Namma Metro: ಮೊದಲ ಪ್ರೊಟೋಟೈಪ್ ಮೆಟ್ರೋ ರೈಲಿನ ಪರೀಕ್ಷೆಗಳು ಪೂರ್ಣ
ಬೆಂಗಳೂರು: ನಮ್ಮ ಮೆಟ್ರೋ (Namma Metro) ಮಹತ್ವದ ಬೆಳವಣಿಗೆ ನಡೆದಿದೆ. ಚೀನಾದಲ್ಲಿ ತಯಾರಾಗಿದ್ದ ಮೊದಲ ಸಿಆರ್‌ಆರ್‌ಸಿ ಪ್ರೊಟೋಟೈಪ್ ಆರು ಬೋಗಿಗಳ ರೈಲು ಈಗಾಗಲೇ ನಗರಕ್ಕೆ ಆಗಮಿಸಿದೆ. ತಿಂಗಳುಗಳಿಂದ ಅದರ ಪರೀಕ್ಷೆ ನಡೆದಿದ್ದು, ಇದೀಗ ಒಂದು ಹಂತಕ್ಕೆ ಬಂದು ತಲುಪಿದೆ. ಪ್ರೊಟೋಟೈಪ್ ರೈಲಿನ ಡೈನಾಮಿಕ್ ಬಿಹೇವಿಯರ್ ಅಸೆಸ್ಮೆಂಟ್ ಮತ್ತು ಬ್ರೇಕ್ ಪರ್ಫಾರ್ಮೆನ್ಸ್ ಟ್ರಯಲ್ಸ್ ಅನ್ನು ಪೂರ್ಣಗೊಳಲಾಗಿದೆ ಎಂದು ರೈಲು ಸುರಕ್ಷತಾ ಅಧಿಕಾರಿಗಳು ಅಧಿಕೃತ ಮಾಹಿತಿ ನೀಡಿದ್ದಾರೆ.
ಹಸಿರು ಮಾರ್ಗಕ್ಕೆ ನಿಯೋಜಿಸಲು ಪ್ಲಾನ್ ಮಾಡಿರುವ ಒಟ್ಟು 21 ಚೀನಾ ಸಿಆರ್‌ಆರ್‌ಸಿ ಪ್ರೊಟೋಟೈಪ್ ಮೂಲ ಮಾದರಿ ಮೆಟ್ರೋ ರೈಲುಗಳಲ್ಲಿ ಇದು ಒಂದಾಗಿದೆ. ಈ ರೈಲು 2025 ಜನವರಿಯಲ್ಲೇ ಬೆಂಗಳೂರಿಗೆ ಆಗಮಿಸಿತ್ತು. ಅದಾಗಿನಿಂದ ಈವರೆಗೆ ಕೆಲವು ತಿಂಗಳು ಕಾಲ ವಿವಿಧ ಪರೀಕ್ಷೆಗಳು ನಡೆಸಲಾಗಿದೆ. ಆರಂಭದಲ್ಲಿ ನೇರಳೆ ಮಾರ್ಗದಲ್ಲಿ (Metro Purple Line) ಈ ಪ್ರೊಟೋಟೈಪ್ ರೈಲು ನಿಯೋಜಿಸಲು ಪ್ಲಾನ್ ಮಾಡಲಾಗಿತ್ತು.

ಏನೆಲ್ಲ ಪರೀಕ್ಷೆಗಳು ಪೂರ್ಣಗೊಂಡಿವೆ, ಬಾಕಿ ಉಳಿದಿವೆ
ಮೆಟ್ರೋ ಹಸಿರು ಮಾರ್ಗದ (Namma Metro Green Line) ಜಾಲಹಳ್ಳಿ ಮತ್ತು ಮಂತ್ರಿ ಸ್ಕ್ವೇರ್ ಸಂಪಿಗೆ ರಸ್ತೆ ನಿಲ್ದಾಣಗಳ ನಡುವೆ ರಾತ್ರಿ ವೇಳೆ 11:30 ರಿಂದ ಬೆಳಗಿನ ಜಾವ 3:30 ರವರೆಗೆ ಸಂಶೋಧನಾ ವಿನ್ಯಾಸಗಳು ಹಾಗೂ ಮಾನದಂಡಗಳ ಸಂಸ್ಥೆಯು (RDSO) ಪರೀಕ್ಷೆಗಳನ್ನು ಆರಂಭಿಸಿತ್ತು. ಜನವರಿ 10 ರೊಳಗೆ ಪೂರ್ಣಗೊಳಿಸುವ ಉದ್ದೇಶದ ಹೊಂದಿತ್ತು. ಅದರಂತೆ ಎರಡು ದಿನ ಮೊದಲೇ ಡೈನಾಮಿಕ್ ಬಿಹೇವಿಯರ್ ಅಸೆಸ್ಮೆಂಟ್ ಮತ್ತು ಬ್ರೇಕ್ ಪರ್ಫಾರ್ಮೆನ್ಸ್ ಟ್ರಯಲ್ಸ್ ಅನ್ನು ಜನವರಿ 8ರಂದು ಮುಗಿಸಿದೆ. ಆರ್‌ಡಿಎಸ್‌ಓ ಜೊತೆಗೆ ಬೇರೆ ಬೇರೆ ಪರೀಕ್ಷೆಗಳು ನಡೆದಿವೆ.
