Bengaluru Metro: ಬೆಂಗಳೂರು ನಮ್ಮ ಮೆಟ್ರೋ ಹೊಸೂರಿಗೆ ವಿಸ್ತರಣೆ ? ಕೇಂದ್ರದೊಂದಿಗೆ ಚರ್ಚೆ ಆರಂಭಿಸಿದ ತಮಿಳುನಾಡು ಸರ್ಕಾರ
Bengaluru Metro: ಬ್ರ್ಯಾಂಡ್ ಬೆಂಗಳೂರು ಹಾಗೂ ಬೆಂಗಳೂರಿನಿಂದ ಆಗುವ ಲಾಭ - ಲೆಕ್ಕಾಚಾರದ ಮೇಲೆ ತಮಿಳುನಾಡು ಮತ್ತೊಮ್ಮೆ ಕಣ್ಣಿಟ್ಟಿದೆ. ಬೆಂಗಳೂರಿಗೆ ಪೈಪೋಟಿ ನೀಡುವ ಹಲವು ಯೋಜನೆಗಳನ್ನು ಈಗಾಗಲೇ ತಮಿಳುನಾಡು ಈ ಹಿಂದಿನ ಸರ್ಕಾರ ದ್ರಾವಿಣ ಮುನ್ನೇತ್ರ ಕಳಗಂ ಪಕ್ಷವು ಪ್ರಾರಂಭಿಸಿತ್ತು. ಇದೀಗ ತಮಿಳುನಾಡಿನಲ್ಲಿ ಆಡಳಿತ ನಡೆಸುತ್ತಿರುವ ತಮಿಳಗ ವೆಟ್ರಿ ಕಳಗಂ ಪಕ್ಷವು ಬೆಂಗಳೂರಿನ ನಮ್ಮ ಮೆಟ್ರೋ ಜಾಲದ ಮೇಲೆ ಕಣ್ಣಿಟ್ಟಿದೆ.
ಬೆಂಗಳೂರಿನ ಎರಡನೇ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಪರ್ಯಾಯವಾಗಿ ಹೊಸೂರಿನಲ್ಲಿ ಹೊಸ ಹಾಗೂ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣ ಮಾಡಬೇಕು ಎಂದು ತಮಿಳುನಾಡು ಉದ್ದೇಶಿಸಿತ್ತು. ಈ ಸಂಬಂಧ ಈ ಹಿಂದಿನ ಸರ್ಕಾರವು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆಯನ್ನೂ ಸಹ ಸಲ್ಲಿಸಿತ್ತು. ಇದೀಗ ತಮಿಳುನಾಡು ಸರ್ಕಾರವು ಹೊಸೂರಿನಿಂದ ಕರ್ನಾಟಕದ ಬೊಮ್ಮಸಂದ್ರಕ್ಕೆ ಮೆಟ್ರೋ ರೈಲು ಸಂಪರ್ಕ ಜಾಲ ವಿಸ್ತರಿಸುವ ಪ್ರಸ್ತಾವನೆಯನ್ನು ಅನುಸರಿಸುತ್ತಿರುವುದಾಗಿ ತಮಿಳುನಾಡಿನ ಹಣಕಾಸು ಸಚಿವ ಎನ್. ಮೇರಿ ವಿಲ್ಸನ್ ಅವರು ಹೇಳಿದ್ದಾರೆ.

ಕರ್ನಾಟಕ ಮತ್ತು ತಮಿಳುನಾಡಿನ ನಡುವೆ ಕಾವೇರಿ ನದಿ ನೀರು ಹಂಚಿಕೆ ವಿವಾದವು ಜೋರಾಗಿ ಇರುವಾಗಲೇ ತಮಿಳುನಾಡಿನ ಹೊಸೂರಿಗೆ ಬೆಂಗಳೂರಿನ ನಮ್ಮ ಮೆಟ್ರೋದ ವಿಸ್ತರಣೆ ವಿಷಯವನ್ನು ತಮಿಳುನಾಡಿನ ಸರ್ಕಾರವು ತನ್ನ ಬಜೆಟ್‌ನಲ್ಲಿ ಪ್ರಸ್ತಾಪಿಸಿದೆ. ತಮಿಳುನಾಡಿನಲ್ಲಿ ಅಧಿಕಾರಕ್ಕೆ ಬಂದ ಮೇಲೆ ವಿಜಯ್ ದಳಪತಿ ಅವರ ಆಡಳಿತರೂಢ ತಮಿಳಗ ವೆಟ್ರಿ ಕಳಗಂ ಪಕ್ಷವು ಮಂಡಿಸಿರುವ ಮೊದಲ ಬಜೆಟ್ ಇದಾಗಿದೆ.
