Bengaluru Metro Purple Line: ಹಳಿದ ಜಿಗಿದ ವ್ಯಕ್ತಿ! ಬೆಳಬೆಳಗ್ಗೆಯೇ ಪ್ರಯಾಣಿಕರಿಗೆ ಕಿರಿಕಿರಿ, ಸಂಚಾರ ವ್ಯತ್ಯಯ
ಬೆಂಗಳೂರು: ನಮ್ಮ ಮೆಟ್ರೋ ನೇರಳೆ ಮಾರ್ಗದ ಪ್ರಯಾಣಿಕರು ಇಂದು ಶುಕ್ರವಾರ ಬೆಳಬೆಳಗ್ಗೆಯೇ ಸಂಚಾರ ಸೇವೆಯಲ್ಲಿ ಅಡಚಣೆ ಎದುರಿಸಿದರು. ವ್ಯಕ್ತಿಯೊಬ್ಬರು ಹಳಿಗೆ ಜಿಗಿದ ಪ್ರಕರಣ ಮರಳಿಸಿದ್ದು, ಇದರಿಂದಾಗಿ ಕೆಲವು ಸಂಚಾರ ರೈಲು ಸಂಚಾರದಲ್ಲಿ ತಾತ್ಕಾಲಿಕ ವ್ಯತ್ಯಯವಾಯಿತು ಎಂದು ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ಅಧಿಕಾರಿಗಳು ತಿಳಿಸಿದ್ದಾರೆ. ಇದೇ ಅಕ್ಟೋಬರ್ ಒಂದೇ ತಿಂಗಳಲ್ಲಿ ಮೂರನೇ ಪ್ರಕರಣ ಇದಾಗಿದೆ.
ನಮ್ಮ ಮೆಟ್ರೋದ ಮಾರ್ಗ-1 (ನೇರಳೆ ಮಾರ್ಗ)ದಲ್ಲಿ ಬೆಳಗ್ಗೆ ಸುಮಾರು 09:22 ಗಂಟೆಗೆ ಇಂದಿರಾನಗರ ಮೆಟ್ರೋ ನಿಲ್ದಾಣದಲ್ಲಿ ಪ್ರಯಾಣಿಕರೊಬ್ಬರು ಹಳಿಗೆ ಇಳಿದ ಘಟನೆ ನಡೆಯಿತು. ಇದರ ಪರಿಣಾಮವಾಗಿ ಮೆಟ್ರೋ ಸಿಬ್ಬಂದಿಯು ತುರ್ತು ಟ್ರಿಪ್ ವ್ಯವಸ್ಥೆ (ETS) ಮತ್ತು ತುರ್ತು ನಿಲುಗಡೆ ಬಟನ್ (ESP) ಸಕ್ರಿಯಗೊಳಿಸಿದರು. ಕೂಡಲೇ ಚಲಿಸುತ್ತಿದ್ದ ರೈಲು ನಿಂತುಕೊಂಡಿದ್ದು, ಹಳಿದ ಇಳಿದವರನ್ನು ರಕ್ಷಿಸಲಾಯಿತು. ಅದೃಷ್ಟವಶಾತ್ ಯಾವುದೇ ಹಾನಿ, ಇತರ ತೊಂದರೆ ಆಗಿಲ್ಲ ಎಂದು ಮೆಟ್ರೋ ತಿಳಿಸಿದೆ.

ಸಂಚಾರ ವಿಳಂಬ, ಮೆಜೆಸ್ಟಿಕ್ ನಿಲ್ದಾಣದಲ್ಲಿ ದಟ್ಟಣೆ!
ಈ ಘಟನೆಯಿಂದಾಗಿ ನೇರಳೆ ಮಾರ್ಗದಲ್ಲಿ ರೈಲು ಸಂಚಾರದಲ್ಲಿ ಸುಮಾರು 10 ನಿಮಿಷಗಳ ವಿಳಂಬ ಉಂಟಾಯಿತು. ಅಷ್ಟೇ ಅಲ್ಲದೇ ಕೆಂಪೇಗೌಡ ಮೆಜೆಸ್ಟಿಕ್ ಇಂಟರ್‌ಚೇಂಜ್ ನಿಲ್ದಾಣದಲ್ಲಿ ಪ್ರಯಾಣಿಕರ ದಟ್ಟಣೆಯನ್ನು ತಪ್ಪಿಸುವ ಸಲುವಾಗಿ ಹಸಿರು ಮಾರ್ಗದಲ್ಲಿಯೂ ಕೆಲವು ರೈಲುಗಳ ಸಂಚಾರವನ್ನು ನಿಯಂತ್ರಿಸಲಾಯಿತು.