ಬಹುತೇಕ ಎಲ್ಲ ಪರೀಕ್ಷೆಗಳು ಪೂರ್ಣಗೊಂಡಿದ್ದು, ಮೆಟ್ರೋ ರೈಲು ಸುರಕ್ಷತೆ ಆಯುಕ್ತರು (CMRS), ರೈಲ್ವೆ ಸುರಕ್ಷತಾ ಮುಖ್ಯ ಆಯುಕ್ತರು (CCRS) ಮತ್ತು ರೈಲ್ವೆ ಮಂಡಳಿಯಿಂದ ಅನುಮೋದನೆ ನೀಡುವುದು ಬಾಕಿ ಇದೆ. ಇದೇ ವರ್ಷ 2026 ಮಾರ್ಚ್ ತಿಂಗಳೊಳಗೆ ರೈಲ್ವೆ ಮಂಡಳಿಯ ಅನುಮೋದನೆ ಪಡೆಯುವ ಗುರಿ ಹೊಂದಿರುವ ಅಧಿಕಾರಿಗಳು ಏಪ್ರಿಲ್ ಹೊತ್ತಿಗೆ ಪ್ರಯಾಣಿಕರ ಸೇವೆಗೆ ಮುಕ್ತಗೊಳಿಸಲು ಪ್ಲಾನ್ ಮಾಡಿಕೊಂಡಿದ್ದಾರೆ.
ಈ ಪ್ರೊಟೋಟೈಪ್ ರೈಲು ಕಾರ್ಯಾರಂಭ ಮಾಡಿದ ನಂತರ, ಇದನ್ನು ಹಸಿರು ಮಾರ್ಗದಲ್ಲಿ ನಿಯೋಜಿಸಲಾಗುವುದು. ಇದು ಅಸ್ತಿತ್ವದಲ್ಲಿರುವ ಹಸಿರು ಮಾರ್ಗದ ರೈಲುಗಳನ್ನು ನೇರಳೆ ಮಾರ್ಗಕ್ಕೆ ವರ್ಗಾಯಿಸಲು ಸಹಾಯ ಮಾಡುತ್ತದೆ. ಆದರೆ ಹಸಿರು ಮತ್ತು ನೇರಳೆ ಮಾರ್ಗ ಎರಡರಲ್ಲೂ ಹೆಚ್ಚು ರೈಲುಗಳು ಲಭ್ಯವಾಗುತ್ತವೆ. ಪ್ರಯಾಣಿಕರ ದಟ್ಟಣೆ, ಒತ್ತಡ ನಿರ್ವಹಣೆಗೆ ಈ ಕ್ರಮ ನಿರ್ಣಾಯಕವಾಗಿದೆ.
ಗುಲಾಬಿ ಮಾರ್ಗದ ರೈಲು ಪರೀಕ್ಷೆ ಹೀಗೇ ನಡೆಯುತ್ತಾ?
ಅಧಿಕಾರಿಗಳು ಹೇಳುವ ಪ್ರಕಾರ, ಪರೀಕ್ಷೆಗಳ ಸಂಪೂರ್ಣ ಪ್ರಕ್ರಿಯೆಯು ಕೆಲವು ತಿಂಗಳುಗಳಲ್ಲಿ ನಡೆದಿದೆ. ರೈಲ್ವೆ ಮಂಡಳಿಯ ಅನುಮೋದನೆ ಪಡೆಯುವವರೆಗೆ ಇನ್ನಷ್ಟು ಸಮಯ ಸಿಗಲಿದೆ. ಈ ಸಮಯದಲ್ಲಿ ಆರ್‌ಡಿಎಸ್‌ಒ ಜೊತೆ ಮೆಟ್ರೋ ಪ್ರಯೋಗಗಳ ಕುರಿತು ಮಹತ್ವದ ಕೆಲಸಗಳು ಆಗಲಿವೆ. ಇನ್ನೊಂದು ತಿಂಗಳಲ್ಲಿ ಇದರ ಪರೀಕ್ಷೆಯ ಎಲ್ಲ ಕೆಲಸಗಳು ಮುಗಿಯಲಿವೆ ಎಂದಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪ್ರಶ್ನೆ ಮಾಡಿರುವ ನೆಟ್ಟಿಗರು ಈ ವರ್ಷ ಆರಂಭವಾಗಲಿರುವ ಗುಲಾಬಿ ಮಾರ್ಗದ (Namma Metro Pink Line) ಪ್ರೊಟೋಟೈಪ್ ರೈಲುಗಳು ಇದೇ ರೀತಿ ತಿಂಗಳುಗಳ ಕಾಲ ಪರೀಕ್ಷೆಗೆ ಒಳಗಾಗುತ್ತವೆಯೇ? ಎಂದು ಪ್ರಶ್ನಿಸಿದ್ದಾರೆ.
