲಿ ಸಂಚರಿಸುವುದು.
ನಿಯಮ ಉಲ್ಲಂಘಿಸಿದರೆ 500 ರೂ.ದಂಡ
ಮೈಸೂರು ಹೆದ್ದಾರಿ ರಸ್ತೆಯಲ್ಲಿ ಕಾರು, ಬಸ್‌ಗಳು ವೇಗವಾಗಿ ಸಂಚರಿಸುತ್ತವೇ. ಹೀಗಾಗಿ ಇಲ್ಲಿ ವೇಗದ ಚಾಲನೆಗೆ ಬೈಕ್, ಆಟೋ, ತ್ರಿಚಕ್ರ ಮತ್ತು ಟ್ರ್ಯಾಕ್ಟರ್‌ಗಳಿಂದ ತೊಂದರೆ ಆಗುವ ಸಾಧ್ಯತೆ ಇರುವುದರಿಂದ ಅವುಗಳನ್ನು ನಿಷೇಧಿಸಲಾಗಿದೆ. ಅಲ್ಲದೇ ಹೆಚ್ಚಾಗುತ್ತಿರುವ ಅಪಘಾತ ತಪ್ಪಿಸುವ ಉದ್ದೇಶದಿಂದ ವೇಗದ ಮಿತಿಯನ್ನು 100 ಕಿಲೋ ಮೀಟರ್‌ಗೆ ಇಳಿಸಲಾಗಿದೆ.
ಜೊತೆಗೆ ಸರ್ವೀಸ್ ರಸ್ತೆಯ ಕೆಲಸ ಪೂರ್ಣಗೊಳಿಸಲಾಗಿದೆ.
ಇದೇ ವರ್ಷ ಮಾರ್ಚ್ 12 ರಂದು ಪ್ರಧಾನಿ ನರೇಂದ್ರ ಮೋದಿ ಅವರಿಂದ ಎಕ್ಸ್‌ಪ್ರೆಸ್‌ವೇ ಉದ್ಘಾಟನೆ ಆಯಿತು. ಅಪಘಾತಗಳ ಏರಿಕೆಯಿಂದಾಗಿ ಜುಲೈ 12 ರಂದು ಬೈಕ್ ಸೇರಿದಂತೆ ಕೆಲವು ವಾಹನಗಳನ್ನು ನಿಷೇಧಿಸಿ NHAI ಆದೇಶಿಸಿತು. ಅಲ್ಲದೇ ನಿಯಮ ಉಲ್ಲಂಘಿಸುವವರಿಗೆ ತಲಾ 500 ದಂಡ ಹೇರಲಾಗುವುದು ಎಂದು ಎಚ್ಚರಿಸಿತು.

ಇನ್ನು ಆದೇಶ ಜಾರಿಯಾದ ಮೊದಲ ದಿನ ಪೊಲೀಸರು ಎಕ್ಸ್‌ಪ್ರೆಸ್ ವೇ ಅನ್ನು ನಿಷೇಧಿತ ವಾಹನಗಳು ಪ್ರವೇಶಿದಂತೆ ನೋಡಿಕೊಂಡರು. ಈ ಸಂಬಂಧ ಅಲ್ಲಲ್ಲಿ ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿತ್ತು. ಇಷ್ಟೆಲ್ಲ ನಿಯಂತ್ರಣ ವ್ಯವಸ್ಥೆ ಮಾಡಿದರೂ ಮತ್ತು ವಾರದ ಹಿಂದಿನಿಂದಲೂ ಹೇಳಿಕೊಂಡು ಬರುತ್ತಿದ್ದರು ಸಹ ನಿಯಮ ಉಲ್ಲಂಘಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇನ್ನೂ ಕೆಲವೆಡೆ ದಂಡ ಕಟ್ಟಿಸಿಕೊಂಡ ಪೊಲೀಸರು ಪುನಃ ಹೆದ್ದಾರಿಯಲ್ಲಿ ಓಡಾದಂತೆ, ಸಂಚಾರಕ್ಕೆ ಸರ್ವೀಸ್ ರಸ್ತೆಯನ್ನೇ ಬಳಸುವಂತೆ ಮತ್ತು ಸಂಚಾರ ನಿಯಮ ಪಾಲಿಸುವಂತೆ ವಾಹನ ಸವಾರರಿಗೆ ತಿಳಿ ಹೇಳಿ ಕಳುಹಿಸಿದ್ದು ಕಂಡು ಬಂತು.
ಎಕ್ಸ್‌ಪ್ರೆಸ್ ವೇ ಸಾವಿನ ಲೆಕ್ಕ ಕೊಟ್ಟ ಗಡ್ಕರಿ
ಸಂಸತ್ ಅಧಿವೇಶನದಲ್ಲಿ ಕಳೆದ ವಾರ ಕರ್ನಾಟಕದ ಸಂಸದರಾದ ಸುಮಲತಾ ಅಂಬರೀಶ್ ಹಾಗೂ ಪ್ರಜ್ವಲ್ ರೇವಣ್ಣ ಅವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು, 118 ಕಿಮೀ ಉದ್ದದ ಎಕ್ಸ್‌ಪ್ರೆಸ್ ವೇ ಉದ್ಘಾಟನೆ ಬಳಿಕ ಈವರೆಗೆ 398 ಅಪಘಾತಗಳು ಸಂಭವಿಸಿದ್ದು, ಒಟ್ಟು 121 ಮಂದಿ ಮೃತಪಟ್ಟಿದ್ದಾರೆ. ನೂರಾರು ಮಂದಿ ಗಾಯಗೊಂಡಿದ್ದಾರೆ. ವೇಗ ನಿಯಂತ್ರಣ, ಅಪಘಾತ ತಡೆಗೆ ಪೊಲೀಸರು ಸೂಕ್ತ ಕ್ರಮ ಕೈಗೊಂಡಿದ್ದರೆ ಎಂದು ಅವರು ಮಾಹಿತಿ ನೀಡಿದ್ದರು.












Click it and Unblock the Notifications