Namma Metro: ಗುಲಾಬಿ ಮಾರ್ಗದ ಸುರಂಗ ಕೆಲಸಕ್ಕೆ ಎದುರಾಯ್ತು ವಿಘ್ನ, ಗಡುವು ಮೀರಲಿದೆ ಯೋಜನೆ?
ಬೆಂಗಳೂರು, ಜೂನ್ 07: ಬೆಂಗಳೂರಿನಲ್ಲಿ ನಮ್ಮ ಮೆಟ್ರೋ ಕಾಮಗಾರಿ, ಸುರಂಗ ಕೊರೆಯುವ ಕೆಲಸಗಳು ಭರದಿಂದ ಸಾಗಿವೆ. ಆದರೆ 'ಗುಲಾಬಿ ಮಾರ್ಗ' (Namma Metro Pink Line) ದಲ್ಲಿ ಕಾಮಗಾರಿಗೆ ತೊಡಕು ಉಂಟಾಗಿದೆ.
ಕಾಳೇನ ಅಗ್ರಹಾರ-ನಾಗವಾರವರೆಗೆ 21 ಕಿಲೋಮೀಟರ್ ವರೆಗೆ ಇರುವ ಗುಲಾಬಿ ಮಾರ್ಗದಲ್ಲಿ ಭೂಗತ ಕಾರ್ಯ ನಡೆಯುತ್ತಿವೆ. ಸದ್ಯ 'ತುಂಗಾ ಮತ್ತು ಭದ್ರಾ ಟಿಬಿಎಂ'ಗಳು ಭೂಗತದಲ್ಲಿ ಕಾಮಗಾರಿ ನಡೆಸುತ್ತಿವೆ. ಆದರೆ ಈ ಮಾರ್ಗದಲ್ಲಿ ನಿಗದಿತ ಗಡುವಿನೊಳಗೆ ಸುರಂಗ ಕೊರೆಯುವ ಕಾರ್ಯ ಪೂರ್ಣಗೊಳ್ಳವುದು ಅನುಮಾನ ಎನ್ನಲಾಗಿದೆ.

ಈ ಎರಡು ಸುರಂಗ ಕೊರೆಯುವ ಯಂತ್ರಗಳಿಗೆ (ಟಿಬಿಎಂಗಳು) ಕಲ್ಲಿನ ಭೂಪ್ರದೇಶ ಎದುರಾಗಿದೆ. ಹೀಗಾಗಿ ಈ ಮೊದಲೇ ನಿಗದಿ ಮಾಡಿದ್ದ 2024ರ ಆಗಸ್ಟ್ ತಿಂಗಳಲ್ಲಿ ಸುರಂಗ ಕಾರ್ಯ ಪೂರ್ಣಗೊಳ್ಳುವುದು ಅನುಮಾನ ಎಂದು 'ದಿ ಹಿಂದು' ವರದಿ ಮಾಡಿದೆ.
ಕೆಜಿ ಹಳ್ಳಿ-ನಾಗವಾರದ ವರೆಗೆ ಸುರಂಗ ಕೆಲಸ
ತುಂಗಾ ಮತ್ತು ಭದ್ರಾ ಟಿಬಿಎಂಗಳು ಅರ್ಧಕ್ಕಿಂತಲೂ ಹೆಚ್ಚು ಸುರಂಗ ಕೊರೆದಿವೆ. ತುಂಬಾ ಟಿಬಿಎಂ ಕೆಜಿ ಹಳ್ಳಿಯಿಂದ ತನ್ನ ಅಂತಿಮ ಗುರಿಯತ್ತ ಸಾಗಿದೆ. ಕೆಜಿ ಹಳ್ಳಿಯಿಂದ ನಾಗವಾರವರೆಗೆ 935 ಮೀಟರ್ ಸುರಂಗ ಕೊರೆಯುತ್ತಿದೆ. ಭದ್ರಾ ತನ್ನ ಸಹ ಅಂತಿಮ ಕಾರ್ಯದಲ್ಲಿ ತೊಡಗಿದೆ. ಕೆಜಿ ಹಳ್ಳಿಯಿಂದ ನಾಗವಾರವರೆಗೆ ಉತ್ತರಕ್ಕೆ 939 ಮೀಟರ್ ಸುರಂಗವನ್ನು ಅಗೆಯಲಾಗುತ್ತದೆ.
ತುಂಗಾ ಮತ್ತು ಭದ್ರ ಟಿಬಿಎಂಗಳಿಗೆ ಸುರಂಗ ಮಾರ್ಗದಲ್ಲಿ ನೆಲದಡಿಯಲ್ಲಿ ಬಂಡೆ ಎದುರಿಸಿದೆ. ಇದನ್ನು ಕತ್ತರಿಸಿ ಸುರಂಗ ಪೂರ್ಣಗೊಳಿಸಲು ಗಡುವು ವಿಸ್ತರಣೆ ಆಗಬಹುದು. ಹೀಗಾಗಿ ಮೊದಲಿನ ಗಡುವಿಗಿಂತಲೂ ಕಾಮಗಾರಿ ಪೂರ್ಣಗೊಳ್ಳುವುದು ತಡವಾಗುವ ನಿರೀಕ್ಷೆ ಇದೆ ಎಂದು ಬಿಎಂಆರ್‌ಸಿಎಲ್ ಅಧಿಕಾರಿಗಳು ಮಾಹಿತಿ ನೀಡಿದರು.