ಘಟನೆಯ ಬಳಿಕ ಬೆಳಗ್ಗೆ 09:40 ಗಂಟೆಯಿಂದ ನೇರಳೆ ಮತ್ತು ಹಸಿರು ಎರಡೂ ಮೆಟ್ರೋ ಮಾರ್ಗಗಳಲ್ಲಿ ರೈಲು ಸಂಚಾರವನ್ನು ಸಹಜ ಸ್ಥಿತಿಗೆ ತರಲಾಯಿತು. ದಿಢೀರ್ ಸಂಭವಿಸಿದ ಘಟನೆಯಿಂದ ಪ್ರಯಾಣಿಕರಿಗೆ ಅನಾನುಕೂಲ ಉಂಟಾಗಿದ್ದಕ್ಕೆ ಮೆಟ್ರೋ ನಿಗಮ ವಿಷಾದಿಸಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ಒಂದೇ ತಿಂಗಳಲ್ಲಿ 3ನೇ ಪ್ರಕರಣ! ಪದೇ ಪದೇ ಸಂಚಾರ ಸಮಸ್ಯೆ
ಇದೇ ತಿಂಗಳಲ್ಲಿ ಇದು ಮೂರನೇ ಪ್ರಕರಣ ಎನ್ನಬಹುದು. ಅಕ್ಟೋಬರ್ 12ರಂದು ವಿಜಯನಗರ ಮೆಟ್ರೋ ನಿಲ್ದಾಣದಲ್ಲಿ ವ್ಯಕ್ತಿಯೊಬ್ಬರು ಹಳಿಗೆ ಜಿಗಿದಿದ್ದರು. ಇದರಿಂದಾಗಿ ಸುಮಾರು 15 ನಿಮಿಷಗಳ ಕಾಲ ಸಂಚಾರದಲ್ಲಿ ವ್ಯತ್ಯಯ ಉಂಟಾಗಿತ್ತು.
ಆ ಘಟನೆಯ ಮಾರನೇ ದಿನವೇ ಅಕ್ಟೋಬರ್ 13ರಂದು ದೀಪಾಂಜಲಿ ನಗರದ ಮೆಟ್ರೋ ನಿಲ್ದಾಣದಲ್ಲಿ ವೃದ್ಧರೊಬ್ಬರು ಮೆಟ್ರೋ ಹಳಿಗಳ ಮೇಲೆ ಓಡಾಡಿದ್ದರು. ಆಗಲೂ ನೇರಳೆ ಮಾರ್ಗದಲ್ಲಿ ರೈಲುಗಳ ಸಂಚಾರದಲ್ಲಿ ಕೊಂಚ ಅಡಚರಣೆ ಉಂಟಾಗಿತ್ತು. ಇದೀಗ ಅಕ್ಟೋಬರ್ 30ರಂದು ಮತ್ತೊಂದು ಪ್ರಕರಣ ವರದಿ ಆಗಿದ್ದು, ಈ ವ್ಯಕ್ತಿಯು ಆತ್ಮಹತ್ಯೆ ಉದ್ದೇಶದಿಂದ ಈ ರೀತಿ ಮಾಡಿದರಾ? ಅಥವಾ ಯಾವ ಕಾರಣಕ್ಕೆ ಹಳಿಗೆ ಇಳಿದದ್ದು ಎಂಬುದು ಮೆಟ್ರೋ ಅಧಿಕಾರಿಗಳು, ಪೊಲೀಸರು ವಿಚಾರಣೆ ಬಳಿಕ ತಿಳಿಯಲಿದೆ.


Click it and Unblock the Notifications