ಅದಕ್ಕೆ ಪ್ರತಿಕ್ರಿಯಿಸಿರುವ ಅಧಿಕಾರಿಗಳು, ಗುಲಾಬಿ ಮೆಟ್ರೋ ಮಾರ್ಗವು ಉದ್ಘಾಟನೆ ಆಗಬೇಕಿದೆ. ಆ ಮಾರ್ಗದಲ್ಲಿ ಟ್ರ್ಯಾಕ್ ಹಾಗೂ ರೈಲುಗಳ ಪರೀಕ್ಷೆ ಸೇರಿದಂತೆ ಎಲ್ಲಾ ಹಂತಗಳು ಮತ್ತು ಪ್ರಯೋಗಗಳ ಮೂಲಕ ಲೋಕಾರ್ಪಣೆ ಅಗತ್ಯವಾಗಿದೆ ಎಂದು ಅವರು ತಿಳಿಸಿದ್ದಾರೆ.
21 ಹೊಸ ರೈಲು, 57 ಹಳೆಯ ರೈಲುಗಳು
ಮಾದಾವರ ಮತ್ತು ರೇಷ್ಮೆ ಸಂಸ್ಥೆವರೆಗಿನ 33 ಕಿಮೀ ಉದ್ದದ ಹಸಿರು ಮೆಟ್ರೋ ಮಾರ್ಗವು ಭವಿಷ್ಯದಲ್ಲಿ ಬರೋಬ್ಬರಿ 21 ಸಿಆರ್‌ಆರ್‌ಸಿ ರೈಲುಗಳನ್ನು ಪಡೆಯಲಿದೆ. ಆಗ ಒಂದಷ್ಟು ಹಳೆಯ ರೈಲುಗಳು ನೇರಳೆ ಮಾರ್ಗಕ್ಕೆ ಶಿಫ್ಟ್ ಮಾಡುವ ನಿರೀಕ್ಷೆ ಇದೆ. ಇದರಿಂದ ಬೆಂಗಳೂರು ಮೆಟ್ರೋ ಮಾರ್ಗಗಳಲ್ಲಿ ಮೊದಲ ಮತ್ತು ಎರಡನೇ ಲೈನ್‌ಗಳಲ್ಲಿ ಪ್ರಯಾಣಿಕರ ದಟ್ಟಣೆಗೆ ತಕ್ಕಂತೆ ರೈಲುಗಳು ಸಿಗಲಿವೆ. ಸದ್ಯ ನಗರದಲ್ಲಿ 57 ರೈಲುಗಳು ಸಂಚಾರ ಸೇವೆ ನೀಡುತ್ತಿದೆ.
ಎಲೆಕ್ಟ್ರಾನಿಕ್ ಸಿಟಿಗೆ ಹಳದಿ ಮೆಟ್ರೋ ಮಾರ್ಗ ಸಂಪರ್ಕ ಕಲ್ಪಿಸಿದ ನಂತರ ನಿತ್ಯ ಸುಮಾರು 10 ಲಕ್ಷ ಪ್ರಯಾಣಿಕರು ಮೆಟ್ರೋದಲ್ಲಿ ಓಡಾಡುತ್ತಾರೆ. ಮೆಟ್ರೋ ರೈಲುಗಳ ಅಗತ್ಯತೆ ಉಂಟಾಗಿದೆ. ಇದೆಲ್ಲ ಗಮನಿಸಿಯೇ BMRCL ಡಿಸೆಂಬರ್ 2019 ರಲ್ಲಿ ಚೀನಾ ಕಂಪನಿ ಜೊತೆಗೆ 6 ಬೋಗಿಗಳ 36 ರೈಲು ಸೆಟ್ ಪೂರೈಸುವಂತೆ (216 ಬೋಗಿಗಳ) ಒಪ್ಪಂದ ಮಾಡಿಕೊಂಡಿತ್ತು.












Click it and Unblock the Notifications