ಸುರಂಗ ಕೊರೆಯುವ ಟಿಬಿಎಂ ವೇಗ ಇಳಿಕೆ
ಈ ಟಿಬಿಎಂಗಳು ದಿನಕ್ಕೆ ಕನಿಷ್ಠ 5 ಕಿಲೋ ಮೀಟರ್‌ಗಳಷ್ಟು ಸುರಂಗ ಕೊರೆಯುವ ಸಾಮರ್ಥ್ಯ ಹೊಂದಿವೆ. ಕಲ್ಲು ಬಂಡೆ ಎದುರಾದ ಹಿನ್ನೆಲೆಯಲ್ಲಿ ಟಿಬಿಎಂಗಳು ದಿನಕ್ಕೆ ಕನಿಷ್ಠ 3 ಕಿಲೋ ಮೀಟರ್ ಮಾತ್ರ ಸಾಗಬಹುದಾದಷ್ಟು ಹಿನ್ನಡೆ ಎದುರಿಸುತ್ತಿವೆ.
ಕಾಳೇನ ಅಗ್ರಹಾರದಿಂದ ನಾಗವಾರದವರೆಗೆ ನಮ್ಮ ಮೆಟ್ರೋ ಗುಲಾಬಿ ಮಾರ್ಗವು ಒಟ್ಟು 21.26 ಕಿಮೀ ಇದೆ. ಇದರಲ್ಲಿ 13.76 ಕಿಮೀ ಭೂಗತ ಮಾರ್ಗ ಇದ್ದು, ಇದು ಬೆಂಗಳೂರು ಮೆಟ್ರೋದ ಅತೀ ಉದ್ದದ ಭೂಗತ ಭಾಗವಾಗಿದೆ. ಉಳಿದಂತೆ 7.5 ಕಿಮೀ ಎತ್ತರದ ಮಾರ್ಗ ಹೊಂದಿದೆ.
ಈ ಸುರಂಗ ಮಾರ್ಗದಲ್ಲಿ 20.99 ಕಿಮೀ ಉದ್ದದ ಅವಳಿ ಸುರಂಗಗಳನ್ನು ನಿರ್ಮಿಸುವ ಮಹತ್ವಾಕಾಂಕ್ಷೆಯ ಪ್ರಯತ್ನ ನಡೆಯುತ್ತಿದೆ. 12 ಭೂಗತ ಮತ್ತು ಆರು ಎಲಿವೇಟೆಡ್ ಸ್ಟೇಷನ್‌ಗಳು ಸೇರಿದಂತೆ 18 ನಿಲ್ದಾಣಗಳ ನಿರ್ಮಾಣದ ಬಗ್ಗೆಯೂ ಪ್ರಗತಿ ಸಾಧಿಸಲಾಗಿದೆ. ಇಲ್ಲಿನ ಸಿವಿಲ್ ಕಾಮಗಾರಿಗಳು ಬಹುತೇಕ ಅಂತಿಮ ಹಂತದಲ್ಲಿವೆ.
ಸದ್ಯ ಮೆಟ್ರೋದ ಹಳದಿ ಮಾರ್ಗವು ಪೂರ್ಣೊಂಡಿದೆ. ಭವಿಷ್ಯದಲ್ಲಿ ಗುಲಾಬಿ ಮಾರ್ಗ, ನೀಲಿ ಮಾರ್ಗಗಳು ಒಂದೋಂದಾಗಿ ಅಂತಿಮ ಪರೀಕ್ಷೆಗಳ ಬಳಿಕ ವಾಣಿಜ್ಯ ಕಾರ್ಯಾಚರಣೆ ಶುರು ಮಾಡಲಿವೆ. ಇದಕ್ಕಾಗಿ ಬಿಎಂಆರ್‌ಸಿಎಲ್ ಕಾಮಗಾರಿಗೆ ವೇಗ ನೀಡಿದೆ.












Click it and Unblock the Notifications