ತಮಿಳುನಾಡಿನ ಹಣಕಾಸು ಸಚಿವ ಎನ್. ಮೇರಿ ವಿಲ್ಸನ್ ಅವರು ಆಗಸ್ಟ್ 6ರಂದು ಚೊಚ್ಚಲ ಬಜೆಟ್ ಮಂಡನೆ ಮಾಡಿದ್ದಾರೆ. ಈ ಬಜೆಟ್‌ನಲ್ಲಿ ತಮಿಳುನಾಡಿನ ವಿವಿಧ ಭಾಗಗಳಲ್ಲಿ ಮೆಟ್ರೋ ವಿಸ್ತರಣೆಗೆ ಸಂಬಂಧಿಸಿದಂತೆ ವಿಷಯ ಪ್ರಸ್ತಾಪಿಸಲಾಗಿದೆ. ಮೂರು ಕಾರಿಡಾರ್‌ಗಳಲ್ಲಿ 118.9 ಕಿ.ಮೀ ಉದ್ದದ ಚೆನ್ನೈ ಮೆಟ್ರೋ ರೈಲು ಯೋಜನೆಯ ಎರಡನೇ ಹಂತದ ನಿರ್ಮಾಣವು ವೇಗವಾಗಿ ನಡೆಯುತ್ತಿದೆ. ಇದರ ಅಂದಾಜು ವೆಚ್ಚ ₹63,246 ಕೋಟಿ ರೂ. ಆಗಲಿದೆ ಎಂದು ಹೇಳಲಾಗಿದೆ.
Bengaluru Metro: ಬೆಂಗಳೂರು ನಮ್ಮ ಮೆಟ್ರೋದ ಮೇಲೆ ತಮಿಳುನಾಡಿನ ಕಣ್ಣು!
ಇನ್ನು ಬೆಂಗಳೂರಿನ ನಮ್ಮ ಮೆಟ್ರೋದ ಮೇಲೆ ತಮಿಳುನಾಡು ಕಣ್ಣಿರಿಸಿದೆ. ಸರ್ಕಾರವು ಕೃಷ್ಣಗಿರಿ ಜಿಲ್ಲೆಯ ಹೊಸೂರಿನಿಂದ ಕರ್ನಾಟಕದ ಬೊಮ್ಮಸಂದ್ರಕ್ಕೆ ಮೆಟ್ರೋ ರೈಲು ಜಾಲವನ್ನು ವಿಸ್ತರಿಸುವ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರ ಮತ್ತು ಕರ್ನಾಟಕ ಸರ್ಕಾರದೊಂದಿಗೆ ಚರ್ಚೆ ಮಾಡುತ್ತಿರುವುದಾಗಿ ಹೇಳಿದೆ. ಬೊಮ್ಮಸಂದ್ರ ಬೆಂಗಳೂರು ಮತ್ತು ಹೊಸೂರು ಎರಡಕ್ಕೂ ಸಮೀಪದಲ್ಲಿಯೇ ಇದೆ. ತಮಿಳುನಾಡು ರಾಜ್ಯ ಸಾರಿಗೆ ಸಂಸ್ಥೆಗಳ ಬಸ್‌ಗಳನ್ನು ಆಧುನೀಕರಿಸುವ ಅಗತ್ಯವಿದೆ ಎನ್ನುವುದನ್ನೂ ನಮ್ಮ ಸರ್ಕಾರ ಗುರುತಿಸಿದೆ ಎಂದು ಅವರು ಹೇಳಿದ್ದಾರೆ.
Bengaluru Metro: ತಮಿಳುನಾಡಿಗೆ ನಮ್ಮ ಮೆಟ್ರೋ - ಕನ್ನಡಿಗರ ವಿರೋಧ
ಕರ್ನಾಟಕದ ನಮ್ಮ ಮೆಟ್ರೋ ಜಾಲವನ್ನು ಬೆಂಗಳೂರಿನಿಂದ ತಮಿಳುನಾಡಿನ ಹೊಸೂರು ಮಾರ್ಗಕ್ಕೆ ವಿಸ್ತರಿಸಬೇಕು ಎನ್ನುವ ಪ್ರಸ್ತಾವನೆಯು ಬಹಳಷ್ಟು ವರ್ಷಗಳಿಂದಲೇ ಇದೆ. ಈ ಹಿಂದಿನ ಸರ್ಕಾರವು ಸಹ ಈ ಪ್ರಸ್ತಾವನೆಯನ್ನು ಸಲ್ಲಿಸಿತ್ತಾದರೂ, ಕನ್ನಡಿಗರಿಂದ ಈ ವಿಷಯಕ್ಕೆ ತೀವ್ರ ವಿರೋಧ ವ್ಯಕ್ತವಾಗಿತ್ತು. ಇದರ ಬೆನ್ನಲ್ಲೇ ಅಂದಿನ ತಮಿಳುನಾಡು ಸರ್ಕಾರವು ಹೊಸೂರಿನಲ್ಲಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಮುಂದಾಗಿತ್ತು.


Click it and Unblock the Notifications
